ಯಡಿಯೂರಪ್ಪ – ಈಶ್ವರಪ್ಪ | ಬಿಜೆಪಿಯ ಜೋಡೆತ್ತುಗಳ ಜೂಟಾಟ

Date:

ಈಶ್ವರಪ್ಪನವರು ಈಗಲೂ ಯಡಿಯೂರಪ್ಪನವರ ಮಿತ್ರರಾಗಿರಬಹುದು. ಹಾಗೆಯೇ ಕಾಂಗ್ರೆಸ್ಸಿನ ಸಿದ್ದರಾಮಯ್ಯನವರ ಮಾತಿಗೂ ಮಣೆ ಹಾಕಿರಬಹುದು. ಹಾಗೆಯೇ ದಿಲ್ಲಿ ನಾಯಕರ ದಾಳಿಗೆ ಹೆದರಿ, ಅವರು ಹೇಳಿದಂತೆ ಕೇಳುತ್ತಿರಲೂಬಹುದು. 76ರ ಹರೆಯದ ಈಶ್ವರಪ್ಪನವರ ವ್ಯಕ್ತಿತ್ವನ್ನು ಸೂಕ್ಷ್ಮವಾಗಿ ಗಮನಿಸಿದರೆ, ಅವರ ರಾಜಕಾರಣದ ಹಾದಿಯನ್ನೊಮ್ಮೆ ಅವಲೋಕಿಸಿದರೆ- ಅವರ ಇಂದಿನ ಜೂಟಾಟಗಳನ್ನು ನಂಬಲು ಹಲವಾರು ಕಾರಣಗಳು ಸಿಗುತ್ತವೆ. ಜೊತೆಗೆ ಬೇಕಾದಂತೆ ಬಳಕೆಗೆ ಬರುವ ಅವರ ಬಫೂನ್ ವ್ಯಕ್ತಿತ್ವ ಅದಕ್ಕೆ ಪುಷ್ಟಿ ನೀಡುತ್ತದೆ.

ಭಾರತೀಯ ಜನತಾ ಪಕ್ಷದಲ್ಲಿ ಬಣ ಬಡಿದಾಟ, ಬಂಡಾಯ, ಅಸಮಾಧಾನ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಪಕ್ಷದ ಕಾರ್ಯಕರ್ತರು ಮತ್ತು ನಾಯಕರ ನಡುವೆ ಸರಿಸುಮಾರು ಹತ್ತು ಲೋಕಸಭಾ ಕ್ಷೇತ್ರಗಳಲ್ಲಿ ಟಿಕೆಟ್ ಹಂಚಿಕೆ ವಿಚಾರದಲ್ಲಿ ಭಿನ್ನಮತ ಭುಗಿಲೆದ್ದಿದೆ. ಪಕ್ಷದೊಳಗಿನ ಈ ಅಸಮಾಧಾನ ಹತ್ತಿಕ್ಕುವ ಕೆಲಸಕ್ಕೆ ದಿಲ್ಲಿಯ ಹೈಕಮಾಂಡ್ ಕೈ ಎತ್ತಿದೆ. ಮನವೊಲಿಸುವ ಕಾರ್ಯವನ್ನು ಸಂಪೂರ್ಣವಾಗಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರ ಹೆಗಲಿಗೆ ವರ್ಗಾಯಿಸಿದೆ. ಮನವೊಲಿಸುವ ಕಾರ್ಯವನ್ನು ಕೂಡ ಅವಕಾಶವೆಂದೇ ಭಾವಿಸುವ ಯಡಿಯೂರಪ್ಪನವರು, ನಿಭಾಯಿಸುತ್ತೇನೆ ಎಂದು ಒಪ್ಪಿಕೊಂಡಿದ್ದಾರೆಂಬ ಸುದ್ದಿ ಈಗ ಬಿಜೆಪಿಗರಿಂದಲೇ ಕೇಳಿಬರುತ್ತಿದೆ.

ಆ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಿರುವ ಯಡಿಯೂರಪ್ಪನವರು, ಸರಣಿಯೋಪಾದಿಯಲ್ಲಿ ಸಭೆಗಳನ್ನು ನಡೆಸುತ್ತಿದ್ದಾರೆ. ಕೆಲವು ಕಡೆ ಅವರಿದ್ದಲ್ಲಿಗೆ ತೆರಳಿ, ಸಾಮ ದಾನ ಭೇದ ದಂಡದಂತಹ ಚತುರೋಪಾಯಗಳ ಮೂಲಕ ಮಣಿಸುತ್ತಿದ್ದಾರೆ. ಕೊಪ್ಪಳ, ದಾವಣಗೆರೆ, ರಾಯಚೂರು, ಬೆಳಗಾವಿ, ಬೀದರ್ ಜಿಲ್ಲೆಗಳ ಬಿಜೆಪಿಗರ ಬಿಸಿ ಇಳಿಸುತ್ತಿದ್ದಾರೆ. ಮಾಧುಸ್ವಾಮಿ, ರೇಣುಕಾಚಾರ್ಯ ಮತ್ತು ವಿಶ್ವನಾಥ್‌ರನ್ನು ತಣ್ಣಗಾಗಿಸಲು ತಂತ್ರಗಳಿಗಾಗಿ ತಡಕಾಡುತ್ತಿದ್ದಾರೆ.

ಆದರೆ, ತವರು ಜಿಲ್ಲೆ ಶಿವಮೊಗ್ಗದಲ್ಲಿ ಮನವೊಲಿಕೆ ಕಾರ್ಯದಿಂದ ಯಡಿಯೂರಪ್ಪನವರು ದೂರ ಸರಿದಿದ್ದಾರೆ. ಅಷ್ಟೇ ಅಲ್ಲ, ದಿಲ್ಲಿಯ ಪಕ್ಷದ ವರಿಷ್ಠರು ಹಾಗೂ ಸ್ಥಳೀಯ ನಾಯಕರ ಸಲಹೆ ಮೇರೆಗೆ ಈಶ್ವರಪ್ಪ ಅವರನ್ನು ಸಮಾಧಾನಪಡಿಸುವ ಪ್ರಯತ್ನವನ್ನು ಕೈಬಿಟ್ಟಿದ್ದಾರೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಯಡಿಯೂರಪ್ಪ-ಈಶ್ವರಪ್ಪ ಇಬ್ಬರೂ ಶಿವಮೊಗ್ಗ ಜಿಲ್ಲೆಯವರು. ಇಬ್ಬರೂ ಆರೆಸ್ಸೆಸ್ ಹಿನ್ನೆಲೆಯಿಂದ ಬಂದು ಬಿಜೆಪಿಯಲ್ಲಿ ನಾಯಕರಾಗಿ ಬೆಳೆದವರು. ಬಿಎಸ್‌ವೈ 1983ರಲ್ಲಿ ಶಾಸಕರಾದರೆ, ಕೆಎಸ್ಈ 1989ರಲ್ಲಿ ಶಾಸಕರಾಗಿ ವಿಧಾನಸೌಧದ ಮೆಟ್ಟಿಲು ಹತ್ತಿದವರು. ಒಬ್ಬರು ಲಿಂಗಾಯತರು, ಇನ್ನೊಬ್ಬರು ಕುರುಬ ಸಮಾಜಕ್ಕೆ ಸೇರಿದವರು. ಇಬ್ಬರೂ ಬಡಕುಟುಂಬದಿಂದ ಬಂದು ಕಷ್ಟದಲ್ಲಿ ಬೆಳೆದವರು. ಪಕ್ಷ ಕಟ್ಟುವ ಕಾಲದಲ್ಲಿ ಒಳ್ಳೆಯ ಸ್ನೇಹಿತರು. ಸಂಘಟನೆಗಾಗಿ ದಶಕಗಳ ಕಾಲ ಜೋಡೆತ್ತುಗಳಂತೆ ದುಡಿದವರು. ಇಬ್ಬರಿಗೂ ಮೊದಲ ಬಾರಿಗೆ ಅಧಿಕಾರ ಸಿಕ್ಕಿದ್ದು 2006ರಲ್ಲಿ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ. ಆಗಲೇ ಹಾವು-ಮುಂಗುಸಿ ಥರ ಕಚ್ಚಾಡುತ್ತಿದ್ದ ಇಬ್ಬರೂ, 2008ರ ವಿಧಾನಸಭಾ ಚುನಾವಣೆಯಲ್ಲಿ ಒಳಗೊಳಗೇ ಕತ್ತಿ ಮಸೆಯುತ್ತಿದ್ದರು. ಒಬ್ಬರಿಗೊಬ್ಬರು ಸೋಲಿಸಲು ಚಿತಾವಣೆ ನಡೆಸಿದ್ದರು. ಬಿಜೆಪಿಗಿದ್ದ ಅಲೆಯ ಕಾರಣದಿಂದಾಗಿ ಇಬ್ಬರೂ ಗೆದ್ದರು. ಒಬ್ಬರು ಮುಖ್ಯಮಂತ್ರಿಯಾದರೆ, ಮತ್ತೊಬ್ಬರು ಇಂಧನ ಸಚಿವರಾದರು. ಬಿಜೆಪಿ ಎಂಬ ಗಾಡಿಗೆ ಜೋಡೆತ್ತುಗಳಾದರು.

ಆ ಸಂದರ್ಭದಲ್ಲಿ ಯಡಿಯೂರಪ್ಪನವರೊಂದಿಗೆ ವ್ಯಾವಹಾರಿಕ ಒಡಂಬಡಿಕೆ ಮಾಡಿಕೊಂಡ ಈಶ್ವರಪ್ಪನವರು, ಶಿವಮೊಗ್ಗವನ್ನು ಅರ್ಧರ್ಧ ಹರಿದು ಹಂಚಿಕೊಳ್ಳುವಲ್ಲಿ ಯಶಸ್ವಿಯಾದರು. ಮುಖ್ಯಮಂತ್ರಿಗಿಂತ ಮುಂದೆ ಹೋಗುತ್ತಿದ್ದಾನಲ್ಲ ಎಂದು ಗೊತ್ತಾದ ಕೂಡಲೆ ಯಡಿಯೂರಪ್ಪನವರು, ‘ಈಶ್ವರಪ್ಪನವರು ಪಾರ್ಟಿ ಪ್ರೆಸಿಡೆಂಟ್ ಆದರೆ ಒಳ್ಳೇದು’ ಎಂದು ಹೇಳಿ, ಹೈಕಮಾಂಡಿಗೆ ಒಪ್ಪಿಸಿ ಇಂಧನ ಖಾತೆ ಕಿತ್ತುಕೊಂಡು ಶೋಭಾ ಕರಂದ್ಲಾಜೆಯವರಿಗೆ ಕೊಟ್ಟರು.

20 ವರ್ಷಗಳ ನಂತರ ಸಿಕ್ಕ ಅಧಿಕಾರ ಕಿತ್ತುಕೊಂಡರಲ್ಲ ಎಂದು ಸಿಟ್ಟಾದ ಈಶ್ವರಪ್ಪನವರು, ಯಡಿಯೂರಪ್ಪನವರ ವಿರುದ್ಧ ಕತ್ತಿ ಮಸೆಯತೊಡಗಿದರು. ಗಣಿ ಹಗರಣದಲ್ಲಿ ಯಡಿಯೂರಪ್ಪನವರು ಸಿಕ್ಕಿಬಿದ್ದಾಗ, ಜುಲೈ 31, 2011ರಂದು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದಾಗ, ಜೈಲಿಗೆ ಕಳುಹಿಸಿ, ಪಕ್ಷದಿಂದ ಹೊರಹಾಕಲು ಶಕ್ತಿಮೀರಿ ಶ್ರಮಿಸಿದರು. ಹೊರಹೋಗಿ ಕೆಜೆಪಿ ಕಟ್ಟಿದಾಗ ಸಂಭ್ರಮಿಸಿದರು. ಅದಕ್ಕೆ ಪ್ರತಿಯಾಗಿ ಯಡಿಯೂರಪ್ಪ ಕೂಡ ಸ್ಥಳೀಯ ವಕೀಲರೊಬ್ಬರ ಮೂಲಕ ಈಶ್ವರಪ್ಪನವರ ವಿರುದ್ಧ ಅಕ್ರಮ ಆಸ್ತಿ ಗಳಿಕೆ ಕುರಿತು ಲೋಕಾಯುಕ್ತಕ್ಕೆ ದೂರು ದಾಖಲಿಸಿ, ಡಿಸೆಂಬರ್ 24, 2012ರಂದು ಅವರ ಮನೆ-ಕಚೇರಿಗಳ ಮೇಲೆ ಲೋಕಾಯುಕ್ತ ಪೊಲೀಸರಿಂದ ದಾಳಿ ಮಾಡಿಸಿದರು. ಈಶ್ವರಪ್ಪನವರ ಮನೆಯಲ್ಲಿ ನೋಟು ಎಣಿಸುವ ಮಷಿನ್ ಸಿಕ್ಕು ಅದು ರಾಜ್ಯದಾದ್ಯಂತ ಸುದ್ದಿಯಾಯಿತು. ಆಗ ಯಡಿಯೂರಪ್ಪ ಸಂಭ್ರಮಿಸಿದರು.

ಇಷ್ಟಾದರೂ ಯಡಿಯೂರಪ್ಪ ಮತ್ತು ಈಶ್ವರಪ್ಪ- ಇಬ್ಬರೂ ಸಾರ್ವಜನಿಕವಾಗಿ ಕಾಣಿಸಿಕೊಳ್ಳುವಾಗ ತಬ್ಬಿಕೊಂಡು, ಅಷ್ಟೂ ಹಲ್ಲು ಬಿಟ್ಟುಕೊಂಡು, ಬಾಯ್ತುಂಬ ಸಿಹಿ ತುಂಬಿಕೊಂಡು ಕ್ಯಾಮರಾಗಳಿಗೆ ಪೋಸು ಕೊಡುವುದು ನಿಂತಿಲ್ಲ. ವಯಸ್ಸಾದರೂ ಅಧಿಕಾರ ಹಂಚಿಕೆ, ಆಸ್ತಿ ಖರೀದಿಸುವಿಕೆಯ ಹೊಟ್ಟೆಕಿಚ್ಚು ಕರಗಿಲ್ಲ.

ಏತನ್ಮಧ್ಯೆ, 2023ರ ವಿಧಾನಸಭಾ ಚುನಾವಣೆಯ ಸಮಯದಲ್ಲಿ, ಕೆ.ಎಸ್. ಈಶ್ವರಪ್ಪನವರಿಗೆ ಬಿಜೆಪಿ ಹೈಕಮಾಂಡ್ ಟಿಕೆಟ್ ಕೊಡದೆ, ‘ನಿಮ್ಮ ಸೇವೆ ಸಾಕು’ ಎಂದಿತು. ಹೈಕಮಾಂಡ್ ವಿರುದ್ಧ ಬಂಡೆದ್ದು ನಿಲ್ಲಲು ಬೇಕಾದ ಪ್ರಾಮಾಣಿಕತೆ ಮತ್ತು ನೈತಿಕತೆ ಇಲ್ಲದ ಈಶ್ವರಪ್ಪನವರು ದಿಲ್ಲಿಯ ಆದೇಶವನ್ನು ಶಿರಸಾವಹಿಸಿ ಪಾಲಿಸಿದರು. ವಿಧೇಯನಾಗಿದ್ದುಕೊಂಡೇ, ‘ಮಗ ಕಾಂತೇಶನಿಗೆ ಏನಾದರೂ…’ ಎಂದು ಮನವಿ ಮುಂದಿಟ್ಟರು. ದಿಲ್ಲಿ ನಾಯಕರು ನೋಡೋಣ ಎಂದರು. ಅದಕ್ಕೂ ಎದುರಾಡದ ಈಶ್ವರಪ್ಪನವರು, ‘ಲೋಕಸಭಾ ಚುನಾವಣೆಯಲ್ಲಾದರೂ…’ ಎಂದು ಮತ್ತೊಂದು ಮನವಿ ಅರ್ಪಿಸಿ ಕಾಯುತ್ತಾ ಕೂತರು.

ಈಶ್ವರಪ್ಪನವರ ದುರದೃಷ್ಟವೋ ಏನೋ, ವಿಧಾನಸಭಾ ಚುನಾವಣೆಯಲ್ಲಿ ಪಕ್ಷ ಸೋತು ಮನೆ ಸೇರಿದ್ದ ಯಡಿಯೂರಪ್ಪನವರು ಮತ್ತೆ ಮುನ್ನೆಲೆಗೆ ಬಂದರು. ಮಗ ವಿಜಯೇಂದ್ರನಿಗೆ ರಾಜ್ಯಾಧ್ಯಕ್ಷ ಪಟ್ಟ ಕಟ್ಟಿದರು. ರಾಜ್ಯ ಬಿಜೆಪಿಯ ಹಿಡಿತವನ್ನು ಬಿಗಿಗೊಳಿಸಿಕೊಂಡರು. 2024ರ ಲೋಕಸಭಾ ಚುನಾವಣೆಯ ಟಿಕೆಟ್ ಹಂಚಿಕೆಯ ಸಮಯದಲ್ಲಿ ಈಶ್ವರಪ್ಪನವರು, ‘ಮಗ ಕಾಂತೇಶನಿಗೆ ಹಾವೇರಿ ಟಿಕೆಟ್ ಕೊಡಿ’ ಎಂದು ಮತ್ತೆ ಮನವಿ ಮಾಡಿಕೊಂಡರು.

ಇದನ್ನು ಓದಿದ್ದೀರಾ?: ಲೋಹಿಯಾ ಅವರ ಚಿಂತನೆಯ ಬೆಳಕಿನಲ್ಲಿ ನಮ್ಮ ಕರ್ತವ್ಯದ ಅವಲೋಕನ

ಸಮಯ ಸಂದರ್ಭಕ್ಕಾಗಿ ಕಾದಿದ್ದ ಯಡಿಯೂರಪ್ಪನವರು, ಹಾವೇರಿ ಲೋಕಸಭಾ ಕ್ಷೇತ್ರದ ಟಿಕೆಟ್ಟನ್ನು ಬಸವರಾಜ ಬೊಮ್ಮಾಯಿಗೆ ಕೊಡಿಸಿ, ‘ಶಕ್ತಿಮೀರಿ ಶ್ರಮಿಸಿದೆ, ಆಗಲಿಲ್ಲ’ ಎಂದರು. ಯಡಿಯೂರಪ್ಪನವರ ಜೊತೆ ಜೊತೆಗೇ ಹೆಜ್ಜೆ ಹಾಕಿದ ಈಶ್ವರಪ್ಪನವರಿಗೆ ಅವರ ನಡೆ ಗೊತ್ತಾಗುವುದಿಲ್ಲವೇ? ಬಹಿರಂಗವಾಗಿಯೇ, ‘ಬೊಮ್ಮಾಯಿ ಟಿಕೆಟ್ ಕೇಳದಿದ್ದರೂ ಕೊಡಿಸುತ್ತೀರಿ, ಶೋಭಾಗೆ ಟಿಕೆಟ್ ಕೊಡಿಸಲು ಹಠಕ್ಕೆ ಬೀಳ್ತೀರಿ, ನನ್ನ ಮಗನ ವಿಷಯದಲ್ಲಿ ಯಾಕೆ ಹಠಕ್ಕೆ ಬೀಳಲಿಲ್ಲ’ ಎಂದು ಕೂಗಾಡಿ ರಂಪ ಮಾಡಿದರು. ಅಷ್ಟೇ ಅಲ್ಲ, ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ‘ನಾನೇ ಅಭ್ಯರ್ಥಿ’ ಎಂದರು. ಹೋದಲ್ಲಿ ಬಂದಲ್ಲಿ, ‘ಪಕ್ಷವನ್ನು ಅಪ್ಪ-ಮಕ್ಕಳಿಂದ ಮುಕ್ತ ಮಾಡದ ಹೊರತು ನಿರ್ಗಮಿಸುವುದಿಲ್ಲ, ಪಕ್ಷ ಶುದ್ಧಿ ಮಾಡುವುದೇ ನನ್ನ ಕೆಲಸ’ ಎಂದು ಕಾಲು ಕೆರೆದು ಕದನಕ್ಕೆ ಆಹ್ವಾನಿಸತೊಡಗಿದರು.

ಆಶ್ಚರ್ಯಕರ ಸಂಗತಿ ಎಂದರೆ, ಯಡಿಯೂರಪ್ಪನವರಾಗಲಿ, ಶಿವಮೊಗ್ಗ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿರುವ ಬಿ.ವೈ. ರಾಘವೇಂದ್ರರಾಗಲಿ, ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರರಾಗಲಿ ಈ ಬಗ್ಗೆ ತುಟಿಕ್ ಪಿಟಿಕ್ ಎನ್ನುತ್ತಿಲ್ಲ. ಇದಕ್ಕಿಂತಲೂ ಆಶ್ಚರ್ಯಕರ ವಿಚಾರವೆಂದರೆ, ಬಿಜೆಪಿ ವಿರುದ್ಧ ಬಂಡೆದ್ದರೂ, ಯಡಿಯೂರಪ್ಪನವರ ಬಗ್ಗೆ ಬಹಿರಂಗವಾಗಿ ಕುಟುಕಿದರೂ, ವಾಪಸ್ ತೆಗೆದುಕೊಳ್ಳುವ ಮಾತೇ ಇಲ್ಲ ಎಂದು ಸೆಡ್ಡು ಹೊಡೆದು ನಿಂತರೂ- ಬಿಜೆಪಿಯ ಯಾವೊಬ್ಬ ನಾಯಕನೂ ತುಟಿಬಿಚ್ಚಿಲ್ಲ. ಅಷ್ಟೇ ಅಲ್ಲ, ದಿಲ್ಲಿಯ ಹೈಕಮಾಂಡ್ ಕೂಡ ಸುಮ್ಮನಿರಿಸಲು ಮುಂದಾಗಿಲ್ಲ. ಕ್ರಮದ ಮಾತುಗಳನ್ನಾಡಿಲ್ಲ.

ಈಶ್ವರಪ್ಪನವರ ಉಮೇದುವಾರಿಕೆಯಿಂದ ಬಿಜೆಪಿಯವರೇ ಬಿಜೆಪಿ ವಿರುದ್ಧ ಸ್ಪರ್ಧಾಳುಗಳಾಗಿ ಮತದಾರರಿಗೆ ಕೆಟ್ಟ ಸಂದೇಶ ರವಾನೆಯಾಗಬಹುದು. ಮತವಿಭಜನೆಯಾಗಿ ಬಿಜೆಪಿ ಸೋಲಬಹುದು. ಇಷ್ಟೆಲ್ಲ ಅನಾಹುತಗಳಿದ್ದರೂ, ಯಡಿಯೂರಪ್ಪ ಅಂಡ್ ಸನ್ಸ್ ಈ ಬಗ್ಗೆ ಮಾತನಾಡುತ್ತಿಲ್ಲ. ಅಷ್ಟೇ ಅಲ್ಲ, ಅದು ತಲೆಕೆಡಿಸಿಕೊಳ್ಳುವ ವಿಷಯವೇ ಅಲ್ಲ ಎಂಬಂತೆ ತಣ್ಣಗಿದ್ದಾರೆ.

ಇದನ್ನು ಗಮನಿಸಿದ ಶಿವಮೊಗ್ಗದ ಮತ್ತೊಬ್ಬ ಹಿರಿಯ ನಾಯಕ, ಈ ಹಿಂದೆ ಬಿಜೆಪಿಯಲ್ಲಿದ್ದು ಈಗ ಕಾಂಗ್ರೆಸ್ಸಿಗೆ ಬಂದಿರುವ ಆಯನೂರು ಮಂಜುನಾಥ್, ‘ಈಶ್ವರಪ್ಪನವರು ಸ್ಪರ್ಧಿಸುವ ಮೂಲಕ ಬಿ.ವೈ. ರಾಘವೇಂದ್ರರನ್ನು ಗೆಲ್ಲಿಸುವ ಒಳಒಪ್ಪಂದವಾಗಿದೆ’ ಎಂದಿದ್ದಾರೆ. ಅಂದರೆ, ಯಡಿಯೂರಪ್ಪ ಮತ್ತು ಈಶ್ವರಪ್ಪನವರ ನಡುವೆ ಒಪ್ಪಂದವಾಗಿದೆ. ಆ ಒಪ್ಪಂದದಂತೆ, ಚುನಾವಣೆಯ ನಂತರ ಈಶ್ವರಪ್ಪರಿಗೆ ರಾಜ್ಯಪಾಲರ ಹುದ್ದೆ, ಪುತ್ರ ಕಾಂತೇಶ್‌ಗೆ ಎಂಎಲ್‌ಸಿ ಸ್ಥಾನ ಸಿಗಲಿದೆ.

ಬರೀ ಇದಷ್ಟೇ ಆಗಿದ್ದರೆ, ಆಯನೂರರ ಮಾತಿಗೆ ಬೆಲೆ ಬರುತ್ತಿರಲಿಲ್ಲ. ಅವರೇ ಮುಂದುವರೆದು, ‘ಬಿಜೆಪಿ ಲಿಂಗಾಯತರ ಮತ ಪಡೆದು ಹಿಂದುಳಿದ ಜಾತಿಗಳ ಮತಗಳನ್ನು ಒಡೆಯುವ ತಂತ್ರ ಇದರಲ್ಲಡಗಿದೆ. ಎದುರಾಳಿಯಾಗಿರುವ ಗೀತಾ ಶಿವರಾಜಕುಮಾರ್ ಈಡಿಗ ಜಾತಿಗೆ ಸೇರಿದವರು. ಕಾಂಗ್ರೆಸ್ ಪಕ್ಷಕ್ಕೆ ಅಹಿಂದ ಮತಗಳ ಬಲವಿದೆ. ಇದನ್ನು ಛಿದ್ರ ಮಾಡಲು ಈಶ್ವರಪ್ಪನವರೊಂದಿಗೆ ಒಳಒಪ್ಪಂದವಾಗಿದೆ’ ಎಂದಿದ್ದಾರೆ. ಅಂದರೆ, ಜೋಡೆತ್ತುಗಳು ಬಿಜೆಪಿ ಗೆಲ್ಲಿಸಲು ಇಲ್ಲಿ ಒಂದಾಗಿರುವುದನ್ನು ಆಯನೂರು ಮಂಜುನಾಥ್ ಬಹಿರಂಗಪಡಿಸಿದ್ದಾರೆ.

ಈಶ್ವರಪ್ಪ-ಯಡಿಯೂರಪ್ಪ
ಈಶ್ವರಪ್ಪ-ಯಡಿಯೂರಪ್ಪ

ಆದರೆ, ಈಶ್ವರಪ್ಪನವರ ಆಪ್ತರು, ‘ಅವರಿಗೆ ಯಡಿಯೂರಪ್ಪನವರ ಕುಟುಂಬದ ಮೇಲೆ ಸಿಕ್ಕಾಪಟ್ಟೆ ಸಿಟ್ಟಿದೆ. ಜೊತೆಗೆ ದಿಲ್ಲಿಯ ಬಿಜೆಪಿಯ ನಾಯಕರಿಗೂ ಯಡಿಯೂರಪ್ಪನವರನ್ನು ಕಂಡರಾಗದು. ಈ ಚುನಾವಣೆಯಲ್ಲಿ ಲಿಂಗಾಯತರ ಮತಗಳಿಗಾಗಿ ಅವರನ್ನು ಬಳಸಿಕೊಳ್ಳುವುದು ಮತ್ತು ಬಳಸಿಕೊಂಡ ನಂತರ ಮನೆಗೆ ಕಳಿಸುವುದು ದಿಲ್ಲಿ ನಾಯಕರ ತಂತ್ರವಾಗಿದೆ. ಅದಕ್ಕಾಗಿ ಅವರು ಈಶ್ವರಪ್ಪನವರನ್ನು ಅಸ್ತ್ರದಂತೆ ಬಳಸಿಕೊಂಡಿದ್ದಾರೆ. ಯಡಿಯೂರಪ್ಪನವರ ಕುಟುಂಬದ ವಿರುದ್ಧ ಮಾತಾಡದಿದ್ದರೆ ಐಟಿ ಅಧಿಕಾರಿಗಳು ಈಶ್ವರಪ್ಪನವರ ಮನೆಯಲ್ಲಿ ಇರುತ್ತಾರೆ ಎಂಬ ಬೆದರಿಕೆಯೂ ಇದೆ. ದಿಲ್ಲಿ ನಾಯಕರನ್ನು ಎದುರು ಹಾಕಿಕೊಳ್ಳುವ ಧೈರ್ಯ ಈಶ್ವರಪ್ಪ ಅವರಿಗಿಲ್ಲ’ ಎಂಬ ಸಮಜಾಯಿಷಿಯನ್ನು ಕೊಡುತ್ತಾರೆ. ಅಂದರೆ, ಚುನಾವಣೆ ಗೆಲ್ಲುವ ತನಕ ಯಡಿಯೂರಪ್ಪನವರು ಮತ್ತು ಅವರ ಮೂಲಕ ಲಿಂಗಾಯತರ ಮತಗಳು ಬಿಜೆಪಿಗೆ ಬೇಕಾಗಿದೆ ಎನ್ನುವುದು ಇದರಿಂದ ಸ್ಪಷ್ಟವಾಗುತ್ತದೆ. ಜೊತೆಗೆ ಈಶ್ವರಪ್ಪನವರನ್ನು ಅಸ್ತ್ರದಂತೆ ಬಳಸಿ, ಒಂದೇ ಕಲ್ಲಿನಲ್ಲಿ ಎರಡು ಹಕ್ಕಿಗಳ ರೆಕ್ಕೆ ಮುರಿದು ಮನೆಯಲ್ಲಿ ಕೂರಿಸುವ ತಂತ್ರವೂ ಅಡಗಿದೆ.

ಇವುಗಳ ನಡುವೆಯೇ ಮತ್ತೊಂದು ಸುದ್ದಿ ರಾಜಕೀಯ ವಲಯದಲ್ಲಿ ಹರಿದಾಡುತ್ತಿದೆ. ಅದೇನೆಂದರೆ, ಈಶ್ವರಪ್ಪನವರು ಕಾಂಗ್ರೆಸ್ಸಿನ ಸಿದ್ದರಾಮಯ್ಯನವರೊಂದಿಗೂ ಒಳಒಪ್ಪಂದ ಮಾಡಿಕೊಂಡಿದ್ದಾರೆ ಎಂಬುದು. ಅಂದರೆ, ಬಿಜೆಪಿಯ ಮತಗಳನ್ನು ಒಡೆಯಲು, ಅಹಿಂದ ಮತಗಳನ್ನು ಕ್ರೋಡೀಕರಿಸಲು ಸಿದ್ದರಾಮಯ್ಯನವರೇ ಈಶ್ವರಪ್ಪನವರನ್ನು ಕಣಕ್ಕಿಳಿಸಿದ್ದಾರೆ ಎಂಬ ಅನುಮಾನಗಳಿವೆ ಎಂಬುದು.

ಒಂದು ಯಡಿಯೂರಪ್ಪನವರಿಗೆ ಅನುಕೂಲ ಮಾಡಿಕೊಡಲು; ಇನ್ನೊಂದು ಹೈಕಮಾಂಡ್ ಆದೇಶ ಪಾಲಿಸಿ ರಾಘವೇಂದ್ರರನ್ನು ಸೋಲಿಸಿ, ಆ ಮೂಲಕ ಯಡಿಯೂರಪ್ಪನವರನ್ನು ರಾಜಕೀಯ ವನವಾಸಕ್ಕೆ ದೂಡಲು; ಮತ್ತೊಂದು ಜಾತಿಪ್ರೀತಿಗೊಳಗಾಗಿ ಸಿದ್ದರಾಮಯ್ಯನವರೊಂದಿಗೆ ಕೈ ಜೋಡಿಸಿ ಬಿಜೆಪಿ ಸೋಲಿಸಲು.

ರಾಜಕಾರಣದಲ್ಲಿ ಏನು ಬೇಕಾದರೂ ಆಗಬಹುದು. ಈಶ್ವರಪ್ಪನವರು ಈಗಲೂ ಯಡಿಯೂರಪ್ಪನವರ ಮಿತ್ರರಾಗಿರಬಹುದು. ಹಾಗೆಯೇ ಕಾಂಗ್ರೆಸ್ಸಿನ ಸಿದ್ದರಾಮಯ್ಯನವರ ಮಾತಿಗೂ ಮಣೆ ಹಾಕಿರಬಹುದು. ಹಾಗೆಯೇ ದಿಲ್ಲಿ ನಾಯಕರ ದಾಳಿಗೆ ಹೆದರಿ, ಅವರು ಹೇಳಿದಂತೆ ಕೇಳುತ್ತಿರಲೂಬಹುದು.

ಇದನ್ನು ಓದಿದ್ದೀರಾ?: ಹೊಸ ಓದು | ನಡುಬಗ್ಗಿಸದ ಎದೆಯ ದನಿ: ಶೂದ್ರ ಯುವಕರು ಓದಬೇಕಾದ ಪುಸ್ತಕ

76ರ ಹರೆಯದ ಈಶ್ವರಪ್ಪನವರ ವ್ಯಕ್ತಿತ್ವನ್ನು ಸೂಕ್ಷ್ಮವಾಗಿ ಗಮನಿಸಿದರೆ, ಅವರ ರಾಜಕಾರಣದ ಹಾದಿಯನ್ನೊಮ್ಮೆ ಅವಲೋಕಿಸಿದರೆ- ಅವರ ಇಂದಿನ ಜೂಟಾಟಗಳನ್ನು ನಂಬಲು ಹಲವಾರು ಕಾರಣಗಳು ಸಿಗುತ್ತವೆ. ಜೊತೆಗೆ ಬೇಕಾದಂತೆ ಬಳಕೆಗೆ ಬರುವ ಅವರ ಬಫೂನ್ ವ್ಯಕ್ತಿತ್ವ ಅದಕ್ಕೆ ಪುಷ್ಟಿ ನೀಡುತ್ತದೆ.

ಒಟ್ಟೊಟ್ಟಿಗೆ ಮೂರು ಮೂರು ಪಾತ್ರದಾರಿಗಳಾಗಿ, ಮೂವರಿಗೂ ಆಪ್ತರಾಗಿರುವಂತೆ ಆಟ ಆಡುತ್ತಿರುವ ಈಶ್ವರಪ್ಪನವರ ಬಣ್ಣ ಹಾಗೂ ಬಿಜೆಪಿಯ ಬಣ ರಾಜಕಾರಣದ ಹೂರಣ ಹೊರಬೀಳುವ ಕಾಲ ದೂರವಿಲ್ಲ, ಕಾಯಿರಿ.

Basavaraju Megalkeri
+ posts

ಲೇಖಕ, ಪತ್ರಕರ್ತ

ಪೋಸ್ಟ್ ಹಂಚಿಕೊಳ್ಳಿ:

ಬಸವರಾಜು ಮೇಗಲಕೇರಿ
ಬಸವರಾಜು ಮೇಗಲಕೇರಿ
ಲೇಖಕ, ಪತ್ರಕರ್ತ

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ನೇಹಾ ಕೊಲೆ ಪ್ರಕರಣ | ಮತಾಂತರ ಆಯಾಮದಿಂದಲೇ ತನಿಖೆಯಾಗಬೇಕು: ಪ್ರಲ್ಹಾದ್‌ ಜೋಶಿ ಆಗ್ರಹ

"ಹುಬ್ಬಳ್ಳಿಯಲ್ಲಿ ಇತ್ತೀಚೆಗೆ ಕೊಲೆಯಾಗಿರುವ ನೇಹಾ ಹಿರೇಮಠ ಅವರನ್ನು ಮತಾಂತರ ಮಾಡಲು ಕೊಲೆ...

ಮುಸ್ಲಿಂ ಮೀಸಲಾತಿ ಕುರಿತ ಮೋದಿ ಹೇಳಿಕೆ ಅವರ ಸೋಲಿನ ಭೀತಿ, ಹತಾಶೆಯ ಪ್ರತೀಕ: ಸಿ ಎಂ ಸಿದ್ದರಾಮಯ್ಯ ತಿರುಗೇಟು

"ಹಿಂದುಳಿದ ಜಾತಿ ಮತ್ತು ದಲಿತರ ಮೀಸಲಾತಿಯನ್ನು ಕಿತ್ತು ಮುಸ್ಲಿಮರಿಗೆ ನೀಡಲು ಕಾಂಗ್ರೆಸ್...

ಪಂಜಾಬ್‌| ಜೈಲಿನಲ್ಲಿರುವ ಪ್ರತ್ಯೇಕತಾವಾದಿ ಅಮೃತಪಾಲ್ ಸಿಂಗ್ ಲೋಕಸಭೆ ಚುನಾವಣೆಗೆ ಸ್ಪರ್ಧೆ

ಪ್ರಸ್ತುತ ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಅಸ್ಸಾಂನ ಜೈಲಿನಲ್ಲಿರುವ ಪ್ರತ್ಯೇಕತಾವಾದಿ ಅಮೃತಪಾಲ್ ಸಿಂಗ್,...

ಕರಗ ಮಹೋತ್ಸವ: ಮೆರವಣಿಗೆ ವೇಳೆ ಯುವಕರ ನಡುವೆ ಗಲಾಟೆ; ಓರ್ವ ಸಾವು

ಕಳೆದ ಒಂದು ವಾರದಿಂದ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಐತಿಹಾಸಿಕ ಕರಗ ಮಹೋತ್ಸವದ...