ಗ್ರಾಹಕರಿಗೆ ಶುಭಸುದ್ದಿ | ಶೀಘ್ರವೇ ಎಸಿ, ಫ್ರಿಜ್, ವಾಷಿಂಗ್ ಮಷಿನ್ ದರ ಇಳಿಕೆ!

Electronic Goods Image
  • ಎಲೆಕ್ಟ್ರಾನಿಕ್ ಉಪಕರಣಗಳ ದರದಲ್ಲಿ ಕಡಿತ
  • ದಾಸ್ತಾನು ತೆರವು ಕಾರಣ ಕಂಪನಿಗಳ ನಿರ್ಧಾರ

ಹಬ್ಬದ ಪ್ರಯುಕ್ತ ಗ್ರಾಹಕರಿಗೆ ಮನೆಯ ಎಲ್ಲ ಎಲೆಕ್ಟ್ರಾನಿಕ್ ಉಪಕರಣಗಳಾದ ಎಸಿ, ಫ್ರಿಜ್ ಮತ್ತು ವಾಷಿಂಗ್ ಮಷಿನ್‌ಗಳನ್ನು ಗ್ರಾಹಕರ ಕೈಗೆಟುಕುವ ಬೆಲೆಯಲ್ಲಿ ನೀಡುವುದಾಗಿ ಕಂಪನಿಗಳು ಹೇಳಿಕೊಂಡಿವೆ.

ತಾಮ್ರ, ಉಕ್ಕು ಮತ್ತು ಅಲ್ಯೂಮಿನಿಯಂ ವಲಯದಲ್ಲಿ ಕಚ್ಚಾ ವಸ್ತುಗಳ ದರ ಕಳೆದ ಮೂರು ವರ್ಷಗಳಿಂದ ಸಾರ್ವಕಾಲಿಕ ಗರಿಷ್ಠ ಮಟ್ಟ ತಲುಪಿತ್ತು. ಈ ಕಾರಣ ಎಲೆಕ್ಟ್ರಾನಿಕ್ ಉಪಕರಣ ತಯಾರಕ ಕಂಪನಿಗಳಾದ ಬಜಾಜ್ ಎಲೆಕ್ಟ್ರಿಕಲ್ಸ್, ಬ್ಲೂಸ್ಟಾರ್, ಕ್ರಾಂಪ್ಟನ್, ಹ್ಯಾವೆಲ್ಸ್, ವೋಲ್ಟಾಸ್ ಹಾಗೂ ವರ್ಲ್‌ಪೂಲ್‌ ಕಂಪನಿಗಳಿಗೆ ಕಚ್ಚಾ ವಸ್ತುಗಳು ದುಬಾರಿಯಾಗಿದ್ದವು. 

ಆ ಹಿನ್ನೆಲೆಯಲ್ಲಿ ಕಂಪನಿಗಳು ಕೂಡ ಎಲೆಕ್ಟ್ರಾನಿಕ್ ವಸ್ತುಗಳ ಬೆಲೆ ಏರಿಸಿ, ಹೆಚ್ಚುವರಿ ಉತ್ಪಾದನಾ ವೆಚ್ಚದ ಹೊರೆಯನ್ನು ಗ್ರಾಹಕರ ಮೇಲೆ ಹೇರಿದ್ದವು. ಹಾಗಾಗಿ ಎಲೆಕ್ಟ್ರಾನಿಕ್ ವಸ್ತುಗಳ ದರದಲ್ಲಿ ಏರಿಕೆಯಾಗಿತ್ತು ಎಂದು ಬ್ರೋಕರೇಜ್ ಸಂಸ್ಥೆ ತಿಳಿಸಿದೆ.

ಆದರೆ, ಈ ವರ್ಷದ ಏಪ್ರಿಲ್‌ನಿಂದ ತಾಮ್ರದ ಬೆಲೆಯಲ್ಲಿ ಶೇ.21ರಷ್ಟು, ಉಕ್ಕು ಶೇ.19ರಷ್ಟು ಮತ್ತು ಅಲ್ಯೂಮಿನಿಯಂ ಶೇ.36ರಷ್ಟು ಕಡಿಮೆಯಾಗಿದೆ ಎಂದು ಐಸಿಐಸಿಐ ಸಂಸ್ಥೆ ವರದಿ ಮಾಡಿದೆ. ಕಚ್ಚಾ ವಸ್ತುಗಳ ಬೆಲೆ ಇಳಿಕೆಯ ಹಿನ್ನೆಲೆಯಲ್ಲಿ ಇದೀಗ ಎಲೆಕ್ಟ್ರಾನಿಕ್‌ ವಸ್ತುಗಳ ಬೆಲೆಯನ್ನು ಇಳಿಸಲು ತಯಾರಕ ಸಂಸ್ಥೆಗಳು ನಿರ್ಧರಿಸಿವೆ.

ಜೊತೆಗೆ, ಕಳೆದ ಎರಡು ವರ್ಷಗಳಿಂದ ಕೋವಿಡ್‌ ಲಾಕ್‌ಡೌನ್‌ ಮತ್ತು ಆರ್ಥಿಕ ಬಿಕ್ಕಟ್ಟಿನ ಕಾರಣದಿಂದ ಮಾರಾಟ ಹಿನ್ನಡೆ ಕಂಡಿತ್ತು. ಆ ಹಿನ್ನೆಲೆಯಲ್ಲಿ ಕಂಪನಿಗಳು ದಾಸ್ತಾನು ಖಾಲಿ ಮಾಡುವ(ಸ್ಟಾಕ್‌ ಕ್ಲಿಯರೆನ್ಸ್) ಉದ್ದೇಶದಿಂದಲೂ ಎಲೆಕ್ಟ್ರಾನಿಕ್ ವಸ್ತುಗಳನ್ನು ಗ್ರಾಹಕರಿಗೆ ಕಡಿಮೆ ದರದಲ್ಲಿ ನೀಡಲು ಮುಂದಾಗಿವೆ. 

ವಿಶೇಷ ರಿಯಾಯ್ತಿ (ಡಿಸ್ಕೌಂಟ್) ನೀಡುವ ಮೂಲಕ ಕಂಪನಿಗಳು, ಗ್ರಾಹಕರಿಂದಲೇ ತಮ್ಮ ಉತ್ಪನ್ನಗಳಿಗೆ ಪ್ರಚಾರ ಪಡೆದಂತೆಯೂ ಆಗುತ್ತದೆ ಎಂಬ ಲೆಕ್ಕಾಚಾರವನ್ನೂ ಹೊಂದಿದ್ದು, ಇಂತಹ ಬೆಳವಣಿಗೆಗಳು ವರ್ಷದ ದ್ವಿತೀಯಾರ್ಧದ ಹಬ್ಬ-ಹರಿದಿನಗಳಲ್ಲಿ ಆರಂಭವಾಗುವುದರಿಂದ ಗ್ರಾಹಕರಿಗೂ ಸಂತಸ ನೀಡಲಿವೆ. 

ಆದರೆ, ಈ ಅಗ್ಗದ ದರ ಬಹಳ ದಿನ ಉಳಿಯಲಾರದು. ಭಾರತದಲ್ಲಿ ಎಲೆಕ್ಟ್ರಾನಿಕ್ ವಸ್ತುಗಳ ದರ ಮತ್ತೆ ಏರಿಕೆಯಾಗಲಿದೆ. ವಿಶೇಷವಾಗಿ ಗೃಹೋಪಯೋಗಿ ಉಪಕರಣಗಳು ಮುಂದಿನ ದಿನಗಳಲ್ಲಿ ದುಬಾರಿಯಾಗಲಿವೆ ಎಂದು ಐಸಿಐಸಿಐ ಸಂಸ್ಥೆ ವರದಿ ಮಾಡಿದೆ.

ನಿಮಗೆ ಏನು ಅನ್ನಿಸ್ತು?
2 ವೋಟ್