ನೆದರ್ಲೆಂಡ್ಸ್ ಕ್ರಿಕೆಟ್ ತಂಡ | ಪಾರ್ಟ್ ಟೈಮ್ ಆಟಗಾರರು; ದೈತ್ಯರನ್ನು ಮಣಿಸಿದ ಲಿಲ್ಲಿಪುಟ್‌ಗಳು!

Date:

ಭಾರತದಲ್ಲಿ ನಡೆಯುತ್ತಿರುವ ಏಕದಿನ ವಿಶ್ವಕಪ್‌ನಲ್ಲಿ ಅನೂಹ್ಯ ಫಲಿತಾಂಶ ನೀಡಿದ ತಂಡ ಯಾವುದು ಎನ್ನುವ ಪ್ರಶ್ನೆಗೆ ಬಹುತೇಕ ಕ್ರಿಕೆಟ್ ಅಭಿಮಾನಿಗಳು ಕೊಡುವ ಉತ್ತರ: ನೆದರ್ಲೆಂಡ್ಸ್. ಮೊದಲು ದೈತ್ಯ ದಕ್ಷಿಣ ಆಫ್ರಿಕಾವನ್ನು ಸೋಲಿಸಿದ್ದ ಈ ಟೀಮ್, ನಂತರ ಬಾಂಗ್ಲಾವನ್ನು ಮಣಿಸಿ ಜಗತ್ತಿನ ಕ್ರಿಕೆಟ್ ಪ್ರೇಮಿಗಳ ವಿಚಿತ್ರ ಸಂಭ್ರಮಕ್ಕೆ ಕಾರಣವಾಗಿದೆ. ಕ್ರಿಕೆಟ್ ಎನ್ನುವ ಅನಿಶ್ಚಿತ ಹಾಗೂ ಕ್ಷಣಭಂಗುರ ಆಟದ ಗಮ್ಮತ್ತನ್ನು ಕ್ರಿಕೆಟ್ ವೀಕ್ಷಕರ ಮುಂದೆ ಮತ್ತೊಮ್ಮೆ ಅನಾವರಣಗೊಳಿಸಿದೆ.

ಡಚ್ಚರಿಗೆ ಇದೇನೂ ಮೊದಲ ವಿಶ್ವಕಪ್ ಪಂದ್ಯಾವಳಿ ಅಲ್ಲ. ಅವರು 1996ರಲ್ಲಿ ಮೊದಲ ಬಾರಿಗೆ ವಿಶ್ವಕಪ್ ಆಡಿದ್ದರು. ನಂತರ ಅವರು ಮುಂದಿನ ಆವೃತ್ತಿಗೆ ಅರ್ಹತೆ ಪಡೆಯಲು ವಿಫಲರಾದರು. ಆದರೆ ಮುಂದಿನ ಮೂರು- 2003, 2007 ಮತ್ತು 2011 ರ ವಿಶ್ವಕಪ್ ಪಂದ್ಯಾವಳಿಗಳನ್ನು ಆಡಿದರು ಮತ್ತು ನಂತರ 2019 ಸೇರಿದಂತೆ ಮುಂದಿನ ಎರಡು ವಿಶ್ವಕಪ್‌ಗಳನ್ನು ತಪ್ಪಿಸಿಕೊಂಡರು. 2014ರಲ್ಲಿ ನೆದರ್ಲೆಂಡ್ಸ್ 2015ರ ವಿಶ್ವಕಪ್ ಅರ್ಹತಾ ಪಂದ್ಯದ ಸೂಪರ್ ಸಿಕ್ಸ್‌ನ ಅಂತಿಮ ಪಂದ್ಯದಲ್ಲಿ ಕೀನ್ಯಾ ವಿರುದ್ಧ ಸೋತ ನಂತರ ತನ್ನ ಏಕದಿನ ಪಂದ್ಯ ಆಡುವ ಅವಕಾಶವನ್ನು ಕಳೆದುಕೊಂಡಿತ್ತು.

ಈ ವರ್ಷ ನಡೆದ ಏಕದಿನ ವಿಶ್ವಕಪ್‌ ಅರ್ಹತಾ ಪಂದ್ಯದಲ್ಲಿ ನೆದರ್ಲೆಂಡ್ಸ್ ಮಿಂಚಿತ್ತು. ಸೂಪರ್ ಓವರ್‌ಗೆ ಹೋದ ಥ್ರಿಲ್ಲರ್‌ನಲ್ಲಿ ಅವರು ವೆಸ್ಟ್ ಇಂಡೀಸ್ ಅನ್ನು ಸೋಲಿಸಿದ್ದರು. ಅಲ್ಲಿ ಲೋಗನ್ ವ್ಯಾನ್ ಬೀಕ್ ಅವರು ಸೂಪರ್ ಓವರ್‌ನ ಪ್ರತಿ ಬಾಲ್‌ಗೆ ಬೌಂಡರಿ ಬಾರಿಸುವ ಮೂಲಕ ಹೊಸ ದಾಖಲೆಯನ್ನೇ ಮಾಡಿದರು. ಹತ್ತು ದಿನಗಳ ನಂತರ ಸ್ಕಾಟ್ಲೆಂಡ್ ವಿರುದ್ಧ ಡಿ ಲೀಡೆ ಅತ್ಯುತ್ತಮವಾಗಿ ಆಡಿ ವಿಶ್ವಕಪ್‌ನಲ್ಲಿ ಆಡುವ ಅರ್ಹತೆ ಪಡೆದಿದ್ದರು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ವಿಶ್ವಕಪ್ ಕ್ರಿಕೆಟ್

ನೆದರ್ಲೆಂಡ್ಸ್‌ ಫುಟ್ಬಾಲ್, ಕಾರ್ ರೇಸ್, ಸಾಕರ್ ಮುಂತಾದ ಕ್ರೀಡೆಗಳಿಗೆ ಪ್ರಸಿದ್ಧಿ ಪಡೆದ ದೇಶ. ಅವರು 2014ರ ಫಿಫಾ ವಿಶ್ವಕಪ್‌ನಲ್ಲಿ ಮೂರನೇ ಸ್ಥಾನ ಪಡೆದಿದ್ದರು. 2010ರ ಫಿಫಾ ವಿಶ್ವಕಪ್‌ನಲ್ಲಿ ರನ್ನರ್ ಅಪ್ ಆಗಿದ್ದರು. ಹಾಕಿಯಲ್ಲಿಯೂ ಅವರ ತಂಡ ಉತ್ತಮ ಸಾಧನೆ ಮಾಡಿದೆ. ಆದರೆ, ಇತರೆ ಯುರೋಪಿಯನ್ ರಾಷ್ಟ್ರಗಳಲ್ಲಿಯಂತೆ ನೆದರ್ಲೆಂಡ್ಸ್‌ನಲ್ಲಿಯೂ ಕ್ರಿಕೆಟ್ ಅನ್ನು ವೃತ್ತಿಪರವಾಗಿ ತೆಗೆದುಕೊಂಡಿಲ್ಲ. ಹವ್ಯಾಸಿಗಳೇ ತಂಡ ಕಟ್ಟಿಕೊಂಡು ಕ್ರಿಕೆಟ್ ಆಡುತ್ತಿದ್ದಾರೆ. ಆ ದೇಶದಲ್ಲಿ ದೊಡ್ಡ ಕ್ರಿಕೆಟ್ ಕ್ಲಬ್‌ಗಳಿಲ್ಲ. ಕೋಟಿ ಕೋಟಿ ರೂಪಾಯಿಯ ಒಪ್ಪಂದಗಳಿಲ್ಲ. ಇಂಥ ದೇಶದಲ್ಲಿ ಕ್ರಿಕೆಟ್ ತಂಡ ರೂಪುಗೊಂಡು ವಿಶ್ವಕಪ್ ಆಡುತ್ತೇವೆ ಎಂದಾಗ, ಎಲ್ಲರಿಗಿಂತ ಮೊದಲು ಅವರ ದೇಶದವರೇ ನಕ್ಕು ಗೇಲಿ ಮಾಡಿದ್ದರು. ಅವರ ಬಗ್ಗೆ ವಿಡಂಬನೆಯ ಟಿವಿ ಶೋಗಳು ಪ್ರಸಾರವಾದವು.

ನೆದರ್ಲೆಂಡ್ಸ್‌ನಲ್ಲಿ ಕ್ರಿಕೆಟ್ ವೃತ್ತಿಪರ ಆಟವಾಗಿ ರೂಪುಗೊಳ್ಳದೇ ಇರುವುದಕ್ಕೆ ಮುಖ್ಯ ಕಾರಣ ಸಂಪನ್ಮೂಲಗಳ ಕೊರತೆ. ಭಾರತದಲ್ಲಿ ಬಿಸಿಸಿಐ ಜಗತ್ತಿನ ಅತ್ಯಂತ ಶ್ರೀಮಂತ ಕ್ರಿಕೆಟ್ ಮಂಡಳಿಯಾಗಿದೆ. ಆಟಗಾರರಿಗೆ ಉತ್ತಮ ಸಂಭಾವನೆ ಸಿಗುತ್ತದೆ. ಕೋಟ್ಯಂತರ ರೂಪಾಯಿ ಕೊಟ್ಟು ಐಪಿಎಲ್ ಮತ್ತಿತರ ಟೂರ್ನಿಗಳನ್ನು ಆಡುವ ಅವಕಾಶಗಳು ಸಿಗುತ್ತವೆ. ದೊಡ್ಡ ಮೊತ್ತದ ಜಾಹೀರಾತು ಒಪ್ಪಂದಗಳು ಏರ್ಪಡುತ್ತವೆ. ಹೀಗೆ ಒಮ್ಮೆ ತಂಡದಲ್ಲಿ ಕಾಣಿಸಿಕೊಂಡು, ಒಂದು ಪಂದ್ಯದಲ್ಲಿ ಉತ್ತಮ ಸಾಧನೆ ಮಾಡಿದರೂ ಆತ ಜೀವನವಿಡೀ ಕೂತು ತಿನ್ನುವಷ್ಟು ಸಂಪಾದನೆ ಮಾಡಲು ಅವಕಾಶಗಳಿವೆ. ಆದರೆ, ನೆದರ್ಲೆಂಡ್ಸ್ ತಂಡದ ಆರ್ಥಿಕ ಪರಿಸ್ಥಿತಿ ಹೀನಾಯವಾಗಿದೆ. ವಿಶ್ವಕಪ್ ಆಡುವಾಗಲೂ ನೆಟ್ ಬೌಲರ್‌ಗಳನ್ನು ತಮ್ಮೊಂದಿಗೆ ಕರೆದೊಯ್ಯುವಷ್ಟು ಸಂಪನ್ಮೂಲಗಳೂ ಕೂಡ ಅವರ ಬಳಿ ಇರಲಿಲ್ಲ. ಅದಕ್ಕಿಂತಲೂ ಹೆಚ್ಚಾಗಿ, ತಂಡದ ಕೆಲವು ಆಟಗಾರರು ಈಗಲೂ ಕ್ರಿಕೆಟ್ ಆಡುವುದನ್ನು ಹವ್ಯಾಸವಾಗಿ ಇಟ್ಟುಕೊಂಡಿದ್ದು, ಉಳಿದ ಸಮಯದಲ್ಲಿ ಜೀವನೋಪಾಯಕ್ಕಾಗಿ ಯಾವುದಾದರೊಂದು ಕೆಲಸ ಮಾಡುತ್ತಾರೆ.

ಈಗಿನ ವಿಶ್ವಕಪ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನೆದರ್ಲೆಂಡ್ಸ್ ಗೆದ್ದ ನಂತರ ಬೌಲರ್ ವ್ಯಾನ್ ಮೀಕೆರೆನ್ ಅವರ ಹಳೆಯ ಟ್ವೀಟ್‌ವೊಂದು ವೈರಲ್ ಆಗಿತ್ತು. 2020 ರಲ್ಲಿ ಟ್ವೀಟ್ ಮಾಡಿದ್ದ ಮೀಕೆರೆನ್, ‘ಕೋವಿಡ್ 19 ಸಾಂಕ್ರಾಮಿಕದಿಂದ 2020 ಟಿ-20 ವಿಶ್ವಕಪ್ ಮುಂದೂಡಲ್ಪಟ್ಟಾಗ ನಾನು ಉಬರ್ ಈಟ್ಸ್‌ನಲ್ಲಿ ಆಹಾರದ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದೆ’ ಎಂದು ಬರೆದುಕೊಂಡಿದ್ದರು. ಹಿಂದೆ ನೆದರ್ಲೆಂಡ್ಸ್ ಪರವಾಗಿ ವಿಶ್ವಕಪ್ ಆಡಿದ್ದ ಸ್ಟೀಫನ್ ಮೈಬರ್ಗ್ ಕೂಡ ಕನ್ಸಲ್ಟೆನ್ಸಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾಗ ರಜೆ ಮೇಲೆ ಬಂದು ವಿಶ್ವಕಪ್ ಆಡಿದ್ದರು. ಈ ಬಾರಿ ವಿಶ್ವಕಪ್ ಆಡುತ್ತಿರುವ ತೇಜಾ ನಿಡಮನೂರು ಕೂಡ ಇದೇ ರೀತಿ ಕಾರ್ಪೊರೇಟ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ರಜೆ ಮೇಲೆ ಬಂದಿದ್ದಾರೆ. ಸೈಬ್ರಾಂಡ್ ಎಂಗೆಲ್‌ಬ್ರೆಕ್ಟ್‌ ಕಾರ್ಪೊರೇಟ್ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಾರೆ.

ನೆದರ್ಲೆಂಡ್ಸ್ ಟ್ವೀಟ್

ನೆದರ್ಲೆಂಡ್ಸ್ ತಂಡದ ಬಹುತೇಕರು ವಿದೇಶಗಳಿಂದ ಬಂದವರು ಎನ್ನುವುದು ಮತ್ತೊಂದು ಗಮನಾರ್ಹ ವಿಚಾರ.ತಂಡದ ಕ್ಯಾಪ್ಟನ್ ಸ್ಕಾಟ್ ಎಡ್ವರ್ಡ್ಸ್‌ ಆಸ್ಟ್ರೇಲಿಯಾ ಮೂಲದವರು. ಇನ್ನು ತೇಜಾ ನಿಡಮನೂರು, ಆರ್ಯನ್ ದತ್, ವಿಕ್ರಮ್ ಸಿಂಗ್ ಈ ಮೂವರೂ ಭಾರತೀಯ ಮೂಲದವರು.

ತೇಜಾ ನಿಡಮನೂರು ಆಂಧ್ರಪ್ರದೇಶದ ವಿಜಯವಾಡದಲ್ಲಿ ಹುಟ್ಟಿದವರು. ಅವರ ಚಿಕ್ಕ ವಯಸ್ಸಿನಲ್ಲಿಯೇ ಅವರ ತಂದೆ ತಾಯಿ ನ್ಯೂಜಿಲೆಂಡ್‌ಗೆ ವಲಸೆ ಹೋಗಿದ್ದರು. ನ್ಯೂಜಿಲೆಂಡ್‌ನಲ್ಲಿ ಕ್ರಿಕೆಟರ್ ಆಗಿ ಬೆಳೆಯಲು ಅವರಿಗೆ ಸಾಧ್ಯವಾಗಲಿಲ್ಲ. ಕೆಲಸಕ್ಕೆಂದು ನೆದರ್ಲೆಂಡ್ಸ್‌ಗೆ ಹೋದವರು ಅಲ್ಲಿಯ ಕ್ರಿಕೆಟ್ ಟೀಮ್ ಸೇರಿದರು. 29 ವರ್ಷದ ಆಟಗಾರ ಹೈದರಾಬಾದ್‌ನಲ್ಲಿ ತಮ್ಮ ಚೊಚ್ಚಲ ವಿಶ್ವಕಪ್ ಮ್ಯಾಚ್ ಆಡುವಾಗ ತನ್ನ ಬಂಧುಗಳನ್ನು ಸ್ಟೇಡಿಯಂಗೆ ಕರೆಸಿಕೊಂಡು ಖುಷಿ ಪಟ್ಟಿದ್ದರು.

ಇನ್ನು ವಿಕ್ರಮ್ ಸಿಂಗ್ ಜಲಂಧರ್‌ನ ಚೀಮ ಖುರ್ದ್ ಎನ್ನುವ ಗ್ರಾಮದವರು. ಧರ್ಮಶಾಲಾದಲ್ಲಿ ಪಂದ್ಯ ಆಡುವಾಗ ಅವರು ತಮ್ಮ ನೆಂಟರಿಷ್ಟರೊಂದಿಗೆ ಕಾಲ ಕಳೆದಿದ್ದರು. ಆರ್ಯನ್ ದತ್ ಪಂಜಾಬ್‌ನ ಹೋಷಿಯಾರ್‌ಪುರದವರು. ಹೀಗೆ ಬೇರೆ ಬೇರೆ ದೇಶಗಳ ಇವರನ್ನು ಬೆಸೆದದ್ದು ಕ್ರಿಕೆಟ್ ಮೇಲಿನ ಪ್ರೀತಿ ಮಾತ್ರ.
ಕೇವಲ ಹಣಕಾಸು ಮತ್ತಿತರ ಸಮಸ್ಯೆಗಳಷ್ಟೇ ಅಲ್ಲ, ದೀರ್ಘವಾದ ಚಳಿಗಾಲವೂ ಕೂಡ ನೆದರ್ಲೆಂಡ್ಸ್‌ ತಂಡಕ್ಕೆ ಒಂದು ತೊಡಕೇ. ಹಾಗಾಗಿ ಅವರು ಚಳಿಗಾಲದಲ್ಲಿ ಇತರೆ ರಾಷ್ಟ್ರಗಳಿಗೆ ಟೂರ್ ಹಾಕಿಕೊಳ್ಳುತ್ತಾರೆ.

ನೆದರ್ಲೆಂಡ್ಸ್ ಕ್ರಿಕೆಟ್

ಇಷ್ಟೆಲ್ಲ ಕಷ್ಟಪಟ್ಟು ಒಂದು ತಂಡವಾಗಿ ರೂಪುಗೊಂಡಿರುವ ನೆದರ್ಲೆಂಡ್ಸ್ ಈ ಬಾರಿಯ ವಿಶ್ವಕಪ್‌ನಲ್ಲಿ ಇದುವರೆಗೆ ದಕ್ಷಿಣ ಆಫ್ರಿಕಾ ಹಾಗೂ ಬಾಂಗ್ಲಾ ತಂಡಗಳನ್ನು ಸೋಲಿಸಿ ಅಚ್ಚರಿಯ ಫಲಿತಾಂಶ ನೀಡಿದೆ. ನೆದರ್ಲೆಂಡ್ಸ್ ತಂಡ ಇದುವರೆಗೆ ವಿಶ್ವಕಪ್‌ ಪಂದ್ಯಾವಳಿಗಳಲ್ಲಿ ನಾಲ್ಕು ಬಾರಿ ಗೆಲುವು ಸಾಧಿಸಿದೆ. 2003ರಲ್ಲಿ ನಮೀಬಿಯಾ ತಂಡವನ್ನು ಸೋಲಿಸಿದ್ದ ಅವರು, 2007ರಲ್ಲಿ ಸ್ಕಾಟ್ಲೆಂಡ್ ತಂಡವನ್ನು ಮಣಿಸಿದ್ದರು. ಈ ಬಾರಿ ಇದುವರೆಗೆ ಎರಡು ಗೆಲುವು ಪಡೆದಿದ್ದಾರೆ. ಅದೂ ಬಲಿಷ್ಠ ತಂಡಗಳ ಎದುರು ಅವರು ಜಯಶಾಲಿಗಳಾಗಿರುವುದು ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದೆ.

ನೆದರ್ಲೆಂಡ್ಸ್ ತಂಡದ ಆಟಗಾರರ ನಡುವೆ ಸ್ಥಾನಮಾನಗಳಿಗಾಗಿ ಮೇಲಾಟವಿಲ್ಲ. ಆಟಗಾರರ ನಡುವೆ ಮನಸ್ತಾಪಗಳಿಲ್ಲ. ಹಣಕ್ಕಾಗಿ ಹಪಹಪಿಯಿಲ್ಲ. ಇನ್ನೊಬ್ಬರ ಕಾಲೆಳೆದು ಮೇಲೆ ಹೋಗಬೇಕೆನ್ನುವ ತಹತಹವಿಲ್ಲ. ಅವರಲ್ಲಿರುವುದು ಒಗ್ಗಟ್ಟು ಮತ್ತು ಗೆಲ್ಲಬೇಕೆನ್ನುವ ಹಂಬಲ. ಅದೇ ಅವರನ್ನು ವಿನಯಂತರನ್ನಾಗಿ ಮಾಡಿ, ನೆಲದ ಮೇಲೆ ನಿಲ್ಲಿಸಿದೆ.

ದೈತ್ಯರ ಎದುರು ಲಿಲ್ಲಿಪುಟ್‌ಗಳಂತೆ ಕಾಣುವ ಅವರ ಆಟದ ಶೈಲಿಯೂ ವಿಶೇಷವಾಗಿದೆ. ಒಂದು ಬಾಲ್ ಬಂದರೆ, ಎಲ್ಲರೂ ಅತ್ತ ದೌಡಾಯಿಸುತ್ತಾರೆ. ಅವರ ನಡಿಗೆ, ಓಟ ಎಲ್ಲದರಲ್ಲಿಯೂ ವಿನಯವಂತಿಕೆ ಎದ್ದು ಕಾಣುತ್ತದೆ. ಪಂದ್ಯ ಗೆಲ್ಲಲೇಬೇಕೆನ್ನುವ ಶ್ರದ್ಧೆ ಹಾಗೂ ದೃಢತೆ ಅವರಲ್ಲಿದೆ. ಕ್ರಿಕೆಟ್ ಎಂದರೆ ಹಣ ಎನ್ನುವ ಪ್ರಸ್ತುತ ಪರಿಸ್ಥಿತಿಯಲ್ಲಿ ಕೇವಲ ಆಟದ ಮೇಲಿನ ಪ್ರೀತಿಯ ಬಲದಿಂದಷ್ಟೇ ವಿಶ್ವಕಪ್‌ವರೆಗೂ ಬಂದಿರುವ ನೆದರ್ಲೆಂಡ್ಸ್ ತಂಡಕ್ಕೆ ಶಹಭಾಷ್‌ಗಿರಿ ಸಲ್ಲಲೇಬೇಕು.

+ posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಐಪಿಎಲ್ | ಪಂಜಾಬ್ ವಿರುದ್ಧ ಗುಜರಾತ್ ಟೈಟನ್ಸ್‌ಗೆ ಮೂರು ವಿಕೆಟ್‌ಗಳ ಜಯ

ಚಂಡೀಗಢದ ಮಹಾರಾಜ ಯಾದವೀಂದ್ರ ಸಿಂಗ್ ಅಂತರಾಷ್ಟ್ರೀಯ ಸ್ಟೇಡಿಯಂನಲ್ಲಿ ಇಂದು ನಡೆದ ಐಪಿಎಲ್‌...

ಐಪಿಎಲ್ | ರೋಚಕ ಹಣಾಹಣಿಯಲ್ಲಿ ಕೈಕೊಟ್ಟ ನಸೀಬು: ಕೆಕೆಆರ್‌ ವಿರುದ್ಧ ಆರ್‌ಸಿಬಿಗೆ 1 ರನ್‌ಗಳ ಸೋಲು

ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ಇಂದು ನಡೆದ ಐಪಿಎಲ್ 36ನೇ ಪಂದ್ಯದಲ್ಲಿ ರಾಯಲ್...

ಟಿ20 ವಿಶ್ವಕಪ್ ಕ್ರಿಕೆಟ್‌ನಲ್ಲಿ ‘ಕೆಎಂಎಫ್’ ಪ್ರಯೋಜಕತ್ವ

ನಂದಿನಿ ಬ್ರಾಂಡ್‌ನೊಂದಿಗೆ ಡೇರಿ ಉದ್ಯಮಗಳಲ್ಲಿ ಎಲ್ಲಡೆ ಹೆಸರುವಾಸಿಯಾಗಿರುವ ಕರ್ನಾಟಕ ಹಾಲು ಒಕ್ಕೂಟ...

ಐಪಿಎಲ್ | ಹೈದರಾಬಾದ್ ನೀಡಿದ್ದ ಬೃಹತ್ ಗುರಿ ಮುಟ್ಟಲು ಎಡವಿದ ಡೆಲ್ಲಿ ಕ್ಯಾಪಿಟಲ್ಸ್‌: 67 ರನ್‌ಗಳ ಸೋಲು

ಇಂದು ಅರುಣ್​ ಜೇಟ್ಲಿ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆದ ಹೈವೋಲ್ಟೇಜ್​ ಪಂದ್ಯದಲ್ಲಿ ಡೆಲ್ಲಿ...