ಪ್ರಧಾನಿಯಾಗಿ ನರೇಂದ್ರ ಮೋದಿ ಒಂಬತ್ತು ವರ್ಷದಲ್ಲಿ ಸಾಧಿಸಿದ್ದೇನು? ಭಾಗ-2

Date:

ನರೇಂದ್ರ ಮೋದಿ ಅವರು ಪ್ರಧಾನಿಯಾಗಿ ಒಂಬತ್ತು ವರ್ಷಗಳು ಸಂದಿವೆ. ಮುಂದಿನ ವರ್ಷ ಲೋಕಸಭಾ ಚುನಾವಣೆ ನಡೆಯಲಿದೆ. ಹೇಳಿಕೊಳ್ಳುವಂಥ ಸಾಧನೆಗಳೇನೂ ಇಲ್ಲದಿರುವುದರಿಂದ ಈ ಬಾರಿ ಮತದಾರರನ್ನು ಸೆಳೆಯಲು ಮೋದಿಯವರು ಏನು ಮಾಡುತ್ತಾರೆ ಎನ್ನುವ ಪ್ರಶ್ನೆ ವಿರೋಧ ಪಕ್ಷಗಳದ್ದು. ಅದಕ್ಕೆ ಮೋದಿಯವರು ಈಗಾಗಲೇ ಪರೋಕ್ಷ ಉತ್ತರವನ್ನೂ ನೀಡಿದ್ದಾರೆ

ಪ್ರಧಾನಿಯಾಗಿ ನರೇಂದ್ರ ಮೋದಿ ಜಾರಿಗೆ ತರಲೆತ್ನಿಸಿದ ಎರಡು ವಿವಾದಾಸ್ಪದ ನಿಯಮಗಳು ದೇಶದ ಪೌರತ್ವಕ್ಕೆ ಸಂಬಂಧಿಸಿದಂಥವು. ಒಂದನೆಯದು, ಪೌರತ್ವ ತಿದ್ದುಪಡಿ ಮಸೂದೆ (ಸಿಎಎ); ಎರಡನೆಯದು, ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ); ಪೌರತ್ವ ತಿದ್ದುಪಡಿ ಮಸೂದೆಯನ್ನು ಅನುಷ್ಠಾನಗೊಳಿಸುವುದಾಗಿ 2014 ಮತ್ತು 2019ರ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ವಚನ ನೀಡಿತ್ತು. 1955ರ ಪೌರತ್ವ ಕಾಯ್ದೆಗೆ ತಿದ್ದುಪಡಿ ಮಾಡಿ ಮಸೂದೆ ರೂಪಿಸಲಾಗಿತ್ತು. ಅದರ ಪ್ರಕಾರ, ಬಾಂಗ್ಲಾದೇಶ, ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದಲ್ಲಿ ಅಲ್ಪಸಂಖ್ಯಾತರಾಗಿರುವ ಹಿಂದು, ಸಿಖ್, ಬೌದ್ಧ, ಜೈನ, ಕ್ರೈಸ್ತ ಮತ್ತು ಪಾರ್ಸಿ ವಲಸಿಗರು ಭಾರತದಲ್ಲಿ 6 ವರ್ಷ ವಾಸವಿದ್ದರೆ ಇಲ್ಲಿನ ಪೌರತ್ವ ಪಡೆಯಲು ಅರ್ಹರಾಗಿರುತ್ತಾರೆ. ಆದರೆ, ಇತರ ರಾಷ್ಟ್ರಗಳ ಮುಸ್ಲಿಮರಿಗೆ ಈ ಮಸೂದೆ ಅಡಿಯಲ್ಲಿ ಭಾರತದ ಪೌರತ್ವ ನೀಡಲಾಗುವುದಿಲ್ಲ ಎಂದಿತ್ತು. ಇನ್ನು ರಾಷ್ಟ್ರೀಯ ಪೌರತ್ವ ನೋಂದಣಿಯನ್ನು (ಎನ್‌ಆರ್‌ಸಿ) ಅಕ್ರಮ ವಲಸಿಗರನ್ನು ಗುರಿಯಾಗಿಸಿಕೊಂಡು ಮೊದಲು ಅಸ್ಸಾಂನಲ್ಲಿ ಜಾರಿಗೆ ತಂದು, ನಂತರ ಅದನ್ನು ದೇಶದಾದ್ಯಂತ ವಿಸ್ತರಿಸಲು ಕೇಂದ್ರ ಸರ್ಕಾರ ಮುಂದಾಯಿತು.

ಆದರೆ, ಸಿಎಎ ಮತ್ತು ಎನ್‌ಆರ್‌ಸಿ ವಿರುದ್ಧ ಪ್ರತಿಪಕ್ಷಗಳು ಸೇರಿದಂತೆ ಸಾಮಾಜಿಕ ಕಾರ್ಯಕರ್ತರು, ಹೋರಾಟಗಾರರು, ಕಲಾವಿದರು, ಬರಹಗಾರರು, ವಿದ್ಯಾರ್ಥಿಗಳು ತೀವ್ರ ಪ್ರತಿಭಟನೆ ನಡೆಸಿದರು. ದೆಹಲಿಯ ಜಂತರ್ ಮಂತರ್ ಸೇರಿದಂತೆ ದೇಶದ ಅನೇಕ ಭಾಗಗಳಲ್ಲಿ ಪ್ರತಿಭಟನೆಗಳು ಭುಗಿಲೆದ್ದವು. ಪೌರತ್ವ ನಿಯಮವು ಸಂವಿಧಾನದ 14ನೇ ವಿಧಿಯಲ್ಲಿ ಉಲ್ಲೇಖಿಸಿರುವ ಸಮಾನತೆಯ ನಿಯಮವನ್ನು ಉಲ್ಲಂಘಿಸುತ್ತದೆ ಎಂಬುದು ಪ್ರತಿಪಕ್ಷಗಳ ಆರೋಪವಾಗಿತ್ತು. ಭಾರತ ಜಾತ್ಯತೀತ ರಾಷ್ಟ್ರವಾಗಿರುವುದರಿಂದ ಧರ್ಮದ ಆಧಾರದ ಮೇಲೆ ಪೌರತ್ವ ನೀಡಬಾರದು ಎನ್ನುವುದು ಹೋರಾಟಗಾರರ ನಿಲುವಾಗಿತ್ತು.

ಕೃಷಿ ಕಾಯ್ದೆಗಳ ವಿರುದ್ಧದ ಐತಿಹಾಸಿಕ ಹೋರಾಟಕ್ಕೆ ಮಣಿದಿದ್ದ ಮೋದಿ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

2020ರಲ್ಲಿ ಮೋದಿ ಸರ್ಕಾರ ಮೂರು ಕೃಷಿ ಕಾಯ್ದೆಗಳನ್ನು ಜಾರಿಗೊಳಿಸಿತು. ಅವುಗಳಲ್ಲಿ ಮೊದಲನೆಯದು, ಕೃಷಿ ಉತ್ಪನ್ನಗಳ ವ್ಯಾಪಾರ ಮತ್ತು ಮಾರಾಟ (ಉತ್ತೇಜನ ಸೌಲಭ್ಯ) ಕಾಯ್ದೆ ಅಥವಾ ಕೃಷಿ ಮಾರುಕಟ್ಟೆ ಕಾಯ್ದೆ. ಇದು ರೈತರು ಮತ್ತು ಮಾರಾಟಗಾರರಿಗೆ ಕೃಷಿ ಉತ್ಪನ್ನಗಳ ಮಾರಾಟ ಮತ್ತು ಖರೀದಿಯ ಸ್ವಾತಂತ್ರ್ಯವನ್ನು ನೀಡುತ್ತದೆ. ಆದರೆ, ಇದರಿಂದ ಎಪಿಎಂಸಿ ವ್ಯವಸ್ಥೆ ಹಾಳಾಗುವುದಲ್ಲದೇ ರೈತರನ್ನು ಬೆಂಬಲ ಬೆಲೆಯಿಂದ ವಂಚಿಸುತ್ತದೆ ಎಂದು ತೀವ್ರ ವಿರೋಧ ವ್ಯಕ್ತವಾಯಿತು.

ಎರಡನೆಯದು, ಬೆಲೆ ಖಾತರಿ ಒಪ್ಪಂದ ಮತ್ತು ಕೃಷಿ ಸೇವೆಗಳ (ಸಬಲೀಕರಣ ಮತ್ತು ರಕ್ಷಣೆ) ಕಾಯ್ದೆ. ಇದು ಬಿತ್ತನೆ ಹಂಗಾಮಿಗೆ ಮುನ್ನವೇ ಪೂರ್ವ ನಿರ್ಧಾರಿತ ಬೆಲೆಯೊಂದಿಗೆ ಖರೀದಿದಾರನ ಜೊತೆಗೆ ಒಪ್ಪಂದ ಮಾಡಿಕೊಳ್ಳಲು ಈ ಕಾಯ್ದೆಯು ಅನುವು ಮಾಡಿಕೊಡುತ್ತದೆ. ಮೂರನೆಯದು, ಅಗತ್ಯ ವಸ್ತುಗಳ ತಿದ್ದುಪಡಿ ಕಾಯ್ದೆ. ಇದು ಅಗತ್ಯ ವಸ್ತುಗಳ ಪಟ್ಟಿಯಿಂದ ಧಾನ್ಯಗಳು, ಬೇಳೆಕಾಳುಗಳು, ಎಣ್ಣೆ ಬೀಜಗಳು, ಖಾದ್ಯ ತೈಲಗಳು, ಈರುಳ್ಳಿ ಮತ್ತು ಆಲೂಗಡ್ಡೆ ಮುಂತಾದ ವಸ್ತುಗಳನ್ನು ಹೊರಗಿಡಲು ಅನುವು ಮಾಡಿಕೊಡುತ್ತದೆ.

ಈ ಮೂರೂ ಕಾಯ್ದೆಗಳು ರೈತರನ್ನು ಬೃಹತ್ ಕಾರ್ಪೊರೇಟ್ ಕಂಪನಿಗಳ ಅಡಿಯಾಳುಗಳನ್ನಾಗಿಸುವ ಪ್ರಯತ್ನ ಎಂದು ರೈತರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಒಂದು ಕಡೆ ಎಪಿಎಂಸಿ ವ್ಯವಸ್ಥೆಯ ನಾಶ, ಮತ್ತೊಂದೆಡೆ ಬೆಂಬಲ ಬೆಲೆ ಅಲಭ್ಯತೆ; ಇನ್ನೊಂದೆಡೆ, ಅಂಬಾನಿ, ಅದಾನಿಯಂಥ ಮೋದಿ ಆಪ್ತ ಉದ್ಯಮಿಗಳಿಗೆ, ಖಾಸಗಿ ಖರೀದಿದಾರರಿಗೆ ನೆರವು ನೀಡುವ ಈ ಕೃಷಿ ಕಾಯ್ದೆಗಳನ್ನು ಕೂಡಲೇ ರದ್ದು ಮಾಡಬೇಕು ಎಂದು ಉತ್ತರ ಪ್ರದೇಶ, ಹರಿಯಾಣ, ಪಂಜಾಬ್ ರಾಜ್ಯಗಳ ರೈತರು ಬೃಹತ್ ಸಂಖ್ಯೆಯಲ್ಲಿ ದೆಹಲಿಗೆ ಧಾವಿಸಿ, ಸಿಂಘು ಗಡಿಯಲ್ಲಿ ಬೀಡು ಬಿಟ್ಟು ಪ್ರತಿಭಟನೆಯ ಘೋಷಣೆಯನ್ನು ಮೊಳಗಿಸಿದರು. ರಾಕೇಶ್ ಟಿಕಾಯಿತ್ ಸೇರಿದಂತೆ ಹಲವು ಮುಖಂಡರು ಹೋರಾಟದ ನೇತೃತ್ವ ವಹಿಸಿದರು. ರೈತರ ಸಬ್ಸಿಡಿಯನ್ನು ಖೋತಾಗೊಳಿಸುವ ವಿದ್ಯುತ್ ಬಿಲ್ ಹಿಂಪಡೆಯುವುದು ಸೇರಿದಂತೆ ತಮ್ಮ ಬೇಡಿಕೆಗಳನ್ನು ಈಡೇರಿಸುವವರೆಗೆ ದೆಹಲಿ ಬಿಟ್ಟು ಹೊರಗೋಗುವುದಿಲ್ಲ ಎಂದು ರೈತರು ಪಟ್ಟು ಹಿಡಿದರು. ದೇಶದ ವಿವಿಧ ಭಾಗಗಳ ರೈತರು ಹಾಗೂ ವಿವಿಧ ಸಂಘಟನೆಗಳೂ ಪ್ರತಿಭಟನೆಗಿಳಿದವು. ಒಂದು ವರ್ಷಕ್ಕೂ ಹೆಚ್ಚು ಕಾಲದ ಹೋರಾಟದ ನಂತರ, ಚಳಿ, ಕೊರೊನಾದಂಥ ರೋಗರುಜಿನಗಳಿಗೆ ಸುಮಾರು 700ಕ್ಕೂ ಹೆಚ್ಚು ರೈತರು ಬಲಿಯಾದ ನಂತರ ಮೋದಿ ಸರ್ಕಾರ ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯುವುದಾಗಿ ಘೋಷಿಸಿತು. ಆದರೆ, ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯುವ ಜೊತೆಗೆ ಅಂದು ಹೇಳಿದಂತೆ ಇದುವರೆಗೆ ಬೆಂಬಲ ಬೆಲೆಗೆ ಕಾನೂನಿನ ಖಾತರಿ ನೀಡುವ ಪ್ರಕ್ರಿಯೆಗೆ ಚಾಲನೆ ನೀಡದೇ ಮೋದಿ ಸರ್ಕಾರ ರೈತರಿಗೆ ಕೊಟ್ಟ ಮಾತು ತಪ್ಪಿದೆ. ಭಾರತದ ಹೋರಾಟದ ಇತಿಹಾಸದಲ್ಲಿ ಸಿಂಘು ಗಡಿಯ ರೈತ ಹೋರಾಟ ಒಂದು ಮೈಲಿಗಲ್ಲಾಯಿತು.

ಯುವಕರೇ ಹೆಚ್ಚಾಗಿರುವ ದೇಶದಲ್ಲಿ ದಾಖಲೆ ಮಟ್ಟದ ನಿರುದ್ಯೋಗ

ಮೋದಿ ಪ್ರಧಾನಿ ಅವಧಿಯ ಅತ್ಯಂತ ನಿರ್ಣಾಯಕ ಅಂಶ ನಿರುದ್ಯೋಗದ ದಾಖಲೆಯ ಏರಿಕೆ. ವರ್ಷಕ್ಕೆ ಎರಡು ಕೋಟಿ ಉದ್ಯೋಗಗಳನ್ನು ಸೃಷ್ಟಿಸುವುದಾಗಿ ಹೇಳಿದ್ದ ಮೋದಿ, ಆ ಪ್ರಕಾರ 9 ವರ್ಷದಲ್ಲಿ 18 ಕೋಟಿ ಉದ್ಯೋಗ ಸೃಷ್ಟಿ ಮಾಡಬೇಕಿತ್ತು. ಆದರೆ, ಮೋದಿ ಅವರ ಕಾಲದಲ್ಲಿ ನಿರುದ್ಯೋಗ ದಾಖಲೆ ಮಟ್ಟದಲ್ಲಿ ಹೆಚ್ಚಾಯಿತು. 2023ರ ಏಪ್ರಿಲ್‌ನಲ್ಲಿ ನಿರುದ್ಯೋಗದ ಪ್ರಮಾಣ ಶೇ. 8.11ರಷ್ಟಿತ್ತು. ಭಾರತೀಯ ಆರ್ಥಿಕತೆ ನಿರ್ವಹಣಾ ಕೇಂದ್ರದ (ಸಿಎಂಐಇ) ಅಂಕಿಅಂಶಗಳನ್ನು ನೋಡಿದರೆ, ನಿರುದ್ಯೋಗದ ಪ್ರಮಾಣ ಹಲವು ವರ್ಷಗಳಿಂದಲೂ ನಿರಂತರ ಏರುತ್ತಲೇ ಹೋಗಿ, ದಾಖಲೆ ಮಟ್ಟದಲ್ಲಿರುವುದು ತಿಳಿಯುತ್ತದೆ. ಭಾರತ ಯುವಕರೇ ಹೆಚ್ಚಿನ ಸಂಖ್ಯೆಯಲ್ಲಿರುವ ದೇಶ. ದೇಶದ ಒಟ್ಟು ಜನಸಂಖ್ಯೆಯಲ್ಲಿ ಯುವಜನತೆಯ ಪ್ರಮಾಣ ಶೇ.65ರಷ್ಟು. ಇಷ್ಟೊಂದು ಪ್ರಮಾಣದ ಮಾನವ ಸಂಪನ್ಮೂಲವಿದ್ದರೂ ಅದನ್ನು ಬಳಸಿಕೊಳ್ಳುವಲ್ಲಿ ಮೋದಿ ಸರ್ಕಾರ ವಿಫಲವಾಗಿದೆ. ‘ನಿರುದ್ಯೋಗ ತಾಂಡವವಾಡುತ್ತಿದ್ದರೂ ಅದರ ಕಡೆ ಗಮನ ಹರಿಸದ ಪ್ರಧಾನಿ ಮೋದಿ, ಕೆಲವೇ ಸಾವಿರ ಜನರಿಗೆ ನೇಮಕಾತಿ ಪತ್ರ ನೀಡುವ ಪೋಸ್ಟ್‌ ಮ್ಯಾನ್ ಕೆಲಸದಲ್ಲಿ ತೊಡಗಿದ್ದಾರೆ’ ಎಂದು ವಿರೋಧ ಪಕ್ಷಗಳು ಟೀಕಿಸಿದ್ದವು.

2019ರ ಅಂತ್ಯದಲ್ಲಿ ಕಾಣಿಸಿಕೊಂಡ ಕೊರೊನಾ ಸಾಂಕ್ರಾಮಿಕವು ಜಗತ್ತಿನ ಹಲವು ದೇಶಗಳನ್ನು ಹಿಂಡೆ ಹಿಪ್ಪೆ ಮಾಡಿತು. ಅದರಲ್ಲೂ ಕೊರೊನಾ ಭಾರತದ ಆರೋಗ್ಯ ವ್ಯವಸ್ಥೆ, ಆರ್ಥಿಕತೆ, ಸರ್ಕಾರಿ ಯಂತ್ರದ ಕಾರ್ಯಕ್ಷಮತೆ ಸೇರಿದಂತೆ ಮೋದಿಯವರ ಆಡಳಿತ ವೈಖರಿಯನ್ನು ಜಗಜ್ಜಾಹೀರು ಮಾಡಿತು. ಕೊರೊನಾದಿಂದ ದೇಶದಲ್ಲಿ ಸಂಭವಿಸಿದ ಸಾವುಗಳು ಐದು ಲಕ್ಷ ಎಂದು ಕೇಂದ್ರ ಸರ್ಕಾರ ಹೇಳಿತ್ತು. ಅದಕ್ಕೆ ಪ್ರತಿಯಾಗಿ ವಿಶ್ವ ಆರೋಗ್ಯ ಸಂಸ್ಥೆಯು ತನ್ನ ವರದಿಯಲ್ಲಿ ಇಡೀ ಜಗತ್ತಿನಲ್ಲಿಯೇ ಕೊರೊನಾದಿಂದ ಅತಿ ಹೆಚ್ಚು ಸಾವುಗಳು ಸಂಭವಿಸಿರುವುದು ಭಾರತದಲ್ಲಿ ಎಂದು ಹೇಳಿತು. ಇಡೀ ವಿಶ್ವದಲ್ಲಿ ಎರಡು ಕೋಟಿ ಸಾವುಗಳು ಸಂಭವಿಸಿದ್ದರೆ, ಅದರಲ್ಲಿ ಕಾಲು ಭಾಗದಷ್ಟು, ಅಂದರೆ ಐವತ್ತು ಲಕ್ಷ ಸಾವುಗಳು, ಭಾರತದಲ್ಲಿಯೇ ಸಂಭವಿಸಿವೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿತು. ಜಗತ್ತಿನ 194 ದೇಶಗಳ ಪೈಕಿ ಭಾರತ ಅತಿ ಹೆಚ್ಚು ಸಾವುಗಳನ್ನು ಕಂಡ ದೇಶ ಎಂದೂ ಕೂಡ ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿತು.

ಮೇ 2, 2021ರಂದು ಕರ್ನಾಟಕದ ಚಾಮರಾಜನಗರದಲ್ಲಿಯೇ ಆಕ್ಸಿಜನ್ ಕೊರತೆಯಿಂದಾಗಿ 36 ಕೊರೊನಾ ಸೋಂಕಿತರು ಸಾವನ್ನಪ್ಪಿದ್ದರು. ಹೀಗೆ ಆಮ್ಲಜನಕದ ಕೊರತೆಯಿಂದ ದೇಶದಲ್ಲಿ ಲಕ್ಷಾಂತರ ಮಂದಿ ಸತ್ತಿದ್ದರು. ಆದರೆ, ಕೇಂದ್ರ ಸರ್ಕಾರ ಆಕ್ಸಿಜನ್ ಕೊರತೆಯಿಂದ ದೇಶದಲ್ಲಿ ಯಾವುದೇ ಸಾವು ಸಂಭವಿಸಿಲ್ಲ ಎಂದು ಹೇಳಿ ಆಘಾತ ಮೂಡಿಸಿತ್ತು.
ಕೊರೊನಾಗಿಂತಲೂ ಪ್ರಧಾನಿ ಮೋದಿಯವರು ಯಾವ ಪೂರ್ವಸಿದ್ಧತೆಯೂ ಇಲ್ಲದೇ ತಿಂಗಳುಗಟ್ಟಲೇ ಲಾಕ್‌ಡೌನ್ ಹೇರಿದ್ದರಿಂದ ಲಕ್ಷಾಂತರ ಜನರ ಬದುಕು ಮೂರಾಬಟ್ಟೆಯಾಗಿತ್ತು. ಹೊಟ್ಟೆಪಾಡಿಗಾಗಿ ವಲಸೆ ಬಂದಿದ್ದ ಬಡವರು, ಕೂಲಿ ಕಾರ್ಮಿಕರು ನೂರಾರು ಕಿಲೋಮೀಟರ್‌ಗಳಷ್ಟು ನಡೆದೇ ಸಾಗಿದರು; ಕೆಲವರು ದಾರಿಮಧ್ಯೆಯೇ ಅಸುನೀಗಿದರು. ಮಾಡಲು ಕೆಲಸವಿಲ್ಲದೇ ನರಳಿದವರು, ತಿನ್ನಲು ಅನ್ನವಿಲ್ಲದೇ ಕುಸಿದವರು.. ದೇಶದಾದ್ಯಂತ ಇಂಥ ಲೆಕ್ಕವಿಲ್ಲದಷ್ಟು ದಾರುಣ ಚಿತ್ರಗಳು ಕಂಡುಬಂದವು. ಕೊರೊನಾದ ಜೊತೆಗೆ ಕೇಂದ್ರ ಸರ್ಕಾರದ ಅಸಮರ್ಪಕ ನಿರ್ವಹಣೆಯಿಂದ ಭಾರತದ ಜನತೆ ತೀವ್ರವಾಗಿ ನೊಂದು, ಬೆಂದಿತು.

ನಾಲ್ಕು ಲಕ್ಷ ಕೋಟಿ ರೂಪಾಯಿ ಬಂಡವಾಳ ಹಿಂತೆಗೆತ

ಸಾರ್ವಜನಿಕ ಉದ್ದಿಮೆಗಳ ಪೂರ್ಣ ಪ್ರಮಾಣದ ಅಥವಾ ಭಾಗಶಃ ಮಾರಾಟ ಪ್ರಧಾನಿ ಮೋದಿ ಅವರ ಅವಧಿಯಲ್ಲಿ ನಡೆದ ಮತ್ತೊಂದು ವಿವಾದಾತ್ಮಕ ನಿರ್ಧಾರ. ವಸೂಲಾಗದ ಸಾಲದಿಂದ ಹಲವು ಬ್ಯಾಂಕ್‌ಗಳು ನಷ್ಟದಲ್ಲಿದ್ದವು. ಹೀಗೆ ಬೇರೆ ಬೇರೆ ಕಾರಣಕ್ಕೆ ನಷ್ಟದಲ್ಲಿದ್ದ ಬ್ಯಾಂಕುಗಳನ್ನು ಲಾಭದಲ್ಲಿದ್ದ ಬ್ಯಾಂಕ್‌ಗಳ ಜೊತೆ ವಿಲೀನ ಮಾಡಿದರು ಮೋದಿ. ನೋಟು ರದ್ದತಿ, ಜಿಎಸ್‌ಟಿಯಿಂದ ಪಾತಾಳ ಮುಟ್ಟಿದ್ದ ಆರ್ಥಿಕತೆಯನ್ನು ನಿಭಾಯಿಸಲು ಅವರು ಬಂಡವಾಳ ಹಿಂತೆಗೆತಕ್ಕೆ ಮುಂದಾದರು ಎನ್ನುವ ಆರೋಪಗಳು ಕೇಳಿಬಂದವು. ಹಲವು ಸಾರ್ವಜನಿಕ ಉದ್ದಿಮೆಗಳಲ್ಲಿನ ಶೇರುಗಳನ್ನು ಮಾರಾಟ ಮಾಡಿದರು. ದೊಡ್ಡ ಮಟ್ಟದ ಎಲ್‌ಐಸಿ ಶೇರುಗಳು ಅದಾನಿ ಸಮೂಹಕ್ಕೆ ಮಾರಾಟವಾದವು. ಏರ್ ಇಂಡಿಯಾವನ್ನು ಮಾರಲಾಯಿತು. ಹೀಗೆ ಬಂಡವಾಳ ಹಿಂತೆಗೆತದಿಂದ ಮೋದಿ ಸರ್ಕಾರ ಗಳಿಸಿದ್ದು 4 ಲಕ್ಷ ಕೋಟಿ ರೂಪಾಯಿ. ‘ಒಂದೇ ಒಂದು ಸಾರ್ವಜನಿಕ ಉದ್ದಿಮೆಯನ್ನು ರೂಪಿಸದ ಮೋದಿ, 23 ಸಾರ್ವಜನಿಕ ಉದ್ದಿಮೆಗಳನ್ನು ಖಾಸಗೀಕರಣಗೊಳಿಸಿದರು’ ಎಂದು ಪ್ರತಿಪಕ್ಷಗಳು ತೀವ್ರವಾಗಿ ಟೀಕಿಸಿದವು.

10 ಸಾವಿರ ಸೈನಿಕರು ಹುದ್ದೆಗಳು ಸೇರಿದಂತೆ ದೇಶದ ಸೇನೆಯಲ್ಲಿ ಒಟ್ಟು 1,22,555 ಹುದ್ದೆಗಳು ಖಾಲಿ ಇವೆ ಎಂದು ರಕ್ಷಣಾ ಸಚಿವಾಲಯವು ಡಿಸೆಂಬರ್ 2021ರಲ್ಲಿ ಸಂಸತ್ತಿಗೆ ತಿಳಿಸಿತ್ತು. ಜೊತೆಗೆ ಸೈನಿಕರ ನಿವೃತ್ತಿ ವೇತನ ಕಡಿತಗೊಳಿಸಿದ ಆರೋಪವೂ ಮೋದಿ ಸರ್ಕಾರದ ವಿರುದ್ಧ ಬಂತು. ಇದ್ಯಾವುದರ ಬಗ್ಗೆಯೂ ಪ್ರತಿಕ್ರಿಯೆ ನೀಡದ ಮೋದಿ ಸರ್ಕಾರ, ಸೇನೆಯಲ್ಲಿ ಹುದ್ದೆಗಳನ್ನು ತುಂಬುವ ಬದಲು ‘ಅಗ್ನಿಪಥ್’ ಜಾರಿಗೆ ತಂದಿತು. ‘ಅಗ್ನಿವೀರರ’ ಹೆಸರಿನಲ್ಲಿ ತಾತ್ಕಾಲಿಕ ನೇಮಕಾತಿಗಳನ್ನು ಮಾಡಿಕೊಳ್ಳುವುದಾಗಿ ಘೋಷಿಸಿತು. ನಿರುದ್ಯೋಗದ ಹೆಚ್ಚಳ ಹಾಗೂ ದೇಶದ ಭದ್ರತೆಗೂ ಹೊಂದದ ವ್ಯವಸ್ಥೆ ಎಂದು ಅದರ ಬಗ್ಗೆ ಟೀಕೆ ವ್ಯಕ್ತವಾಯಿತು.

ಈ ಲೇಖನ ಓದಿದ್ದೀರಾ?: ಪ್ರಧಾನಿಯಾಗಿ ನರೇಂದ್ರ ಮೋದಿ ಒಂಬತ್ತು ವರ್ಷದಲ್ಲಿ ಸಾಧಿಸಿದ್ದೇನು? ಭಾಗ-1

ಇವುಗಳ ಜೊತೆಗೆ ಪೆಗಾಸಸ್ ಮೂಲಕ 40ಕ್ಕೂ ಹೆಚ್ಚು ಪತ್ರಕರ್ತರು, ರಾಜಕಾರಣಿಗಳ ಫೋನ್ ಕದ್ದಾಲಿಸಿದ್ದು; 2021ರ ಐ ಟಿ ನಿಯಮದ ಅಡಿಯಲ್ಲಿ ವಿಶೇಷ ಅಧಿಕಾರ ಬಳಸಿ ಬಿಬಿಸಿ ಸಿದ್ಧಪಡಿಸಿದ್ದ ‘ಇಂಡಿಯಾ: ದಿ ಮೋದಿ ಕ್ವೆಶ್ಚನ್’ ಸಾಕ್ಷ್ಯಚಿತ್ರವನ್ನು ನಿಷೇಧಿಸಿದ್ದು ಜಾಗತಿಕ ಮಟ್ಟದಲ್ಲಿ ಸದ್ದು ಮಾಡಿದವು. ಜಾರಿ ನಿರ್ದೇಶನಾಲಯ, ಆರ್‌ಬಿಐ, ಸಿಬಿಐ ಮುಂತಾದ ಸಾಂವಿಧಾನಿಕ ಸಂಸ್ಥೆಗಳ ವಿಶ್ವಾಸಾರ್ಹತೆಯ ಬಗ್ಗೆ ಜನಸಾಮಾನ್ಯರು ಕೂಡ ಅನುಮಾನ ಪಡುವಂತಾಯಿತು. ಸುಗ್ರೀವಾಜ್ಞೆಗಳ ಮೂಲಕ ತನಗೆ ಬೇಕಾದುದನ್ನು ಜಾರಿಗೆ ತರುವ ಮೂಲಕ ಕೇಂದ್ರ ಸರ್ಕಾರವು ಪ್ರಜಾತಂತ್ರವನ್ನು ನಿರ್ನಾಮ ಮಾಡುತ್ತಿದೆ ಎಂದು ದೇಶದ ಪ್ರಜ್ಞಾವಂತರು ಕಳವಳ ವ್ಯಕ್ತಪಡಿಸತೊಡಗಿದರು.

ಇದೆಲ್ಲದರ ನಡುವೆಯೇ ನರೇಂದ್ರ ಮೋದಿ ಅವರು ಪ್ರಧಾನಿಯಾಗಿ ಒಂಬತ್ತು ವರ್ಷಗಳು ಸಂದಿವೆ. ಮುಂದಿನ ವರ್ಷ ಲೋಕಸಭಾ ಚುನಾವಣೆ ನಡೆಯಲಿದೆ. ಹೇಳಿಕೊಳ್ಳುವಂಥ ಸಾಧನೆಗಳೇನೂ ಇಲ್ಲದಿರುವುದರಿಂದ ಈ ಬಾರಿ ಮತದಾರರನ್ನು ಸೆಳೆಯಲು ಮೋದಿಯವರು ಏನು ಮಾಡುತ್ತಾರೆ ಎನ್ನುವ ಪ್ರಶ್ನೆ ವಿರೋಧ ಪಕ್ಷಗಳದ್ದು. ಅದಕ್ಕೆ ಮೋದಿಯವರು ಈಗಾಗಲೇ ಪರೋಕ್ಷ ಉತ್ತರವನ್ನೂ ನೀಡಿದ್ದಾರೆ. ಏಕರೂಪ ನಾಗರಿಕ ಸಂಹಿತೆಯನ್ನು ಜಾರಿಗೆ ತರುವ ಮೂಲಕ ಹಿಂದೂ ಮತಗಳ ಕ್ರೋಡೀಕರಣಕ್ಕೆ ಬಿಜೆಪಿ ಮುಂದಾಗಿದೆ. ಜೊತೆಗೆ ಮುಂದಿನ ವರ್ಷದ ಆರಂಭದಲ್ಲಿಯೇ, ಚುನಾವಣೆಗೆ ಮುಂಚೆ, ಅಯೋಧ್ಯೆ ರಾಮಮಂದಿರದ ಉದ್ಘಾಟನೆಯನ್ನು ಭವ್ಯವಾಗಿ ನೆರವೇರಿಸುವ ಆಶಯವು ಬಿಜೆಪಿ ಪಾಳಯದಲ್ಲಿದೆ. ಇವು ಚುನಾವಣೆಯಲ್ಲಿ ತಮ್ಮ ಕೈ ಹಿಡಿಯುತ್ತವೆ ಎನ್ನುವುದು ಅವರ ಲೆಕ್ಕಾಚಾರವಾಗಿದೆ. ಮೂರನೇ ಬಾರಿಗೆ ಪ್ರಧಾನಿಯಾಗಿ ಭಾರತದ ಚರಿತ್ರೆಯಲ್ಲಿ ಹೊಸದೊಂದು ದಾಖಲೆ ಬರೆಯುವ ಮಹತ್ವಾಕಾಂಕ್ಷೆ ಮೋದಿಯವರಲ್ಲಿದೆ.

ಪೋಸ್ಟ್ ಹಂಚಿಕೊಳ್ಳಿ:

1 COMMENT

  1. ಈ ದಿನ ಡೆಸ್ಕ್ ನಿಂದ ವಸ್ತುನಿಷ್ಠ ಮತ್ತು ಜನರ ಕಣ್ತೆರೆಸುವ ಲೇಖನಗಳು ಪ್ರಕಟವಾಗುತ್ತಿವೆ

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪುರೋಹಿತ ಕೂಡಾ ಸಿಎಎ ಅರ್ಹತಾ ಪ್ರಮಾಣಪತ್ರ ನೀಡಬಹುದೆಂದ ಸರ್ಕಾರಿ ಸಹಾಯವಾಣಿ!

ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಅಡಿ ಭಾರತದ ಪೌರತ್ವ ಪಡೆಯುವವರಿಗೆ ಸ್ಥಳೀಯ...

ಮೋದಿ ಆಡಳಿತವನ್ನು ಟೀಕಿಸಿದ ಬೆನ್ನಲ್ಲೇ ಸೆಂಟರ್ ಫಾರ್ ಪಾಲಿಸಿ ರಿಸರ್ಚ್ ಮುಖ್ಯಸ್ಥೆ ರಾಜೀನಾಮೆ

ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತವನ್ನು ಟೀಕಿಸಿ ಲೇಖನವನ್ನು ಪ್ರಕಟಿಸಿದ ಕೆಲವು...

ಮಮತಾ ಕುರಿತು ಅವಹೇಳನ; ಬಿಜೆಪಿ ಸಂಸದ ದಿಲೀಪ್ ಘೋಷ್ ವಿರುದ್ಧ ಎಫ್‌ಐಆರ್

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕುರಿತು ಅವಹೇಳನಾಕಾರಿ ಹೇಳಿಕೆ ನೀಡಿದ್ದ...