ಹೊಸಿಲ ಒಳಗೆ-ಹೊರಗೆ | ಮಹಿಳೆಯರು; ಹೊಗಳಿಕೆಯ ಹೊನ್ನ ಶೂಲ ಮತ್ತು ದೌರ್ಜನ್ಯ

Date:

(ಈ ಆಡಿಯೊ ಟ್ಯಾಬ್‌ನ ಬಲ ಮೇಲ್ತುದಿಯಲ್ಲಿ ಮೂರು ಗೆರೆಗಳಿರುವಲ್ಲಿ ಕ್ಲಿಕ್ ಮಾಡಿ, ಸಂಪೂರ್ಣ ಆಡಿಯೊ ಕೇಳಿ)

"ಛೇ... ಗಂಡ ಏನೋ ಕೆಲಸದ ಒತ್ತಡದಲ್ಲಿ 'ಒಂದು' ಏಟು ಕೊಟ್ಟಿರಬಹುದು, ಅಷ್ಟಕ್ಕೇ ಮನೆ ಬಿಟ್ಟು ಬರಬೇಕೇ?; ಕುಟುಂಬ ಅಂದ ಮೇಲೆ ಇವೆಲ್ಲ ಇದ್ದೇ ಇರುತ್ತವೆ, ಒಂದಿಷ್ಟು 'ಹೊಂದಾಣಿಕೆ' ಮಾಡಿಕೊಳ್ಳಕ್ಕೆ ಏನು ಕಷ್ಟ?' – ಇಂತಹ ನುಡಿಮುತ್ತುಗಳು ಬಹಳ ಸಾಮಾನ್ಯ. ಆದರೆ...

ಪುರುಷಪ್ರಧಾನ ಮನಸ್ಥಿತಿಯನ್ನು ರೂಢಿಸಿಕೊಳ್ಳುವುದಕ್ಕಾಗಿ ಮಹಿಳೆಯರನ್ನು ಹಾಡಿ ಹೊಗಳಿದ್ದಾಯಿತು, ಸಿದ್ಧಾಂತಗಳನ್ನು ರೂಪಿಸಿ ರಕ್ತಗತಗೊಳಿಸಿದ್ದಾಯಿತು, ಆಚರಣೆಗಳನ್ನು ಅಳವಡಿಸಿದ್ದಾಯಿತು, ಗಾದೆಮಾತು, ಹಾಡುಹಸೆಗಳನ್ನು ಹೆಣೆದಿದ್ದಾಯಿತು, ರೀತಿ ರಿವಾಜುಗಳನ್ನು ಕಟ್ಟಿದ್ದಾಯಿತು. ಇವೆಲ್ಲವನ್ನೂ ‘ಹೌದಪ್ಪಾ ಹೌದು’ ಅಂತ ಒಪ್ಪಿಕೊಳ್ಳುವ ಹಾಗೆ ನೋಡಿಕೊಂಡಿದ್ದೂ ಆಯಿತು. ಆದರೆ, ಒಪ್ಪಿಕೊಳ್ಳದೇ ಹೋದರೆ? ಆಗೇನು ಮಾಡುವುದು? ಆಗ ಬಳಸುವುದೇ ಹಿಂಸೆ, ದೌರ್ಜನ್ಯಗಳೆಂಬ ಅಸ್ತ್ರಗಳನ್ನು. ಮಹಿಳೆಯರ ಮೇಲಿನ ಹಿಂಸೆ ಮತ್ತು ದೌರ್ಜನ್ಯಗಳ ಕಥನಗಳನ್ನು ಆಳವಾಗಿ ನೋಡಿದಾಗ ಮಾತ್ರವೇ, ಹೇಗೆ ಇದು ಪುರುಷ ಪ್ರಧಾನ ವ್ಯವಸ್ಥೆಯ ಕೈವಾಡ ಎಂಬುದು ಅರ್ಥವಾಗುತ್ತದೆ.

ಈ ವಿಚಾರವನ್ನು ತರಬೇತಿಗಳಲ್ಲಿ ಅರ್ಥ ಮಾಡಿಕೊಳ್ಳುವ ಪ್ರಕ್ರಿಯೆ ಹೀಗೆ ಸಾಗುತ್ತದೆ. ಸಹಭಾಗಿಗಳನ್ನು ಆರಾಮವಾದ ರಂಗ ಪ್ರಕ್ರಿಯೆಯಲ್ಲಿ ತೊಡಗಿಸುತ್ತೇವೆ. ಒಂದಷ್ಟು ಹೊತ್ತು ರಂಗ ಪ್ರಕ್ರಿಯೆಯಲ್ಲಿ ತೊಡಗಿಕೊಂಡಾಗ ಮೈಮನ ಉಲ್ಲಸಿತಗೊಳ್ಳುತ್ತ ಹೋಗುತ್ತದೆ. ಆಮೇಲೆ ಸಹಭಾಗಿಗಳು ಮಹಿಳೆಯರ ಮೇಲಿನ ದೌರ್ಜನ್ಯಗಳ ವಿವಿಧ ಕಥನಗಳನ್ನು ಸ್ಥಿರ ಪ್ರತಿಮೆಗಳ ರೂಪದಲ್ಲಿ ಸೃಷ್ಟಿಸುತ್ತಾರೆ. ಮನೆಯಲ್ಲಿ ನಡೆವ ಲಿಂಗ ತಾರತಮ್ಯ, ಲೈಂಗಿಕ ಕಿರುಕುಳ, ವರದಕ್ಷಿಣೆ ಕಿರುಕುಳ, ಗಂಡ ಕುಡಿದು ಬಂದು ಹೊಡೆಯುವುದು ಇತ್ಯಾದಿ ಅನೇಕ ಚಿತ್ರಣಗಳು ಅಭಿವ್ಯಕ್ತಗೊಳ್ಳುತ್ತವೆ. ಯಾರ ಮೇಲೆ, ಏನು ಹಿಂಸೆ, ಯಾರು ಮಾಡುತ್ತಿದ್ದಾರೆ ಎಂಬ ವಿವರಗಳು ಈ ಮೂಲಕ ಸಿಕ್ಕಿರುತ್ತದೆ. ಆ ಬಳಿಕ ಪ್ರತಿಯೊಂದು ಪ್ರತಿಮೆಯನ್ನು ಎತ್ತಿಕೊಂಡು ವಿವರವಾದ ವಿಶ್ಲೇಷಣೆ ನಡೆಯುತ್ತದೆ. ಏನು ನಡೆಯಿತು? ಯಾರು ದೌರ್ಜನ್ಯ ಎಸಗಿದರು? ಯಾರ ಮೇಲೆ ನಡೆಯಿತು? ದೌರ್ಜನ್ಯದ ಸ್ವರೂಪ ಯಾವುದು? ಯಾಕೆ ನಡೆಯಿತು? ಇದರ ಪರಿಣಾಮವೇನಾಯಿತು? ಇದರಿಂದಾಗಿ ಮಹಿಳೆ ಯಾವ ಹಕ್ಕುಗಳನ್ನು ಕಳೆದುಕೊಂಡಳು? ಇಷ್ಟು ವಿಚಾರಗಳು ಬೋರ್ಡಿನ ಮೇಲೆ ಒಂದು ಕೋಷ್ಟಕದ ಸ್ವರೂಪದಲ್ಲಿ ಕಾಣಲು ಸಿಗುತ್ತದೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಉದಾಹರಣೆಗೆ… ಒಂದು ಪ್ರತಿಮೆಯಲ್ಲಿ ಗಂಡ ಹೆಂಡತಿಗೆ ಹೊಡೆಯುವ ಚಿತ್ರಣ ಇರುತ್ತದೆ. ಇದರಲ್ಲಿ ದೌರ್ಜನ್ಯ ಎಸಗಿದವರು ಗಂಡ, ಅತ್ತೆ, ಮಾವ ಹಾಗೂ ಮನೆಯವರು. ದೌರ್ಜನ್ಯ ನಡೆದಿದ್ದು ಮಹಿಳೆ ಮೇಲೆ ಮತ್ತು ಅವಳ ಮಕ್ಕಳ ಮೇಲೆ. ದೈಹಿಕ, ಮಾನಸಿಕ ಹಿಂಸೆ ಇದರ ಸ್ವರೂಪ. ಯಾಕೆ ನಡೆಯಿತೆಂದರೆ – ಅವಳು ಹಿರಿಯರಿಗೆ ಅವಿಧೇಯವಾಗಿ ಮಾತಾಡಿರಬಹುದು; ಬೇರೆಯವನ ಜೊತೆ ಸಂಬಂಧ ಮಾಡಿರಬಹುದು; ಸರಿಯಾಗಿ ಅಡುಗೆ, ಮನೆಗೆಲಸ ಮಾಡದೆ ಇರಬಹುದು; ಅವನು ಕುಡಿದು ಬಂದಿರಬಹುದು; ಅವನಿಗೆ ಹೆಚ್ಚಿನ ವರದಕ್ಷಿಣೆ ಬೇಕಿರಬಹುದು; ಅವಳು ಮಗು ಹೆರದಿರಬಹುದು ಅಥವಾ ಹೆಣ್ಣುಮಕ್ಕಳನ್ನೇ ಹಡೆದಿರಬಹುದು; ಅವನಿಗಿಂತ ಹೆಚ್ಚು ಓದಿರಬಹುದು ಅಥವಾ ಸಂಪಾದನೆ ಮಾಡುತ್ತಿರಬಹುದು. ಇದರ ಪರಿಣಾಮವಾಗಿ, ಆ ಮಹಿಳೆಯ ಸಾವೇ ಸಂಭವಿಸಬಹುದು ಅಥವಾ ಆರೋಗ್ಯ ಹದಗೆಡಬಹುದು; ಮಕ್ಕಳಿಗೆ ಅಸುರಕ್ಷಿತ ಭಾವನೆ ಮೂಡಬಹುದು; ಅವರು ಓದಿನಲ್ಲಿ ಹಿಂದುಳಿಯಬಹುದು; ಮನೆಯಲ್ಲಿ ನೆಮ್ಮದಿಯ ವಾತಾವರಣ ಇರಲಾರದು, ಭಯದ ವಾತಾವರಣ ತುಂಬಿರಬಹುದು. ಇದರಿಂದಾಗಿ ಆ ಮಹಿಳೆ ಘನತೆಯ ಹಕ್ಕು, ಅಭಿವ್ಯಕ್ತಿಯ ಹಕ್ಕು, ಸ್ವಾತಂತ್ರ್ಯದ ಹಕ್ಕು, ಶೋಷಣೆಯ ವಿರುದ್ಧದ ಹಕ್ಕು ಹೀಗೆ ನಾನಾ ರೀತಿಯ ಹಕ್ಕುಗಳನ್ನು ಕಳೆದುಕೊಳ್ಳುತ್ತಾಳೆ. ಈ ರೀತಿಯಾಗಿ ಪ್ರತಿಯೊಂದು ಪ್ರತಿಮೆಯ ಕುರಿತಂತೆ ವಿವರಣೆ ಸಾಗುತ್ತದೆ.

ಈ ಒಟ್ಟಾರೆ ಚಿತ್ರಣಗಳನ್ನು ಇಟ್ಟುಕೊಂಡು ಬಹಳಷ್ಟು ಚರ್ಚೆಗಳು ನಡೆಯುತ್ತವೆ. ಒಳನೋಟಗಳು ಸಿಗುತ್ತವೆ. ಇದರಲ್ಲಿ ಮುಖ್ಯವಾದ ಒಂದು ಚರ್ಚೆ ನಡೆಯುವುದು ದೌರ್ಜನ್ಯಕ್ಕೆ ಕಾರಣಗಳೇನು ಮತ್ತು ಅದರ ಪರಿಣಾಮಗಳೇನು ಎಂಬುದಕ್ಕೆ ಸಂಬಂಧಿಸಿ. ದೌರ್ಜನ್ಯಕ್ಕೆ ನೀಡುವ ಕಾರಣಗಳನ್ನು ಸೂಕ್ಷ್ಮವಾಗಿ ಅವಲೋಕಿಸುತ್ತ ಹೋದರೆ, “ಓಹ್… ಈ ಕಾರಣಕ್ಕಾಗಿ ದೌರ್ಜನ್ಯ ಮಾಡುವುದು ಸರಿ…” ಎಂದು ಸಮರ್ಥಿಸುವಂತಹ ಯಾವುದಾದರೂ ಅಂಶ ಕಾಣಸಿಗುತ್ತದೆಯೇ? ಅಂತಹ ಕಾರಣಗಳು ಸಿಗುವುದಿಲ್ಲ. ಇಲ್ಲಿ ಹೇಳಲಾದ ಕಾರಣಗಳಿಗೆ ದೌರ್ಜನ್ಯ ಮಾಡುವುದು ಉತ್ತರ ಅಲ್ಲ. ಹಾಗಾದರೆ, ಇವೆಲ್ಲ ಕಾರಣಗಳೇ ಅಲ್ಲ. ಮತ್ತೇನು ಅಂತ ಪ್ರಶ್ನೆ ಹಾಕಿಕೊಂಡಾಗ ಚಕ್ಕಂತ ಹೊಳೆಯುತ್ತದೆ; ಇವೆಲ್ಲ ದೌರ್ಜನ್ಯ ನಡೆಸಲು ಇರುವ ‘ನೆಪ’ಗಳು ಅಂತ. ಅಂದರೆ, ಅಧಿಕಾರ ಸೂತ್ರವನ್ನು ಗಟ್ಟಿಯಾಗಿ ಹಿಡಿದಿಟ್ಟುಕೊಳ್ಳಲು ಬಳಸುವ ಆಯುಧ ದೌರ್ಜನ್ಯ ಎಂಬುದು ಸಾಬೀತಾಗುತ್ತದೆ. ಸಾಧಾರಣವಾಗಿ ನಮ್ಮ ದಿನನಿತ್ಯದ ಬದುಕಿನಲ್ಲಿ ನಾವೆಲ್ಲರೂ ಗೊತ್ತಿದ್ದೋ ಗೊತ್ತಿಲ್ಲದೆಯೋ ದೌರ್ಜನ್ಯಗಳನ್ನು ಸಮರ್ಥನೆ ಮಾಡುತ್ತ ಇರುವುದು ಈ ಹೊತ್ತಿನಲ್ಲಿ ಗಮನಕ್ಕೆ ಬರುತ್ತದೆ. “ಛೇ… ಗಂಡ ಏನೋ ಕೆಲಸದ ಒತ್ತಡದಲ್ಲಿ ‘ಒಂದು’ ಏಟು ಕೊಟ್ಟಿರಬಹುದು, ಅಷ್ಟಕ್ಕೇ ಮನೆ ಬಿಟ್ಟು ಬರಬೇಕೇ?; ಕುಟುಂಬ ಅಂದ ಮೇಲೆ ಇವೆಲ್ಲ ಇದ್ದೇ ಇರುತ್ತವೆ, ಒಂದಿಷ್ಟು ‘ಹೊಂದಾಣಿಕೆ’ ಮಾಡಿಕೊಳ್ಳಕ್ಕೆ ಏನು ಕಷ್ಟ?’ – ಇಂತಹ ನುಡಿಮುತ್ತುಗಳು ಬಹಳ ಸಾಮಾನ್ಯ. ಆ ಹೊತ್ತಿನಲ್ಲಿ ಅವಳು ಅನುಭವಿಸುವ ಯಾತನೆಯಾಗಲೀ, ಅವಳ ಹಕ್ಕುಗಳು ಧಾರಾಳವಾಗಿ ಉಲ್ಲಂಘನೆ ಆಗುವುದಾಗಲೀ ಗಮನಕ್ಕೆ ಬರುವುದಿಲ್ಲ.

ಮಹಿಳೆಯರ ಮೇಲಿನ ದೌರ್ಜನ್ಯವನ್ನು ಒಂದು ಸಾಮಾನ್ಯ ವಿಷಯವೆಂಬಂತೆ ಒಪ್ಪಿಕೊಂಡಿರುವುದೇ ದೊಡ್ಡ ಸಮಸ್ಯೆ. ಉತ್ತರ ಕರ್ನಾಟಕದ ಕಾಲೇಜುಗಳಲ್ಲಿ ಸುಮಾರು ನಾಲಕ್ಕು ವರುಷ ನಿರಂತರವಾಗಿ ತರಬೇತಿ ಮಾಡುವಾಗ ಗಮನಿಸಿದ ಸುಮಾರು ಸಾವಿರಕ್ಕೂ ಹೆಚ್ಚಿನ ವಿದ್ಯಾರ್ಥಿಗಳ ಮನೋಭಾವ ಇದನ್ನು ಸ್ಪಷ್ಟಪಡಿಸುತ್ತದೆ. ತರಬೇತಿಗೆ ಮುಂಚೆ ಮತ್ತು ತರಬೇತಿ ನಂತರ ಒಂದು ಪ್ರಶ್ನಾವಳಿ ಕೊಟ್ಟು ಕಲಿಕೆಯ ಮಾಪನ ಮಾಡುವ ಪ್ರಯತ್ನ ಮಾಡುತ್ತೇವೆ. ಅದರಲ್ಲಿ, “ಹೆಂಡತಿ ತಪ್ಪು ಮಾಡಿದರೆ ಗಂಡ ಹೊಡೆಯಬಹುದು. ಸರಿ/ತಪ್ಪು; ಯಾಕೆ?” ಎಂಬ ಪ್ರಶ್ನೆ ಇರುತ್ತದೆ. ತರಬೇತಿಗೆ ಮೊದಲು ಸುಮಾರು ಮೂರನೇ ಒಂದು ಭಾಗದಷ್ಟು ವಿದ್ಯಾರ್ಥಿಗಳು ‘ತಪ್ಪು ಮಾಡಿದಾಗ’ ಹೆಂಡತಿಗೆ ಹೊಡೆಯುವುದು ‘ಸರಿ’ ಎಂದೇ ಸೂಚಿಸುತ್ತಾರೆ. ಯುವ ಮನಸ್ಸುಗಳು ಕೂಡ ‘ಹೊಡೆಯುವ’ ಕ್ರಿಯೆಯನ್ನು ಒಪ್ಪಿಕೊಳ್ಳುತ್ತಾರಲ್ಲ ಅಂತ ಅಚ್ಚರಿಯಾಗುತ್ತದೆ. ವಿಶೇಷವೆಂದರೆ, ತರಬೇತಿಯಲ್ಲಿ ಅಷ್ಟೊಂದು ವಿಶ್ಲೇಷಣೆಗಳು ನಡೆದ ಮೇಲೆ ಕೂಡ ಶೇಕಡ 8ರಿಂದ10ರಷ್ಟು ಮಂದಿ – ಮಹಿಳೆಯರಿಗೆ ಹೊಡೆಯುವುದು ಸರಿ ಅಂತಲೇ ಹೇಳುತ್ತಾರೆ! ಆದರೆ, ಯಾಕೆ ಸರಿ ಅನ್ನುವ ಪ್ರಶ್ನೆಗೆ ವಿವರವಾದ ಉತ್ತರ ಇರುವುದಿಲ್ಲ. ಆದರೂ, ಹೆಂಡತಿಯನ್ನು ತಪ್ಪು ಮಾಡದ ಹಾಗೆ ನೋಡಿಕೊಳ್ಳುವ ಜವಾಬ್ದಾರಿ ಗಂಡನಿಗೆ ಇದೆ ಅನ್ನುವ ಸಾರಾಂಶ ಕಂಡುಬರುತ್ತದೆ.

ಹೊಡೆಯುವುದು ತಪ್ಪು ಅಂತ ಹೇಳಿದವರು ಕೂಡ ಯಾಕೆ ಅನ್ನುವ ಪ್ರಶ್ನೆಗೆ, “ತಪ್ಪು ಮಾಡಿದಾಗ ಗಂಡ ತಿಳಿಸಿ ಹೇಳಬಹುದು, ಪ್ರೀತಿಯಿಂದ ಸರಿಪಡಿಸಬಹುದು, ಅಗತ್ಯ ಬಿದ್ದರೆ ಬೇರೆ ರೀತಿಯ ಶಿಕ್ಷೆ ಕೊಡಲಿ,” ಎಂಬ ರೀತಿಯ ಉತ್ತರಗಳನ್ನು ಕೊಡುತ್ತಾರೆ. ಅಂತೂ ಗಂಡಿನ ಯಜಮಾನಿಕೆಯನ್ನು ಒಪ್ಪಿಕೊಂಡಿರುವುದು ಕಾಣುತ್ತದೆ. ಹೊಡೆತಕ್ಕೆ ಒಳಗಾಗದೆ ಇರುವುದು ಅವಳ ಹಕ್ಕು, ಅದು ಅವಳ ಘನತೆಯ ಪ್ರಶ್ನೆ ಅನ್ನುವ ಅಭಿಪ್ರಾಯ ವ್ಯಕ್ತವಾಗುವುದು ಅತಿ ಕಡಿಮೆ. ಮತ್ತೆ ಕೆಲವೇ ಕೆಲವರು, “ಹಾಗಾದರೆ ಅವನು ತಪ್ಪು ಮಾಡಿದರೆ ಯಾರು ಸರಿಪಡಿಸಬೇಕು?” ಅನ್ನುವ ಮರುಪ್ರಶ್ನೆ ಎತ್ತುತ್ತಾರೆ. ಹೊಡೆತ ಬಡಿತ ಅನ್ನುವುದು ಕಣ್ಣಿಗೆ ನೇರವಾಗಿ ಕಾಣುವ ಹಿಂಸೆ. ಇವಲ್ಲದೆ, ಮಾತಿನಲ್ಲಿ ಚುಚ್ಚುವುದು, ಆರ್ಥಿಕವಾಗಿ ಕಿರುಕುಳ ಕೊಡುವುದು, ಭಾವನಾತ್ಮಕವಾಗಿ ನಲುಗಿಸುವುದು ಕೂಡ ತೀವ್ರವಾಗಿ ಮಹಿಳೆಯರ ಬಲವನ್ನು ಕುಗ್ಗಿಸುತ್ತದೆ ಮತ್ತು ಅವರ ಅಧೀನತೆಯನ್ನು ಹೆಚ್ಚಿಸುತ್ತದೆ ಎಂಬುದನ್ನು ಮರೆಯುವಂತಿಲ್ಲ.

“ಯಾಕೆ ಇಷ್ಟೆಲ್ಲ ಹಿಂಸೆ ಅನುಭವಿಸಬೇಕು? ಬಿಟ್ಟು ಬರಬಹುದಲ್ಲ?” ಎಂಬ ಪ್ರಶ್ನೆ ಹುಟ್ಟುತ್ತದೆ. ಆದರೆ, ಅದು ಸುಲಭವಲ್ಲ ಎಂಬುದನ್ನು ಎಲ್ಲ ಅನುಭವಗಳು ಸಾರಿ ಹೇಳುತ್ತವೆ. ದೌರ್ಜನ್ಯದ ಬದುಕನ್ನು ಬಿಟ್ಟು ಬರಲಾರದ ಪರಿಸ್ಥಿತಿ ಮತ್ತು ಮನಸ್ಥಿತಿ ಅವರನ್ನು ಗಟ್ಟಿಯಾಗಿ ಕಟ್ಟಿಹಾಕಿರುತ್ತದೆ. ವೈಯಕ್ತಿಕವಾಗಿ ಒಂಟಿಯಾಗಿ ಬದುಕುವ ಶಕ್ತಿ, ಮನೋಭಾವ, ಕೌಶಲ್ಯಗಳು ಬೆಳೆದಿರುವುದಿಲ್ಲ. ತವರುಮನೆಯವರು ಆಶ್ರಯ ನೀಡಲು ಹಿಂಜರಿಯುವರು. ಸಮಾಜ ‘ಗಂಡ ಬಿಟ್ಟವಳೆಂದು’ ಮೂದಲಿಸುವುದು. ಮಕ್ಕಳ ಭವಿಷ್ಯ ಹೇಗೋ ಎಂಬ ಚಿಂತೆ ಕಾಡುವುದು. ಎಲ್ಲವೂ ಸರಿಯಾಗಬಹುದೇನೋ, ಮತ್ತೆ ಪ್ರೀತಿಸಬಹುದೇನೋ ಎಂಬ ಭ್ರಮೆಯೂ ಸೇರಿಕೊಳ್ಳುವುದು.

ಜೊತೆಗೆ, ಅವಳ ಸತಿತ್ವದ ಒಡವೆಗಳಾದ ಸಹನೆ, ತ್ಯಾಗ ಮನೋಭಾವ, ಕ್ಷಮಾ ಗುಣ, ಬದ್ಧತೆ ಎಲ್ಲವೂ ಅವಳು ಆ ಹಿಂಸೆಯನ್ನು ಒಪ್ಪಿಕೊಂಡು ಬದುಕುವಂತೆ ಮಾಡುತ್ತವೆ. ದೌರ್ಜನ್ಯ ಬದುಕಿನ ಸಹಜ ಭಾಗವಾಗಿಬಿಡುತ್ತದೆ. ಪುರುಷಪ್ರಧಾನತೆಯ ಕಾರುಬಾರು ನಿರ್ಭೀತವಾಗಿ ಮುಂದುವರಿಯುತ್ತದೆ.

ಗಳನ್ನು ಆಲಿಸಲು ಕ್ಲಿಕ್ ಮಾಡಿ – ಈದಿನ.ಕಾಮ್ ಕೇಳುದಾಣ

ಪೋಸ್ಟ್ ಹಂಚಿಕೊಳ್ಳಿ:

ವಾಣಿ ಪೆರಿಯೋಡಿ
ವಾಣಿ ಪೆರಿಯೋಡಿ
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದವರು. ಸಾಮಾಜಿಕ ಕಾರ್ಯಕರ್ತೆ. 'ತರಿಕಿಟ ಕಲಾ ಕಮ್ಮಟ' ಎಂಬ ಸಾಂಸ್ಕೃತಿಕ ವೇದಿಕೆಯ ಉಸ್ತುವಾರಿ. ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರುದ್ಧ ಒಕ್ಕೂಟದ ಸಕ್ರಿಯ ಸದಸ್ಯೆ. ಲಿಂಗ ಸಂವೇದನೆ, ಸಂವಹನ ಕೌಶಲ್ಯ ಇತ್ಯಾದಿ ವಿಚಾರಗಳ ಮೇಲೆ ತರಬೇತಿ ನಡೆಸುವುದು ಇಷ್ಟದ ಕೆಲಸ.

1 COMMENT

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಹೊಸಿಲ ಒಳಗೆ-ಹೊರಗೆ | ನೀವು ಕೊಕ್ಕರೆಯಾದರೂ ಸರಿಯಲ್ಲ, ನರಿಯಾದರೂ ಸರಿಯಲ್ಲ; ಯಾಕೆಂದರೆ…

(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ ಅಥವಾ...

ಮನಸ್ಸಿನ ಕತೆಗಳು – 20 | ಡಿವೋರ್ಸ್‌ವರೆಗೂ ಮುಂದುವರಿದಿದ್ದ ಗರ್ಭಿಣಿ ಹರಿಣಿಯ ಕತೆ

(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ ಅಥವಾ...

ಮನಸ್ಸಿನ ಕತೆಗಳು – 19 | ತನ್ನ ಸೀರೆಗೆ ತಾನೇ ಬೆಂಕಿ ಹಚ್ಚಿಕೊಂಡಿದ್ದ ಲತಾಳ ಕತೆ

(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ ಅಥವಾ...

ಹೊಸಿಲ ಒಳಗೆ-ಹೊರಗೆ | ಹೆಣ್ಣುಮಕ್ಕಳ ವೈಯಕ್ತಿಕ ವಿಷಯಗಳು ಮತ್ತು ಊರ ಪಂಚಾಯ್ತಿ ವಿಷಯಗಳು

(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ ಅಥವಾ...