ಮಂಗಳೂರು ನಗರ ಪೊಲೀಸ್ ಕಮಿಷನರ್ ವರ್ಗಾವಣೆ; ಸೋಷಿಯಲ್ ಮೀಡಿಯಾಗಳಲ್ಲಿ ವ್ಯಾಪಕ ಚರ್ಚೆ

Date:

  • ‘ಮಂಗಳೂರಿಗರ ಪ್ರೀತಿಗೆ ಆಭಾರಿಯಾಗಿದ್ದೇನೆ’ ಎಂದ ಕುಲ್‍ದೀಪ್ ಕುಮಾರ್ ಜೈನ್
  • ಕೇವಲ ಆರೇ ತಿಂಗಳಲ್ಲೇ ಮಂಗಳೂರು ಪೊಲೀಸ್ ಕಮಿಷನರ್ ವರ್ಗಾವಣೆ

ಮಂಗಳೂರು ನಗರ ಪೊಲೀಸ್ ಕಮಿಷನರ್ ಆಗಿ ಕಳೆದ ಫೆಬ್ರವರಿ ತಿಂಗಳಲ್ಲಿ ಅಧಿಕಾರ ವಹಿಸಿದ್ದ ಕುಲ್‍ದೀಪ್ ಕುಮಾರ್ ಜೈನ್ ಅವರನ್ನು ರಾಜ್ಯ ಸರ್ಕಾರವು ಯಾವುದೇ ಹುದ್ದೆಯನ್ನೂ ತೋರಿಸದೆ ವರ್ಗಾವಣೆ ಮಾಡಿರುವುಕ್ಕೆ ಸೋಷಿಯಲ್ ಮೀಡಿಯಾಗಳಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ.

ಮಂಗಳೂರು ನಗರ ಪೊಲೀಸ್ ಕಮಿಷನರ್ ಆಗಿ ಕುಲ್‍ದೀಪ್ ಕುಮಾರ್ ಜೈನ್ ಅವರು ಫೆಬ್ರವರಿ 24ರಂದು ಅಧಿಕಾರ ವಹಿಸಿಕೊಂಡಿದ್ದರು. ಆಗ ರಾಜ್ಯದಲ್ಲಿ ಬಿಜೆಪಿ ಸರ್ಕಾರವಿತ್ತು. ಈಗ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದ್ದು, ಮಂಗಳವಾರ 35 ಐಪಿಎಸ್ ಅಧಿಕಾರಿಗಳ ವರ್ಗಾವಣೆ ಮಾಡಿತ್ತು. ಅದರಲ್ಲಿ ಮಂಗಳೂರು ನಗರ ಪೊಲೀಸ್ ಕಮಿಷನರ್ ಕೂಡ ಒಬ್ಬರು. ಆದರೆ ಇವರಿಗೆ ಸರ್ಕಾರ ಯಾವ ಹುದ್ದೆಯನ್ನೂ ತೋರಿಸದೆ ವರ್ಗಾವಣೆ ಮಾಡಿದೆ.

ಅನುಪಮ್ ಅಗರ್ವಾಲ್ ಮತ್ತು ಕುಲ್‍ದೀಪ್ ಕುಮಾರ್ ಜೈನ್

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ನೂತನ ಪೊಲೀಸ್ ಆಯುಕ್ತರಾಗಿ ಐಪಿಎಸ್ ಅಧಿಕಾರಿ ಅನುಪಮ್ ಅಗರ್ವಾಲ್ ಅವರನ್ನು ನೇಮಕ ಮಾಡಲಾಗಿದೆ. ನೂತನ ಆಯುಕ್ತರಾಗಿರುವ ಅನುಪಮ್ ಅಗರ್ವಾಲ್ 2008-ಬ್ಯಾಚ್ ಐಪಿಎಸ್ ಅಧಿಕಾರಿಯಾಗಿದ್ದು ಮೂಲತಃ ರಾಜಸ್ಥಾನದ ಜೋಧ್‌ಪುರದವರು. ಈ ಹಿಂದೆ ಕರ್ನಾಟಕ ಪೊಲೀಸ್ ಅಕಾಡೆಮಿಯ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು.

ಮಂಗಳೂರು ಪೊಲೀಸ್ ಕಮಿಷನರ್ ಆಗಿ ಅಧಿಕಾರ ಸ್ವೀಕರಿಸಲು ಇನ್ನೂ ಕೂಡ ಮಂಗಳೂರಿಗೆ ಆಗಮಿಸಿಲ್ಲ. ಒಂದೆರಡು ದಿನಗಳಲ್ಲಿ ಆಗಮಿಸಲಿದ್ದಾರೆ ಎಂದು ತಿಳಿದುಬಂದಿದೆ.

ಮಂಗಳೂರಿಗರನ್ನು ಕೆರಳಿಸಿದ ಸರ್ಕಾರದ ನಡೆ

ಪೊಲೀಸ್ ಕಮಿಷನರ್ ಕುಲ್‍ದೀಪ್ ಕುಮಾರ್ ಜೈನ್ ಅವರ ವರ್ಗಾವಣೆ ಮಾಡಿರುವ ಸರ್ಕಾರದ ಈ ನಡೆಯನ್ನು ಮಂಗಳೂರಿಗರನ್ನು ಕೆರಳಿಸಿದ್ದು, ಡ್ರಗ್ಸ್ ಮಾಫಿಯಾ, ರೌಡಿಸಂ, ಅನೈತಿಕ ಗೂಂಡಾಗಿರಿ, ಅಕ್ರಮ ಮಸಾಜ್ ಪಾರ್ಲರ್, ಇಸ್ಪೀಟ್ ಧಂದೆ, ಕೋಳಿ ಅಂಕ, ಮರಳು ಸಾಗಾಟ, ಬಸ್ ಮಾಫಿಯಾವನ್ನು ಸದ್ದಿಲ್ಲದೆ ಮಟ್ಟ ಹಾಕುತ್ತಿದ್ದ ಕಮಿಷನರ್ ಅವರನ್ನು ಒತ್ತಡಕ್ಕೆ ಮಣಿದು ಸರಕಾರ ವರ್ಗಾವಣೆ ಮಾಡಿದೆ ಎಂದು ಸುದ್ದಿಯಾಗುತ್ತಿದ್ದು, ಸೋಷಿಯಲ್ ಮೀಡಿಯಾಗಳಲ್ಲಿ ನಿನ್ನೆಯಿಂದ ವ್ಯಾಪಕ ಚರ್ಚೆ ಹುಟ್ಟು ಹಾಕಿದೆ.

ಇದೀಗ ಅವರ ವರ್ಗಾವಣೆ ಆದೇಶದಿಂದ ಡ್ರಗ್ಸ್ ಮಾಫಿಯಾ ಹಿಂದೆ ಬಿದ್ದಿದ್ದೇ ಮುಳುವಾಯಿತಾ ಎಂಬ ಪ್ರಶ್ನೆ ಎದ್ದಿದೆ.

ಈ ಬಗ್ಗೆ ಕರಾವಳಿ ಭಾಗದ ಪತ್ರಕರ್ತರೂ ಸೇರಿ ಸಾಮಾಜಿಕ ಕಾರ್ಯಕರ್ತರು ಸೋಷಿಯಲ್ ಮೀಡಿಯಾಗಳಲ್ಲಿ ಬಹಿರಂಗವಾಗಿಯೇ ವರ್ಗಾವಣೆಯನ್ನು ವಿರೋಧಿಸಿದ್ದು, ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದ ಅಧಿಕಾರಿಯನ್ನು ವರ್ಗಾವಣೆ ಮಾಡಿರುವುದು ಸರಿಯಲ್ಲ ಎಂಬ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ.

ಸೋಷಿಯಲ್ ಮೀಡಿಯಾಗಳಲ್ಲಿ ತಮ್ಮ ಪರವಾಗಿ ಇರುವ ಅಭಿಪ್ರಾಯದ ಕುರಿತು ಈ ದಿನ.ಕಾಮ್ ಜೊತೆಗೆ ಮಾತನಾಡಿದ ಪೊಲೀಸ್ ಕಮಿಷನರ್ ಕುಲ್‍ದೀಪ್ ಕುಮಾರ್ ಜೈನ್, “ಸರ್ಕಾರ ವರ್ಗಾವಣೆ ಮಾಡಿದೆ. ಸ್ಥಳ ಇನ್ನೂ ನಿಗದಿ ಮಾಡಿಲ್ಲ. ಇದ್ದಷ್ಟು ಸಮಯ ನನ್ನಿಂದಾದಷ್ಟು ಅತ್ಯಂತ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ. ಮಂಗಳೂರಿಗರ ಪ್ರೀತಿ ನೋಡುವಾಗ ಖುಷಿ ಆಗುತ್ತದೆ. ಕೆಲಸ ನಿರ್ವಹಿಸಿರುವುದರ ಬಗ್ಗೆ ಜನರು ಇಟ್ಟುಕೊಂಡ ಪ್ರೀತಿಯ ಬಗ್ಗೆ ನೋಡುವಾಗ ಹೆಮ್ಮೆಯಾಗುತ್ತದೆ” ಎಂದರು.

ಹಿರಿಯ ಪತ್ರಕರ್ತ ಆರಿಫ್ ಪಡುಬಿದ್ರಿಯವರು ಈ ವರ್ಗಾವಣೆ ಬಗ್ಗೆ ಫೇಸ್‌ಬುಕ್‌ನಲ್ಲಿ ಪೋಸ್ಟ್ ಹಾಕಿದ್ದು, “ವರ್ಗಾವಣೆ ಸಾಮಾನ್ಯವಾದರೆ ಪರ್ವಾಗಿಲ್ಲ. ರೌಡಿಸಂ, ಅನೈತಿಕ ಗೂಂಡಾಗಿರಿ, ಮಿತಿಮೀರಿದ ಡ್ರಗ್ಸ್, ಅಕ್ರಮ ಮಸಾಜ್ ಪಾರ್ಲರ್, ಇಸ್ಪೀಟ್ ಧಂದೆ, ಕೋಳಿ ಅಂಕ, ಮರಳು ಸಾಗಾಟ, ಬಸ್ ಮಾಫಿಯಾವನ್ನು ಸದ್ದಿಲ್ಲದೆ ಮಟ್ಟ ಹಾಕುತ್ತಿದ್ದ ಮಂಗಳೂರು ಪೊಲೀಸ್ ಕಮೀಷನರ್ ಕುಲ್‌ದೀಪ್ ಕುಮಾರ್ ಆರ್. ಜೈನ್ ಅವರನ್ನು ಒತ್ತಡಕ್ಕೆ ಮಣಿದು ಸರಕಾರ ವರ್ಗಾವಣೆ ಮಾಡಿದ್ದರೆ ಅದು ಅಕ್ಷಮ್ಯ. ಒತ್ತಡ ಹಾಕಿದವರು, ವರ್ಗಾವಣೆ ಮಾಡಿಸಿದವರು ಮುಂದೊಂದು ದಿನ ಖಂಡಿತಾ ಅನುಭವಿಸುತ್ತಾರೆ. ಆಗ ನೆನಪಿಸುತ್ತಾರೆ….” ಎಂದು ಬರೆದುಕೊಂಡಿದ್ದಾರೆ.

ಮಂಗಳೂರು ಪೊಲೀಸ್ ಕಮಿಷನರ್ ವರ್ಗಾವಣೆ ಮಾಡಿರುವುದಕ್ಕೆ ಸರ್ಕಾರದ ವಿರುದ್ದ ಮುಗಿಬಿದ್ದ ಸಾಮಾಜಿಕ ಹೋರಾಟಗಾರ ದೀಪು ಶೆಟ್ಟಿಗಾರ್, “ದಂಧೆಕೋರರು ಗೆದ್ದು ಬಿಟ್ಟರು ಕಮಿಷನರ್ ವರ್ಗಾವಣೆ ಆಯಿತು” ಎಂದು ಫೇಸ್‌ಬುಕ್‌ನಲ್ಲಿ ಸರ್ಕಾರದ ನಡೆಯ ವಿರುದ್ಧ ವಿಡಿಯೋ ಮೂಲಕ ಆಕ್ರೋಶ ಹೊರಹಾಕಿದ್ದಾರೆ.

“ಮಂಗಳೂರಿನಲ್ಲಿ ಡ್ರಗ್ಸ್ ಮಾಫಿಯಾ ಇಷ್ಟು ಸ್ಟ್ರಾಂಗ್ ಇದೆಯಾ… ?” ಎಂದು ಹಿರಿಯ ಲೇಖಕ ಮುಹಮ್ಮದ್ ಅಲಿ ಕಮ್ಮರಡಿ ಫೇಸ್‌ಬುಕ್‌ನಲ್ಲಿ ಪ್ರಶ್ನಿಸಿದ್ದಾರೆ.

“ಕಾನೂನು ವ್ಯಾಪ್ತಿಯಲ್ಲಿ ಜನಪರವಾಗಿ ಕಾರ್ಯ ನಿರ್ವಹಣೆ ಮಾಡುವ ಅಧಿಕಾರಿಯನ್ನು ಯಾವುದೇ ಹುದ್ದೆ ತೋರಿಸದೆ ವರ್ಗಾವಣೆ ಮಾಡಿದ ಹಿಂದಿನ ಮರ್ಮ ಏನು? ಮಂಗಳೂರಿಗೆ ಪೊಲೀಸಿಂಗ್ ಮಾಡುವ ಅಧಿಕಾರಿ ಅಗತ್ಯ ಇಲ್ವೇ? ಕಾನೂನಾತ್ಮಕ ಖಡಕ್ ಪೊಲೀಸಿಂಗ್ ಮಾಡುವುದೇ ಅಪರಾಧವೇ?. ಭ್ರಷ್ಟಾಚಾರದಲ್ಲಿ ತೊಡಗದ, ಖಡಕ್ ನಿಲುವಿನ ಆಧಿಕಾರಿಗಳಿಗೆ ಭೇಷ್ ಹೇಳುವ ಬದಲಾಗಿ ಫುಟ್ಬಾಲ್ ಮಾಡುವುದು ಭೂಷಣವೇ. ಪ್ರಾಮಾಣಿಕ ಮತ್ತು ದಕ್ಷ ಅಧಿಕಾರಿಗಳ ಕುರಿತು ನಿಮ್ಮ ನಿಲುವು ಏನು?. ಸರಕಾರದವರು ಉತ್ತರಿಸಬೇಕು” ಪತ್ರಕರ್ತರಾದ ಬಾಳೇಪುಣಿ ತಿಳಿಸಿದ್ದಾರೆ.

“ಮಾದಕ ಮುಕ್ತ ಮಂಗಳೂರು ಅಭಿಯಾನದಡಿ ಅವರು ಮಾಡುತ್ತಿದ್ದ ದಾಳಿ ಮತ್ತು ಕಾರ್ಯಾಚರಣೆಯ ವೇಗವನ್ನು ಪರಿಗಣಿಸಿದರೆ ಈ ವರ್ಗಾವಣೆ ಅಚ್ಚರಿಯದ್ದಲ್ಲ. ಇಷ್ಟೊಂದು ಸಣ್ಣ ಅವಧಿಯಲ್ಲಿ ಹೀಗೆಲ್ಲ ಪವರ್ ತೋರಿಸಿದರೆ ಯಾವ ಅಧಿಕಾರಿಯೇ ಆಗಲಿ ಉಳಿಯೋದು ಕಷ್ಟ. ನಿಮ್ಮನ್ನು ಮಂಗಳೂರಿಗರು ಮರೆಯುವುದಿಲ್ಲ. ಇದ್ದಷ್ಟು ದಿನ ತಲೆ ಎತ್ತಿ ನಡೆದಿದ್ದೀರಿ. ನಿಮಗೆ ಒಳಿತಾಗಲಿ” ಎಂದು ಸನ್ಮಾರ್ಗ ವಾರಪತ್ರಿಕೆಯ ಸಂಪಾದಕ ಏ ಕೆ ಕುಕ್ಕಿಲ ಪೊಲೀಸ್ ಕಮಿಷನರ್ ವರ್ಗಾವಣೆಯ ಬಗ್ಗೆ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ವರ್ಗಾವಣೆಗೆ ತಾಂತ್ರಿಕ ಕಾರಣ?
ಮಂಗಳೂರು ಪೊಲೀಸ್ ಕಮಿಷನರ್ ವರ್ಗಾವಣೆ ಮಾಡಿರುವುದಕ್ಕೆ ಕೆಲವೊಂದು ತಾಂತ್ರಿಕ ಕಾರಣಗಳು ಇದೆ ಎಂಬ ವಿಚಾರ ಕೂಡ ಮುನ್ನೆಲೆಗೆ ಬಂದಿದೆ.

ಕುಲದೀಪ್ ಆರ್. ಜೈನ್ ಅವರು 2013ನೇ ಬ್ಯಾಚಿನ ಐ. ಪಿ. ಎಸ್. ಅಧಿಕಾರಿಯಾಗಿದ್ದಾರೆ. ಅವರು ಎಸ್. ಪಿ. ಸೆಲೆಕ್ಷನ್ ಗ್ರೇಡ್ ಪೊಲೀಸ್ ಅಧಿಕಾರಿಯಾಗಿಲ್ಲ. ಪೊಲೀಸ್ ಕಮೀಷನರ್ ಹುದ್ದೆ ಅದು ಡಿ. ಐ. ಜಿ. ಗ್ರೇಡಿನ ಹುದ್ದೆಗೆ ಸಮಾನವಾಗಿರುತ್ತದೆ. ಹಾಗಿರುವಾಗ ವರ್ಗಾಯಿತ ಜೈನ್ ಅವರು ಹಂಗಾಮಿ ಕಮಿಷನರ್ ಆಗಿ ಕೆಲಸ ಮಾಡಿದ್ದಾರಷ್ಟೇ ಎಂದು ತಿಳಿದುಬಂದಿದೆ.

ಕುಲದೀಪ್ ಜೈನ್ ಅವರಿಗೆ ಪೊಲೀಸ್ ಕಮಿಷನರ್ ಹುದ್ದೆಗಿರುವ ಬೇಕಾದ ಗ್ರೇಡ್ ಪಡೆದಿರಲಿಲ್ಲ. ಒಬ್ಬ ಪೊಲೀಸ್ ಕಮಿಷನರ್‌ಗೆ ಪೊಲೀಸ್ ಬಳಕೆಯ ನಿಧಿಯಿಂದ ಗರಿಷ್ಠ ಐದು ಲಕ್ಷ ಮೊತ್ತದಷ್ಟು ಹಣ ಡ್ರಾ ಮಾಡುವ ಅಧಿಕಾರವಿದೆ.

ಸೆಕ್ಷನ್ 144 ಪ್ರಕಾರ ನಿಷೇಧಾಜ್ಞೆಗೆ ವರದಿ ಕೊಡುವ ಅಧಿಕಾರವಿದೆ. ಜೈನ್ ಅವರಿಗೆ ಆ ಎರಡೂ ಅಧಿಕಾರವಿದ್ದಿಲ್ಲ. ಹಾಗೂ ಅವರು ಒಂದು ಲಕ್ಷ ಹಣ ಡ್ರಾ ಮಾಡಲಷ್ಟೇ ಅಧಿಕಾರ ಹೊಂದಿರುವವರಾಗಿದ್ದರು ಎಂಬ ಕೆಲವೊಂದು ತಾಂತ್ರಿಕ ಕಾರಣಗಳಿಂದಾಗಿ ಸರ್ಕಾರ ಯಾವ ಹುದ್ದೆಯನ್ನೂ ತೋರಿಸದೆ ವರ್ಗಾವಣೆ ಮಾಡಿದೆ ಎಂದು ವಿ. ಕೆ. ವಾಲ್ಪಾಡಿ ಎಂಬವರು ಮಾಹಿತಿ ಹಂಚಿಕೊಂಡಿದ್ದಾರೆ.

ತಮ್ಮ ಪೋಸ್ಟ್‌ನಲ್ಲಿ ವಿ ಕೆ ವಾಲ್ಪಾಡಿಯವರು ” ಹಿಂದೆ ಮಂಗಳೂರು ಪೊಲೀಸ್ ಕಮೀಷನರ್ ಆಗಿದ್ದ ಶಶಿಕುಮಾರ್ ಅವರ ವರ್ಗಾವಣೆಗೇ ಕಷ್ಟವಾಗಿತ್ತು.ಕಾರಣ, ಈ ಮಂಗಳೂರಲ್ಲಿ ಕೆಲಸ ಮಾಡುವುದಕ್ಕೆ ಯಾವನೇ ಅಧಿಕಾರಿ ಮುಂದೆ ಬರುತ್ತಿರಲಿಲ್ಲ. ಮೈ ಮೇಲೆ ಸೊಳ್ಳೆ ಕುಳಿತರೂ ಹತ್ಯೆಯಾಗುವ ಮಂಗಳೂರು ಯಾರಿಗೂ ಬೇಡವಾಗಿತ್ತು, ಕೋಮು ಭಾವನೆ ಪ್ರಚೋದಿಸುವ ಬಿಜೆಪಿ ಸರಕಾರ ಬೇರೆ ಇತ್ತು.
ಶಶಿಕುಮಾರ್ ಅವರನ್ನು ವರ್ಗಾವಣೆ ಮಾಡಬೇಕಾದ ಅವಧಿ ಮೀರಿಯೂ ಮಾಡಲಿಕ್ಕಾಗಲಿಲ್ಲ. ಕೊನೆಗೆ ಅವರನ್ನು ವರ್ಗಾವಣೆ ಮಾಡಿ ಆ ಜಾಗಕ್ಕೆ ಕುಲದೀಪ್ ಆರ್. ಜೈನ್ ಅವರನ್ನು ತಂದು ಕೂರಿಸಿದ್ದು ಸಿಎಂ ಬೊಮ್ಮಾತಿ. ಬೊಮ್ಮಾಯಿ ಸರ್ಕಾರಕ್ಕೆ ಒಬ್ಬ ಕಮಿಷನರ್ ಹುದ್ದೆಗೆ ಅರ್ಹ ಐ. ಪಿ. ಎಸ್. ಅಧಿಕಾರಿಯನ್ನು ಕೂರಿಸಲಾಗಲಿಲ್ಲ” ಎಂದೂ ಕೂಡ ಕಿಡಿಕಾರಿದ್ದಾರೆ.

“ಕುಲದೀಪ್ ಆರ್. ಜೈನ್ ಅವರ ಅಧಿಕಾರದ ಗ್ರೇಡುಗಳು ದೊರೆತ ತರುವಾಯ ಮತ್ತೆ ಮಂಗಳೂರು ಪೊಲೀಸ್ ಕಮಿಷನರ್ ಆಗಿ ಹುದ್ದೆ ಅಲಂಕರಿಸಲಿ. ಅದನ್ನು ನಾವೆಲ್ಲರೂ ನಿರೀಕ್ಷಿಸುತ್ತೇವೆ” ಎಂದು ವಿ. ಕೆ. ವಾಲ್ಪಾಡಿ ನಿರೀಕ್ಷೆ ವ್ಯಕ್ತಪಡಿಸಿದ್ದಾರೆ.

+ posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಬಳ್ಳಾಪುರ | ಭ್ರಷ್ಟಾಚಾರ ಲೀಗಲೈಜ್ ಮಾಡಿದ್ದೇ ಬಿಜೆಪಿ: ಕಂದಾಯ ಸಚಿವ ಕೃಷ್ಣ ಭೈರೇಗೌಡ ಕಿಡಿ

ಭ್ರಷ್ಟಾಚಾರವನ್ನು ಲೀಗಲೈಜ್ ಮಾಡಿದ್ದು, ಬಿಜೆಪಿಯವರು ಎಂದು ಕಂದಾಯ ಸಚಿವ ಕೃಷ್ಣ ಭೈರೇಗೌಡ...

ತುಮಕೂರು | ಪ್ರಧಾನಿ ಆಗಲು ಯೋಗ್ಯರಾದ ಸಾಕಷ್ಟು ಮುಖಂಡರು ಕಾಂಗ್ರೆಸ್‌ನಲ್ಲಿ ಇದ್ದಾರೆ: ಸಿಎಂ ಸಿದ್ದರಾಮಯ್ಯ

ಕಾಂಗ್ರೆಸ್‌ನಲ್ಲಿ ಪ್ರಧಾನಿಯಾಗಲು ಯಾರಿದ್ದಾರೆ? ನರೇಂದ್ರಮೋದಿ ಬಿಟ್ಟರೆ ಪ್ರಧಾನಿ ಆಗುವ ಅರ್ಹತೆ ಯಾರಿಗೂ...

ಹಾಸನ ಯುವ ನಾಯಕನ ಕಾಮಕೃತ್ಯದ ಪೆನ್‌ಡ್ರೈವ್ ಆರೋಪ; ಮೌನ ಮುರಿಯದ ಮಾಜಿ ಪ್ರಧಾನಿ

ಕಳೆದ ನಾಲ್ಕೈದು ದಿನಗಳಿಂದ ರಾಜ್ಯ ರಾಜಕೀಯದಲ್ಲಿ ಪೆನ್‌ಡ್ರೈವ್ ಭಾರೀ ಸುದ್ದಿ ಮಾಡ್ತಾ...

ಕಾಂಗ್ರೆಸ್ ಪಕ್ಷ ಬೆಂಬಲಿಸಲು ಪಿಟಿಸಿಎಲ್ ಹೋರಾಟ ಸಮಿತಿ ನಿರ್ಧಾರ

ಬೆಂಗಳೂರು: ದಲಿತರು, ಸಂವಿಧಾನ ವಿರೋಧಿ, ಸಾಂವಿಧಾನಿಕ ಸಂಸ್ಥೆಗಳ ಮೇಲೆ ಪ್ರಭಾವ ಬೀರಿ...