ಡಿಎಂಕೆ ಸಂಸದ ಎಸ್ ಆರ್ ಪಾರ್ಥಿಬನ್ ಅವರು ಸದನದಲ್ಲಿ ಗೈರುಹಾಜರಾಗಿದ್ದರೂ ಅಶಿಸ್ತಿನ ಆಧಾರದ ಮೇಲೆ ಅಮಾನತುಗೊಳಿಸಿರುವ ಘಟನೆ ಲೋಕಸಭೆಯಲ್ಲಿ ಇಂದು ನಡೆದಿದೆ.
ಇದರಿಂದ ಎಚ್ಚೆತ್ತ ಸರ್ಕಾರ ಅಮಾನತು ಆದೇಶವನ್ನು ಹಿಂಪಡೆದಿದೆ. ‘ತಪ್ಪಾಗಿ’ ಅಮಾನತು ಮಾಡಬೇಕಾದವರ ಜೊತೆಗೆ ಡಿಎಂಕೆ ಸಂಸದ ಪಾರ್ಥಿಬನ್ ಅವರ ಹೆಸರನ್ನು ಸೇರಿಸಿದ ಕಾರಣ ಲೋಕಸಭೆಯಿಂದ ಅಮಾನತುಗೊಳಿಸಿರುವುದನ್ನು ಹಿಂಪಡೆಯಲು ಸರ್ಕಾರ ನಿರ್ಧರಿಸಿದೆ.
ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಷಿ, ಸದಸ್ಯರನ್ನು ಗುರುತಿಸುವಲ್ಲಿ ಸಿಬ್ಬಂದಿಯ ಕಡೆಯಿಂದ ತಪ್ಪಾಗಿರುವ ಕಾರಣ ಪಾರ್ಥಿಬನ್ ಹೆಸರನ್ನು ಅಮಾನತುಗೊಳಿಸಿದ ಲೋಕಸಭಾ ಸದಸ್ಯರ ಪಟ್ಟಿಯಿಂದ ಹಿಂಪಡೆಯಲಾಗಿದೆ ಎಂದು ಹೇಳಿದರು.
ತಪ್ಪಾದ ಗುರುತಿನ ಪ್ರಕರಣವಾಗಿರುವುದರಿಂದ ಸದಸ್ಯರ ಹೆಸರನ್ನು ಕೈಬಿಡುವಂತೆ ಸ್ಪೀಕರ್ ಅವರಿಗೆ ಮನವಿ ಮಾಡಿದ್ದೇನೆ ಎಂದು ಜೋಶಿ ಹೇಳಿದರು.
ಈ ಸುದ್ದಿ ಓದಿದ್ದೀರಾ? ಸಂಸತ್ತಿನಲ್ಲಿ ಭದ್ರತಾ ಉಲ್ಲಂಘನೆ: 4 ಆರೋಪಿಗಳು 7 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ
ಈ ಸಲಹೆಗೆ ಸ್ಪೀಕರ್ ಒಪ್ಪಿಗೆ ಸೂಚಿಸಿದ್ದಾರೆ. ಸದನದ ಕಲಾಪ ಹೊಸ ಸಂಸತ್ ಭವನಕ್ಕೆ ಸ್ಥಳಾಂತರಗೊಂಡಾಗ, ಸದನದಲ್ಲಿ ಭಿತ್ತಿಪತ್ರಗಳನ್ನು ತೋರಿಸದಿರುವ ಹೊಸ ಸಂಕಲ್ಪದೊಂದಿಗೆ ಸದಸ್ಯರು ಕೆಲಸ ಮಾಡಬೇಕು ಎಂದು ಸ್ಪೀಕರ್ ಅವರು ವ್ಯವಹಾರ ಸಲಹಾ ಸಮಿತಿ (ಬಿಎಸಿ) ಸಭೆಯಲ್ಲಿ ಪ್ರಸ್ತಾಪಿಸಿದ್ದರು ಎಂದು ಜೋಶಿ ಹೇಳಿದರು.
“ಈ ಪ್ರಸ್ತಾವನೆಗೆ ಸರ್ವಾನುಮತದಿಂದ ಒಪ್ಪಿಗೆ ನೀಡಲಾಗಿದೆ. ಯಾರೂ ಅದನ್ನು ವಿರೋಧಿಸಲಿಲ್ಲ” ಎಂದು ಪ್ರಹ್ಲಾದ್ ಜೋಷಿ ಹೇಳಿದರು.
13 ಸಂಸದರು ಬಿಎಸಿ ಸಭೆಯಲ್ಲಿ ತೆಗೆದುಕೊಂಡ ನಿರ್ಣಯವನ್ನು ಉಲ್ಲಂಘಿಸಿ ಸದನಕ್ಕೆ ಫಲಕಗಳನ್ನು ತಂದರು ಮತ್ತು ಆದ್ದರಿಂದ ಅವರನ್ನು ಅಮಾನತುಗೊಳಿಸಲಾಯಿತು ಎಂದು ಸಚಿವರು ಹೇಳಿದರು.
ಸದ್ಯ ಚಳಿಗಾಲದ ಅಧಿವೇಶನ ಅಥವಾ ಸಂಸತ್ತಿನ ಉಳಿದ ಅವಧಿಗೆ ಅಮಾನತುಗೊಂಡಿರುವ ಒಟ್ಟು ಸಂಸದರ ಸಂಖ್ಯೆ ಲೋಕಸಭೆಯಿಂದ 13 ಮತ್ತು ರಾಜ್ಯಸಭೆಯಿಂದ ಒಬ್ಬರು ಸೇರಿ 14ಕ್ಕೆ ಏರಿಕೆಯಾಗಿದೆ.