ಹೊಸಿಲ ಒಳಗೆ-ಹೊರಗೆ | ಗಂಡು ‘ಯಜಮಾನ’ನಾಗಿದ್ದು, ಹೆಣ್ಣು ‘ಮಹಾಮಾತೆ’ ಆಗಿದ್ದು ಯಾವಾಗ?

Date:

ಆಸ್ತಿಯ ಪರಿಕಲ್ಪನೆ ಹುಟ್ಟಿಕೊಂಡ ನಂತರ, ಇದು ನಾನು ಗಳಿಸಿದ್ದು - ಇದು ನನ್ನದು ಎಂಬ ಭಾವ ಶುರುವಾಯಿತು. ಇಷ್ಟಾದ ಮೇಲೆ 'ನಾನು ಗಳಿಸಿದ್ದು ಯಾರಿಗೆ ಸೇರಬೇಕು?' ಎಂಬ ಪ್ರಶ್ನೆ ಬಂದೇ ಬರುತ್ತದೆ. ಈ ಪ್ರಶ್ನೆ ಮಹಿಳೆಯರಿಗೆ ಬಂದರೆ ತೊಂದರೆ ಇಲ್ಲ. ಆದರೆ ಪುರುಷರಿಗೆ...

ತರಬೇತಿಗಳಲ್ಲಿ, ಲಿಂಗ ತಾರತಮ್ಯದ ವಿಚಾರ, ಪುರುಷಪ್ರಧಾನ ವ್ಯವಸ್ಥೆಯ ಒಟ್ಟಾರೆ ವಿನ್ಯಾಸ ಮುಂತಾದವುಗಳನ್ನು ಒಂದಷ್ಟು ಅರ್ಥ ಮಾಡಿಕೊಂಡಾಗ ಸಹಜವಾಗಿಯೇ ಅನೇಕ ಪ್ರಶ್ನೆಗಳು ಇದಿರಾಗುತ್ತವೆ. ಇದು ಹಿಂದಿನಿಂದಲೂ ಹೀಗೆಯೇ ಇತ್ತೇ? ಇಂತಹ ‘ಅಧಿಕಾರ’ ಸಂಬಂಧಗಳು ನಮ್ಮ ಸಮಾಜದಲ್ಲಿ ಹೇಗೆ ರೂಪುಗೊಂಡಿತು? ಹೇಗೆ ಇವನ್ನು ಎಲ್ಲರೂ ಒಪ್ಪಿಕೊಳ್ಳುವುದು ಸಾಧ್ಯವಾಯಿತು? ಇತ್ಯಾದಿ. ಇದು ಅತ್ಯಂತ ಸಂಕೀರ್ಣ ವಿಚಾರ. ‘ಇದು ಹೀಗೆಯೇ’ ಅಂತ ಕರಾರುವಕ್ಕಾಗಿ ಹೇಳಲು ಸಾಧ್ಯವಾಗುವ ವಿಷಯವಲ್ಲ. ಸಿಮೋನ್ ದಿ ಬುವಾ, ಏಂಗೆಲ್ಸ್‌ನಂತಹ ಚಿಂತಕರ ಬರಹಗಳು ಈ ನಿಟ್ಟಿನಲ್ಲಿ ಕೆಲವು ಅಂಶಗಳತ್ತ ಬೆಳಕು ಚೆಲ್ಲುತ್ತವೆ. ಸಿಮೋನ್ ದಿ ಬುವಾ ಹೇಳಿದ ಮಾತು ಮತ್ತೆ-ಮತ್ತೆ ನೆನಪಿಗೆ ಬರುತ್ತದೆ; “ಹೆಣ್ಣು ಹುಟ್ಟಿಲ್ಲ, ಹೆಣ್ಣಾಗಿ ರೂಪಿಸಲಾಗಿದೆ.” ಗಂಡು ಕೂಡ ಅಷ್ಟೇ. ಸಾಮಾಜೀಕರಣದ ಪ್ರಕ್ರಿಯೆಯಲ್ಲಿ ಹೆಣ್ಣೂ ಗಂಡೂ ರೂಪುಗೊಂಡಿದ್ದಾರೆ. ಅಂದರೆ, ಸಮಾಜದ ಎಲ್ಲ ವಲಯಗಳಲ್ಲಿ, ಹೆಣ್ಣು ಅಂದರೆ ಹೀಗೆಯೇ ಇರಬೇಕು, ಗಂಡು ಅಂದರೆ ಹೀಗೆಯೇ ಇರಬೇಕು ಎಂಬ ರೀತಿಯಲ್ಲಿ ಹತ್ತು ಹಲವು ರೀತಿಯ ನೀತಿ-ನಿಯಮಗಳನ್ನು ಹುಟ್ಟುಹಾಕುತ್ತ ಬಂದಿರುವ ಹಾಗೆ ಕಾಣುತ್ತದೆ. ಬಹಳ ಮಂದಿ ಚಿಂತಕರು ಯೋಚಿಸಿರುವಂತೆ, ಮೂಲತಃ ಹೆರುವ ಮತ್ತು ಎದೆಹಾಲು ನೀಡುವ ಜೈವಿಕ ಪ್ರಕ್ರಿಯೆಯನ್ನು ಕೇಂದ್ರವಾಗಿರಿಸಿ ಈ ಕಟ್ಟಳೆಗಳೆಲ್ಲ ಹೊರಬಂದಿವೆ.

ಇವೆಲ್ಲ ಧುತ್ತಂತ ಆಗಿರಲಾರದು. ಅನೇಕ ಚಿಂತಕರು ಹೇಳುವ ಪ್ರಕಾರ, ಸಮೂಹವಾಗಿ ಬದುಕುತ್ತಿದ್ದ ಹೊತ್ತಿನಲ್ಲಿ ಹೆಣ್ಣಿನ ದೇಹದಿಂದ ಇನ್ನೊಂದು ಜೀವಿ ಹುಟ್ಟುವುದೇ ವಿಸ್ಮಯದ ವಿಚಾರವಾಗಿತ್ತು. ಮಗುವಿನ ಜನನದ ಪ್ರಕ್ರಿಯೆಯಲ್ಲಿ ಗಂಡಿನ ಪಾತ್ರ ಏನು ಎಂಬುದು ಗೊತ್ತಿರಲಿಲ್ಲ. ಅಂದರೆ, ಒಂದು ಮಗುವಿಗೆ ತಾಯಿ ಯಾರು ಎಂಬುದು ಖಚಿತವಾಗಿ ಗೊತ್ತಿರುತ್ತಿತ್ತು; ಆದರೆ ತಂದೆ ಯಾರು ಎಂಬುದು ಗೊತ್ತಿರಲಿಲ್ಲ. ತಂದೆ ಎಂಬ ಒಂದು ಜೀವದ ಅಗತ್ಯದ ಬಗ್ಗೆ ಕೂಡ ಗೊತ್ತಿರಲಿಲ್ಲ. ಪ್ರಾಣಿ ಸಮೂಹದಲ್ಲಿ ಇರುವ ಹಾಗೆ ಲೈಂಗಿಕ ಸಂಬಂಧಗಳು ನಡೆಯುತ್ತಿದ್ದವು. ಕ್ರಮೇಣ ಒಂದು ಕಡೆ ನೆಲೆ ನಿಲ್ಲುವುದು ಶುರುವಾಯಿತು. ಸಾಕುಪ್ರಾಣಿಗಳ ಬದುಕನ್ನು ನೋಡುತ್ತ ಜನನ ಕ್ರಿಯೆಯಲ್ಲಿ ಗಂಡಿನ ಪಾತ್ರ ಏನು ಎಂಬುದು ಗೊತ್ತಾಯಿತು. ಅದೇ ಹೊತ್ತಿಗೆ ನೆಲೆ ನಿಂತ ಜನಸಮೂಹಗಳ ನಡುವೆ ಏನೇನೋ ಸೊತ್ತುಗಳಿಗೆ, ನೆಲ-ಜಲಕ್ಕೆ ಸಂಬಂಧಿಸಿದಂತೆ ಜಗಳಗಳು ಶುರುವಾದವು. ಇದು ನಮ್ಮ ಭೂಮಿ, ಇದು ನಮ್ಮ ಸೊತ್ತು ಅನ್ನುವ ಚಿಂತನೆ ಹುಟ್ಟಿಕೊಂಡಿತು. ಮಕ್ಕಳ ಆರೈಕೆ ಲಾಲನೆ ಪಾಲನೆಯ ಜವಾಬ್ದಾರಿ ಮುಖ್ಯವಾಗಿ ಹೆಣ್ಣಿನ ಮೇಲೆ ಇದ್ದ ಕಾರಣ, ಜಗಳವಾಡುವುದು (ಯುದ್ಧ ಮಾಡುವುದು), ಬೇಟೆಯಾಡುವುದು ಪುರುಷರ ಕೆಲಸವಾಗುತ್ತ ಬಂತು (ಬೇಟೆಯಾಡುವ ಕೆಲಸವನ್ನು ಮಹಿಳೆಯರೂ ಮಾಡುತ್ತಿದ್ದರು ಎಂಬ ದಾಖಲೆಗಳಿವೆ).

ಈ ಆಡಿಯೊ ಕೇಳಿದ್ದೀರಾ?: ಶಾಸನ ಸಂಶೋಧಕಿ ಸ್ಮಿತಾ ರೆಡ್ಡಿ ಸಂದರ್ಶನ | ‘ಅವತ್ತು ರಾತ್ರಿ ನಮ್ಮೆದುರು ನಿಂತಿದ್ದು ಮಚ್ಚು-ಲಾಂಗು ಹಿಡಿದ ಗ್ರಾಮಸ್ಥರು!’

ಈ ಎಲ್ಲ ಆಗುಹೋಗುಗಳ ಹಿನ್ನೆಲೆಯಲ್ಲಿ ಆಸ್ತಿಯ ಪರಿಕಲ್ಪನೆ ಹುಟ್ಟಿಕೊಂಡಿತು. ಇದು ನಾನು ಗಳಿಸಿದ್ದು; ಇದು ನನ್ನದು ಎಂಬ ಭಾವ ಹುಟ್ಟುವುದಕ್ಕೆ ಶುರುವಾಯಿತು. ಇಷ್ಟಾದ ಮೇಲೆ ‘ನಾನು ಗಳಿಸಿದ್ದು, ನಾನು ಸಂಗ್ರಹಿಸಿದ್ದು, ನನ್ನ ನಂತರ ಯಾರಿಗೆ ಸೇರಬೇಕು?’ ಎಂಬ ಪ್ರಶ್ನೆ ಬಂದೇ ಬರುತ್ತದೆ. ಈ ಪ್ರಶ್ನೆ ಮಹಿಳೆಯರಿಗೆ ಬಂದರೆ ತೊಂದರೆ ಇಲ್ಲ; ನೇರವಾಗಿ ‘ನನ್ನ ಮಕ್ಕಳಿಗೆ’ ಅಂತ ನಿರ್ಧಾರ ಮಾಡಬಹುದು. ಅದರೆ, ಆ ಸಮಾಜದಲ್ಲಿ ಯಾರ ಸಂಬಂಧದಿಂದ ಮಗು ಹುಟ್ಟಿದೆ ಎಂಬುದಕ್ಕೆ ಯಾವುದೇ ಪುರಾವೆ ಇರಲಿಲ್ಲವಲ್ಲ; ಅದರಿಂದಾಗಿ ಪುರುಷರು ಹೇಗೆ ತನ್ನ ಆಸ್ತಿ ತನ್ನ ಮಗುವಿಗೇ ಹೋಗಬೇಕು ಎಂದು ಹೇಳಲು ಸಾಧ್ಯ? ಹಾಗೆ ಖಚಿತವಾಗಿ ಗುರುತು ಸಿಗಬೇಕೆಂದರೆ, ಒಬ್ಬ ಮಹಿಳೆ ಸಂಪೂರ್ಣವಾಗಿ ಒಬ್ಬ ಪುರುಷನ ಜೊತೆಗಾರ್ತಿ ಆಗಬೇಕು. ಅವಳಿಗೆ ಬೇರಾವ ಸಂಬಂಧವೂ ಬೆಳೆಯದಂತಹ ವ್ಯವಸ್ಥೆ ಆಗಬೇಕು. ಅಂದರೆ ಮಾತ್ರ ಒಬ್ಬ ಪುರುಷನಿಗೆ, ಇದು ತನ್ನದೇ ಮಗು ಅಂತ ಹೇಳಲು ಸಾಧ್ಯ. ಈ ಎಲ್ಲ ಚಿಂತನೆಗಳ ಫಲಿತಾಂಶವಾಗಿ ಮದುವೆ, ಕುಟುಂಬ ಇತ್ಯಾದಿ ವ್ಯವಸ್ಥೆಗಳು ರೂಪುಗೊಂಡವು. ಮಹಿಳೆಯರ ಲೈಂಗಿಕತೆ ಮೇಲೆ ನಿಯಂತ್ರಣ ಹಾಕುವುದು ಇಲ್ಲಿಯ ಮೂಲ ಆಶಯವಾಗಿತ್ತು ಅನ್ನುವ ಅಭಿಪ್ರಾಯವೂ ಇದೆ. ಇವೆಲ್ಲ ಇಲ್ಲಿ ಕತೆ ಹೇಳಿದಷ್ಟು ಸರಳವಾಗಿ ಯಾರೋ ಕುಳಿತು ಇಂತಹ ಒಂದು ವ್ಯವಸ್ಥೆಯನ್ನು ನಿರೂಪಿಸುತ್ತ ಹೋದರು ಅಂತ ಹೇಳುವುದಕ್ಕೆ ಸಾಧ್ಯವಿಲ್ಲ. ಎಲ್ಲೆಲ್ಲೋ ಹೇಗ್ಹೇಗೋ ಯಾವ್ಯಾವುದೋ ತರ್ಕಗಳಿಗೆ, ಆ ಹೊತ್ತಿನ ಬದುಕಿನ ಅಗತ್ಯಗಳಿಗೆ ಪೂರಕವಾಗಿ ಬೆಳೆದುಬಂದವು. ಇದರ ಜೊತೆಗೆ ಜಾತಿ, ಧರ್ಮ, ಜನಾಂಗದ ಸ್ಥಾನಮಾನಗಳ ಅಂಶಗಳು ಕೂಡ ಹೆಣೆದುಕೊಂಡಿವೆ ಎಂಬುದನ್ನು ಮರೆಯುವಂತಿಲ್ಲ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
ಈ ಆಡಿಯೊ ಕೇಳಿದ್ದೀರಾ?: ಮಾತೇ ಕತೆ – ಲಲಿತಾ ಸಿದ್ದಬಸವಯ್ಯ ಸಂದರ್ಶನ | ‘ಲೋಕದ ಲೆಕ್ಕದಲ್ಲಿ ಕೊಲೆಯಾದರೂ ಕತೆಯಾಗಿ ಉಳಿದುಕೊಂಡ ಜಿಲ್ಲಾಧಿಕಾರಿ!’

ಒಮ್ಮೆ ಮದುವೆ, ಕುಟುಂಬ ಪದ್ಧತಿಗಳು ಹುಟ್ಟಿಕೊಂಡ ಮೇಲೆ, ಅವನ್ನು ಪ್ರಶ್ನಿಸದೆ ಒಪ್ಪಿಕೊಳ್ಳುವ ಮನಸ್ಥಿತಿಯನ್ನೂ ಬೆಳೆಸುವುದು ಬಹಳ ಅಗತ್ಯವಾಗಿತ್ತು. ಅದರ ಸೊಗಸು, ಆದರ್ಶಗಳ ಚಿತ್ರಣಗಳು ಹುಟ್ಟಿಕೊಂಡವು. ಪ್ರೀತಿ, ಮಮತೆ, ಸಹನೆ, ತ್ಯಾಗದಂತಹ ಮಹಾಗುಣಗಳನ್ನು ಹೊತ್ತ ಮಹಿಳೆಯೇ ಅಂತಹ ಸುಂದರ ಕುಟುಂಬಕ್ಕೆ ಆಧಾರ, ಅವಳನ್ನು ಸಾಕುವ, ರಕ್ಷಿಸುವ, ನೋಡಿಕೊಳ್ಳುವ ಧೈರ್ಯವಂತ, ಧೀಮಂತ ವ್ಯಕ್ತಿಯೇ ಆ ಮನೆಯ ‘ಯಜಮಾನ’ ಎಂಬ ನರೇಟಿವ್ಸ್ ಬೆಳೆಯುತ್ತ ಬಂತು. ಈ ಎಲ್ಲದಕ್ಕೂ ಹೆರುವ, ಸಾಕುವ ಒಂದು ಕ್ರಿಯೆ ಬಹಳ ಸಮರ್ಥನೆ ನೀಡಿತು. ಅವಳು ದುರ್ಬಲಳು, ಹೆರುವುದು, ಮಗುವಿನ ಲಾಲನೆ ಮಾಡುವುದು ಈ ಸಮುದಾಯದ ಅಗತ್ಯ; ಇದನ್ನು ಅವಳೇ ಸಹಜವಾಗಿ ಮಾಡಬೇಕಾದವಳು; ಅವಳಷ್ಟು ಚೆನ್ನಾಗಿ ಇದನ್ನು ಬೇರಾರೂ ಮಾಡಲಾರರು; ಇದನ್ನು ಬಿಟ್ಟು ಅವಳು ಬೇರೇನನ್ನೂ ಮಾಡಬೇಕಾಗಿಯೇ ಇಲ್ಲ; ಅವಳ ಜೀವನದ ಸಾರ್ಥಕತೆ ಇದರಲ್ಲೇ ಅಡಗಿದೆ; ತನ್ನ ಜೀವವನ್ನೇ ಪಣಕ್ಕಿಟ್ಟು ಮತ್ತೊಂದು ಜೀವಕ್ಕೆ ಜನುಮ ನೀಡುವ ಅವಳು ಮಹಾಮಾತೆ. ತನ್ನೆಲ್ಲಾ ಮಹಾಗುಣಗಳ ಜೊತೆಗೆ ಅವಳು ಅವನನ್ನು ಮತ್ತು ಕುಟುಂಬವನ್ನು ನೋಡಿಕೊಂಡರೆ ಅವನು ಅವಳನ್ನು ಪೂಜಿಸುವ, ಆರಾಧಿಸುವ, ರಕ್ಷಿಸುವ ಎಲ್ಲ ಜವಾಬ್ದಾರಿಗಳನ್ನು ತೆಗೆದುಕೊಳ್ಳುತ್ತಾನೆ. ಅಷ್ಟೇ ಅಲ್ಲ, ಅವಳು ಅವನಿಗೇ ತನ್ನನ್ನು ಮೀಸಲಿಡಬೇಕಾದುದು ಪರಮಧರ್ಮ. ಅವನನ್ನು ಬಿಟ್ಟು ಮನದಲ್ಲೂ ಬೇರೆ ಯಾರನ್ನೂ ನೆನಸುವುದು ಕೂಡ ಮಹಾ ಅಪರಾಧ. ಹಾಗೇನಾದರೂ ಆದರೆ, ಅವಳು ಕುಟುಂಬವನ್ನು ನಾಶ ಮಾಡಿದ ಹಾಗೆ; ದ್ರೋಹ ಬಗೆದ ಹಾಗೆ. ಕೆಟ್ಟ ದಾರಿಗೆ ಹೋಗದ ಹಾಗೆ ಅವಳು ತನ್ನನ್ನು ನೋಡಿಕೊಂಡರೆ ಸಾಲದು; ಅವನೂ ಕೆಟ್ಟ ಚಟಗಳಿಗೆ ಬಲಿಯಾಗದ ಹಾಗೆ ಅವಳೇ ಕಾಪಾಡಬೇಕು. ಅವನು ಎಂತಹವನೇ ಆಗಿದ್ದರೂ ಸಹನೆಯಿಂದ ಅವನ ಸೇವೆ ಮಾಡಬೇಕು… ಇತ್ಯಾದಿ ಇತ್ಯಾದಿ ಇತ್ಯಾದಿ. ಒಟ್ಟಿನಲ್ಲಿ ಪಾವಿತ್ರ್ಯ, ಶೀಲ, ಒಳ್ಳೆಯ ವ್ಯಕ್ತಿತ್ವದ ನಿರೂಪಣೆ, ತ್ಯಾಗ-ಸಹನೆಗಳಂತಹ ಮೌಲ್ಯಗಳ ಹಿರಿಮೆ ಎಲ್ಲವನ್ನೂ ಸುಂದರವಾಗಿ ಜೋಡಿಸಿ, ಸಾರ್ಥಕತೆಯ ಮಾನದಂಡವನ್ನಾಗಿಸಿ, ಅದನ್ನು ಹೆಣ್ಣುಕುಲದ ಮೇಲೆ ಹೇರುತ್ತ ಬರಲಾಯಿತು.

ಈ ಕಥನವನ್ನು ಮತ್ತೆ-ಮತ್ತೆ ಪ್ರಶ್ನಿಸದೇ ಇರಬೇಕಲ್ಲವೇ? ಪುರುಷಪ್ರಧಾನ ವ್ಯವಸ್ಥೆಯನ್ನು ಇದುವೇ ಬದುಕುವ ದಾರಿ ಅಂತ ರಕ್ತಗತ ಮಾಡಬೇಕಲ್ಲವೇ? ಈ ನಿಟ್ಟಿನಲ್ಲಿ ಪುರುಷಪ್ರಧಾನತೆಯ ಸೂತ್ರಗಳನ್ನು ಒಪ್ಪಿಕೊಳ್ಳಲು ಅನೇಕ ಸೃಜನಶೀಲ ತಂತ್ರಗಳನ್ನು ಕಾಲಕಾಲಕ್ಕೆ ತಕ್ಕಂತೆ ಬಳಸಲಾಯಿತು. ಆಯಾಯ ಅಗತ್ಯಗಳಿಗೆ ಅನುಗುಣವಾಗುವಂತೆ ಸಿದ್ಧಾಂತಗಳು, ಪರಿಕಲ್ಪನೆಗಳು, ನಂಬಿಕೆಗಳು ಇತ್ಯಾದಿಗಳನ್ನು ಗ್ರಂಥಗಳಲ್ಲಿ ದಾಖಲಿಸಲಾಯಿತು; ಹಾಡು, ಕತೆ, ಪುರಾಣಗಳಲ್ಲಿ ಚಿತ್ರಿಸಲಾಯಿತು. ಗಾದೆಮಾತುಗಳಲ್ಲಿ ಹೆಣೆಯಲಾಯಿತು. ಜೀವನಶೈಲಿಯಲ್ಲಿ ಅಳವಡಿಸಲಾಯಿತು. ದಿನನಿತ್ಯದ ಬದುಕಿನಲ್ಲಿ ಹಾಸುಹೊಕ್ಕಾಗುವಂತೆ ನೋಡಿಕೊಳ್ಳಲಾಯಿತು. ಇಂತಹ ವ್ಯವಸ್ಥೆಯೊಂದು ಶುರುವಾಗುತ್ತ, ಬೆಳೆಯುತ್ತ, ಆಳವಾಗಿ ಬೇರೂರುತ್ತಾ ಬಂದಿರುವುದು, ಹೆಮ್ಮರವಾಗಿ ನಿಂತಿರುವುದು ನಮ್ಮ ಕಣ್ಣೆದುರಲ್ಲಿ ಕಾಣುತ್ತದೆ. ಜೊತೆಜೊತೆಗೇ ಈ ಹೆಮ್ಮರದ ಬೇರುಗಳನ್ನು ಅಲುಗಾಡಿಸುವ ಪ್ರಶ್ನೆಗಳೂ ಹುಟ್ಟಿಕೊಳ್ಳುತ್ತಲೇ ಇವೆ.

ಗಳನ್ನು ಆಲಿಸಲು ಕ್ಲಿಕ್ ಮಾಡಿ – ಈದಿನ.ಕಾಮ್ ಕೇಳುದಾಣ

ಪೋಸ್ಟ್ ಹಂಚಿಕೊಳ್ಳಿ:

ವಾಣಿ ಪೆರಿಯೋಡಿ
ವಾಣಿ ಪೆರಿಯೋಡಿ
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದವರು. ಸಾಮಾಜಿಕ ಕಾರ್ಯಕರ್ತೆ. 'ತರಿಕಿಟ ಕಲಾ ಕಮ್ಮಟ' ಎಂಬ ಸಾಂಸ್ಕೃತಿಕ ವೇದಿಕೆಯ ಉಸ್ತುವಾರಿ. ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರುದ್ಧ ಒಕ್ಕೂಟದ ಸಕ್ರಿಯ ಸದಸ್ಯೆ. ಲಿಂಗ ಸಂವೇದನೆ, ಸಂವಹನ ಕೌಶಲ್ಯ ಇತ್ಯಾದಿ ವಿಚಾರಗಳ ಮೇಲೆ ತರಬೇತಿ ನಡೆಸುವುದು ಇಷ್ಟದ ಕೆಲಸ.

2 COMMENTS

  1. ತುಂಬಾ ಅದ್ಭುತವಾಗಿದೆ ಮೇಡಂ. ನಮ್ಮ ಸಮಾಜವನ್ನು ಸಮಾನತೆಯಿಂದ ಕಾಣಿದರೇ ಅಷ್ಟೇ ಅದು ನಮ್ಮ ಕಣ್ಣಿಗೆ ತುಂಬಾ ಸುಂದರವಾಗಿ ಕಾಣಿಸುತ್ತದೆ.

    • ಪ್ರತಿಕ್ರಿಯೆಗಾಗಿ ಧನ್ಯವಾದ ಮೇಡಂ. ಈದಿನ.ಕಾಮ್‌ ಜಾಲತಾಣಕ್ಕೆ ಭೇಟಿ ನೀಡಿದ್ದಕ್ಕೆ ನನ್ನಿ. ನಿಮ್ಮಿಂದ ಇನ್ನಷ್ಟು ಪ್ರತಿಕ್ರಿಯೆ ನಿರೀಕ್ಷಿಸುತ್ತೇವೆ.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಹೊಸಿಲ ಒಳಗೆ-ಹೊರಗೆ | ಬ್ರಾ… ಪ್ರತಿಭಟನೆ ಮತ್ತು ಬಿಡುಗಡೆಯ ಭಾವ

(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ ಅಥವಾ...

ಮೈಕ್ರೋಸ್ಕೋಪು | ಅಯೋಧ್ಯೆ ರಾಮ ಮಂದಿರದಲ್ಲಿ ‘ವಿಜ್ಞಾನ’ ಬಳಕೆ; ನಿಜಕ್ಕೂ ದೇಶದಲ್ಲಿ ಇದೇ ಮೊದಲಾ?

(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ ಅಥವಾ...

ಹೊಸಿಲ ಒಳಗೆ-ಹೊರಗೆ | ನೀವು ಕೊಕ್ಕರೆಯಾದರೂ ಸರಿಯಲ್ಲ, ನರಿಯಾದರೂ ಸರಿಯಲ್ಲ; ಯಾಕೆಂದರೆ…

(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ ಅಥವಾ...