ಹೊಸಿಲ ಒಳಗೆ-ಹೊರಗೆ | ಹೆಣ್ಣಿನ ದೇಹದ ಮೇಲಿನ ಅಧಿಕಾರ ರಾಜಕಾರಣ

Date:

ಗಂಡ ಹೆಂಡತಿಗೆ ಹೊಡೆಯಬಹುದು ಎಂಬ ಅಧಿಕಾರ ಹೇಗೆ ಬಂತು? ಅವಳ ದೇಹದ ಮೇಲೆ ನಡೆಸುವ ಹಿಂಸೆಗೂ ಬೇಕಾದಷ್ಟು ಸಮರ್ಥನೆಗಳನ್ನು ಈ ವ್ಯವಸ್ಥೆ ಕೊಡುತ್ತದೆ. ಅವಳ ದೇಹ ಈ ಹಿಂಸೆ, ದೌರ್ಜನ್ಯಗಳನ್ನು ಸಹಿಸಬೇಕು ಎಂಬ ನಿರೀಕ್ಷೆಯೂ ಅವಳ ಮೇಲಿದೆ. ಇದು ಯಾವ ನ್ಯಾಯ?

ದೇಹ ಶಕ್ತಿಯ ಕೇಂದ್ರ. ದೇಹದ ಮೇಲೆ ನಿಯಂತ್ರಣ ಹೇರುವ ಉದ್ದೇಶವೇ ಅವಳ ಶಕ್ತಿಯನ್ನು ಮೊಟಕುಗೊಳಿಸುವುದು. ಈ ನಿಯಂತ್ರಣ ಹೇರುವ, ಅವಳ ದೇಹದ ಮೇಲೆ ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಯನ್ನೇ ‘ದೇಹ ರಾಜಕಾರಣ’ ಅಂತ ಹೇಳಬಹುದು. ಈ ರಾಜಕಾರಣಕ್ಕೆ ಪ್ರತಿರೋಧವಾಗಿಯೇ ಮಹಿಳಾ ಚಳವಳಿ ‘ನನ್ನ ದೇಹ ನನ್ನ ಹಕ್ಕು’ ಅಂತ ಸಾರುವ ಅಗತ್ಯ ಬಂದಿರುವುದು. ಆದರೆ, ‘ನನ್ನ ದೇಹ ನನ್ನ ಹಕ್ಕು’ ಅನ್ನುವ ಮಾತು ಬಹಳ ಜನರನ್ನು ತತ್ತರಿಸುವಂತೆ ಮಾಡುತ್ತದೆ. ಮಹಿಳಾ ಪರವಾದ ಚಿಂತನೆಗಳನ್ನು ಮೈಗೂಡಿಸಿಕೊಂಡವರಲ್ಲೂ ಅನೇಕರಿಗೆ ಈ ಮಾತನ್ನು ಜೀರ್ಣಿಸಿಕೊಳ್ಳಲು ಕಷ್ಟವಾಗುತ್ತದೆ. ದೇಹದ ಮೇಲೆ ಹಕ್ಕು ಅಂದ ತಕ್ಷಣ ಏನೇನು ಕಲ್ಪನೆಗಳು ಮನಸ್ಸಿಗೆ ಬರುತ್ತವೋ ಗೊತ್ತಿಲ್ಲ. ಆದರೆ, ಏನೋ ಅನಾಹುತ ಆದಂತೆ ಚಡಪಡಿಸುತ್ತಾರೆ.

ಹುಟ್ಟಿನಿಂದ ಹಿಡಿದು ಸಾಯುವವರೆಗೂ ಪ್ರತೀ ಹಂತದಲ್ಲಿ ಹೆಣ್ಣಿನ ದೇಹದ ಮೇಲೆ ಹೇಗೆ ಅಧಿಕಾರ ಸ್ಥಾಪಿಸಲಾಗಿದೆ ಎಂಬುದಕ್ಕೆ ಅದೆಷ್ಟೋ ಸಾಕ್ಷಿಗಳು ಇವೆ. ‘ಮುಟ್ಟು’ ಅನ್ನುವುದು ಪ್ರಕೃತಿ ಸಹಜ ಒಂದು ಕ್ರಿಯೆ, ಸೃಷ್ಟಿಗೆ ಪೂರಕವಾದ ಕ್ರಿಯೆ. ಅಂದರೆ, ಅದೊಂದು ಶಕ್ತಿಯ ಸಂಕೇತ. ಹೆಣ್ಣಿನ ದೇಹದಲ್ಲಿ ನಡೆವ ಈ ಕ್ರಿಯೆಯನ್ನು ಅಸ್ಪೃಶ್ಯವಾಗಿಸಿರುವುದು ಯಾಕೆ? ದೇವರದೇ ಸೃಷ್ಟಿಯಾದರೆ ಅದು ಅಪವಿತ್ರ ಅನಿಸಿಕೊಂಡಿದ್ದು ಯಾಕೆ? ಆ ಹೊತ್ತಿನಲ್ಲಿ ಹೊರಗೆ ಕೂರಿಸುವುದು, ಕೆಲವು ಸಮುದಾಯಗಳಲ್ಲಿ ಊರ ಹೊರಗೆ ಕೂರಿಸುವುದು ಇತ್ಯಾದಿ ಪರಿಪಾಠಗಳು ಯಾಕೆ? ಆ ಹೊತ್ತಿನಲ್ಲಿ ಅವಳಿಗೆ ಒಂದಿಷ್ಟು ವಿಶ್ರಾಂತಿ, ಒಂದಿಷ್ಟು ಗಮನ, ಒಂದಿಷ್ಟು ಅಕ್ಕರೆ, ಸ್ವಚ್ಛತೆ ಬೇಕಾಗಿರುವುದು. ಇದನ್ನೆಲ್ಲ ಬಿಟ್ಟು ದೇಹದ ಮೇಲೆ ದಂಡನೆ ಯಾಕೆ?

ಈ ಆಡಿಯೊ ಕೇಳಿದ್ದೀರಾ?: ಮೈಕ್ರೋಸ್ಕೋಪು | ಹೆಣ್ಣು-ಗಂಡಿನ ಕುರಿತು ಸಿಜೆಐ ಹೇಳಿದ ಮಾತು ಮತ್ತು ಬಯಾಲಜಿ

ಮದುವೆಗೆ ಮೊದಲು ‘ಕನ್ಯತ್ವ ಪರೀಕ್ಷೆ’ ಮಾಡಿಸುವ ಪರಿಪಾಠ ವಿದ್ಯಾವಂತರ ನಡುವೆಯೂ ಇದೆ. ಅವಳ ದೇಹ ಪವಿತ್ರವಾಗಿ ಇದೆಯೇ ಎಂದು ತಿಳಿದುಕೊಳ್ಳುವ ಕುತೂಹಲ ಯಾಕೆ? ಇದಕ್ಕೆ ಪ್ರತಿಯಾಗಿ ಅವನ ದೇಹದ ಪಾವಿತ್ರ್ಯ ಅಳೆಯಬೇಕು ಅನ್ನುವ ಯೋಚನೆ ಕೂಡ ಯಾಕೆ ಬರುವುದಿಲ್ಲ. ಈ ‘ಶೀಲ’ ಅನ್ನುವ ವಿಚಾರ ಹೆಣ್ಣು ದೇಹಕ್ಕೆ ಯಾಕೆ ಅಂಟಿಕೊಂಡಿದೆ? ಅವಳು ಹಾಳಾಗುವುದು, ಕೆಟ್ಟುಹೋಗುವುದು, ಶೀಲ ಕಳೆದುಕೊಳ್ಳುವುದು ಅಂದರೆ ಏನು? ಅವನ ದೇಹ ಇವೆಲ್ಲಕ್ಕೂ ಅತೀತವೇ? ಸದಾ ಪವಿತ್ರವೇ? ಲೈಂಗಿಕ ಕಿರುಕುಳ, ಅತ್ಯಾಚಾರಗಳ ಸಂದರ್ಭಗಳಲ್ಲಿ ತಾವು ಮಾಡದ ತಪ್ಪಿಗೆ ತಮ್ಮ ‘ಮರ್ಯಾದೆ’ ಹೋಗುತ್ತದೆ ಎಂಬ ಭಯ, ಆತಂಕ ಸೃಷ್ಟಿಸಿದ್ದು ಎಂತಹ ವಿಪರ್ಯಾಸ!

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಗಂಡ ಹೆಂಡತಿಗೆ ಹೊಡೆಯಬಹುದು ಎಂಬ ಅಧಿಕಾರ ಹೇಗೆ ಬಂತು? ಅವಳ ದೇಹದ ಮೇಲೆ ನಡೆಸುವ ಹಿಂಸೆಗೂ ಬೇಕಾದಷ್ಟು ಸಮರ್ಥನೆಗಳನ್ನು ಈ ವ್ಯವಸ್ಥೆ ಕೊಡುತ್ತದೆ. ಅವಳ ದೇಹ ಈ ಹಿಂಸೆ, ದೌರ್ಜನ್ಯಗಳನ್ನು ಸಹಿಸಬೇಕು ಎಂಬ ನಿರೀಕ್ಷೆಯೂ ಅವಳ ಮೇಲಿದೆ. ಇದು ಯಾವ ನ್ಯಾಯ?

ಅವಳು ಎಷ್ಟು ಹೆರಬೇಕು, ಯಾವಾಗ ಹೆರಬೇಕು, ಯಾರನ್ನು ಹೆರಬೇಕು ಅನ್ನುವುದು ಅವಳ ಆಯ್ಕೆಯಲ್ಲ. ಅದು ಅವಳ ಕುಟುಂಬ ಮಾತ್ರವಲ್ಲ ಪ್ರಭುತ್ವ ಕೂಡ ನಿರ್ಣಯ ಮಾಡಬಹುದು! ಹೆರದೇಹೋದರೆ ಅವಳು ಬಂಜೆ; ಆಮೇಲೆ, ಹೆಣ್ಣೇ ಹೆತ್ತರೂ ಕೂಡ ಅದು ಬಂಜೆತನಕ್ಕೆ ಸಮಾನ. ವಂಶ ಉದ್ಧಾರಕ್ಕೆ ಗಂಡು ಮಗುವನ್ನೇ ಅವಳು ಹೆರಬೇಕು. ಹೆಣ್ಣುಮಗುವೇ, ಗಂಡುಮಗುವೇ ಹುಟ್ಟಬೇಕು ಅನ್ನುವ ವಿಚಾರವನ್ನು ಯಾರೂ ನಿರ್ಧಾರ ಮಾಡುವುದಕ್ಕೆ ಆಗುವುದಿಲ್ಲ ಎಂಬ ಸರಳ ಸತ್ಯವನ್ನು ಅರಿಯದೆ, ಅವಳ ಮೇಲೆ-ಅವಳ ದೇಹದ ಮೇಲೆ ಹಾಕುವ ಒತ್ತಡದ ಅರ್ಥವೇನು? ಲಿಂಗ ನಿರ್ಧಾರ ಆಗುವ ಅಂಶ ಗಂಡಿನ ದೇಹದಲ್ಲಿ ಇರುವುದು, ಅವನು ‘ವೈ’ ಕ್ರೊಮೊಸೋಮ್ ದಾಟಿಸಿದರೆ ಮಾತ್ರ ಗಂಡುಮಗು ಆಗುವುದು ಎಂಬುದು ವೈಜ್ಞಾನಿಕ ಸತ್ಯವಾಗಿದ್ದರೂ ಹೆಣ್ಣು ಹೆರುವ ಮಹಿಳೆಯರು ಯಾಕೆ ಕಿರುಕುಳ ಅನುಭವಿಸಬೇಕು. “ನೀವು ಯಾಕೆ ವೈ ಕ್ರೊಮೋಸೋಮ್ ಕೊಟ್ಟಿಲ್ಲ?” ಅಂತ ಗಂಡಸರನ್ನು ಯಾಕೆ ಪ್ರಶ್ನಿಸುವುದಿಲ್ಲ? “ಗಂಡುಮಗು ನೀಡದಿದ್ದರೆ ಹುಡುಗಿಗೆ ಬೇರೆ ಮದುವೆ ಮಾಡುತ್ತೇವೆ,” ಅಂತ ಯಾಕೆ ಯಾರೂ ಹೇಳುವುದಿಲ್ಲ? “ಹೀಗೆ ಆಪಾದನೆ ಹೊರಿಸಿದರೆ ಅವನು ಪಾಪ ಏನು ಮಾಡಬಲ್ಲ, ಇದು ಅವನ ಕೈಯಲ್ಲಿ ಇದೆಯೇ?” ಎಂಬುದು ಹೌದಾದರೆ, ಅದು ಅವಳಿಗೂ ಅಷ್ಟೇ ಸಹಜವಾಗಿ ಅನ್ವಯಿಸುತ್ತದೆ ತಾನೇ?

ದೇಹ
ಸಾಂದರ್ಭಿಕ ಚಿತ್ರ | ಕೃಪೆ: ನಾರ್ಬರ್ಟ್ ಸೆಲಿಯರ್

“ನಿನ್ನ ಹೊಟ್ಟೆಯಲ್ಲಿ ಬೆಳೆಯುತ್ತಿರುವ ‘ನನ್ನ’ ಮಗುವನ್ನು ಚೆನ್ನಾಗಿ ನೋಡಿಕೋ,” – ಇಂತಹ ಮಾತುಗಳು ಅಲ್ಲಲ್ಲಿ ಕೇಳಿಬರುತ್ತವೆ. “ಅದು ನಮ್ಮ ವಂಶದ ಕುಡಿ, ಅದರ ಬಗ್ಗೆ ನಾವು ಹೇಳಿದ್ದು ನಡೆಯಬೇಕು,” ಅಂತ ಗಂಡಿನ ಕುಟುಂಬದವರು ಅಧಿಕಾರ ಸ್ಥಾಪನೆ ಮಾಡುವುದು ಕೂಡ ಸಾಮಾನ್ಯವಾದ ಸಂಗತಿ. ಯಾಕೆ ಹೀಗೆ? ಆ ಮಗುವಿನ ಹುಟ್ಟಿನಲ್ಲಿ ಇಬ್ಬರೂ ಮುಖ್ಯವೇ ತಾನೇ? ಗಂಡಿನ ದೇಹದ ವೀರ್ಯಾಣು, ಹೆಣ್ಣಿನ ದೇಹದ ಅಂಡಾಣು ಸೇರಿ ತಾನೇ ಮಗು ರೂಪುಗೊಳ್ಳುವುದು? ಆದರೆ, ಅಷ್ಟಾದ ಮೇಲೆ ಮಗು ಬೆಳೆಯುವುದು ಅವಳ ಗರ್ಭಕೋಶದಲ್ಲಿ. ದೇಹ ಅವಳದ್ದು, ರಕ್ತ-ಮಾಂಸ ಅವಳದ್ದು, ನೋವುಂಡು ಹೆರುವುದು ಅವಳು, ಮಗು ಕುಡಿಯುವುದು ಅವಳ ದೇಹದಲ್ಲಿ ಉತ್ಪತ್ತಿಯಾದ ಹಾಲು. ಅಂದರೆ, ಮಗುವಿನ ಹುಟ್ಟಿನಲ್ಲಿ ಅವಳ ಪಾಲೇ ಹೆಚ್ಚಿನದು ತಾನೇ? ಆದರೂ ಅದು ‘ಅವಳ ಮಗು’ ಅಂತ ಅನಿಸಿಕೊಳ್ಳುವುದಕ್ಕಿಂತ ಹೆಚ್ಚಾಗಿ ‘ಅವನ ಮಗು’ ಆಗುತ್ತದೆ. ‘ಗರ್ಭ ದಾನ’ ಎಂಬ ಪರಿಕಲ್ಪನೆಯೂ ಇದಕ್ಕೆ ಪೂರಕವಾಗಿಯೇ ಇದೆ. ಅಷ್ಟರ ಮಟ್ಟಿಗೆ ಅವಳ ದೇಹದಲ್ಲಿ ನಡೆಯುವ ಜೈವಿಕ ಕ್ರಿಯೆಗೂ ಅವನು ವಾರಸುದಾರನಾಗುತ್ತಾನೆ. ಅದಕ್ಕಾಗಿಯೇ ‘ಅವನು’ ಯಾರೆಂದು ಗೊತ್ತಿರದೆ ಹುಟ್ಟುವ ಮಗುವಿಗೆ ಈ ಪ್ರಪಂಚದಲ್ಲಿ ಘನತೆಯ ಬದುಕು ಸಿಗುವುದಿಲ್ಲ.

ಕುಟುಂಬ ಯೋಜನೆಯ ವಿಚಾರಕ್ಕೆ ಬಂದರೂ ಅಷ್ಟೆಯೇ. ಅದರ ಎಲ್ಲ ಕ್ರಿಯೆ-ಪ್ರಕ್ರಿಯೆಗಳು ಅವಳ ದೇಹದ ಮೇಲೆಯೇ. ಪ್ರಯೋಗಗಳು ಕೂಡ ಬಡ ಹೆಣ್ಣುಮಕ್ಕಳ ದೇಹದ ಮೇಲೆಯೇ. ಜನನ ನಿಯಂತ್ರಣದ ಶಸ್ತ್ರಚಿಕಿತ್ಸೆಯನ್ನು ಮಾಡಿಸಿಕೊಳ್ಳುವುದು ಸಾಧಾರಣವಾಗಿ ಹೆಣ್ಣುಮಕ್ಕಳೇ. ಪುರುಷರು ಮಾಡಿಸಿಕೊಂಡರೆ ಅವರು ದುರ್ಬಲರಾಗುತ್ತಾರೆ, ದುಡಿಮೆಗೆ ಕಷ್ಟವಾಗುತ್ತದೆ ಎಂಬಂಥ ಸಮರ್ಥನೆಗಳು ಬೇಕಾದಷ್ಟು ಕೇಳಿಬರುತ್ತವೆ. ಅಂತಹ ಸಮಸ್ಯೆ ಹೆಣ್ಣಿಗೆ ಆಗುವುದಿಲ್ಲ ಅಂತ ಇದರ ಅರ್ಥವೇ? ಅವಳಿಗೆ ಸಮಸ್ಯೆ ಆದರೂ ಆಗಲಿ ಎಂಬ ಧೋರಣೆಯೇ? ಅವಳ ದುಡಿಮೆಗೆ ಕೊಡುವ ಮೌಲ್ಯವೇ ಅಷ್ಟೆಯೇ? ಇಲ್ಲೂ ಹೆಣ್ಣಿನ ದೇಹದ ಬಗ್ಗೆ ಇರುವ ನಿರ್ಲಕ್ಷ್ಯ ಸ್ಪಷ್ಟವಾಗಿ ಗೋಚರವಾಗುತ್ತದೆ. ಕಾಂಡೋಮ್ ವಿಷಯಕ್ಕೆ ಬಂದರೂ ಅದರ ಬಳಕೆಯ ಅಗತ್ಯ ಇರುವಾಗ ಮಹಿಳೆಯರಿಗೆ ಅದನ್ನು ಖಚಿತವಾಗಿ ಬಳಸುವಂತೆ ನಿಗಾ ವಹಿಸುವುದಕ್ಕೆ ಆಗುವುದಿಲ್ಲ. ಎಷ್ಟೋ ಮಂದಿ ಪುರುಷರು ಕಾಂಡೋಮ್ ಜೊತೆಗೆ ಸಿಗುವ ದೈಹಿಕ ಸುಖ ತೃಪ್ತಿಕರವಲ್ಲ ಎಂಬ ಅಭಿಪ್ರಾಯ ಹೊಂದಿದ್ದು, ಅವರನ್ನು ಒಪ್ಪಿಸುವುದು ಸವಾಲಿನ ಕೆಲಸವೇ ಆಗುತ್ತದೆ.

ಈ ಆಡಿಯೊ ಕೇಳಿದ್ದೀರಾ?: ಹಳ್ಳಿ ದಾರಿ | ತಲೆ ಎತ್ತಿ ನಡೆದ ಹಳ್ಳಿಯ ಮಹಿಳೆಯರನ್ನು ಸಾಲದ ಸುಳಿಗೆ ಸಿಲುಕಿಸಿ ಮಕಾಡೆ ಬೀಳಿಸಿದ ದುರಂತ ಕತೆ

ಇವೆಲ್ಲ ಮತ್ತೆ-ಮತ್ತೆ ಕೇಳಿಕೊಳ್ಳಬೇಕಾದ ಪ್ರಶ್ನೆಗಳು. ತೆರೆದ ಮನಸ್ಸಿನಿಂದ ಪ್ರಶ್ನೆಗಳನ್ನು ಕೇಳಿಕೊಂಡರೆ ಸಾಕು ಇದರ ಹಿಂದಿನ ಅಧಿಕಾರ ರಾಜಕೀಯ ಸ್ಪಷ್ಟವಾಗುತ್ತದೆ. ಇವೆಲ್ಲವೂ ಅವಳ ದೇಹವನ್ನು ಹದ್ದುಬಸ್ತಿನಲ್ಲಿ ಇಡುವ, ಆ ಮೂಲಕ ಅವಳ ಶಕ್ತಿ ಕುಂದಿಸುವ ವ್ಯವಸ್ಥೆ ಅಲ್ಲದೆ ಮತ್ತೇನು? ಇಷ್ಟೆಲ್ಲ ಆದ ಮೇಲೆ, ಅವಳು ‘ನನ್ನ ದೇಹ ನನ್ನ ಹಕ್ಕು’ ಅನ್ನುವುದರಲ್ಲಿ ತಪ್ಪೇನು?

ಗೆಳತಿಯೊಬ್ಬರು ಕೇಳಿದರು – “ನಮ್ಮ ದೇಹದಲ್ಲಿ ಎಷ್ಟು ರಂಧ್ರಗಳಿವೆ? ಸಹಜವಾಗಿಯೇ ಒಂಬತ್ತು ಅನ್ನುತ್ತೇವೆ. ಆದರೆ, ಹೆಣ್ಣಿನ ದೇಹದಲ್ಲಿ ಹತ್ತು ರಂಧ್ರಗಳಿವೆ ಎಂಬುದನ್ನು ಮರೆಯುತ್ತೇವೆ. ನಮ್ಮ ದೇಹದ ಅರಿವೂ ನಮಗಿಲ್ಲದೆ ಹೋದಾಗ ಹಕ್ಕು ಪಡೆಯಲು ಹೇಗೆ ಸಾಧ್ಯ?”

ಮುಖ್ಯ ಚಿತ್ರ – ಸಾಂದರ್ಭಿಕ | ಕೃಪೆ: ನಿಯೊ ಸಾಹ

ಪೋಸ್ಟ್ ಹಂಚಿಕೊಳ್ಳಿ:

ವಾಣಿ ಪೆರಿಯೋಡಿ
ವಾಣಿ ಪೆರಿಯೋಡಿ
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದವರು. ಸಾಮಾಜಿಕ ಕಾರ್ಯಕರ್ತೆ. 'ತರಿಕಿಟ ಕಲಾ ಕಮ್ಮಟ' ಎಂಬ ಸಾಂಸ್ಕೃತಿಕ ವೇದಿಕೆಯ ಉಸ್ತುವಾರಿ. ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರುದ್ಧ ಒಕ್ಕೂಟದ ಸಕ್ರಿಯ ಸದಸ್ಯೆ. ಲಿಂಗ ಸಂವೇದನೆ, ಸಂವಹನ ಕೌಶಲ್ಯ ಇತ್ಯಾದಿ ವಿಚಾರಗಳ ಮೇಲೆ ತರಬೇತಿ ನಡೆಸುವುದು ಇಷ್ಟದ ಕೆಲಸ.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಹೊಸಿಲ ಒಳಗೆ-ಹೊರಗೆ | ಬ್ರಾ… ಪ್ರತಿಭಟನೆ ಮತ್ತು ಬಿಡುಗಡೆಯ ಭಾವ

(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ ಅಥವಾ...

ಮೈಕ್ರೋಸ್ಕೋಪು | ಅಯೋಧ್ಯೆ ರಾಮ ಮಂದಿರದಲ್ಲಿ ‘ವಿಜ್ಞಾನ’ ಬಳಕೆ; ನಿಜಕ್ಕೂ ದೇಶದಲ್ಲಿ ಇದೇ ಮೊದಲಾ?

(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ ಅಥವಾ...

ಹೊಸಿಲ ಒಳಗೆ-ಹೊರಗೆ | ನೀವು ಕೊಕ್ಕರೆಯಾದರೂ ಸರಿಯಲ್ಲ, ನರಿಯಾದರೂ ಸರಿಯಲ್ಲ; ಯಾಕೆಂದರೆ…

(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ ಅಥವಾ...