ಮಹಾತ್ಮ ಗಾಂಧಿ | ಸಂಭಾಷಣೆಯಲ್ಲಿ ರೂಪುಗೊಂಡ ಲೋಕಹಿತ ಚಿಂತಕ

Date:

ಈ ಲೇಖನದಲ್ಲಿ ನಾವು ನಿದರ್ಶನವಾಗಿ ತೋರಿಸಿದ ಮೂರು ಸಂವಾದಗಳು ಭಾರತದ ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ನಡೆದ ಅನೇಕ ಸಂವಾದಗಳ ಪರಂಪರೆಯ ಒಂದು ಸಣ್ಣ ಭಾಗ ಅಷ್ಟೆ. ಭಾರತದ ಸ್ವಾತಂತ್ರ್ಯ ಹೋರಾಟ ಅನೂಹ್ಯ ಘಟನೆಗಳ ಮತ್ತು ತ್ಯಾಗ-ಬಲಿದಾನಗಳ ಕಥೆ ಮಾತ್ರವಾಗಿರದೆ ವಿವಿಧ ಸೈದ್ಧಾಂತಿಕ, ಸಾಮುದಾಯಿಕ ಹಾಗೂ ಸಾಂಸ್ಕೃತಿಕ ಹಿನ್ನೆಲೆಗಳಿಂದ ಬಂದ ಜನನಾಯಕರ ನಡುವಿನ ಸಂವಾದಗಳ ಸಂಕಥನವೂ ಆಗಿದೆ.

 

ಮಹಾತ್ಮ ಗಾಂಧಿಯವರು ಕಾಲದ ಯಾವುದೋ ಒಂದು ವಿಶಿಷ್ಟ ಗಳಿಗೆಯಲ್ಲಿ ಧುತ್ ಎಂದು ಕಾಣಿಸಿಕೊಂಡ ಪ್ರವಾದಿಯಲ್ಲ. ಅವರು ನಮ್ಮ-ನಿಮ್ಮೆಲ್ಲರಂತೆ ಈ ದೇಶದ ಒಂದು ಊರಿನ ಕುಟುಂಬವೊಂದರಲ್ಲಿ ಹುಟ್ಟಿ ಬಂದವರು. ನಮ್ಮಂತೆಯೇ ಕಷ್ಟ-ಕಾರ್ಪಣ್ಯಗಳ ನಡುವೆ ಶಿಕ್ಷಣ ಪಡೆದು ತನ್ನ ವೃತ್ತಿಜೀವನದಲ್ಲಿ ಯಶಸ್ಸಿಗಾಗಿ ತಡಕಾಡಿದವರು ಮತ್ತು ತಾನು ಬದುಕಿದ ಕಾಲಘಟ್ಟದಲ್ಲಿ ತನ್ನ ಅಸ್ತಿತ್ವಕ್ಕಾಗಿ ಹೋರಾಡಿದವರು. ಈ ಹೋರಾಟವನ್ನು ಅವರು ಹೊರಗಿನ ಬಾಹ್ಯ ಪ್ರಪಂಚದಲ್ಲಷ್ಟೇ ನಡೆಸಲಿಲ್ಲ ತನ್ನೊಳಗೂ ನಡೆಸಿದರು. ಆ ಒಳ-ಹೊರಗಿನ ಹೋರಾಟದ ಮೂಲಕ ತಮಗೇ ವಿಶಿಷ್ಟವಾದ ಅಸ್ಮಿತೆಯನ್ನು ಪಡೆದವರು ಗಾಂಧಿ. ಗುಜರಾತಿನ ಕರಾವಳಿ ಪ್ರದೇಶದ ಊರೊಂದರಲ್ಲಿ ಜನಿಸಿ, ಉನ್ನತ ವ್ಯಾಸಂಗಕ್ಕಾಗಿ ಇಂಗ್ಲೆಂಡಿಗೆ ತೆರಳಿ, ತನ್ನ ವೃತ್ತಿಯ ಕಾರಣಕ್ಕಾಗಿ ದಕ್ಷಿಣ ಆಫ್ರಿಕಾದಲ್ಲಿ ನೆಲೆ ನಿಂತು, ಕಾಲಕ್ರಮದಲ್ಲಿ ಮತ್ತೆ ಭಾರತಕ್ಕೆ ಹಿಂದಿರುಗಿದರು ಎನ್ನುವುದು ಅವರ ಬದುಕಿನ ಒಂದು ಹೊರನೋಟದ ಕೆಲವು ವಿವರ ಅಷ್ಟೇ.

ಗಾಂಧೀಜಿ ತನ್ನ ಬದುಕಿನ ಹೊರನೋಟದ ಆಚೆ ನಮ್ಮ-ನಿಮ್ಮಂತಹ ಜನಸಾಮಾನ್ಯನೊಬ್ಬ ಪ್ರಖರವಾದ ಸತ್ಯಶೋಧಕನಾಗಿ, ಸತ್ಯಾಗ್ರಹಿಯಾಗಿ, ವಿಶಿಷ್ಟ ಚಿಂತನೆಗಳ ಧೀಮಂತನಾಗಿ ರೂಪುಗೊಂಡ ಕಥೆ ಬಹಳ ಆಳವಾದುದು ಮತ್ತು ಸಂಕೀರ್ಣವಾದುದು. ಸರ್ವೇಸಾಮಾನ್ಯನಾದ ವ್ಯಕ್ತಿಯೊಬ್ಬ ತನ್ನ ಬಾಳ್ವೆಯ ಮೂಲಕವೇ ಬೆಳಕು ಕಾಣುತ್ತ ಮಹಾತ್ಮನಾಗಿ ರೂಪುಗೊಂಡದ್ದು ನಿಜಕ್ಕೂ ಒಂದು ಬಗೆಯ ವಿದ್ಯಮಾನವೇ ಸರಿ. ಹಾಗಾಗಿ ಮಹಾತ್ಮ ಗಾಂಧಿ ಎಂಬುದು ವ್ಯಕ್ತಿಯೊಬ್ಬನ ಹೆಸರಲ್ಲ, ವಿದ್ಯಮಾನವೊಂದರ ಹೆಸರು. ಈ ಪ್ರಕ್ರಿಯೆಯ ಕೆಲವು ಮುಖ್ಯ ಎಳೆಗಳನ್ನು ಈ ಲೇಖನದಲ್ಲಿ ಪ್ರಸ್ತಾವಿಸಲಾಗುವುದು.

ಗಾಂಧಿಯವರ ಕ್ರಿಯಾಶೀಲವಾದ ಬದುಕಿನಲ್ಲಿ ಆಳವಾಗಿ ನಿಹಿತವಾಗಿರುವ ಪ್ರಜಾತಾಂತ್ರಿಕ ನಡೆಯನ್ನು ನಾವು ’ಸಂಭಾಷಣೆ’ಎಂದು ಕರೆಯಲಿಚ್ಛಿಸುತ್ತೇವೆ. ಇಂಗ್ಲೆಂಡಿನ ತನ್ನ ಶೈಕ್ಷಣಿಕ ಜೀವನದಿಂದ ಆರಂಭಗೊಂಡು ಬದುಕಿನ ಕೊನೆಯ ಉಸಿರಿನ ತನಕವೂ ಮಹಾತ್ಮ ನಡೆಸಿದ್ದು ನಿರಂತರವಾದ ಹಾಗೂ ಸುದೀರ್ಘವಾದ ಸಂಭಾಷಣೆ. ಈ ಸಂಭಾಷಣೆಯನ್ನು ಅವರು ಕೆಲವೊಮ್ಮೆ ತಮ್ಮೊಳಗೇ ನಡೆಸಿದರು ಮತ್ತು ಕೆಲವೊಮ್ಮೆ ತನ್ನ ಸಂಗಡಿಗರ ಜೊತೆ ಹಾಗೂ ತನ್ನನ್ನು ವಿರೋಧಿಸಿದವರ ಜೊತೆಗೂ ನಡೆಸಿದರು. ಬಹುಮುಖ್ಯವಾದ ಸಂಗತಿಯೆಂದರೆ ಗಾಂಧೀಜಿಯವರಿಗೆ ಸಂಭಾಷಣೆಯೆಂದರೆ ಪ್ರತಿಸ್ಪರ್ಧಿಗಳ ಜೊತೆಗೆ ನಡೆಸುವ ವಾಗ್ಯುದ್ಧವಲ್ಲ. ಅದರಲ್ಲಿ ಅವರಿಗೆ ನಂಬಿಕೆಯೂ ಇರಲಿಲ್ಲ. ಸಂಭಾಷಣೆಯೆಂದರೆ ಗಾಂಧಿಯವರಿಗೆ ತಾನು ನಂಬಿದ ಸತ್ಯವನ್ನು ಇನ್ನೊಬ್ಬರ ಮೇಲೆ ಹೇರುವುದೂ ಆಗಿರಲಿಲ್ಲ. ಅದು ಅವರಿಗೆ ತಾನು ಕಂಡ ಸತ್ಯವನ್ನು ಪ್ರಯೋಗಕ್ಕೆ ಒಡ್ಡುವ, ತಾನು ನಂಬಿದನ್ನು ತಾನೇ ಪರೀಕ್ಷಿಸುವ, ವಿಸ್ತರಿಸುವ ಹಾಗೂ ಸಂದರ್ಭ ಬಂದರೆ ರೂಪಾಂತರಿಸಿಕೊಳ್ಳುವ ಕ್ರಿಯೆಯೂ ಆಗಿತ್ತು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಗಾಂಧಿ ತನ್ನ ಜೀವಮಾನದುದ್ದಕ್ಕೂ ನಡೆಸಿದ ಅನೇಕಾನೇಕ ಸಂಭಾಷಣೆಗಳು ಸತ್ಯವನ್ನು ಅರಿಯುವ ಅವರ ಪ್ರಯೋಗದ ಭಾಗ. ಅವರ ಸತ್ಯದ ಈ ಪ್ರಯೋಗದಲ್ಲಿ ಅವರಿಗೆ ಯಾರೂ ಅನ್ಯರಲ್ಲ, ಪ್ರತಿಸ್ಪರ್ಧಿಗಳಲ್ಲ, ವೈರಿಗಳಂತೂ ಅಲ್ಲವೇ ಅಲ್ಲ. ಹಾಗಾಗಿ ಸೋಲು-ಗೆಲುವು ಅವರಿಗೆ ಮುಖ್ಯವಲ್ಲ. ಸಂಭಾಷಣೆಯನ್ನು ಭಾಷಣ ಎಂದು ತಿಳಿಯದೆ, ಅದನ್ನೂ ತನ್ನ ಅಧ್ಯಯನ ಎಂದೇ ಪರಿಭಾವಿಸಿದ ಗಾಂಧಿಯವರು ತಾನು ಕಂಡುಕೊಂಡ ಸತ್ಯವನ್ನೇ ಅಂತಿಮ ಸತ್ಯವೆನ್ನುವ ಹಠಮಾರಿತನದ ನಿಲುವು ಹೊಂದಿರುವುದನ್ನೂ ಹಿಂಸೆ ಎಂದು ತಿಳಿದಿದ್ದರು. ಹಾಗೆಯೇ ತನ್ನ ಮುಂದೆ ಇರುವವರನ್ನು ಪ್ರಖರ ವಾದದ ಮೂಲಕ, ತರ್ಕಬದ್ಧ ವಾಗ್ಬಾಣಗಳಿಂದ ಸದೆಬಡಿಯುವುದನ್ನು ಕೂಡ ಅವರು ಹಿಂಸೆಯ ಇನ್ನೊಂದು ರೂಪವೆಂದೇ ತಿಳಿದಿದ್ದರು. ಹೆಚ್ಚೂಕಡಿಮೆ ಈ ಅರ್ಥದ ಮಾತನ್ನು ಧ್ವನಿಸಿದವರು ಸುಪ್ರಸಿದ್ಧ ಗಾಂಧಿ ಚಿಂತಕ ಅಕೀಲ್ ಬಿಲ್ಗ್ರಾಮಿ.

ಭಾರತದ ಸ್ವಾತಂತ್ರ್ಯ ಹೋರಾಟದ ಕಾಲಘಟ್ಟದಲ್ಲಿ ಗಾಂಧಿಯವರು ಅನೇಕರೊಂದಿಗೆ ಮಹತ್ವದ ಸಂಭಾಷಣೆಗಳನ್ನು ನಡೆಸಿದ್ದಾರೆ. ಅವುಗಳಲ್ಲಿ ಸಾಂಸ್ಕೃತಿಕ ಹಾಗೂ ರಾಜಕೀಯ ಮಹತ್ವದ ದೃಷ್ಟಿಯಿಂದ ಮೂರು ಸಂಭಾಷಣೆಗಳು ಬಹುಮುಖ್ಯವೆಂದು ನಾವು ಭಾವಿಸಿದ್ದೇವೆ. ಗಾಂಧೀಜಿಯವರ ನೈತಿಕ-ರಾಜಕೀಯ ಚಿಂತನೆಯ ಮಜಲುಗಳನ್ನು ತೋರಿಸಿಕೊಡುತ್ತವೆ ಎನ್ನುವ ಕಾರಣಕ್ಕಾಗಿಯೂ ಈ ಮೂರು ಸಂಭಾಷಣೆಗಳು ನಮಗೆ ಮುಖ್ಯ ಎಂದನ್ನಿಸಿವೆ.

1.ರವೀಂದ್ರನಾಥ್‌ ಟಾಗೋರ್‌- ಗಾಂಧಿ ಸಂವಾದ:  ಸ್ವದೇಶಿ ಆಂದೋಲನದ ಸಂದರ್ಭದಲ್ಲಿ ಕವಿ, ತತ್ತ್ವಜ್ಞಾನಿ ಗುರುದೇವ ರವೀಂದ್ರನಾಥ್ ಟಾಗೋರ್ ಜೊತೆಗೆ ಗಾಂಧಿಯವರು ನಡೆಸಿದ ಸಂವಾದ. ಎರಡನೆಯದು, ವೈಕಂ ಸತ್ಯಾಗ್ರಹದ ಸನ್ನಿವೇಶದಲ್ಲಿ ಕೇರಳದಲ್ಲಿ ತಿರುವಾಂಕೂರು ಪಂಡಿತರ ಜೊತೆಗೆ ಅಸ್ಪೃಶ್ಯತೆಯ ಶಾಸ್ತ್ರ ಸಮ್ಮತಿಗೆ ಸಂಬಂಧಿಸಿದಂತೆ ಗಾಂಧಿಯವರು ನಡೆಸಿದ ಸಂವಾದ. ಮೂರನೆಯದು, ದಲಿತರು ಪ್ರತ್ಯೇಕ ಚುನಾವಣ ಕ್ಷೇತ್ರಗಳನ್ನು (Separate Electorate) ಹೊಂದುವ ಬಗ್ಗೆ ಬಾಬಾ ಸಾಹೇಬ್ ಡಾ. ಬಿ ಆರ್ ಅಂಬೇಡ್ಕರ್ ಜೊತೆಗೆ ಮಹಾತ್ಮರು ನಡೆಸಿದ ಸಂವಾದ. ಈ ಮೂರು ಸಂವಾದಗಳಲ್ಲಿ ಗಾಂಧೀಜಿಯವರು ನಡೆಸಿದ ಸಂಭಾಷಣೆಯ ಸ್ವರೂಪವನ್ನು ಅರ್ಥ ಮಾಡಿಕೊಳ್ಳುವ ಹಾಗೂ ಅವರ ಚಿಂತನೆಯ ಮಜಲುಗಳನ್ನು ಅರಿಯುವ ಪ್ರಯತ್ನ ನಡೆಸುತ್ತೇವೆ.

ಸ್ವದೇಶೀ ಆಂದೋಲನದ ಸಂದರ್ಭದಲ್ಲಿ ವಿದೇಶೀ ವಸ್ತು ಮತ್ತು ವಸ್ತ್ರಗಳನ್ನು ಬಹಿಷ್ಕರಿಸುವ ಸಂದರ್ಭದಲ್ಲಿ ಗಾಂಧೀಜಿಯವರು ತೆಗೆದುಕೊಂಡ ನಿಲುವು ಟಾಗೋರರನ್ನು ಕಸಿವಿಸಿಗೆ ಈಡು ಮಾಡಿತ್ತು. ಟಾಗೋರರ ಪ್ರಕಾರ ವಿದೇಶೀ ವಸ್ತ್ರಗಳನ್ನು ಬಹಿಷ್ಕರಿಸುವ ನೀತಿ ಸರಿಯಾದುದೇ ಹೌದು. ಆದರೆ ಆ ವಸ್ತ್ರಗಳನ್ನು ಸುಡಬೇಕೆನ್ನುವ ಗಾಂಧಿಯವರ ನಿಲುವನ್ನು ಅವರು ವಿರೋಧಿಸಿದರು. ತಾವು ಉಪಯೋಗಿಸಲು ನಿರಾಕರಿಸುವ ವಸ್ತ್ರಗಳನ್ನು ಬಟ್ಟೆಬರೆಯೇ ಇಲ್ಲದ ಬಡವರಿಗೆ ನೀಡಬೇಕೆನ್ನುವುದು ಟಾಗೋರ್‌ ಅವರ ವಾದವಾಗಿತ್ತು. ಗಾಂಧಿಯವರು ಅರ್ಥಶಾಸ್ತ್ರ ಮತ್ತು ನೀತಿಶಾಸ್ತ್ರಗಳ ನಡುವೆ ಸ್ಪಷ್ಟವಾದ ವ್ಯತ್ಯಾಸವನ್ನು ಗುರುತಿಸಲು ಅಶಕ್ತರಾಗಿದ್ದರೆಂದೇ ಟಾಗೋರರು ತಿಳಿದಿದ್ದರು. ಇದಕ್ಕೆ ಪ್ರತಿಯಾಗಿ ಗಾಂಧಿಯವರು ತನಗೆ ನೈತಿಕವಾಗಿ ತ್ಯಾಜ್ಯವಾದದ್ದನ್ನು ಇನ್ನೊಬ್ಬರಿಗೆ ನೀಡುವುದು ಅನೈತಿಕವೆಂದು, ತನ್ನ ಮಟ್ಟಿಗೆ ಅರ್ಥಶಾಸ್ತ್ರ ಮತ್ತು ನೀತಿಶಾಸ್ತ್ರಗಳು ಮಾನವ ಜೀವನದ ಎರಡು ಅವಿಭಾಜ್ಯ ಭಾಗಗಳೆಂದು ವಾದಿಸಿದರು.

ಸಂಕ್ಷಿಪ್ತವಾಗಿ ನಿರೂಪಿಸಿದ ಗಾಂಧಿ-ಟಾಗೋರ್ ಸಂವಾದದ ಈ ಸಣ್ಣತುಣುಕು ಗಾಂಧೀಜಿಯವರ ರಾಜಕೀಯ ಚಿಂತನೆಯ ಒಂದು ಮಹತ್ವದ ಆಯಾಮವನ್ನು ಮತ್ತು ಬದುಕಿನ ಕುರಿತಾಗಿ ಅವರಿಗಿರುವ ಅವಿಚ್ಛಿನ್ನ ನೋಟವನ್ನು ಪ್ರತಿಬಿಂಬಿಸುತ್ತದೆ. ಗಾಂಧೀಜಿ ತನ್ನ ಬದುಕಿನುದ್ದಕ್ಕೂ ಜಗತ್ತನ್ನು ಪ್ರತ್ಯ-ಪ್ರತ್ಯೇಕವಾಗಿ, ವರ್ಗೀಕರಿಸಿ ನೋಡುವುದರಲ್ಲಿ ವಿಶ್ವಾಸವಿರಿಸಿಕೊಂಡವರಲ್ಲ. ಧರ್ಮ, ರಾಜಕಾರಣ, ಅರ್ಥಶಾಸ್ತ್ರ, ನೀತಿಶಾಸ್ತ್ರ, ಖಾಸಗಿ, ಸಾರ್ವಜನಿಕ ಮೊದಲಾದ ಪ್ರತ್ಯೇಕತೆಗಳನ್ನು ಸಹಜ ಮತ್ತು ಅನಿವಾರ್ಯ ಎಂದು ತಿಳಿದುಕೊಳ್ಳುವ ಈ ನಮ್ಮ ಕಾಲದಲ್ಲಿ ಗಾಂಧೀಜಿ ಸಮಗ್ರತೆಯ ಅಥವಾ ಅವಿಚ್ಛಿನ್ನತೆಯ ಒಂದು ವಿಶ್ವನೋಟವನ್ನು ನಮ್ಮ ಮುಂದಿರಿಸಿದ್ದಾರೆ.

2. ತಿರುವಾಂಕೂರಿನ ಸಂಸ್ಕೃತ ವಿದ್ವಾಂಸರ ಜೊತೆ ಗಾಂಧಿ ಸಂವಾದ: ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಗಾಂಧೀಜಿ ನಡೆಸಿದ ಇನ್ನೊಂದು ಸಂವಾದ ಅಸ್ಪೃಶ್ಯತೆಯ ಧರ್ಮಶಾಸ್ತ್ರೀಯ ಮಾನ್ಯತೆಗೆ ಸಂಬಂಧಿಸಿದ್ದು. ಗಾಂಧಿ ಶಾಸ್ತ್ರಾರ್ಥಗಳನ್ನು ವ್ಯಾಖ್ಯಾನಿಸಿ ಅರ್ಥನಿರೂಪಣೆ ಮಾಡುವ ಘನಪಾಠಿಗಳೇನೂ ಅಲ್ಲ. ಹಾಗಿದ್ದರೂ ಅವರು ತಿರುವಾಂಕೂರಿನ ಸಂಸ್ಕೃತದ ಘನ ವಿದ್ವಾಂಸರ ಜೊತೆಗೆ ಧರ್ಮಶಾಸ್ತ್ರಗಳು ಹೇಳುವುದೇನು ಎಂಬುದನ್ನು ಚರ್ಚಿಸುವ, ಸಮಸ್ಯಾತ್ಮಕಗೊಳಿಸುವ ದುಸ್ಸಾಹಸವನ್ನು ನಡೆಸಿದರು. ಗಾಂಧೀಜಿಯವರ ಪ್ರಕಾರ ಧರ್ಮಶಾಸ್ತ್ರಗಳು ಅಸ್ಪೃಶ್ಯತೆಯನ್ನು ಮಾನ್ಯ ಮಾಡುವುದಿಲ್ಲ. ಓರ್ವ ನಿಷ್ಠಾವಂತ ಹಿಂದೂವಾಗಿ ತನಗೆ ಧರ್ಮಶಾಸ್ತ್ರವನ್ನು ಓದುವ, ಅರ್ಥ ಮಾಡಿಕೊಳ್ಳುವ ಹಾಗೂ ಅದಕ್ಕನುಸಾರವಾಗಿ ನಡೆದುಕೊಳ್ಳುವ ಅಧಿಕಾರ ಅಥವಾ ಸ್ವಾತಂತ್ರ್ಯ ಇದೆ ಎನ್ನುವುದು ಗಾಂಧೀಜಿಯವರ ಖಚಿತವಾದ ನಿಲುವಾಗಿತ್ತು. ಅಷ್ಟು ಮಾತ್ರವಲ್ಲದೆ, ಧರ್ಮವನ್ನು ಯುಗಧರ್ಮವೆಂದು ವ್ಯಾಖ್ಯಾನಿಸುವ ಅವರು, ಕಾಲಕ್ಕನುಗುಣವಾಗಿ ಪರಿವರ್ತನಶೀಲವಾಗುವುದೇ ಧರ್ಮಕ್ಕಿರಬೇಕಾದ ಚಲನಶೀಲತೆ ಎಂದು ನಂಬಿದ್ದರು.

ಗಾಂಧೀಜಿಯವರ ಈ ವಾದವನ್ನು ಖಡಾಖಂಡಿತವಾಗಿ ತಿರಸ್ಕರಿಸಿದ ಪಂಡಿತರು ಬ್ರಾಹ್ಮಣನಲ್ಲದ ಗಾಂಧಿಗೆ ಧರ್ಮಶಾಸ್ತ್ರವನ್ನು ವ್ಯಾಖ್ಯಾನಿಸುವ ಅಧಿಕಾರವಾಗಲಿ ಅಥವಾ ಸಾಮರ್ಥ್ಯವಾಗಲಿ ಇಲ್ಲ ಎಂದು ಘೋಷಿಸಿದರು. ಅಲ್ಲದೆ, ಅಸ್ಪೃಶ್ಯತೆಯನ್ನು ಧಾರ್ಮಿಕವೆಂದೂ, ಶಾಸ್ತ್ರಬದ್ಧವೆಂದೂ ಪ್ರತಿವಾದಿಸಿದರು. ತಿರುವಾಂಕೂರು ಪಂಡಿತರ ಜೊತೆಗಿನ ಈ ಸಂವಾದದಲ್ಲಿ ಗಾಂಧೀಜಿ ಪರಾಜಿತರಾದರು. ಆದರೆ ಈ ಸೋಲು ಅವರನ್ನು ಧೃತಿಗೆಡಿಸಲಿಲ್ಲ. ಮಾತ್ರವಲ್ಲ ಈ ಸೋಲಿನ ಬೆಳಕಿನಲ್ಲಿ ಧರ್ಮ ಮತ್ತು ದೇವರ ಕುರಿತು ಹೊಸ ನಿರೂಪಣೆಯನ್ನು ಅವರು ನೀಡಿದರು. ನಾನು ಇಲ್ಲಿಯ ತನಕ ದೇವರೇ ಸತ್ಯವೆಂದು ತಿಳಿದಿದ್ದೆ. ಆದರೆ ಇನ್ನು ಮುಂದೆ ಸತ್ಯವೇ ದೇವರು ಎಂದು ಭಾವಿಸುತ್ತೇನೆ- ಎನ್ನುವ ಧರ್ಮದ ಕುರಿತಾದ ಅವರ ಈ ಹೊಸ ನಿರ್ವಚನ ಮಾರ್ಮಿಕವಾದದ್ದು ಮಾತ್ರವಲ್ಲ, ಕ್ರಾಂತಿಕಾರಕವಾದುದೂ ಹೌದು. ಗಾಂಧಿಯವರ ಕುರಿತು ಚಿಂತನೆ ನಡೆಸಿದ ಅನೇಕ ವಿದ್ವಾಂಸರು ’ಗಾಂಧೀಚಿಂತನೆ’ಯಲ್ಲಿ ಸಂಭವಿಸಿದ ಈ ಪಲ್ಲಟವನ್ನು ಜ್ಞಾನಮೀಮಾಂಸೆಯ ಪಲ್ಲಟ (Epistemological Shift) ಎಂದು ಗುರುತಿಸಿದ್ದಾರೆ.

3. ಡಾ. ಬಿ ಆರ್ ಅಂಬೇಡ್ಕರ್‌ -ಗಾಂಧಿ ಸಂವಾದ: ಸ್ವಾತಂತ್ರ್ಯ ಹೋರಾಟದ ಕಾಲಘಟ್ಟದಲ್ಲಿ ಗಾಂಧಿಯವರು ನಡೆಸಿದ ಮೂರನೆಯ ಸಂವಾದ ಬಹು ಮುಖ್ಯವಾದದ್ದು ಮಾತ್ರವಲ್ಲ, ಚಾರಿತ್ರಿಕವಾಗಿ ಸ್ಮರಣೀಯವಾದದ್ದು ಕೂಡ. ಈ ದೇಶದ ಇನ್ನೋರ್ವ ಪ್ರಖರ ಚಿಂತಕ ಡಾ. ಬಿ ಆರ್ ಅಂಬೇಡ್ಕರ್‌ ಜೊತೆಗೆ ಗಾಂಧಿ ನಡೆಸಿದ ಈ ಸಂವಾದ ದಲಿತರು ಪ್ರತ್ಯೇಕವಾದ ಚುನಾವಣಾ ಕ್ಷೇತ್ರವನ್ನು ಹೊಂದುವ ಅಂಬೇಡ್ಕರವರ ಪ್ರಸ್ತಾವಕ್ಕೆ ಸಂಬಂಧಿಸಿದ್ದು. ದಲಿತ ಅಸ್ಮಿತೆಯ ಪ್ರತಿಪಾದಕರೂ ಆಗಿದ್ದ ಅಂಬೇಡ್ಕರ್ ದಲಿತ ವಿಮೋಚನೆಗಾಗಿ ಪ್ರತ್ಯೇಕ ಚುನಾವಣಾ ಕ್ಷೇತ್ರ ನಿರ್ಣಾಯಕವೆಂದು ತಿಳಿದಿದ್ದರು. ದಲಿತರನ್ನು (ಗಾಂಧೀಜಿಯವರ ಪ್ರಕಾರ ಅವರು ಹರಿಜನರು) ಹಿಂದೂಧರ್ಮದ ಅವಿಭಾಜ್ಯ ಭಾಗವೆಂದು ಭಾವಿಸಿದ್ದ ಗಾಂಧೀಜಿ ಅಂಬೇಡ್ಕರ್ ಅವರ ಪ್ರಸ್ತಾವವನ್ನು ವಿನಾಶಕಾರಿ ಎಂದು ವಿರೋಧಿಸಿದ್ದರು. ಈ ಸಂಬಂಧವಾಗಿ ಅವರ ನಡುವೆ ನಡೆದ ಸಂವಾದ ಗಹನವಾದುದು ಮಾತ್ರವಲ್ಲ ಅದು ಆಧುನಿಕ ಭಾರತದ ಸಾಂಸ್ಕೃತಿಕ ಚರಿತ್ರೆಯ ಒಂದು ಬಹುಮುಖ್ಯ ಅಂಶವೂ ಹೌದು.

ಗಾಂಧೀಜಿಯವರಿಗೆ ಅಂಬೇಡ್ಕರ್‌ ಅವರ ಜೊತೆಗಿನ ಮಾತುಕತೆ ಸಂವಾದವಾಗಿದ್ದರೆ ಅಂಬೇಡ್ಕರ್‌ ಅವರಿಗೆ ಅದು ಬಲುದೊಡ್ಡ ವಾಗ್ವಾದವಾಗಿತ್ತು. ಅಪ್ರತಿಮ ವಕೀಲರಾಗಿದ್ದ ಅಂಬೇಡ್ಕರ್ ಅವರಿಗೆ ಪ್ರಖರ ಮತ್ತು ತರ್ಕಬದ್ಧ ವಾದಸರಣಿಯ ಮೂಲಕ ತನ್ನ ಪ್ರತಿದ್ವಂದ್ವಿ ಎಂದು ಭಾವಿಸಿದ್ದ ಗಾಂಧೀಜಿಯವರನ್ನು ವಾದದಲ್ಲಿ ಹಿಮ್ಮೆಟ್ಟಿಸುವುದು ಬಹಳ ಮುಖ್ಯವಾಗಿತ್ತು. ತಾನು ಮಾಡಹೊರಟ ರಾಜಕೀಯಕ್ಕೆ ವಿರೋಧವಾಗಿರುವ ಅರ್ಥಾತ್ ತನ್ನ ರಾಜಕೀಯ ವಿರೋಧಿಯಾಗಿರುವ ಗಾಂಧಿಯವರನ್ನು ಮಣಿಸುವುದು ಅಂಬೇಡ್ಕರ್ ಅವರಿಗೆ ದಲಿತ ಸಮುದಾಯದ ರಾಜಕೀಯ ಅಸ್ತಿತ್ವವನ್ನು ಸ್ಥಾಪಿಸುವುದಕ್ಕಾಗಿ ಅನಿವಾರ್ಯವಾಗಿತ್ತು. ಗಾಂಧಿಯವರಿಗೆ, ಅಂಬೇಡ್ಕರ್ ಅವರು ತಾಳಿದ ನಿಲುವಿನ ಅಪಾಯಗಳನ್ನು ಮನಗಾಣಿಸಿಕೊಡುವುದು ಮತ್ತು ಅವರ ಮನ ಒಲಿಸುವುದು ಮುಖ್ಯವಾಗಿತ್ತು. ಅಂಬೇಡ್ಕರ್ ಅವರು ಸಾಕ್ಷಿಗಳನ್ನು ಅವಲಂಬಿಸಿದ್ದರು. ಗಾಂಧಿಯವರು ಅಂತಃಸ್ಸಾಕ್ಷಿಯನ್ನು ನೆಮ್ಮಿದ್ದರು.

ವಿಭಿನ್ನ ದೃಷ್ಟಿಕೋನಗಳ ಈ ಮುಖಾಮುಖಿಯಲ್ಲಿ ಯಾರು ಸರಿ ಯಾರು ತಪ್ಪು ಎನ್ನುವುದು ಮುಖ್ಯವಲ್ಲ. ಮೇಲ್ಜಾತಿಗಳಿಗೆ ಸೇರಿದ ಯಾರೊಬ್ಬರಿಗೂ ಅರ್ಥವಾಗದ ಚಾರಿತ್ರಿಕ ಒತ್ತಡದಿಂದ ಮತ್ತು ಅಪಾರ ಕಹಿ ಜೀವಾನುಭವಗಳ ನಡುವಿನಿಂದ ಒಡಲುಗೊಂಡ ಅಂಬೇಡ್ಕರ್‌ ಅವರಿಗೆ ಗಾಂಧಿಯವರ ಜೊತೆಗಿನ ಈ ಮುಖಾಮುಖಿಯಲ್ಲಿ ಪಡೆಯಬೇಕಿದ್ದ ಗೆಲುವು ಬಹು ಮಹತ್ವಪೂರ್ಣವಾಗಿತ್ತು. ಗಾಂಧೀಜಿಯವರಿಗೆ ಅಂಬೇಡ್ಕರರನ್ನು ಒಳಗೊಳ್ಳುವುದು ಮತ್ತು ತನ್ನ ಕಡೆಗೆ ಸೆಳೆಯುವುದು ಭಾರತೀಯ ಸಮಾಜದ ಸಮಗ್ರತೆಯ ಹಿತದೃಷ್ಟಿಯಿಂದ ಬಲುಮುಖ್ಯವಾಗಿತ್ತು. ಆದ್ದರಿಂದ ಪಂಥಗಳಲ್ಲಿ ನಮ್ಮನ್ನು ನಾವು ಸಿಲುಕಿಸಿಕೊಳ್ಳುವ ಬದಲು ಈ ದೇಶದ ಭವಿಷ್ಯದ ಬಗ್ಗೆ ಗಾಢವಾಗಿ ಚಿಂತಿಸಿದ ಈ ಈರ್ವರು ದಾರ್ಶನಿಕ ನಾಯಕರ ಸಾಮಾಜಿಕ ಹಿನ್ನೆಲೆ, ಸಾಂಸ್ಕೃತಿಕ ಸಂಕಷ್ಟ ಹಾಗೂ ರಾಜಕೀಯ ಒತ್ತಡಗಳನ್ನು ಸಹಾನುಭೂತಿಯಿಂದ ಮತ್ತು ವಿವೇಕದಿಂದ ಪರಾಂಬರಿಸಿ ನೋಡುವ ಕೆಲಸ ಬಹು ಮುಖ್ಯವಾದದ್ದು. ಗೆದ್ದದ್ದು ಸತ್ಯವಾಗಬೇಕೆಂದೇನೂ ಇಲ್ಲ ಹಾಗೆಯೇ ಸೋತದ್ದು ಸುಳ್ಳಾಗಬೇಕೆಂದೂ ಇಲ್ಲ ಎನ್ನುವ ಗಾಂಧೀಚಿಂತನೆಯ ದಾರ್ಶನಿಕ ಒಳನೋಟ ಭಾರತೀಯ ಪ್ರಜಾತಂತ್ರ ಹೊಂದಿರಲೇಬೇಕಾದ ಆಧ್ಯಾತ್ಮಿಕ ಆಯಾಮವನ್ನೂ ಸೂಚಿಸುತ್ತದೆ.

ಈ ಲೇಖನದಲ್ಲಿ ನಾವು ನಿದರ್ಶನವಾಗಿ ತೋರಿಸಿದ ಮೂರು ಸಂವಾದಗಳು ಭಾರತದ ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ನಡೆದ ಅನೇಕ ಸಂವಾದಗಳ ಪರಂಪರೆಯ ಒಂದು ಸಣ್ಣ ಭಾಗ ಅಷ್ಟೆ. ಭಾರತದ ಸ್ವಾತಂತ್ರ್ಯ ಹೋರಾಟ ಅನೂಹ್ಯ ಘಟನೆಗಳ ಮತ್ತು ತ್ಯಾಗ-ಬಲಿದಾನಗಳ ಕಥೆ ಮಾತ್ರವಾಗಿರದೆ ವಿವಿಧ ಸೈದ್ಧಾಂತಿಕ, ಸಾಮುದಾಯಿಕ ಹಾಗೂ ಸಾಂಸ್ಕೃತಿಕ ಹಿನ್ನೆಲೆಗಳಿಂದ ಬಂದ ಜನನಾಯಕರ ನಡುವಿನ ಸಂವಾದಗಳ ಸಂಕಥನವೂ ಆಗಿದೆ. ಈ ಜನನಾಯಕರು ಭಾರತದ ಸಮಾಜ, ಸಂಸ್ಕೃತಿ, ಶಿಕ್ಷಣ, ಆರ್ಥಿಕತೆ ಹಾಗೂ ರಾಜಕಾರಣಗಳು ಹೇಗಿರಬೇಕು ಎನ್ನುವ ಕುರಿತು ಚಿಂತನೆ ನಡೆಸಿದವರು ಮತ್ತು ಆ ದಿಸೆಯಲ್ಲಿ ಕಾರ್ಯಪ್ರವೃತ್ತರಾದವರು. ಈ ಅರ್ಥದಲ್ಲಿ ಭಾರತದ ಸ್ವಾತಂತ್ರ್ಯ ಹೋರಾಟ ಪರಸ್ಪರ ಸಂವಾದಗಳ ಮೂಲಕ ಸ್ವತಂತ್ರ ಭಾರತದ ಸೈದ್ಧಾಂತಿಕ ಹಾಗೂ ಸಾಂಸ್ಕೃತಿಕ ರೂಪು-ರೇಖೆಗಳ ಕುರಿತು ನಿಷ್ಕರ್ಷೆ ನಡೆಸಿದ ವಿದ್ಯಮಾನ. ಇದು ಸಂಭಾಷಣೆಯ ಮೂಲಕ ಭಾರತವನ್ನು ಕಲ್ಪಿಸುವ ಮತ್ತು ಕಟ್ಟುವ ವಿಧಾನ.

ಸಂಭಾಷಣೆಯ ಮೂಲಕ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬಹುದು, ಸಮಾಜವನ್ನು ಪರಿವರ್ತಿಸಬಹುದು, ಸ್ವರಾಜ್ಯವನ್ನು ಸ್ಥಾಪಿಸಬಹುದು, ಸರ್ವೋದಯವನ್ನು ಸಾಧಿಸಬಹುದು ಹಾಗೂ ಆ ಮೂಲಕ ಸತ್ಯವನ್ನು ಸಾಕ್ಷಾತ್ಕರಿಸಿಕೊಳ್ಳಬಹುದು ಎಂದು ತಿಳಿದವರು ಗಾಂಧಿ. ಜನವರಿ 30, 1948ರಲ್ಲಿ ನಡೆದ ಗಾಂಧಿಯವರ ಭೀಕರ ಕೊಲೆ ಅವರು ನಂಬಿದ ಸಂಭಾಷಣೆಯ, ಸೌಹಾರ್ದದ ಪ್ರಜಾತಾಂತ್ರಿಕ ಭಾರತದ ಮೇಲೆ ನಡೆದ ಮೊತ್ತಮೊದಲನೆಯ ಮಾರಕ ಆಕ್ರಮಣ.

ರಾಜಾರಾಮ ತೋಳ್ಪಾಡಿ
+ posts
ನಿತ್ಯಾನಂದ ಬಿ ಶೆಟ್ಟಿ
+ posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಅಂಬೇಡ್ಕರ್ ವಿಶೇಷ | ಭಾರತೀಯರೆಲ್ಲರೂ ಗೌರವಿಸಲೇಬೇಕಾದ ಮೇರುವ್ಯಕ್ತಿತ್ವ- ಬಾಬಾ ಸಾಹೇಬ್ ಅಂಬೇಡ್ಕರ್

ಬಾಬಾ ಸಾಹೇಬ್ ಅವರಲ್ಲದೆ ಬೇರೆಯವರು ನಮ್ಮ ಸಂವಿಧಾನ ರಚಿಸಿದ್ದರೆ ಭಾರತ ಹೇಗಿರುತ್ತಿತ್ತು...

ಆನೆಗಳ ಕುರಿತ ಹೊಸ ನಿಯಮ, ಅನಂತ ಅಂಬಾನಿಯ ವನತಾರ ಮತ್ತು ಆನೆ ತಜ್ಞ ಪ್ರೊ. ರಾಮನ್‌ ಸುಕುಮಾರ್

‌ಆನೆಗಳ ಸಾಗಾಟ ಮತ್ತು ಸಾಕಾಣಿಕೆಗೆ ಸಂಬಂಧಿಸಿದ ಹೊಸ ನಿಯಮ(ಕ್ಯಾಪ್ಟಿವ್‌ ಎಲಿಫೆಂಟ್) ಮತ್ತು...

ಹಿಂದುತ್ವದಲ್ಲಿ ಬಂಟ, ಬಿಲ್ಲವರ ಬದುಕು-ಮರಣಕ್ಕೆ ಸಮಾನ ಗೌರವ ಸಿಕ್ಕಿತ್ತಾ ?

ಕೊಲೆ ಮಾಡುವ ತಲವಾರಿಗೆ ಬಂಟ-ಬಿಲ್ಲವ ಎಂಬುದು ಗೊತ್ತಾಗುತ್ತೋ ಇಲ್ವೋ ! ಬಂಟ-...

ಈ ದಿನ ವಿಶೇಷ | ಬ್ರಾಹ್ಮಣರ ಮಾರಣಹೋಮಕ್ಕೆ ಪೆರಿಯಾರ್‌ ಕರೆ ನೀಡಿದ್ದರೆ?

ಜಾತಿವಾದವನ್ನು ಸದಾ ಪ್ರಶ್ನಿಸುವ ಪೆರಿಯಾರ್‌ ಅವರ ಚಿಂತನೆಯ ಇರುವಿಕೆ ಮತ್ತು ಪ್ರಗತಿಪರ...