ಚುನಾವಣೆ 2023 | ಸುಳ್ಯ ಶಾಸಕ ಅಂಗಾರ ನಿವೃತ್ತಿ, ಭಾಗೀರಥಿಗೆ ತೆರೆದ ಭಾಗ್ಯದ ಬಾಗಿಲು

Date:

ಸತತ ಆರು ಬಾರಿ ಗೆದ್ದು ಕೊನೆಯ ಎರಡು ವರ್ಷ ಸಚಿವರಾಗಿಯೂ ಅಧಿಕಾರ ಅನುಭವಿಸಿದ ಅಂಗಾರರಿಗೆ ಪಕ್ಷ ಅನ್ಯಾಯ ಮಾಡಿದೆ ಎನ್ನಲಾಗದು. ಆದರೆ ಟಿಕೆಟ್‌ ನಿರಾಕರಣೆ ಮಾಡುವ ಮುನ್ನ ಮಾತುಕತೆಯ ಮೂಲಕ ಗೌರವಯುತವಾಗಿ ಕಳುಹಿಸಿಕೊಡಬಹುದಿತ್ತು ಎಂಬುದರಲ್ಲಿ ಎರಡು ಮಾತಿಲ್ಲ. ಭಾಗೀರಥಿ ಮುರುಳ್ಯ ಕೂಡ ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತೆ

ಪರಿಶಿಷ್ಟ ಜಾತಿಗೆ ಮೀಸಲಾಗಿರುವ ವಿಧಾನಸಭಾ ಕ್ಷೇತ್ರದಲ್ಲಿ ಅಚ್ಚರಿಯ ಬೆಳವಣಿಗೆ ನಡೆದಿದೆ. ಮಂಗಳವಾರ ಬಿಜೆಪಿ ಬಿಡುಗಡೆ ಮಾಡಿದ ಮೊದಲ ಪಟ್ಟಿಯಲ್ಲಿ ಎಂಟು ಹಾಲಿ ಶಾಸಕರಿಗೆ ಟಿಕೆಟ್‌ ನಿರಾಕರಣೆ ಮಾಡಲಾಗಿದೆ. ಆರು ಬಾರಿ ಸುಳ್ಯ ಕ್ಷೇತ್ರದಲ್ಲಿ ಸತತ ಗೆದ್ದು ಬಂದಿರುವ ಹಾಲಿ ಸಚಿವ ಅಂಗಾರರೂ ಅದರಲ್ಲಿ ಒಬ್ಬರು. ತಮಗೆ ಟಿಕೆಟ್‌ ನಿರಾಕರಣೆ ಮಾಡುವ ಮುನ್ನ ತಿಳಿಸದಿರುವ ವರಿಷ್ಠರ ನಡೆಗೆ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಜೊತೆಗೆ ಸಕ್ರಿಯ ರಾಜಕಾರಣದಿಂದ ನಿವೃತ್ತಿ ಘೋಷಿಸಿದ್ದಾರೆ. ಚುನಾವಣೆಯ ಪ್ರಚಾರಕ್ಕೂ ಹೋಗುವುದಿಲ್ಲ ಎಂದುಬಿಟ್ಟಿದ್ದಾರೆ.

ʼತಮಗೆ ಟಿಕೆಟ್‌ ನಿರಾಕರಣೆ ಮಾಡಿರುವುದರ ಬಗ್ಗೆ ಅಸಮಾಧಾನ ಇಲ್ಲ. ಆದರೆ ಇಷ್ಟು ವರ್ಷ ಪಕ್ಷ, ಸಮಾಜಕ್ಕಾಗಿ ಒಂದು ಕಪ್ಪು ಚುಕ್ಕೆ ಬಾರದ ರೀತಿಯಲ್ಲಿ ದುಡಿದವರನ್ನು ಗೌರವಿಸುವ ಕ್ರಮ ಇದಲ್ಲ. ಪ್ರಾಮಾಣಿಕ ರಾಜಕಾರಣಕ್ಕೆ ಇಂದು ಬೆಲೆ ಇಲ್ಲದಂತಾಗಿದೆ. ನನ್ನ ಪ್ರಾಮಾಣಿಕತೆಯೇ ನನಗೆ ಮುಳುವಾಗಿದೆ. ಲಾಬಿ ಮಾಡದಿರುವ ಕಾರಣ ನನಗೆ ಹಿನ್ನಡೆಯಾಗಿದೆʼಎಂದು ಅಲವತ್ತುಕೊಂಡಿದ್ದಾರೆ.

ಆರೆಸ್ಸೆಸ್‌ ನಿಲುವಿನ ಗೆರೆಯನ್ನು ಒಂದಿಂಚೂ ದಾಟದ ಅಂಗಾರರು ಕೋಮು ದ್ವೇಷದ ಹೇಳಿಕೆ ನೀಡದಿದ್ದರೂ ದ್ವೇಷವನ್ನು ತಮ್ಮ ನಡವಳಿಕೆಯಲ್ಲಿ ತೋರಿಸಿದ ಉದಾಹರಣೆ ಇದೆ ಎಂದು ಸ್ಥಳೀಯರು ಗುರುತಿಸಿದ್ದಾರೆ. ಪುಟ್ಟದೊಂದು ಉದಾಹರಣೆ ಇಲ್ಲಿದೆ, ಸುಳ್ಯದ ಚರ್ಚ್‌ ಶಾಲೆ ಎಂದರೆ ಕನ್ನಡ ಮಾಧ್ಯಮದಲ್ಲಿ ಗುಣಮಟ್ಟದ ಶಿಕ್ಷಣ ನೀಡುತ್ತಿರುವ ಸುಳ್ಯ ನಗರದ ಏಕೈಕ ಶಾಲೆ. ಸರ್ಕಾರಿ ಅನುದಾನಿತ ಈ ಶಾಲೆಗೆ ಕುಡಿಯುವ ನೀರಿನ ಫಿಲ್ಟರ್‌ ಕೊಡುವಂತೆ ಸಚಿವ ಅಂಗಾರರಿಗೆ ಶಾಲಾ ಆಡಳಿತ ಮಂಡಳಿ ಮನವಿ ಮಾಡಿದರೂ ಕೊಟ್ಟಿಲ್ಲವಂತೆ. ಮನೆಗೆ ಹೋಗಿ ಆಹ್ವಾನ ನೀಡಿದರೂ ಚರ್ಚ್‌ ಶಾಲೆಯ ಕಾರ್ಯಕ್ರಮಕ್ಕೆ ಅತಿಥಿಯಾಗಿ ಹೋಗಿರಲಿಲ್ಲ. ಹಾಗೆ ಹೋದರೆ ಸಂಘಿಗಳ ಕೆಂಗಣ್ಣಿಗೆ ಗುರಿಯಾಗಬಹುದು ಎಂದು ಬಹಳ ನಾಜೂಕಿನಿಂದ ವರ್ತಿಸಿದ್ದ ಅಂಗಾರರಿಗೆ ಈಗ ಪಕ್ಷ ಅದ್ಯಾವುದಕ್ಕೂ ಕಿಮ್ಮತ್ತು ಕೊಟ್ಟಿಲ್ಲ ಎಂಬ ಕೊರಗು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಸತತ ಆರು ಬಾರಿ ಗೆದ್ದು ಕೊನೆಯ ಎರಡು ವರ್ಷ ಸಚಿವರಾಗಿಯೂ ಅಧಿಕಾರ ಅನುಭವಿಸಿದ ಅಂಗಾರರಿಗೆ ಪಕ್ಷ ಅನ್ಯಾಯ ಮಾಡಿದೆ ಎನ್ನಲಾಗದು. ಆದರೆ ಟಿಕೆಟ್‌ ನಿರಾಕರಣೆ ಮಾಡುವ ಮುನ್ನ ಮಾತುಕತೆಯ ಮೂಲಕ ಗೌರವಯುತವಾಗಿ ನಿವೃತ್ತಿ ಕೊಡಬಹುದಿತ್ತು ಎಂಬುದರಲ್ಲಿ ಎರಡು ಮಾತಿಲ್ಲ. ಯಾಕೆಂದರೆ 2013ರ ಚುನಾವಣೆಯಲ್ಲಿ ದಕ್ಷಿಣಕನ್ನಡ ಜಿಲ್ಲೆಯ ಏಳು ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗಳು ಜಯಗಳಿಸಿದಾಗ, ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ಜಯಗಳಿಸುವ ಮೂಲಕ ಅಂಗಾರರು ಬಿಜೆಪಿಯ ಮಾನ ಉಳಿಸಿದ್ದರು. ಕಡಿಮೆ ಅಂತರದ ವಿಜಯ ಅದಾಗಿದ್ದರೂ ಮತ್ತೆ 2018ರ ಚುನಾವಣೆಯಲ್ಲಿ ಗೆಲುವಿನ ಅಂತರವನ್ನು ಭಾರೀ ಹೆಚ್ಚಿಸಿಕೊಂಡಿದ್ದರು. ಅಂಗಾರರ ಎದುರು ಮೂರು ಬಾರಿ ಸ್ಪರ್ಧಿಸಿದ್ದ ಡಾ ರಘು, ಮುಂದಿನ ಚುನಾವಣೆಗಳಿಗೆ ಸ್ಪರ್ಧಿಸದಿರುವ ಜಿಗುಪ್ಸೆಯ ನಿರ್ಧಾರಕ್ಕೆ ಬರಲು ಅಂಗಾರರು ಗೆಲುವಿನ ಅಂತರವನ್ನು ಏಕಾಏಕಿ ಹೆಚ್ಚಿಸಿಕೊಂಡಿರುವುದೂ ಕಾರಣವಾಗಿತ್ತು.

ಭಾಗೀರಥಿ ಮುರುಳ್ಯ

ಗೆಲ್ಲುವ ಕುದುರೆ ಅಂಗಾರರಿಗೆ ಏಕಾಏಕಿ ಬ್ರೇಕ್‌ ಹಾಕಿದ್ದು ಕ್ಷೇತ್ರದ ಕಾರ್ಯಕರ್ತರ ಅಸಮಾಧಾನಕ್ಕೆ ಕಾರಣವಾಗಿದೆ. ಹೊಸ ಅಭ್ಯರ್ಥಿಯನ್ನು ಅದರಲ್ಲೂ ಮೀಸಲು ಕ್ಷೇತ್ರದಲ್ಲಿ ಗೆಲ್ಲಿಸುವ ಜವಾಬ್ದಾರಿಯನ್ನು ಪಕ್ಷ ತೆಗೆದುಕೊಳ್ಳುತ್ತದೆ. ಆದರೆ ಅದು ಹಿಂದಿನಷ್ಟು ಸುಲಭದ ಮಾತಲ್ಲ.

ಇದನ್ನು ಓದಿ ಕಂಗೆಡುತ್ತಿರುವ ಪ್ರಜಾಪ್ರಭುತ್ವ ಮತ್ತು ಬೆದರಿ ರಾಜಕೀಯದ ಬಲಿಪಶುಗಳಾದ ಪಠ್ಯಪುಸ್ತಕಗಳು

ಅಂಗಾರರ ಬದಲಿಗೆ ಬಿಜೆಪಿಯ ಯುವ ನಾಯಕಿ ಪರಿಶಿಷ್ಟ ಸಮುದಾಯದ ಭಾಗೀರಥಿ ಮುರುಳ್ಯ ಅವರನ್ನು ಅಭ್ಯರ್ಥಿ ಮಾಡಿರುವುದು ಸೂಕ್ತ ನಿರ್ಧಾರವಾಗಿದೆ. ಕ್ಷೇತ್ರದಲ್ಲಿ ಮೊದಲ ಬಾರಿಗೆ ಬಿಜೆಪಿ ಮಹಿಳೆಗೆ ಅವಕಾಶ ನೀಡಿದ್ದು, ಹಾಗು ಭಾಗೀರಥಿಯವರಂತಹ ಪಕ್ಷದ ಹಿರಿಯ ಕಾರ್ಯಕರ್ತೆಯನ್ನು ಗುರುತಿಸಿದ್ದು ಉತ್ತಮ ನಡೆ.

ಸುಳ್ಯದ ಮುರುಳ್ಯ ಗ್ರಾಮದ ಶಾಂತಿ ನಗರ ನಿವಾಸಿ ಆಗಿರುವ ಇವರು ಆದಿದ್ರಾವಿಡ ಸಮುದಾಯದವರು. 4 ವರ್ಷ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸಿದ್ದಾರೆ. ಭಾಗೀರಥಿ ಚಿಕ್ಕ ವಯಸ್ಸಿನಲ್ಲಿಯೇ ರಾಜಕಾರಣಕ್ಕೆ ಬಂದವರು. ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳಾ ಮೀಸಲು, ಪರಿಶಿಷ್ಟ ವರ್ಗಗಳ ಮೀಸಲಾತಿಯ ಫಲಾನುಭವಿ ಭಾಗೀರಥಿ ಅವರು ಸುಳ್ಯ ತಾಲ್ಲೂಕು ತಾಲ್ಲೂಕು ಪಂಚಾಯತಿ ಸದಸ್ಯೆಯಾಗಿ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತಿ ಸದಸ್ಯೆಯಾಗಿ ಕಾರ್ಯ ನಿರ್ವಹಿಸಿದ್ದಾರೆ. ಬಿಜೆಪಿ ಮಹಿಳಾ ಮೋರ್ಚದ ಪದಾಧಿಕಾರಿಯಾಗಿ ಸುಳ್ಯ, ಪುತ್ತೂರು, ಬೆಳ್ತಂಗಡಿ ತಾಲ್ಲೂಕುಗಳಲ್ಲಿಯೂ ಕೆಲಸ ಮಾಡಿದ್ದಾರೆ. ಸದಾ ಪಕ್ಷದ ಕೆಲಸದಲ್ಲಿಯೇ ನಿರತರಾಗಿರುವ ಭಾಗೀರಥಿ ಅವರಿಗೆ ಈ ಅವಕಾಶ ಸಿಕ್ಕಿರುವ ಬಗ್ಗೆ ಸ್ವತಃ ಅಂಗಾರರೇ ಖುಷಿಪಡಬೇಕಿತ್ತು.

ಸುಳ್ಯ ಯುವಜನ ಸಂಯುಕ್ತ ಮಂಡಳಿಯ ನಿರ್ದೇಶಕಿ, ಉಪಾಧ್ಯಕ್ಷೆ, ಅಧ್ಯಕ್ಷೆಯೂ ಆಗಿದ್ದರು. ರಾಜ್ಯಮಟ್ಟದ ಯುವಜನ ಮೇಳವನ್ನು ಯಶಸ್ವಿಯಾಗಿ ನಡೆಸಿದ ಭಾಗೀರಥಿ ಸದಾ ಚಟುವಟಿಕೆಯಿಂದ ಇದ್ದು ಬಲಾಢ್ಯ ಜಾತಿಗಳ ನಡುವೆ ತನ್ನ ಇರುವಿಕೆಯನ್ನು ʼಮೀಸಲುʼಕ್ಷೇತ್ರದಾಚೆಗೂ ಕಾಪಾಡಿಕೊಂಡವರು.

ಇದನ್ನು ಓದಿ ಬಿಜೆಪಿ ಹೈಕಮಾಂಡ್‌ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ರಾಜಕೀಯ ನಿವೃತ್ತಿ ಘೋಷಿಸಿದ ಸಚಿವ ಅಂಗಾರ

ಭಾಗೀರಥಿಯ ಕುಟುಂಬದ ಹಿನ್ನೆಲೆ ನೋಡಿದರೆ ಇಡೀ ಕುಟುಂಬ ರಾಜಕಾರಣದ ಸಖ್ಯದಲ್ಲಿದೆ. ಆಕೆಯೇ ಹೇಳಿಕೊಂಡಂತೆ ಆ ಗ್ರಾಮದಲ್ಲಿ ಇರದೊಂದೇ ಬಿಜೆಪಿ ಪರವಿದ್ದ ಕುಟುಂಬವಂತೆ. ಈಕೆಯ ಅಪ್ಪ ಗ್ರಾಮ ಪಂಚಾಯತಿ ಚುನಾವಣೆಗೆ ಸ್ಪರ್ಧಿಸಿ ಸೋತಿದ್ದರು. ಆಗ ರಾಜ್ಯದೆಲ್ಲೆಡೆ ಕಾಂಗ್ರೆಸ್‌ ಹವಾ ಇತ್ತು. ತಂದೆ ಸೋತ ನಂತರ ತಾಯಿಯೂ ಸ್ಪರ್ಧಿಸಿ ಸೋತಿದ್ದರು. ಅಪ್ಪ ಅಮ್ಮನ ಸೋಲಿನ ನಂತರ ರಾಜಕೀಯಕ್ಕೆ ಬಂದ ಮಗಳು ಭಾಗೀರಥಿ ಸತತ ವಿಜಯಮಾಲೆ ಧರಿಸಿದ್ದಾರೆ. ಈಗ ಇವರ ತಂಗಿ ಕೂಡಾ ಗ್ರಾಮ ಪಂಚಾಯತಿ ಅಧ್ಯಕ್ಷೆಯಾಗಿದ್ದಾರೆ. ಅವಿವಾಹಿತರಾಗಿಯೇ ಉಳಿದಿರುವ ಭಾಗೀರಥಿ ಚಂದದ ಮನೆಯ ಒಡತಿ. ಒಬ್ಬ ಅಣ್ಣನ ಕುಟುಂಬ, ತಂಗಿ, ಅಕ್ಕನ ಕುಟುಂಬವಿರುವ ಕೂಡು ಕುಟುಂಬ. ಇವರ ಅಕ್ಕನ ಗಂಡ ಸರ್ಕಾರಿ ಶಿಕ್ಷಕರಾಗಿ ನಿವೃತ್ತರಾಗಿದ್ದಾರೆ. ಅಕ್ಕನ ಮೂವರು ಮಕ್ಕಳಲ್ಲಿ ಒಬ್ಬ ಸರ್ಕಾರಿ ಶಿಕ್ಷಕ, ಮತ್ತೊಬ್ಬ ಗಣಿ ಭೂವಿಜ್ಞಾನ ಸಂಸ್ಥೆಯ ಉದ್ಯೋಗಿ. ಕುಟುಂಬದ ಶೈಕ್ಷಣಿಕ ಪ್ರಗತಿಯೂ ಆರ್ಥಿಕವಾಗಿ ತಕ್ಕ ಮಟ್ಟಿಗೆ ಗಟ್ಟಿಯಾಗಲು ಕಾರಣವಾಗಿದೆ.

ಸುಳ್ಯ ವಿಧಾನಸಭಾ ಕ್ಷೇತ್ರ ಬಿಜೆಪಿಯ ಭದ್ರಕೋಟೆಯಾಗಿದ್ದು, ಕಾಂಗ್ರೆಸ್‌ನಿಂದ ಜಿ ಕೃಷ್ಣಪ್ಪ ಅಭ್ಯರ್ಥಿಯಾಗಿದ್ದಾರೆ. ಆದರೆ ಕಾರ್ಯಕರ್ತರೊಂದಿಗೆ ನಿರಂತರ ಸಂಪರ್ಕದಲ್ಲಿದ್ದ, ಕ್ಷೇತ್ರದೆಲ್ಲೆಡೆ ಓಡಾಡಿಕೊಂಡಿದ್ದ ಸುಳ್ಯ ಉಸ್ತುವಾರಿಯೂ ಆಗಿರುವ ನಂದ ಕುಮಾರ್ ಅಭ್ಯರ್ಥಿ ಆಗಿದ್ದರೆ ಬಿಜೆಪಿಗೆ ಗೆಲುವು ಕಷ್ಟವಾಗುತ್ತಿತ್ತು. ಆದರೆ ಕ್ಷೇತ್ರದ ಜನರ ಜೊತೆ ಅಷ್ಟಾಗಿ ಬೆರೆಯದ ಜಿ ಕೃಷ್ಣಪ್ಪ ಅವರ ಬಗ್ಗೆ ಕಾರ್ಯಕರ್ತರಿಗೂ ಅಸಮಾಧಾನವಿದೆ. ಹಾಗಾಗಿ ಹೊಸ ಅಭ್ಯರ್ಥಿ ಭಾಗೀರಥಿ ಮುರುಳ್ಯ ಅವರ ಗೆಲುವು ತ್ರಾಸದಾಯಕವಲ್ಲ ಎಂದು ವಿಶ್ಲೇಷಿಸಲಾಗುತ್ತಿದೆ. ಜೊತೆಗೆ ಹೊಸ ಬೆಳವಣಿಗೆಯ ಪ್ರಕಾರ ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿ ನಂದಕುಮಾರ್‌ ಪಕ್ಷೇತರರಾಗಿ ಸ್ಪರ್ಧಿಸುವ ನಿರ್ಧಾರ ಮಾಡಿದ್ದಾರೆ. ಅವರ ಅಭಿಮಾನಿಗಳು ರೋಡ್‌ಶೋಗೆ ಸಿದ್ಧತೆ ನಡೆಸಿದ್ದಾರೆ.

ಈ ಕಡೆ ಅಂಗಾರರಿಗೆ ಅವಕಾಶ ತಪ್ಪಿಸಿರುವ ಬಗ್ಗೆ ಕೆಲ ಬಿಜೆಪಿ ನಾಯಕರು ರಾಜೀನಾಮೆ ಕೊಡುವುದು, ಚುನಾವಣೆ ಬಹಿಷ್ಕಾರದಂತಹ ಹೇಳಿಕೆ ನೀಡುತ್ತಿದ್ದಾರೆ. ಆದರೆ, ಈ ಕ್ಷೇತ್ರದ ರೈತರು, ಕೂಲಿಕಾರ್ಮಿಕರು, ಹೊಸ ತಲೆಮಾರಿನ ಯುವಕರೂ ಬಿಜೆಪಿಯ ಪರವಿದ್ದಾರೆ. ಸಾಂಪ್ರದಾಯಿಕ ಮತಗಳು ವಿಭಜನೆಯಾಗುವುದು ಸದ್ಯದ ಸ್ಥಿತಿಯಲ್ಲಿ ಅನುಮಾನ. ಆದರೆ ಅದು ಪವಾಡವೇ ಸರಿ.

ಹೇಮಾ ವೆಂಕಟ್
+ posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ತೆಲಂಗಾಣ ಫಲಿತಾಂಶ: ಕೆಸಿಆರ್ ಸರ್ವಾಧಿಕಾರಕ್ಕೆ ಏಟು; ಕಾಂಗ್ರೆಸ್ ಗ್ಯಾರಂಟಿಗಳಿಗೆ ಓಟು

2014ರಿಂದಲೂ ಕಾಂಗ್ರೆಸ್ ತೆಲಂಗಾಣದ ಗದ್ದುಗೆ ಮೇಲೆ ಕಣ್ಣಿಟ್ಟಿತ್ತು. ಈ ಬಾರಿ ಕರ್ನಾಟಕದಲ್ಲಿ...

ರಾಜಸ್ಥಾನ | ಬಿಜೆಪಿ ವಿರುದ್ಧ ಬಂಡಾಯವೆದ್ದ 26 ವರ್ಷದ ಸ್ವತಂತ್ರ ಅಭ್ಯರ್ಥಿಗೆ ಭಾರಿ ಮುನ್ನಡೆ

ರಾಜಸ್ಥಾನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಬಂಡಾಯವೆದ್ದು ಸ್ಪರ್ಧಿಸಿದ್ದ ಅಭ್ಯರ್ಥಿಯೊಬ್ಬರು ಭಾರಿ...

ರಾಜಸ್ಥಾನ | ಬಿಜೆಪಿ ಮುನ್ನಡೆ ಕಾಯ್ದುಕೊಂಡಂತೆ ಸಿಎಂ ಸ್ಥಾನಕ್ಕೆ ಮೂವರ ಪೈಪೋಟಿ!

ರಾಜಸ್ಥಾನ ರಾಜ್ಯದ 199 ವಿಧಾನಸಭಾ ಕ್ಷೇತ್ರಗಳ ಪೈಕಿ ಮಧ್ಯಾಹ್ನ 12 ಗಂಟೆ...

ಛತ್ತೀಸ್‌ಗಢ ಮತ ಎಣಿಕೆ: ಕ್ಷಣದಿಂದ ಕ್ಷಣಕ್ಕೆ ಕಾಂಗ್ರೆಸ್ – ಬಿಜೆಪಿ ನಡುವೆ ತೀವ್ರ ಜಿದ್ದಾಜಿದ್ದಿ

ಛತ್ತೀಸ್‌ಗಢ ವಿಧಾನಸಭಾ ಚುನಾವಣೆಯ ಮತ ಎಣಿಕೆ ಕುತೂಹಲದಿಂದ ಕೂಡಿದ್ದು ಕಾಂಗ್ರೆಸ್ ಹಾಗೂ...