ಬನ್ನಿ ಒಂದಷ್ಟು ಮಾತನಾಡೋಣ, ಬಾಬಾಸಾಹೇಬರನ್ನು ಮತ್ತಷ್ಟು ಎದೆಗಿಳಿಸಿಕೊಳ್ಳೋಣ

Date:

Becoming Babasaheb ಪುಸ್ತಕ ಕುರಿತು ಲೇಖಕ ಆಕಾಶ್ ಸಿಂಗ್ ರಾಥೋರ್ ಅವರು ಭಾನುವಾರ ಸಂಜೆ ಐದು ಗಂಟೆಗೆ ಆಕೃತಿ ಪುಸ್ತಕದ ಮಳಿಗೆಯಲ್ಲಿ ಸಿಗಲಿದ್ದಾರೆ… ಬನ್ನಿ ಒಂದಷ್ಟು ಮಾತನಾಡೋಣ, ಬಾಬಾಸಾಹೇಬರನ್ನು ಇನ್ನಷ್ಟು, ಮತ್ತಷ್ಟು ಎದೆಗಿಳಿಸಿಕೊಳ್ಳೋಣ.

ಕರ್ನಾಟಕದಲ್ಲಿ ದಲಿತ ಚಳವಳಿ ಎಪ್ಪತ್ತರ ದಶಕದಿಂದ ಸಕ್ರಿಯವಾಗಿದ್ದರೂ ಬಾಬಾಸಾಹೇಬರ ಬದುಕು-ಚಿಂತನೆಯ ಕುರಿತ ಕನ್ನಡದ ಸಾಂಸ್ಕೃತಿಕ ವಲಯ ನಡೆಸಿರುವ ಬೌದ್ಧಿಕ ಜಿಜ್ಞಾಸೆ ಕಡಿಮೆ ಎನ್ನಬಹುದು. ಇದಕ್ಕೆ ಜನಪ್ರಿಯ ಅನ್ನಬಹುದಾದ ಆಕರಗಳನ್ನು ಅವಲಂಬಿಸಿಯೆ ಬಾಬಾಸಾಹೇಬರನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿರುವುದು ಒಂದು ಕಾರಣವಾದರೆ ಮಹಾರಾಷ್ಟ್ರದ ಫುಲೆ-ಅಂಬೇಡ್ಕರೈಟ್ ಚಳವಳಿಯ ಕುರಿತು ರೋಸಲಿನ್ ಹ್ಯಾಂಡ್ಲನ್, ಎಲಿನಾರ್ ಝೆಲಿಯಟ್, ಗೇಲ್ ಓಮ್ವೆಡ್ತ್, ಕ್ರಿಸ್ಟೊಫರ್ ಝೆಫರ್‌ಲಾಟ್ ತರದ ವಿದ್ವಾಂಸರು ಜಾತಿವಿನಾಶ ಮತ್ತು ಅಂಬೇಡ್ಕರ್ ಚಳವಳಿಯ ಕುರಿತು ಮಾಡಿರುವ ಸಂಶೋಧನೆಗಳನ್ನು ಮುಟ್ಟಿಯೂ ಕೂಡ ನೋಡದಿರುವುದು ಇನ್ನೊಂದು ಕಾರಣ.

ಎಪ್ಪತ್ತರ ದಶಕದ ಸಾಹಿತ್ಯ ಚಳವಳಿಯಾಗಲೀ, ರೈತ-ದಲಿತ ಚಳವಳಿಗಳಂತಹ ಸಾಮಾಜಿಕ ಚಳವಳಿಗಳಾಗಲೀ ಜೆಪಿ ಚಳವಳಿ ಮತ್ತು ರಾಮಮನೋಹರ ಲೋಹಿಯಾ ಚಿಂತನೆಯಿಂದ ನೇರವಾಗಿ ಅರ್ಥಾತ್ ಗಾಂಧಿ‌ ಚಿಂತನೆಯಿಂದ ಪರೋಕ್ಷವಾಗಿ ಪ್ರಭಾವಿತಗೊಂಡಿದ್ದವುಗಳಾಗಿದ್ದವು.

ದಲಿತ ಚಳವಳಿ ಮತ್ತು ದಲಿತ ಚಿಂತನೆಗೆ ಅಪಾರವಾದ ಕೊಡುಗೆ ಕೊಟ್ಟ ಹಲವು ಹಿರಿಯರು ಮಾರ್ಕ್ಸ- ಗಾಂಧಿ – ಲೋಹಿಯಾ ಸಮಾಜವಾದಿಗಳಾಗಿದ್ದವರು. ದಲಿತ ಚಳವಳಿಯ ಒಳಗೆ ಮಾರ್ಕ್ಸ್-ಗಾಂಧಿ-ಲೋಹಿಯಾ ಚಿಂತನೆ ದಲಿತ ವಿಮೋಚನೆಗೆ ಅಷ್ಟು ಪೂರಕವಲ್ಲ ಅಂತ ಅರ್ಥಮಾಡಿಕೊಂಡವರಿಗೂ ಅಂಬೇಡ್ಕರ್ ಬರಹಗಳು ಸಿಕ್ಕಿದ್ದು ಎಂಬತ್ತರ ದಶಕದ ಕೊನೆಗೆ ಮತ್ತು ತೊಂಬತ್ತರ ದಶಕದ ಶುರುವಿಗೆ. ಅಲ್ಲಿಯವರೆಗೂ ನಾನಕ್ ಚಂದ್ ರತ್ತು ಸಂಪಾದಿಸಿದ್ದ ‘Thus Spoke Ambedkar’ ಭಾಷಣಗಳ ಸಂಪುಟಗಳು ಮತ್ತು ಅಂಬೇಡ್ಕರ್ ಬರಹಗಳಲ್ಲಿ ಸಾರ್ವಜನಿಕವಾಗಿ ಹೆಚ್ಚು ಚರ್ಚೆಯಾದ ಬರಹಗಳನ್ನೆ ಅವಲಂಬಿಸಬೇಕಾದ ಅನಿವಾರ್ಯತೆಯಿತ್ತು. ಇನ್ನು ಅಂಬೇಡ್ಕರ್ ಬದುಕಿನ ಬಗ್ಗೆ ಧನಂಜಯ್ ಕೀರ್ ಬರೆದ ‘Ambedkar: Life and Mission’ ಕೃತಿ authoritative ಅನ್ನಿಸಿಕೊಂಡು ಎಲ್ಲರೂ refer ಮಾಡುವ ಕೃತಿಯಾಗಿತ್ತು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ವೃತ್ತಿಪರ ‘ಜೀವನಚರಿತ್ರಕಾರ’ರಾದ ಕೀರ್ ಅಂಬೇಡ್ಕರ್, ಸಾವರ್ಕರ್, ತಿಲಕ್ ಸೇರಿದಂತೆ ಹಲವು ಗಣ್ಯರ ಜೀವನಚರಿತ್ರೆಯನ್ನು ಬರೆದಿದ್ದಾರೆ. ಅಂಬೇಡ್ಕರ್ ಅವರ ಜೀವನ ಚರಿತ್ರೆಯನ್ನು ಅವರ ಜೀವಿತಕಾಲದಲ್ಲೆ ಬರೆದು ಅಂಬೇಡ್ಕರ್ ಅವರಿಗೆ ತೋರಿಸಿ ಅಂಬೇಡ್ಕರ್ ಅವರೆ ಅನುಮೋದಿಸಿದ್ದರು ಅಂತ ಪ್ರಚಾರ ಕೂಡ ಮಾಡಿಕೊಂಡಿದ್ದಾರೆ. ಈ ಕಾರಣಕ್ಕಾಗಿಯೇ ಅಂಬೇಡ್ಕರ್ ಬದುಕಿನ ಕುರಿತ ‘ತಿಳಿವಳಿಕೆ’ಗೆ ಧನಂಜಯ್ ಕೀರ್ ಕೃತಿ ಆಧಾರಗ್ರಂಥವಾಗಿತ್ತು. ಆದರೆ ಅಂಬೇಡ್ಕರ್ ಅವರು ಕೀರ್ ಕೃತಿಯನ್ನು ಸಂಪೂರ್ಣವಾಗಿ ಓದಿ ಒಪ್ಪಿರಲಿಲ್ಲ ಕೇವಲ ಅಲ್ಲಲ್ಲಿ ಕಣ್ಣಾಡಿಸಿ ‘ಪರವಾಗಿಲ್ಲ’ ಎನ್ನುವ ಮಾತನ್ನಷ್ಟೆ ಆಡಿದ್ದರು ಮತ್ತು ತಮ್ಮ ಬದಕಿನಲ್ಲಿ ನಡೆದ ಹಲವು ಘಟನೆಗಳ ಬಗ್ಗೆ ಹೇಳಬೇಕಾದಷ್ಟು ಹೇಳುವುದಕ್ಕೆ ಈತ‌ನಿಂದ ಸಾಧ್ಯವಾಗಿಲ್ಲ ಎನ್ನುವ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು ಎನ್ನುವುದನ್ನು ನಾನಕ್ ಚಂದ್‌ ರತ್ತು ಬರೆದಿದ್ದಾರೆ.

ಬಾಬಾಸಾಹೇಬರ ಕುರಿತ ಧನಂಜಯ್ ಕೀರ್ ಅವರ ಪುಸ್ತಕ ಎಷ್ಟು Superficial ಎನ್ನುವುದು ನಂತರ ಬಂದ ಹಲವಾರು ಸಂಶೋಧನ ಗ್ರಂಥಗಳು ಸಾಬೀತುಪಡಿಸಿವೆ. ಅದರಲ್ಲೂ ಸಂಘಪರಿವಾರದ Ideologue ಸಾವರ್ಕರ್ ಮತ್ತು ಅಂಬೇಡ್ಕರ್ ನಡುವಿನ ಸಂಬಂಧದ ಕುರಿತು ಕೀರ್ ಕಟ್ಟಿರುವ ಕಲ್ಪಿತ ಕತೆಗಳು ಹಿಂದುತ್ವವಾದಿಗಳು ಮತ್ತು ಸಂಘಪರಿವಾರ ಅಂಬೇಡ್ಕರ್ ಅವರನ್ನು appropriate ಮಾಡಿಕೊಳ್ಳುವುದಕ್ಕೆ ಅನುಕೂಲಕರವಾಗಿ ಪರಿಣಮಿಸಿ ಅಂಬೇಡ್ಕರ್ ವ್ಯಕ್ತಿತ್ವ ಮತ್ತು ಚಿಂತನೆಗೆ ಹಾನಿಮಾಡಿವೆ. ಈ ಕೃತಿ ಕೇವಲ ಹಿಂದುತ್ವವಾದಿಗಳ appropriationಗೆ ಮಾತ್ರ ಅವಕಾಶ ಮಾಡಿಕೊಟ್ಟಿಲ್ಲ, ಗಾಂಧಿವಾದಿ-ಸಮಾಜವಾದಿಗಳಿಗೂ ಅಂಬೇಡ್ಕರ್ ಅವರ ಕುರಿತು ತಪ್ಪು ಕಲ್ಪನೆಗಳನ್ನು ಹರಡುವುದಕ್ಕೆ ಅವಕಾಶ ಮಾಡಿಕೊಟ್ಟಿದೆ. ಇದಕ್ಕೆ ಒಂದು ಉದಾಹರಣೆ: ಕಳೆದ ಕೆಲವು ವರ್ಷಗಳ ಹಿಂದೆ ಗಾಂಧಿವಾದಿ ಅನ್ನಬಹುದಾದ ಚಿಂತಕರೊಬ್ಬರು ಕೀರ್ ಕೃತಿಯಲ್ಲಿ ಬರುವ ಸಾವರ್ಕರ್-ಅಂಬೇಡ್ಕರ್ ಸಂಬಂಧದ ದಾಖಲೆಗಳನ್ನು ಪ್ರಸ್ತಾಪಿಸಿ ಅಂಬೇಡ್ಕರ್ ತಮ್ಮ ಕಾರ್ಯಸಾಧನೆಗಾಗಿ ಸಂಘಪರಿವಾರದ ಜೊತೆಗೆ ಕೈಜೋಡಿಸಲು ಸಿದ್ದರಿದ್ದರು, ಗಾಂಧಿಯನ್ನು ಕೊಂದವರ ಜೊತೆಗೆ ಸೌಹಾರ್ದ ಸಂಬಂಧವನ್ನಿಟ್ಟುಕೊಂಡಿದ್ದರೂ, ಆದರೂ ‘ನಾವು’ ಅಂಬೇಡ್ಕರ್ ಅವರನ್ನು ಗೌರವಿಸುತ್ತೇವೆ. ಇದನ್ನು ಗಾಂಧಿಯ ಕಟುಟೀಕಾಕಾರರಾಗಿರುವ ‘ಅಂಬೇಡ್ಕರ್‌ವಾದಿಗಳು’ ಅರ್ಥಮಾಡಿಕೊಳ್ಳಬೇಕು ಅಂತ ವಾದಿಸಿದ್ದರು.

ಆಗಿನ್ನೂ ನಾನು ಬಾಬಾಸಾಹೇಬರ ಬರಹಗಳನ್ನು ಓದುವುದಕ್ಕೆ ಶುರುಮಾಡಿರಲಿಲ್ಲ. ಎಸ್.ಚಂದ್ರಶೇಖರ್, ಡಿ.ಆರ್.ನಾಗರಾಜ್, ದೇವನೂರ ‘ಗಾಂಧಿ- ಅಂಬೇಡ್ಕರ್’ ಜೋಡಿ ಚಿಂತ‌ನೆಯ ಕುರಿತು ರಮ್ಯ ಕಲ್ಪನೆ ಇಟ್ಟುಕೊಂಡಿದ್ದ, ಗಾಂಧಿ-ಲೋಹಿಯಾ ಮೂಲಕವೇ ಅಂಬೇಡ್ಕರ್ ಅವರನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದ ನನಗೆ ಸಾವರ್ಕರ್-ಅಂಬೇಡ್ಕರ್ ಸಂಬಂಧದ ಕುರಿತ ಕೀರ್ ಪುಸ್ತಕ ಮತ್ತು ಗಾಂಧಿವಾದಿ ಚಿಂತಕರ ಉದಾರವಾದಿ ಗುಣದ ಹಿಂದಿರುವ ಮರ್ಮ ಅರ್ಥವಾಗಿರಲಿಲ್ಲ. ಚರಿತ್ರೆ ಇಂತಹ ಹಲಬಗೆಯ ಬೌದ್ಧಿಕ ವಂಚನೆಗಳಿಂದ ಅಂಬೇಡ್ಕರ್ ಅವರನ್ನು ಮುಚ್ಚಿಡಲು ಪ್ರಯತ್ನಿಸಿದರೂ ಅಂಬೇಡ್ಕರರ ಬೌದ್ಧಿಕತೆ ಪ್ರಖರವಾಗುತ್ತಲೆ ಹೋಗುತ್ತಿದೆ ಮತ್ತು ಹೆಚ್ಚು ಹೆಚ್ಚು ಪ್ರಸ್ತುತವಾಗುತ್ತಲೂ ಹೋಗುತ್ತಿದೆ.

ಅಂಬೇಡ್ಕರ್ ಬದುಕಿನ ಕುರಿತ ಬರಹಗಳಲ್ಲಿ ಆಗಿರುವ ಹಲವು ಬೌದ್ಧಿಕ ಎಡವಟ್ಟುಗಳಿಗೆ ಉತ್ತರದಂತೆ ಆಕಾಶ್ ಸಿಂಗ್ ರಾಥೋರ್ ಅವರ Becoming Babasaheb ಪುಸ್ತಕ ಇದೆ.

ಅಂಬೇಡ್ಕರ್ ಅವರ ಬೌದ್ಧಿಕತೆ ಕುರಿತ ಹಲವು ಮಹತ್ವದ ಸಂಶೋಧನೆಗಳು ನಡೆಯುತ್ತಿರುವ ಈ ಹೊತ್ತಿನಲ್ಲಿ ಒಬ್ಬ ಸಾಮಾನ್ಯ ಮನುಷ್ಯನಾಗಿ ಹುಟ್ಟಿದ ವ್ಯಕ್ತಿ ‘ಬಾಬಾಸಾಹೇಬ್’ ಆದ ಪರಿಯನ್ನು ಅರ್ಥಮಾಡಿಕೊಳ್ಳಲು ಈ ಕೃತಿ ಸಹಾಯ ಮಾಡುತ್ತದೆ‌. ನಮಗೆ ಇಲ್ಲಿಯವರೆಗೆ ಗೊತ್ತಿಲ್ಲದ ಬಾಬಾಸಾಹೇಬರ ಕುರಿತ ಹಲವಾರು ಘಟನೆಗಳ ಬಗ್ಗೆ ಬೆಳಕು ಚೆಲ್ಲುತ್ತದೆ.

ಈ ಕೃತಿಯ ಲೇಖಕ ಆಕಾಶ್ ಸಿಂಗ್ ರಾಥೋರ್ ನಾಳೆ ಬೆಂಗಳೂರಿನಲ್ಲಿ ಇರುತ್ತಾರೆ. ಸಂಜೆ ಐದು ಗಂಟೆಗೆ ಆಕೃತಿ ಪುಸ್ತಕದ ಮಳಿಗೆಯಲ್ಲಿ ಸಿಗಲಿದ್ದಾರೆ… ಬನ್ನಿ ಒಂದಷ್ಟು ಮಾತನಾಡೋಣ, ಬಾಬಾಸಾಹೇಬರನ್ನು ಇನ್ನಷ್ಟು, ಮತ್ತಷ್ಟು ಎದೆಗಿಳಿಸಿಕೊಳ್ಳೋಣ.

ವಿ ಎಲ್ ನರಸಿಂಹಮೂರ್ತಿ
+ posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಹಿಂದುತ್ವಕ್ಕೆ ಬಲಿಯಾದ ಕುಲಾಲ ಮತ್ತು ಸಣ್ಣ ಸಮುದಾಯಗಳ ಪ್ರಾತಿನಿಧ್ಯ!

ಬಿಜೆಪಿ ಮತ್ತು ಸಂಘಪರಿವಾರದಲ್ಲಿ ಕುಂಬಾರ/ಕುಲಾಲ್/ಮೂಲ್ಯ ಸಮುದಾಯಗಳ ಯುವಕರು ಇದ್ದರೂ ಅವರಿಗೆ ರಾಜಕೀಯ...

ಅಂಬೇಡ್ಕರ್ ವಿಶೇಷ | ಭಾರತೀಯರೆಲ್ಲರೂ ಗೌರವಿಸಲೇಬೇಕಾದ ಮೇರುವ್ಯಕ್ತಿತ್ವ- ಬಾಬಾ ಸಾಹೇಬ್ ಅಂಬೇಡ್ಕರ್

ಬಾಬಾ ಸಾಹೇಬ್ ಅವರಲ್ಲದೆ ಬೇರೆಯವರು ನಮ್ಮ ಸಂವಿಧಾನ ರಚಿಸಿದ್ದರೆ ಭಾರತ ಹೇಗಿರುತ್ತಿತ್ತು...

ಆನೆಗಳ ಕುರಿತ ಹೊಸ ನಿಯಮ, ಅನಂತ ಅಂಬಾನಿಯ ವನತಾರ ಮತ್ತು ಆನೆ ತಜ್ಞ ಪ್ರೊ. ರಾಮನ್‌ ಸುಕುಮಾರ್

‌ಆನೆಗಳ ಸಾಗಾಟ ಮತ್ತು ಸಾಕಾಣಿಕೆಗೆ ಸಂಬಂಧಿಸಿದ ಹೊಸ ನಿಯಮ(ಕ್ಯಾಪ್ಟಿವ್‌ ಎಲಿಫೆಂಟ್) ಮತ್ತು...

ಹಿಂದುತ್ವದಲ್ಲಿ ಬಂಟ, ಬಿಲ್ಲವರ ಬದುಕು-ಮರಣಕ್ಕೆ ಸಮಾನ ಗೌರವ ಸಿಕ್ಕಿತ್ತಾ ?

ಕೊಲೆ ಮಾಡುವ ತಲವಾರಿಗೆ ಬಂಟ-ಬಿಲ್ಲವ ಎಂಬುದು ಗೊತ್ತಾಗುತ್ತೋ ಇಲ್ವೋ ! ಬಂಟ-...