ಪಿಎಂ ಕೇರ್ಸ್ ಫಲಾನುಭವಿಗಳು ನಾಗಪುರದಲ್ಲಿದ್ದಾರೆ: ಡಾ.ಜಿ.ರಾಮಕೃಷ್ಣ

Date:

“ಆತ್ಮನಿರ್ಭರವಾದ ಭಾರತ ದುರ್ಬರ ಆಗಿದೆಯೋ ಇಲ್ಲವೋ ಎಂದು ತಿಳಿಯಲು ರಸ್ತೆಯಲ್ಲಿರುವ ಜನರನ್ನು ಮಾತನಾಡಿಸಿದರೆ ಗೊತ್ತಾಗುತ್ತದೆ…”

“ನಿನ್ನೆ ಮೊನ್ನೆಯೆಲ್ಲ ಟಿವಿಯಲ್ಲಿ ಬಂದಿರುವ ವಿಚಾರ (ಚುನಾವಣಾ ಬಾಂಡ್‌) ನೋಡಿದೆವು. ಇನ್ನೊಂದು ಬಾಕಿ ಇದೆ, ಅದು ಪಿಎಂ ಕೇರ್ಸ್. ಅದರ ಫಲಾನುಭವಿಗಳು ನಾಗಪುರದಲ್ಲಿದ್ದಾರೆ” ಎಂದು ಹಿರಿಯ ವಿದ್ವಾಂಸ ಡಾ.ಜಿ.ರಾಮಕೃಷ್ಣ ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್‌ನ ಕೃಷ್ಣರಾಜ ಪರಿಷತ್‌ ಮಂದಿರದಲ್ಲಿ ಚಿರಂತ್ ಪ್ರಕಾಶನ ವತಿಯಿಂದ ಭಾನುವಾರ ಹಮ್ಮಿಕೊಳ್ಳಲಾಗಿದ್ದ ಪ್ರೊ.ಪುರುಷೋತ್ತಮ ಬಿಳಿಮಲೆ ಅವರ ’ವರ್ತಮಾನ ಭಾರತ’ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

“ಇದನ್ನು ನಾನು ಪಿಎಂ ಕೇರ್ಸ್ ಎನ್ನುವುದಿಲ್ಲ. ಪಿಎಂ ಡಸ್‌ ನಾಟ್ ಕೇರ್‌ (ಪ್ರಧಾನಿ ಯಾವುದೇ ಕಾಳಜಿ ಮಾಡುವುದಿಲ್ಲ) ಎನ್ನುತ್ತೇನೆ. ಆ ಹಣದಿಂದ ಯಾರಿಗೆ ಉಪಯೋಗವಾಯಿತೋ ತಿಳಿಯದು. ಆದರೆ ಖಂಡಿತವಾಗಿಯೂ ನಾಗಪುರದಲ್ಲಿರುವವರು ಫಲಾನುಭವಿಗಳಾಗಿದ್ದಾರೆ ಎಂಬ ಖಾತ್ರಿ ನನಗಿದೆ” ಎಂದರು.

“ಕೊರೊನಾಕ್ಕೆ ಔಷಧಿ ಮಾಡುತ್ತೇನೆ ಎಂದು ಬಂದವನಿಂದ ಕೋಟಿಗಟ್ಟಲೆ ಹಣ ಪಡೆದಿರುವುದು ಪತ್ರಿಕೆಗಳಲ್ಲಿ ಪ್ರಕಟವಾಗಿದೆ. ಇದೇನಾ ನೀವು ಹೆಮ್ಮೆ ಪಡುವ ಸಂಸ್ಕೃತಿ? ಅದರ ಬಗ್ಗೆ ಚಕಾರವೇ ಇಲ್ಲವಲ್ಲ” ಎಂದು ಟೀಕಿಸಿದರು.

“ಒಬ್ಬ ಮಾರಾಟಗಾರನು ಚುನಾವಣೆ ಫಂಡ್‌ಗೆ ಅಗಾಧವಾದ ಹಣವನ್ನು ನೀಡುವಷ್ಟು ಈ ದೇಶದಲ್ಲಿ ದಾನಿಯಾಗುತ್ತಾನೆ ಅನ್ನುವುದಾದರೆ ಅದರ ಪರಿಣಾಮಗಳನ್ನು ಅರ್ಥಮಾಡಿಕೊಳ್ಳದೆ ಇರುವಷ್ಟು ನಾವು ಹುಂಬರಾಗಬಾರದು. ನಿಜಕ್ಕೂ ಪ್ರಧಾನಿ ಮೋದಿಗೆ ನಾಚಿಗೆ ಮಾನ, ಮರ್ಯಾದೆ ಇದ್ದರೆ ರಾಜೀನಾಮೆ ಕೊಟ್ಟು ಹೋಗಬೇಕು” ಎಂದು ಆಗ್ರಹಿಸಿದರು.

“ಆತ್ಮನಿರ್ಭರವಾದ ಭಾರತ ದುರ್ಬರ ಆಗಿದೆಯೋ ಇಲ್ಲವೋ ಎಂದು ತಿಳಿಯಲು ರಸ್ತೆಯಲ್ಲಿರುವ ಜನರನ್ನು ಮಾತನಾಡಿಸಿದರೆ ಗೊತ್ತಾಗುತ್ತದೆ. ಇವರು ರಾಷ್ಟ್ರದ ಘನತೆಗೆ ಮಸಿ ಬಳಿಯುತ್ತಿದ್ದಾರೆ. ಆತ್ಮ ನಿರ್ಭರ ಭಾರತವನ್ನು ಇನ್ನೂ ಹೆಚ್ಚು ಹೆಚ್ಚು ದುರ್ಬರಗೊಳಿಸುವಂತಹ ಕಾಯಕದಲ್ಲೇ ಇವರು ಮುಂದುವರಿಯಬೇಕಾ? ನಾವೀಗ ಯೋಚನೆ ಮಾಡಬೇಕಿದೆ” ಎಂದು ಕಿವಿಮಾತು ಹೇಳಿದರು.

“ಇನ್ನೊಂದು ಚುನಾವಣೆಯನ್ನು ಗೆಲ್ಲೋಕೆ ಮತ್ತೊಂದು ಪುಲ್ವಾಮ ಆಗೋದು ಬೇಡ, ಗೆಲ್ಲೋದಾದರೆ ಹಾಗೆಯೇ ಸ್ಪರ್ಧಿಸಿ ಗೆಲ್ಲಲಿ ಎಂದು ಪರಿಚಿತರೊಬ್ಬರು ಹೇಳುತ್ತಿದ್ದರು. ಇಂತಹ ಹೀನಾಯ ಸ್ಥಿತಿಯಲ್ಲಿ ನಾವಿದ್ದೇವೆ. ಅತ್ಯಂತ ಕಲುಷಿತವಾದ ಭ್ರಷ್ಟತೆಯು ಆಳುವ ವರ್ಗವನ್ನು ಅಧೀರರನ್ನಾಗಿ ಮಾಡದೆ ಇರುವುದು ನಮ್ಮ ದುರಂತ” ಎಂದು ವಿಷಾದಿಸಿದರು.

“ದೊಡ್ಡ ದೊಡ್ಡರಸ್ತೆಗಳನ್ನು ಮಾಡಿದ್ದೇವೆ ಎಂದು ಬೆನ್ನು ತಟ್ಟುತ್ತಿದ್ದವರೇ ಆ ರಸ್ತೆಗಳಲ್ಲಿ ದೊಡ್ಡ ದೊಡ್ಡ ಮೊಳೆಗಳನ್ನು ಹೊಡೆದು ರೈತರು ಬರದಂತೆ ತಡೆಯುತ್ತಿದ್ದಾರೆ. ತಮಿಳುನಾಡು, ಕೇರಳ, ಕರ್ನಾಟಕ  ರಾಜ್ಯಗಳು ದೇಶಕ್ಕೆ ಕಂಟಕವಾಗುತ್ತಿವೆ ಎಂದು ದೆಹಲಿಯಲ್ಲಿನ ಮಹಾತ್ಮರು ಬಹಿರಂಗವಾಗಿ ಹೇಳಿಕೆ ನೀಡುತ್ತಿದ್ದಾರೆ. ಈ ದೇಶವನ್ನು ಸಮಗ್ರವಾಗಿ ಪೋಷಿಸಬೇಕಾದವರೇ ರಾಷ್ಟ್ರದ ಕೆಲವು ಭಾಗಗಳು ನಮಗೆ ಕಂಟಕವಾಗುತ್ತಿವೆ ಎನ್ನುತ್ತಿದ್ದಾರೆ” ಎಂದು ವಾಗ್ದಾಳಿ ನಡೆಸಿದರು.

“ಸ್ವಾತಂತ್ರ್ಯ ಹೋರಾಟ, ಸಂವಿಧಾನ ಎಲ್ಲವೂ ಇದ್ದೂ ಇಂತಹ ದೈನೇಸಿ ಸ್ಥಿತಿಗೆ ಬಂದಿದ್ದೇವೆ. ಪ್ರತಿದಿನ ಶ್ರೀರಾಮ ಚಂದ್ರನಿಗೆ ಆರತಿ ಎತ್ತಿ, ಜಾಗಟೆ ಹೊಡೆಯುವುದನ್ನು ಮನೆಯಲ್ಲೇ ಕುಳಿತು ನೋಡುವುದಂತೆ. ಇದಕ್ಕಿಂತ ಇನ್ನೇನು ಬೇಕಿದೆ? ಸಾವ್ಗೆ ಪಾಯಸ ಮಾಡಿಕೊಳ್ಳಲೇಬೇಕಿಲ್ಲ. ಘಂಟೆ ಹೊಡೆಯುತ್ತಾರೆ, ಮಂಗಳಾರತಿ ಮಾಡುತ್ತಾರೆ. ಅಯೋಧ್ಯೆಯ ವೈಭವವನ್ನು ಮನೆಯಲ್ಲೇ ಕೂತು ನೋಡಬಹುದು” ಎಂದು ವ್ಯಂಗ್ಯವಾಡಿದರು.

ಅಜೀಂ ಪ್ರೇಮ್‌ಜೀ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಎ.ನಾರಾಯಣ ಮಾತನಾಡಿ, “ಚರಿತ್ರೆಯಲ್ಲದ್ದನ್ನು ಚರಿತ್ರೆಯೆಂದು ಭಾವಿಸಿ, ಹಿಂದೆ ಇಲ್ಲದ್ದನ್ನು ಇದೆ ಎಂಬು ಭಾವಿಸುವುದು ನಮ್ಮಲ್ಲಿ ನಡೆಯುತ್ತಿದೆ. ನಾವು ಪ್ರಜಾರಾಜ್ಯದಲ್ಲಿದ್ದೇವೆ ಎಂಬುದನ್ನು ಮರೆತು, ಚರಿತ್ರೆಯ ಹಿಂದೆ ಹೋಗುತ್ತಿದ್ದೇವೆ” ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ಪ್ರಾಧ್ಯಾಪಕ ಎ.ನಾರಾಯಣ ಮಾತನಾಡಿದರು

“ಅಂಬೇಡ್ಕರ್‌ ಅವರ ಎಲ್ಲ ಕೃತಿಗಳು ಭವ್ಯವಾದ ಚರಿತ್ರೆಗೆ ಹೋಗದೆ ಇಂದಿನ ಸಮಸ್ಯೆಗಳನ್ನು ಕಾಣಿರಿ ಎನ್ನುತ್ತವೆ. ಹೀಗಾಗಿ ಸಂವಿಧಾನದಲ್ಲಿ ವರ್ತಮಾನವನ್ನು ತಂದರು. ಸಂವಿಧಾನದ ಕವರ್‌ ಪೇಜ್‌ನಲ್ಲಿ ರಾಮಾಯಣದ ಚಿತ್ರವಿದೆ ಎಂದು ಕೆಲವರು ಇತ್ತೀಚೆಗೆ ಹೇಳಿಕೆ ನೀಡಿದ್ದಾರೆ. ಆದರೆ ಅಲ್ಲಿ ನಿಜವಾಗಿ ಇರಬೇಕಾದದ್ದು ಸ್ವಾತಂತ್ರ್ಯ ಸಂಗ್ರಾಮದ ಚಿತ್ರಗಳು. ಹಾಗೆಂದು ರಾಮಾಯಣದ ಚಿತ್ರ ಇರಬಾರದು ಎಂದು ನಾನು ಹೇಳುತ್ತಿಲ್ಲ” ಎಂದು ಸ್ಪಷ್ಟಪಡಿಸಿದರು.

“ವರ್ತಮಾನದ ಬಗ್ಗೆ ಬರೆಯಬೇಕಾದವರು ಸಮಾಜ ವಿಜ್ಞಾನಿಗಳು. ಕನ್ನಡದ ಸಂದರ್ಭಕ್ಕೆ ಬಂದರೆ ಸಮಾಜ ವಿಜ್ಞಾನಿ ಎಂಬ ಕ್ಯಾಟಗರಿ ಇಲ್ಲವಾಗಿದೆ. ಈ ಕೊರತೆಯನ್ನು ತುಂಬಿದ್ದು ಕನ್ನಡದ ಸಾಹಿತಿಗಳು ಮತ್ತು ಒಂದಿಷ್ಟು ಪತ್ರಕರ್ತರು. ಈ ಪರಂಪರೆಯನ್ನು ಪ್ರೊ.ಬಿಳಿಮಲೆ ಮುಂದುವರಿಸಿದ್ದಾರೆ” ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

“ಕುವೆಂಪು ಅವರು ಮಾಡಿದ ಎರಡು ಭಾಷಣಗಳು (ವಿಚಾರಕ್ರಾಂತಿಗೆ ಆಹ್ವಾನ, ಆತ್ಮಶ್ರೀಗಾಗಿ ನಿರಂಕುಶಮತಿಗಳಾಗಿ) ವರ್ತಮಾನಕ್ಕೆ ಸ್ಪಂದಿಸಿದವು. ಬೇಂದ್ರೆಯವರು ತಮ್ಮ ಕಾವ್ಯವೊಂದರಲ್ಲಿ ಗಾಂಧಿಯ ಕುರಿತು ಬರೆಯುತ್ತಾ, ‘ಸಾಕ್ರೆಟಿಸ್‌, ಯೇಸುವನ್ನು ವಿಚಾರಣೆಯನ್ನಾದರೂ ಮಾಡಿದರು. ಆದರೆ ಗಾಂಧಿಯ ವಿಚಾರಣೆ ಇಲ್ಲದೆಯೇ ದುಷ್ಟರು ಕೊಂದರು’ ಎಂದಿದ್ದಾರೆ. ಸಮಾಜ ವಿಜ್ಞಾನಿಯೊಬ್ಬರಿಗೆ ಇರುವ ನೋಟವಿದು” ಎಂದು ಬಣ್ಣಿಸಿದರು.

ಸಂವಾದದಲ್ಲಿ ಪ್ರತಿಕ್ರಿಯಿಸಿದ ಅವರು, “ಹಿಂದೂರಾಷ್ಟ್ರ ಯಾಕಾಬಾರದು ಎಂದು ಈಗ ಅನೇಕರು ಕೇಳುತ್ತಾರೆ. ಹಿಂದೂ ರಾಷ್ಟ್ರ ಸೆಲ್ಯುಷನ್ ಅಲ್ಲ, ಅದು ಈ ದೇಶವನ್ನು ಒಡೆಯುವ ಸಾಧನ ಎಂದು ನಾವು ಸ್ಪಷ್ಟವಾಗಿ ತಿಳಿಸಬೇಕಿದೆ. ಈ ದೇಶ ಉಳಿಯಬೇಕಾದರೆ ಸಾಂವಿಧಾನಿಕ ರಾಷ್ಟ್ರಿಯತೆಯಿಂದ ಮಾತ್ರ ಸಾಧ್ಯ” ಎಂದು ವಿವರಿಸಿದರು.

ಲೇಖಕರು ಹಾಗೂ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ನೂತನ ಅಧ್ಯಕ್ಷರೂ ಆಗಿರುವ ಪ್ರೊ.ಪುರುಷೋತ್ತಮ ಬಿಳಿಮಲೆ ಮಾತನಾಡಿ, “ಭಾಷಾ ಪಥನವೂ ವರ್ತಮಾನ ಎದುರಿಸುತ್ತಿರುವ ಬಿಕ್ಕಟ್ಟುಗಳಲ್ಲಿ ಒಂದು. ಕ್ರಿ.ಶ. 1800ನೇ ಇಸವಿಯಲ್ಲಿ 50,000 ಜನ ಮಾತನಾಡುತ್ತಿದ್ದ ಕೊರಗ ಭಾಷೆಯನ್ನು ಈಗ 2,000 ಜನ ಮಾತನಾಡುತ್ತಿದ್ದಾರೆ” ಎಂದು ಬೇಸರ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಪ್ರೊ.ಪುರುಷೋತ್ತಮ ಬಿಳಿಮಲೆ ಮಾತನಾಡಿದರು

“ಹಿಂದಿ ಭಾಷೆ ಶೇ. 64ರಷ್ಟು ಬೆಳವಣಿಗೆ ಆಗಿದೆ. ಕನ್ನಡ ಶೇ. 3.6ರಷ್ಟು ಬೆಳವಣಿಗೆ ಕಾಣುತ್ತಿದೆ. ಭಾಷಾ ವಿದ್ಯಾರ್ಥಿಯಾಗಿ ಹಿಂದಿಯನ್ನು ಗೌರವಿಸುತ್ತೇನೆ. ಆದರೆ ಈ ಹಿಂದಿ ಭಾಷೆ ನನ್ನ ಭಾಷೆಯನ್ನು ನುಂಗಿ ಹಾಕಬಹುದು” ಎಂದು ಆತಂಕ ವ್ಯಕ್ತಪಡಿಸಿದರು.

“ಜಾಗತೀಕರಣವೆಂಬುದು ಆರ್ಥಿಕ ಪರಿಣಾಮವಾಗಿದ್ದರೂ ಸಾಮಾಜಿಕ ಪರಿಣಾಮವನ್ನು ತಂದಿತು. ಜಾಗತೀಕರಣಕ್ಕೆ ತೆರೆದುಕೊಳ್ಳುವ ಕಾಲಘಟ್ಟದಲ್ಲೇ ಅಡ್ವಾನಿಯವರು ರಥಯಾತ್ರೆ ನಡೆಸಿದರು. ಈ ಎರಡು ಘಟನೆಗಳ ಕುರಿತು ಕನ್ನಡ ಸಾಹಿತ್ಯದಲ್ಲಿ ಗಂಭೀರವಾಗಿ ಯಾರೂ ಬರೆದಿಲ್ಲ” ಎಂದರು.

ಬಹುತ್ವ ಭಾರತದ ಕುರಿತು ಮಾತನಾಡಿದ ಅವರು, “ತಮಿಳುನಾಡಿನಲ್ಲಿ ದ್ರೌಪದಿಯನ್ನು ದೇವರಾಗಿ ಪೂಜಿಸುತ್ತಾರೆ. ದುಶ್ಯಾಸನನ ಪಾತ್ರ ಮಾಡುವ ವ್ಯಕ್ತಿ ಬೆಳಿಗ್ಗೆ ದ್ರೌಪದಿ ತಾಯಿಗೆ ಕೈಮುಗಿದು ಬಂದಿರುತ್ತಾನೆ. ರಾತ್ರಿ ನಾಟಕದಲ್ಲಿ ದ್ರೌಪದಿ ಪಾತ್ರಧಾರಿಯ ಕಾಲಿಗೆ ಬಿದ್ದು ನಂತರ ಸೀರೆಯನ್ನು ಸೆಳೆಯುತ್ತಾನೆ. ಕಲಾವಿದನಾಗಿ ಇದನ್ನು ಮಾಡುತ್ತಿದ್ದೇವೆ, ತಪ್ಪು ತಿಳಿಯಬೇಡ ತಾಯಿ ಎಂದು ಕೋರುತ್ತಾನೆ. ದ್ರೌಪದಿ ಒಬ್ಬ ದೇವತೆಯಾಗುತ್ತಾಳೆಂಬ ಕಲ್ಪನೆ ವ್ಯಾಸನ ಊಹೆಗೆ ನಿಲುಕದ್ದು. ಇದು ನಮ್ಮ ಭಾರತದ ಸಂಸ್ಕೃತಿ. ಅದು ಬೇಡ ಇದು ಬೇಡ ಎನ್ನುವವರು ಕೊನೆಗೆ ಏನನ್ನೂ ಉಳಿಸುವುದಿಲ್ಲ. ನಾವು ಭಾರತವನ್ನು ಉಳಿಸದಿದ್ದರೆ ನಮ್ಮ ಮುಂದಿನ ತಲೆಮಾರು ನಮ್ಮನ್ನು ಕ್ಷಮಿಸುವುದಿಲ್ಲ” ಎಂದು ಎಚ್ಚರಿಸಿದರು.

ಹಿರಿಯ ಪತ್ರಕರ್ತೆ, ಹೋರಾಟಗಾರ್ತಿ ಡಾ.ವಿಜಯಮ್ಮ ಅಧ್ಯಕ್ಷತೆ ವಹಿಸಿದ್ದರು. ಚಿರಂತ್ ಪ್ರಕಾಶನದ ಎಚ್.ಪರಮೇಶ್ವರ ಹಾಜರಿದ್ದರು. ಪುಸ್ತಕ ಬಿಡುಗಡೆಯ ಬಳಿಕ ಸಭಿಕರೊಂದಿಗೆ ಸಂವಾದ ಕಾರ್ಯಕ್ರಮವೂ ನಡೆಯಿತು.

ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಲೋಕಸಭಾ ಚುನಾವಣೆ | ಬಿಜೆಪಿ ಗೆಲುವಿಗೆ 13 ರಾಜ್ಯಗಳ ಸವಾಲು! ಆಕ್ಸಿಸ್ ಎಂಡಿ ಗುಪ್ತಾ ಹೇಳುವುದೇನು? 

ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ 400ಕ್ಕೂ ಹೆಚ್ಚು ಸ್ಥಾನಗಳನ್ನು ಪಡೆಯಲಿದೆ ಎಂಬ...

ರಾಹುಲ್ V/s ಪಿಣರಾಯಿ; ಕೇರಳದಲ್ಲಿ ಲೋಕಸಭಾ ಚುನಾವಣಾ ಅಬ್ಬರ

ಕೇರಳದಲ್ಲಿ ಏಪ್ರಿಲ್ 26ರಂದು ಮತದಾನ ನಡೆಯಲಿದೆ. ಮತದಾನಕ್ಕೆ ಒಂದು ವಾರವಷ್ಟೇ ಬಾಕಿ...

ಕಲಬುರಗಿಯಲ್ಲಿ ಬಿಜೆಪಿಗೆ ಹಿನ್ನಡೆ; ಮಾಲೀಕಯ್ಯ ಗುತ್ತೇದಾರ್ ಕಾಂಗ್ರೆಸ್‌ ಸೇರ್ಪಡೆ

ಲೋಕಸಭೆ ಚುನಾವಣೆಯ ವೇಳೆ ಕಲಬುರಗಿ ಕ್ಷೇತ್ರದಲ್ಲಿ ಬಿಜೆಪಿಗೆ ಹಿನ್ನಡೆ ಉಂಟಾಗಿದೆ. ಮಾಜಿ...

ನೇಹಾ ಕೊಲೆ ಪ್ರಕರಣ | ಹುಬ್ಬಳ್ಳಿ, ಬೆಳಗಾವಿಯಲ್ಲಿ ಚುನಾವಣೆ ಅಸ್ತ್ರ ಮಾಡಿಕೊಳ್ಳಲು ಬಿಜೆಪಿ ಯತ್ನ

ಹುಬ್ಬಳ್ಳಿ-ಧಾರವಾಡ ಪಾಲಿಕೆಯ ಕಾಂಗ್ರೆಸ್ ಸದಸ್ಯ ನಿರಂಜನ ಹಿರೇಮಠ ಪುತ್ರಿ ನೇಹಾ ಕೊಲೆ...