ಭಾರತ-ಪಾಕಿಸ್ತಾನ ನಡುವಿನ ಸೂಪರ್-4 ಹಂತದ ಮೂರನೇ ಪಂದ್ಯವನ್ನು ಮಳೆಯ ಕಾರಣ ಸೋಮವಾರಕ್ಕೆ ಮುಂದೂಡಲಾಗಿದೆ.
ಕೊಲಂಬೊದ ಆರ್. ಪ್ರೇಮದಾಸ ಮೈದಾನದಲ್ಲಿ ಇಂದು ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಪಾಕಿಸ್ತಾನ್ ತಂಡದ ನಾಯಕ ಬಾಬರ್ ಆಝಂ ಬೌಲಿಂಗ್ ಆಯ್ದುಕೊಂಡಿದ್ದರು.
ಟೀಮ್ ಇಂಡಿಯಾ 24.1 ಓವರ್ಗಳಲ್ಲಿ 2 ವಿಕೆಟ್ ಕಳೆದುಕೊಂಡು 147 ರನ್ ಕಲೆಹಾಕಿತ್ತು. ಈ ವೇಳೆ ಮಳೆ ಬಂದ ಕಾರಣ ಪಂದ್ಯವನ್ನು ಕೆಲಕಾಲ ಸ್ಥಗಿತಗೊಳಿಸಲಾಗಿತ್ತು. ಆ ಬಳಿಕ ಸ್ವಲ್ಪ ಹೊತ್ತು ಮಳೆ ನಿಂತರೂ, ಪಂದ್ಯ ಆರಂಭಕ್ಕೆ ಸಿದ್ಧತೆ ನಡೆಸಲಾಗಿತ್ತು. ಈ ವೇಳೆ ಮತ್ತೆ ವಿಪರೀತ ಮಳೆ ಸುರಿದ ಪರಿಣಾಮ ಪಂದ್ಯವನ್ನು ಸೋಮವಾರಕ್ಕೆ ಮುಂದೂಡಲಾಗಿದೆ.
ಸೋಮವಾರ ಉಭಯ ತಂಡಗಳು 50 ಓವರ್ಗಳ ಪಂದ್ಯವನ್ನಾಡಲಿದೆ. ಈಗಾಗಲೇ 24.1 ಓವರ್ಗಳನ್ನು ಆಡಿರುವ ಟೀಮ್ ಇಂಡಿಯಾ, ಉಳಿದ ಓವರ್ಗಳನ್ನು ಆಡಲಿದೆ. ಮಳೆ ಬಂದಾಗ ಟೀಮ್ ಇಂಡಿಯಾ ಪರವಾಗಿ ವಿರಾಟ್ ಕೊಹ್ಲಿ ಹಾಗೂ ಕೆಎಲ್ ರಾಹುಲ್ ಕ್ರೀಸ್ನಲ್ಲಿದ್ದರು.
ಈಗಾಗಲೇ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ 49 ಎಸೆತಗಳನ್ನು ಎದುರಿಸಿ 4 ಸಿಕ್ಸ್ ಹಾಗೂ 6 ಬೌಂಡರಿಯ ನೆರವಿನಿಂದ 56 ರನ್ ಹಾಗೂ 52 ಎಸೆತಗಳಲ್ಲಿ 10 ಬೌಂಡರಿಯ ನೆರವಿನಿಂದ 58 ರನ್ ಗಳಿಸಿದ್ದ ಶುಭಮನ್ ಗಿಲ್ ಔಟಾಗಿದ್ದಾರೆ. ರೋಹಿತ್ ಶರ್ಮಾ ಶಾದಾಬ್ ಖಾನ್ಗೆ ವಿಕೆಟ್ ಒಪ್ಪಿಸಿದರೆ, ಶುಭಮನ್ ಗಿಲ್ ಶಾಹೀನ್ ಅಫ್ರಿದಿ ಎಸೆತದಲ್ಲಿ ಕ್ಯಾಚಿತ್ತು ಔಟಾಗಿದ್ದರು.
ಅದಕ್ಕೂ ಮೊದಲು ಈ ಜೋಡಿ ಮೊದಲ ವಿಕೆಟ್ಗೆ 16.3 ಓವರ್ಗಳಲ್ಲಿ 121 ರನ್ಗಳ ಜೊತೆಯಾಟ ನೀಡಿದ್ದರು.