‘ಸಮಾನತೆ ಸಾರಿದ ಭೂಮಿ ತಾಯಿ’; ಸವಡಿ ಏರೇಶಿಗೆಮ್ಮನ ಕಾರ್ತಿಕೋತ್ಸವ

Date:

ನಮ್ಮೂರು ಗದಗ ಜಿಲ್ಲೆಯ ರೋಣ ತಾಲೂಕಿನ ಸವಡಿ ಗ್ರಾಮ. ಇತ್ತೀಚೆಗಷ್ಟೇ ಗ್ರಾಮದಲ್ಲಿ ಎರೇಸಿಗೆಮ್ಮನ ಕಾರ್ತಿಕೋತ್ಸವ ನಡೆಯಿತು. ಈ ಕಾರ್ತಿಕೋತ್ಸವದ ಬಗ್ಗೆ ಹೇಳುವದಕ್ಕಿಂತ ಮೊದಲು ಒಂದಿಷ್ಟು ನಮ್ಮ‌ಊರಿನ ಇತಿಹಾಸ, ಪರಂಪರೆ ಹೇಳಿ ಆನಂತರ ಕಾರ್ತಿಕೋತ್ಸವದ ಬಗೆಗೆ ಬರುವೆ…….

ಸವಡಿ ಗ್ರಾಮವು ತನ್ನದೆ ಆದ ಇತಿಹಾಸ, ಪರಂಪರೆಯನ್ನು ತನ್ನೊಳಗೆ ಬಚ್ಚಿಟ್ಟುಕೊಂಡು ನೋಡುಗರ ಕಣ್ಣಿಗೆ ಅಚ್ಚರಿ ಉಂಟುಮಾಡುತ್ತದೆ. ಸೈಯ್ಯಡಿ, ಸೈವಿಡಿ ಎಂದು ಇಲ್ಲಿ ಕಂಡುಬರುವ ಶಾಸನಗಳ ಮೂಲಕ ನಮಗೆ ತಳಿಯಲು ಆಧಾರಗಳಾಗಿವೆ. ಕಿಸುವೊಳಲ ಎಪ್ಪತ್ತು ಪ್ರದೇಶದೊಳಗೆ ಈ ಸೈಯ್ಯಡಿಯು ಒಂದು. ಸೈಯ್ಯಡಿಯ ಬಗೆಗೆ ಹುಡುಕಿದಾಗ ಸೈ ಎನ್ನುವ ರಾಕ್ಷಸನನ್ನು ಶಿವನು ತನ್ನ ಪಾದದ ಅಡಿಯಿಂದ ಸಂಹರಿಸಿದ್ದಾಕ್ಕಾಗಿ ಸೈಯ್ಯಡಿ ಬಂದಿರಬಹುದು ಎಂದು ಪುಸ್ತಕದಲ್ಲಿ ಓದಿದ್ದೆ. ಆದರೆ ನನಗೆ ಸ್ಪಷ್ಟ ಅನಿಸಲಿಲ್ಲ. ನನ್ನೊಳಗೆ ಇನ್ನೂ ಪ್ರಶ್ನೆಯಾಗಿಯೇ ಉಳಿದಿದೆ, ಉತ್ತರ ಸಿಗುವವರೆಗೂ…..

ಈ ಸೈಯ್ಯಡಿಯು ಪ್ರಾಚೀನಕಾಲದಲ್ಲಿ ಅಗ್ರಹಾರವಾಗಿತ್ತೆಂದು ಇಲ್ಲಿರುವ ಶಾಸನದ ಮೂಲಕ ತಿಳಿದುಕೊಳ್ಳಬಹುದು. ಈ ಅಗ್ರಹಾರದಲ್ಲಿ ವೇದ ಉಪನಿಷತ್ತು, ವ್ಯಾಕರಣ ಇನ್ನೂ ಮುಂತಾದ ವಿಷಯಗಳ ಭೋದನೆ ಮಾಡಲಾಗುತ್ತಿತ್ತು. ಇದಕ್ಕಾಗಿಯೇ ದತ್ತಿ ಜಾಗವನ್ನು ಮೀಸಲಾಗಿಡಲಾಗಿತ್ತೆಂದು ಶಾಸನದಲ್ಲಿ ಉಲ್ಲೇಖವಿದೆ. ಹರಿಹರ, ದೊಡ್ಡಲಿಂಗೆಶ್ವರ ದೇವಾಲಯಗಳು ಇಲ್ಲಿ ಕಾಣಸಿಗುತ್ತವೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಸುಮಾರು 9, 10, 11ನೇ ಶತಮಾನದ ಹಳಗನ್ನಡ ಸಾಹಿತ್ಯದ ಕಾಲಘಟ್ಟ. ಚಾಲುಕ್ಯರ ರಾಜ ಜಗದೇಕಮಲ್ಲನ ಆಸ್ಥಾನದಲ್ಲಿ ಸಂಧಿವಿಗ್ರಹಿಯೂ, ಮಹಾ ದಂಡನಾಯಕನೂ ಆಗಿದ್ದನು. ಈತನ ಗುರು ಶಂಕರಭಟ್ಟ. ವಸುಭಾಗಭಟ್ಟನು ಸಂಸ್ಕೃತದಲ್ಲಿ ರಚಿಸಿದ್ದ ‘ಪಂಚತಂತ್ರ’ ಕೃತಿಯನ್ನು ದುರ್ಗಸಿಂಹನು ಕನ್ನಡಕ್ಕೆ ‘ಪಂಚತಂತ್ರ’ ತಂದು ಹೊಸತಾಗಿ ರಚಿಸುವೆನು ಎಂದು ಹೇಳುತ್ತಾನೆ. ಈ ಕೃತಿಯಲ್ಲಿ ಅರಾಜಕೀಯತೆಯಿಂದ ಕೂಡಿದ್ದ ರಾಜನ ಮಂತ್ರಿಮಂಡಲವನ್ನು ಸರಿಪಡಿಸುವದಕ್ಕಾಗಿ ಕಥೆಯೊಳಗೆ ಉಪಕಥೆಗಳನ್ನು ಹೇಳುತ್ತಾನೆ. ಆ ಮೂಲಕ ಅವರನ್ನು ಸರಿ ದಾರಿಯಡೆಗೆ ತರಲು ಯತ್ನಿಸಿರುತ್ತಾನೆ. ಈತ ಸಂಧಿವಿಗ್ರಹಿ ಆಗಿದ್ದಾಗ ‘ಹರಿಹರ’ ದೇವಾಲಯಗಳನ್ನು ನಿರ್ಮಿಸುತ್ತಾನೆ.

ಇದೇ ಹಳೆಗನ್ನಡ ಸಾಹಿತ್ಯ ಕಾಲಘಟ್ಟದಲ್ಲಿಯ 1ನೇಯ ನಾಗವರ್ಮ(990) ಕೂಡ ಸೈಯ್ಯಡಿಯಲ್ಲಿ ಬದುಕಿ ಬಾಳಿದನು ಎನ್ನುವುದಕ್ಕೆ ಅವನೇ ರಚಿಸಿದ “ಕರ್ನಾಟಕ ಕಾದಂಬರಿ” ಕೈತಿಯಲ್ಲಿ ಉಲ್ಲೇಖಿಸಿರುವುದನ್ನು ಕಾಣಬಹುದು. ಇದು ಚಂಪೂ ಕಾವ್ಯದಲ್ಲಿ ರಚನೆಯಾಗಿರುತ್ತದೆ. ಇತನ ಇನ್ನೊಂದು ಕೃತಿ ‘ಛಂದೊಬುಧಿ’ ಶಾಸ್ತ್ರ ಗ್ರಂಥವಾಗಿದೆ.

ಸೈಯಡಿಯಲ್ಲಿಯೇ ಸಿಗುವ ಶಾಸನದ ಲಿಪಿಕಾರ ‘ನಾರಣ’ ನೆಂಬ ಶಾಸನ ಕವಿ ನಮಗೆ ಶಾಸನದಲ್ಲಿ ಉಲ್ಲೇಖಿಸಿರುತ್ತಾನೆ. ಈ ಶಾಸನದಲ್ಲಿ ತ್ರಿಪದಿ ಪದ್ಯ ಇರುತ್ತದೆ. ಹೀಗಾಗಿ ಇತನು ಶಾಸ್ತ್ರ ಸಾಹಿತ್ಯದಲ್ಲಿ ಗ್ರಂಥಗಳನ್ನು ರಚಿಸಿರಬಹುದು ಎಂಬ ಸಂಶಯವನ್ನು ಸಂಶೋಧನೆಗಳ ಮೂಲಕ ಕಂಡುಕೊಳ್ಳಬೇಕಾಗಿದೆ.

14-15ನೇ ಶತಮಾನದಲ್ಲಿ ಕೊಡೆಕಲ್ಲ ಬಸವಣ್ಣನು ಬದುಕಿದವನು. ಇತನ ಮಠ ಇಲ್ಲಿರುವುದನ್ನು ಕಾಣುತ್ತೇವೆ. ಈ ಕೊಡೆಕಲ್ಲ ಬಸವಣ್ಣ ಊರಂದ ಊರಿಗೆ ಹೋಗಿ ‘ಕಾಲಜ್ಞಾನ ವಚನ’ಗಳನ್ನು ಹೇಳುತ್ತಾ ಜನರಲ್ಲಿ ಮುಂದೆ ಆಗು ಹೋಗುಗಳ ಬಗ್ಗೆ ಎಚ್ಚರಿಸುತ್ತಾ ಹೋಗುವುದು ಅವನ ಕಾಯಕ. ಹೀಗೆ ರಚಿಸಿದ ‘ಕಾಲಜ್ಞಾನ ವಚನಗಳ’ ಹಸ್ತಪ್ರತಿಯು ಈ ಮಠದಲ್ಲಿ ಕಾಣುತ್ತೇವೆ. ಅಲ್ಲಿರುವ ಪೂಜಾರಿಗಳು ವರುಷದಲ್ಲಿ ಒಂದು ಬಾರಿ ತೆಗೆದು ಒಂದೋ ಅಥವಾ ಎರಡು ವಚನಗಳನ್ನ ಓದುತ್ತಾರೋ ಇಲ್ಲವೋ ಗೊತ್ತಿಲ್ಲ. ಹೀಗೆ ಮುಚ್ಚಿಟ್ಟ ಈ ಕಾಲಜ್ಞಾನ ವಚನಗಳು ಮುಂದಿನ ಕಾಲಘಟ್ಟದಲ್ಲಿ ಅಳಿದು ಹೋಗುವ ಸಾದ್ಯತೆಗಳಿರುವುದರಿಂದ ಈ ಹಸ್ತಪ್ರತಿಗಳ ಸಂಪಾದನೇಯ ಕಾರ್ಯ ಅಷ್ಟೇ ಅವಶ್ಯಕತೆಯೂ ಇದೆ.

ಪವಾಡ ಪುರುಷನೆಂಬ ಅನ್ವರ್ಥಕನಾಮದಿಂದ ಜನರಿಂದ ಕರೆಯಲ್ಪಡುತ್ತಿದ್ದ ಕುಂಟಜನವರು. ಇವರ ಕಾಲ ಸ್ಪಷ್ಟತೆಯಿಲ್ಲ. ಇವರು ಬರೆದಿರುವ ಹಸ್ತಪ್ರತಿಗಳು ಸಂಗಮೇಶ್ವರ ಮಠದಲ್ಲಿ ಇವೆ ಎಂದು ಜನರು, ಅಲ್ಲಿಯ ಪೂಜಾರಿಗಳು ಹೇಳಿರುವುದನ್ನು ಕೇಳಿರುವೆ. ಅವುಗಳನ್ನು ಪರಿಶೀಲಿಸಿ ಸಂಪಾದಿಸುವ ಅಗತ್ಯತೆಯೂ ಇದೆ.
ಹೀಗೆ ಸೈಯ್ಯಡಿಯ. ಇತಿಹಾಸ ಪರಂಪರೆ ಮತ್ತು ಸಾಂಸ್ಕೃತಿಕ ವೈಭವತೆಯ ಜೊತೆಗೆ ಉತ್ಸವಗಳ ವಿಶೇಷತೆ ಇದೆ.
ಆ ವಿಶೇಷತೆ ಎಂದರೆ ಎರೇಶಿಗೆಮ್ಮನ ಕಾರ್ತಿಕೋತ್ಸವ.

ಮೊದಲು ಎರೇಶಿಗೆಮ್ಮ ಪದದ ಅರ್ಥ ನೋಡೋಣ. ‘ಎರೇ’ ಅಂದ್ರ ಕಪ್ಪು ಭೂಮಿಯನ್ನು ಒಳಗೊಂಡ ಪ್ರದೇಶವೇ ಎರೆಭೂಮಿ ಅಥವಾ ಕಪ್ಪು ಮಣ್ಣನ ಭೂಮಿ. ಈ ಕಪ್ಪು ಮಣ್ಣೆ ಎರೇಶಿಗೆಮ್ಮ. ಇದು ಊರಿಂದ ಸುಮಾರು 5 ಕೀಲೋ ಮೀಟರ್ ದೂರದಲ್ಲಿ ಇರುವ ಗುಡಿಯಷ್ಟೆ. ಇದರ ಹಿನ್ನಲೇ ನೊಡಿದರೆ…. ಇಡೀ ರೈತಕುಲವೇ ನೆಲವನ್ನೇ ನಂಬಿ ಬದುಕು ಕಟ್ಟಿಕೊಂಡಿರುವ ಸಂಗತಿಗಳು ಕಾಣಸಿಗುತ್ತವೆ. ಈ ನೆಲದಲ್ಲಿ ತನ್ನ ಎತ್ತುಗಳಿಂದ ನೆಲದಲ್ಲಿ ಕಷ್ಟಪಟ್ಟು ಉತ್ತಿ ಬಿತ್ತಿ ಬೆಳೆಯನ್ನು ಬೆಳೆಯುತ್ತಾನೆ. ಈ ಬೆಳೆ ಚಿಗುರೊಡೆಯಲು ಮೂಲ ನೆಲವೇ. ಆ ನೆಲಕ್ಕೆ ಯಾವ ಜಾತಿ-ಭೇದ ಇಲ್ಲದೆ ಎಲ್ಲರನ್ನು ಸಮಾನತೆಯ ದೃಷ್ಟಿಯಿಂದ ನೋಡುತ್ತದೆ. ಇಂತ ಸಮಾನತೆ ಸಾರಿದ ಭೂಮಿತಾಯನ್ನ ಗೌರವಿಸುವುದಕ್ಕಾಗಿ ರೈತ ಕುಲವೇ ಎರೇಶಿಗೆಮ್ಮ ಕಾರ್ತಿಕೋತ್ಸವ ಆಚರಿಸುತ್ತಾರೆ.

ಈ ಎರೇಶಿಗೆಮ್ಮನ ಕಾರ್ತಿಕೋತ್ಸವ ಎರಡು ದಿನಗಳ ಹಿಂದಿನ ದಿನ ರೈತರು ಚಕ್ಕಡಿಗಳನ್ನು ಹೂಡಿಕೊಂಡು ಚೊಳಚಗುಡ್ಡಕ್ಕೆ ಹೋಗಿ ‘ಬಾಳಿ ಕಂಬ’ (ಬಾಳೆ ಗಿಡಗಳು) ಚಕ್ಕಡಿಯಲ್ಲಿ ಹೆರಿಕೊಂಡು, ನಾ ಮುಂದು ತಾ ಮುಂದು ಎಂದು ರೈತರು ಎತ್ತುಗಳಿಗೆ ಹುರುಪು ತುಂಬಿ ಚಕ್ಕಡಿ ಓಡಿಸಿಕೊಂಡು ಬರುತ್ತಾರೆ. ಮರುದಿನ ಬಾಳೆ ಕಂಬ ಹೊತ್ತ ಚಕ್ಕಡಿಗಳನ್ನ ಊರಿನ ತುಂಬೆಲ್ಲ ಮೆರವಣಿಗೆ ಮಾಡಿ ಸಂಗಮೇಶ್ವರ ಮಠಕ್ಕೆ ಬಂದು ಪೂಜೆ ಸಲ್ಲಿಸಿ, ಊರಿನ ಎಲ್ಲ ಗುಡಿಗಳಿಗೆ ಬಾಳೆ ಕಂಬ ಕಳುಹಿಸುತ್ತಾರೆ.

ಎರೇಶಿಗೆಮ್ಮನ ಕಾರ್ತಿಕೋತ್ಸವ ಹಿಂದಿನ ದಿನ ದೂರದ ಊರುಗಳಿಂದ ಬೀಗರು ಬಿಜ್ಜರು ನಮ್ಮೂರಿನ ಕಡೆ ಪಯಣ ಬೆಳೆಸಿರುತ್ತಾರೆ. ಎತ್ತು, ಚಕ್ಕಡಿ ಗಾಡಿಗಳನ್ನ ಸ್ವಚ್ಚಗೊಳಿಸುತ್ತಾರೆ. ಈಡೀ ರಾತ್ರಿ ಹೇಳೋಕೆ ಆಗದಷ್ಟು ತಹರೆವಾರಿ ಸಿಹಿ-ಕಾರ ತಿನಸುಗಳನ್ನು ತಯಾರಿ ಮಾಡುತ್ತಾರೆ. ಕಾರ್ತಿಕೋತ್ಸವ ದಿನ ಮಸ್ತಾಗಿ ತಯಾರಾಗ್ತಾರೆ ಅದರಲ್ಲೂ ಹುಡುಗುರು, ಹುಡಿಗಿಯರಂತು ಇನ್ನೂ ಜೋರ ತಯಾರಿ ಆಗಿರ್ತಾರ. ಹೆಣ್ಮಕ್ಕಳು ತಯಾರಿಸಿದ ಅಡುಗೆಯನ್ನ ದೊಡ್ಡ ಬುಟ್ಟಿಯಲ್ಲಿ ಇಟ್ಟು, ಬಿಳಿ ಬಟ್ಟೆಯಲ್ಲಿ ಬುತ್ತಿ ಕಟ್ಟುತ್ತಾರೆ. ಹೆಣ್ಣುಮಕ್ಕಳು ಕಟ್ಟದ ಬುತ್ತಿಯನ್ನು ತಲೆಯ ಮೇಲೆ ಇಟ್ಟುಕೊಂಡು ಕೊಳ್ಳಾರಿಬಂಡಿ ಹತ್ತಿ ಗಿಲ್ ಗಿಲ್ ಅಂತ ಚಕ್ಕಡಿ, ಟ್ರಾಕ್ಟರ್ ಗಾಡಿಗಳ ಮೂಲಕ, ನಡೆದುಕೊಂಡು ಬರುವಾಗ ಈಡೀ ಕಪ್ಪು ನೆಲದ ತುಂಬ ಹುಲುಸಾಗಿ ಬೆಳೆದ ಬೆಳೆ ದಾರಿಯಲ್ಲಿ ಕಾಣಸಿಗುತ್ತದೆ. ಈ ಕಾರ್ತಿಕೋತ್ಸವಕ್ಕೆ ಸುತ್ತ ಹತ್ತಾರು ಹಳ್ಳಿ ಜನರು ಬರುತ್ತಾರೆ.

ಎರೇಶಿಗೆಮ್ಮಗ ಬಂದ ನಂತರ ಬುತ್ತಿ ಬಿಚ್ಚಿ ಎರೇಶಿಗೆಮ್ಮನ ಗುಡಿಗೆ ಹೋಗಿ ಎಡಿ ಹಿಡಿದು, ದೀಪಬೆಳಗಿ ಬಂದ ಮೇಲೆ ಊಟ ಚಾಲು ಆಗುತ್ತ. ಒಂದು ಮಾತು ಅವಾಗ್ಲೆ ಹೇಳಿದ್ದೆ ಏನೇನ್ ಅಡುಗೆ ಮಾಡಿದ್ದಾರ ಹೇಳೋಕೆ ಆಗಲ್ಲ ಅಂತ. ಈಗ ಹೇಳ್ತಿನ. ಹೆಣ್ಮಕ್ಕಳು ಕಟ್ಟಿದ ಬುತ್ತಿನ ಬಿಚ್ಚಿ ಗಂಗಳದಾಗ ಬಡಿಸ್ತಾರ. ಏನೇನ್ ಬಡಿಸ್ತಾರಂದ್ರ… ಕಡಕ್ ರೊಟ್ಟಿ, ಚಪಾತಿ, ಬದನೆಯಕಾಯಿಯ ಹೆನ್ಗಾಯಿ ಪಲ್ಯ, ಹೆಸರಕಾಳಿನ ಪಲ್ಯ, ಶೇಂಗಾ ಚಟ್ನಿ, ಗುರಳ್ ಚಟ್ನಿ, ಮೊಸರು, ಮಸರ್ಗಾಯಿ, ಸಂಡಿಗೆ ಹಪ್ಪಳ, ಬಜಿ, ಪಾಪಡೆ, ಜೊತೆಗೆ ಕರ್ಚಿ ಕಡುಬು, ಹುನಗಡುಬು, ಶೇಂಗಾ ಹೋಳಿಗೆ, ಎಳ್ ಹೋಳಿಗೆ, ಎಣ್ಣಿಹೋಳಿಗೆ, ತುಪ್ಪ ಎಲ್ಲ ಸಾಲಿಡ್ದ ಗಂಗಾಳದಾಗ ಬಡಿಸಿ, ಸಾಲಿಡ್ದ ಕುಂತವರಿಗೆ ಕೊಡ್ತಾರ. ಸರ್ವಜನಾಂಗವನ್ನು ಸ್ವಾಗತಿಸುತ್ತ ಸ್ವರ್ಗಬೋಜನ ಖುಷಿಯಿಂದ ಮಾಡುತ್ತಾರೆ.

ಈ ಸುದ್ದಿ ಓದಿದ್ದೀರಾ?: ಮಹಿಳೆ ವಿವಸ್ತ್ರ-ಹಲ್ಲೆ ಪ್ರಕರಣ: ಮೂಕರಂತೆ ನಿಂತಿದ್ದ ಜನರಿಗೆ ದಂಡ ವಿಧಿಸಲು ಹೈಕೋರ್ಟ್ ತಾಕೀತು

ಊಟದ ನಂತರ ಜಾತ್ರಿಗೆ ಹೋಗ್ತಾರ. ಹಿಂಗ್ ಅಡ್ಯಾಡು ಮುಂದ ಹುಡುಗುರು ಹುಡುಗಿಯರನ್ನ, ಹುಡಿಗಿಯರು ಹುಡುಗರನ್ನ ವಾರಿಗಣ್ಣಿಲೇ ಕಣ್ ಮಿಟಿಗಿಸಿ, ಮುಗುಳ್ನಕ್ಕು ಹೋಗ್ತಿರ್ತಾರ. ಯಾವತ್ತು ನೋಡ ಸ್ನೇಹಿತರು ಅಚಾನಕ್ಕ ಭೇಟಿ ಆಗಿ ಖುಷಿಯಾಗಿ ಮಾತಾಡ್ತಾರ. ಕೈಯಲ್ಲಿ ಕಬ್ಬು ಹಿಡಿದು, ಸಂಜಿಕಡೆ ಚಕ್ಕಡಿ ಟ್ರಾಕ್ಟರ್ ಹಿಡಿದು ಮನಿಕಡೆ ಸಾಲು ಹಿಡಿದು ಮನೆ ಕಡೆ ಮುಖ ಮಾಡಿರುತ್ತಾರೆ.

ಜಾನಪದ ಆಚರಣೆಯಲ್ಲಿ ಇಂತಹ ಕಾರ್ತಿಕೋತ್ಸವಗಳ್ಲಿ ಜೀವಂತಕೆ ಗ್ರಾಮೀಣ ಭಾಗದಲ್ಲಿ ಕಾಣಸಿಗುತ್ತದೆ. ಗ್ರಾಮೀಣ ಪ್ರದೇಶದ ಜನರ ಬದುಕಿನೊಂದಿಗೆ ಸಮ್ಮೀಳಿತವಾಗಿ ಸಾಗುತ್ತ ಬಂದಿವೆ. ಇಲ್ಲಿ ಯಾವುದೇ ಮೂಢ ನಂಬಿಕೆಗಳಿಗೆ ಆಸ್ಪದವಿಲ್ಲದೇ, ತಾವು ಆಚರಸಿಕೊಂಡು ಬಂದ ಬದುಕಿನ ನೆಲಮೂಲಗಳ ಸಂಭ್ರಮವೆ, ನಂಬಿಕೆ, ಸಾಂಪ್ರದಾಯಿಕ ಹಬ್ಬ ಉತ್ಸವಗಳಾಗಿ ಮಾರ್ಪಟ್ಟಿರುವುದು ಹಿಂದಿನಿಂದ ಬಂದಂತಹ ಪರಂಪರೆ ರೂಢಿ. ಇಂತಹ ಹಬ್ಬ ಉತ್ಸವಗಳು ನಮ್ಮ ಉತ್ತರ ಕರ್ನಾಟಕ ಗ್ರಾಮೀಣ ಪ್ರದೇಶಗಳಲ್ಲಿ ಇವತ್ತಿಗೂ ನೋಡಲು ಸಿಗುತ್ತವೆ.

ಪೋಸ್ಟ್ ಹಂಚಿಕೊಳ್ಳಿ:

ಶರಣಪ್ಪ ಎಚ್ ಸಂಗನಾಳ
ಶರಣಪ್ಪ ಎಚ್ ಸಂಗನಾಳ
ಗದಗ ಜಿಲ್ಲೆಯ ರೋಣ ತಾಲೂಕಿನ ಸವಡಿ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ. ಧ್ವನಿ ಶೈಕ್ಷಣಿಕ ಸಂಪನ್ಮೂಲ ಕೇಂದ್ರದಲ್ಲಿ ಒಂದಷ್ಟು ಕಾಲ ಕೆಲಸ. ಸದ್ಯ 'ಈ ದಿನ.ಕಾಮ್'ನಲ್ಲಿ ಮೀಡಿಯಾ ಕೋಆರ್ಡಿನೇಟರ್. ಓದು, ಪಕ್ಷಿ ವೀಕ್ಷಣೆ, ಕೃಷಿಯಲ್ಲಿ ಆಸಕ್ತಿ.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೆಂಗಳೂರು | ಮತಗಟ್ಟೆ ಬಳಿ ಮಹಿಳೆಗೆ ಹೃದಯಾಘಾತ; ಮತದಾನ ಮಾಡಲು ಬಂದ ವೈದ್ಯನಿಂದ ಜೀವ ರಕ್ಷಣೆ

ಬೆಂಗಳೂರಿನ ಜೆ ಪಿ ನಗರದಲ್ಲಿರುವ ಜಂಬೂ ಸವಾರಿ ದಿನ್ನೆ ಮತಗಟ್ಟೆಯಲ್ಲಿ ಮತದಾನ...

ಚಿತ್ರದುರ್ಗ | ಲೋಕಸಭಾ ಚುನಾವಣೆ; ಕರ್ತವ್ಯದಲ್ಲಿದ್ದ ಮಹಿಳಾ ಸಿಬ್ಬಂದಿ ಸಾವು

ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ಹೊಟ್ಟೆಪ್ಪನಹಳ್ಳಿ ಮತಗಟ್ಟೆಯಲ್ಲಿ ಚುನಾವಣಾ ಕರ್ತವ್ಯದಲ್ಲಿದ್ದ ಮಹಿಳಾ...

ಶಿವಮೊಗ್ಗ | ಬಂಗಾರಪ್ಪನವರು ನಮ್ಮ ಮನೆಯ ನಂದಾದೀಪ; ತಿಮ್ಲಾಪುರದ ಮಹಿಳೆಯರು ಸಂತಸ

"ಬಂಗಾರಪ್ಪನವರು ನಮ್ಮ ಮನೆಯ ನಂದಾದೀಪ" ಯಾವ ಸರ್ಕಾರ ಏನೇ ಮಾಡಿದರೂ 32...

ಕೋಲಾರ | ಮೂಲಭೂತ ಸೌಕರ್ಯ ಕೊರತೆ : ಮತದಾನ ಬಹಿಷ್ಕರಿಸಿದ ಗ್ರಾಮಸ್ಥರು

ದೇಶದಲ್ಲಿ ಎರಡನೇ ಹಂತದ ಮತದಾನ ನಡೆಯುತ್ತಿದ್ದರೇ, ರಾಜ್ಯದ 14 ಕ್ಷೇತ್ರಗಳಲ್ಲಿ ಮೊದಲ...