ಸುಳ್ಳು ಸುದ್ದಿ ಮತ್ತು ದ್ವೇಷ ಹರಡುವ ಆರೋಪ | 16 ಯೂಟ್ಯೂಬ್ ಚಾನಲ್‌ಗಳಿಗೆ ಕೇಂದ್ರ ನಿರ್ಬಂಧ

  • ಕೋಮು ಸಂಘರ್ಷಕ್ಕೆ ಪ್ರಚೋದನೆ ಆರೋಪ
  • ದೇಶದ ಸಾರ್ವಜನಿಕ ಸುವ್ಯವಸ್ಥೆಗೆ ಭಂಗ

ಸುಳ್ಳು ಸುದ್ದಿ ಮತ್ತು ದ್ವೇಷ ಹರಡುತ್ತಿದ್ದಾರೆ ಎಂದು ಆರೋಪಿಸಿ ಒಂದು ಫೇಸ್‌ಬುಕ್‌ ಪುಟ ಮತ್ತು 16 ಯೂಟ್ಯೂಬ್ ಚಾನೆಲ್‌ಗಳನ್ನು ಮಾಹಿತಿ ಮತ್ತು ಪ್ರಸಾರ ಸಚಿವಾಲಯ ನಿರ್ಬಂಧಿಸಿದೆ.

ನಿರ್ಬಂಧಿಸಲಾದ ಯೂಟ್ಯೂಬ್‌ ಚಾನೆಲ್‌ಗಳ ಪೈಕಿ 10 ಚಾನೆಲ್‌ಗಳು ಭಾರತದಲ್ಲಿ ಕಾರ್ಯನಿರ್ವಹಿಸುತ್ತಿವೆ ಮತ್ತು 6 ಪಾಕಿಸ್ತಾನದಿಂದ ನಿರ್ವಹಣೆಗೊಳ್ಳುತ್ತಿವೆ. ಈ ಎಲ್ಲಾ ಚಾನೆಲ್‌ಗಳು ಒಟ್ಟು 68 ಕೋಟಿ ವೀಕ್ಷಕರನ್ನು ಹೊಂದಿವೆ ಎಂದು ಸಚಿವಾಲಯ ಹೇಳಿದೆ.

ಐಟಿ ನಿಯಮ, 2021ರ ಅಡಿಯಲ್ಲಿ ತುರ್ತು ಅಧಿಕಾರವನ್ನು ಬಳಸಿಕೊಂಡು, ಸಚಿವಾಲಯವು ಆ ಚಾನೆಲ್‌ಗಳನ್ನು ನಿರ್ಬಂಧಿಸಿ ಏಪ್ರಿಲ್ 22ರಂದು ಎರಡು ಪ್ರತ್ಯೇಕ ಆದೇಶಗಳನ್ನು ಜಾರಿಗೊಳಿಸಿದೆ.

ನಕಲಿ ಸುದ್ದಿಗಳನ್ನು ಹರಡುವುದು, ಭಯ ಬಿತ್ತುವುದು, ಕೋಮು ಸಂಘರ್ಷಕ್ಕೆ ಪ್ರಚೋದನೆ ನೀಡುವ ಆರೋಪದ ಮೇಲೆ ಸಾಮಾಜಿಕ ಜಾಲತಾಣಗಳು ಮತ್ತು ಯೂಟ್ಯೂಬ್‌ ಚಾನೆಲ್‌ಗಳನ್ನು ನಿರ್ಬಂಧಿಸುವುದನ್ನು ಕಳೆದ ಡಿಸೆಂಬರ್‌ನಲ್ಲಿ ಸರ್ಕಾರ ಆರಂಭಿಸಿತು. ಅಂದಿನಿಂದ ಇಲ್ಲಿಯವರೆಗೆ ಸುಮಾರು 90 ಚಾನೆಲ್‌ಗಳು ಮತ್ತು ಸಾಮಾಜಿಕ ಮಾಧ್ಯಮ ಪುಟಗಳನ್ನು ಸರ್ಕಾರ ನಿರ್ಬಂಧಿಸಿದೆ. 

ನಿರ್ಬಂಧಿಸಲಾದ ಡಿಜಿಟಲ್ ಸುದ್ದಿ ಮಾಧ್ಯಮಗಳ ಪ್ರಕಾಶಕರು ಮಾಹಿತಿ ಮತ್ತು ಪ್ರಸಾರ ನಿಯಮಗಳ ಅಡಿಯಲ್ಲಿ ಅಗತ್ಯ ಮಾಹಿತಿಯನ್ನು ನಮಗೆ ಒದಗಿಸಿಲ್ಲ ಎಂದು ಸಚಿವಾಲಯ ಹೇಳಿದೆ. 

"ನಿರ್ಬಂಧಕ್ಕೊಳಗಾದ 10 ಭಾರತೀಯ ಯೂಟ್ಯೂಬ್ ಚಾನೆಲ್‌ಗಳಲ್ಲಿ ಪ್ರಸಾರವಾದ ವಿಷಯಗಳು ವಿವಿಧ ಧಾರ್ಮಿಕ ಸಮುದಾಯಗಳ ಸದಸ್ಯರ ನಡುವೆ ದ್ವೇಷವನ್ನು ಪ್ರಚೋದಿಸುತ್ತವೆ. ಒಂದು ಸಮುದಾಯವನ್ನು ಭಯೋತ್ಪಾದಕರು ಎಂದು ಉಲ್ಲೇಖಿಸಿವೆ. ಇಂತಹ ವಿಷಯವು ಕೋಮು ಸೌಹಾರ್ದತೆ ಮತ್ತು ಸಾರ್ವಜನಿಕ ಸುವ್ಯವಸ್ಥೆಗೆ ಭಂಗ ತರುತ್ತವೆ" ಎಂದು ಸಚಿವಾಲಯ ತಿಳಿಸಿದೆ. 

ನಿರ್ಬಂಧಿಸಲಾದ ಚಾನೆಲ್‌ಗಳು "ಟರ್ಕಿಯು ಭಾರತದ $400 ಮೌಲ್ಯದ ರಕ್ಷಣಾ ವ್ಯವಸ್ಥೆಯನ್ನು ನಾಶಪಡಿಸುತ್ತಿದೆ. ಸೌದಿ ಅರೇಬಿಯಾ ಭಾರತಕ್ಕೆ ತೈಲ ರಫ್ತು ನಿಲ್ಲಿಸುತ್ತದೆ. ಭಾರತದ ಮೇಲೆ ನಿರ್ಬಂಧಗಳನ್ನು ಹೇರಲು ಜರ್ಮನಿ ಒತ್ತಾಯಿಸುತ್ತಿದೆ. ರಷ್ಯಾ ಉಕ್ರೇನ್‌ನಲ್ಲಿ 40 ಭಾರತೀಯ ಸೈನಿಕರನ್ನು ಗಲ್ಲಿಗೇರಿಸಿದೆ" ಎಂಬಂತಹ ಸುಳ್ಳು ಮತ್ತು ದ್ವೇಷ ಪೂರಿತ ಸುದ್ದಿಗಳನ್ನು ಪ್ರಕಟಿಸಿವೆ. ಇವು ದೇಶದಲ್ಲಿ ಸಾರ್ವಜನಿಕ ಸುವ್ಯವಸ್ಥೆಗೆ ಹಾನಿಕಾರಕವಾಗಿದೆ ಎಂದು ಗಮನಿಸಲಾಗಿದೆ ಎಂದು ಸಚಿವಾಲಯ ಮಾಹಿತಿ ನೀಡಿದೆ.  

ಈ ತಿಂಗಳ ಆರಂಭದಲ್ಲಿ, ಸಚಿವಾಲಯವು ಅಂತಹ 22 ಯೂಟ್ಯೂಬ್ ಚಾನಲ್‌ಗಳು ಮತ್ತು ಸಾಮಾಜಿಕ ಮಾಧ್ಯಮಗಳನ್ನು ನಿರ್ಬಂಧಿಸಿದೆ.

ಜನವರಿಯಲ್ಲಿ 35 ಯೂಟ್ಯೂಬ್ ಸುದ್ದಿ ಚಾನೆಲ್‌ಗಳು ಮತ್ತು ಎರಡು ವೆಬ್‌ಸೈಟ್‌ಗಳನ್ನು ನಿರ್ಬಂಧಿಸಲಾಗಿತ್ತು. 

ನಿರ್ಬಂಧಗೊಳಪಟ್ಟ ಯೂಟ್ಯೂಬ್ ಚಾನೆಲ್‌ಗಳು

ಸೈನಿ ಎಜುಕೇಶನ್ ರಿಸರ್ಚ್, ಹಿಂದಿ ಮೇ ದೇಖೋ, ಟೆಕ್ನಿಕಲ್ ಯೋಗೇಂದ್ರ, ಆಜ್ ತೆ ನ್ಯೂಸ್, ಡಿಫೆನ್ಸ್ ನ್ಯೂಸ್24x7, ದಿ ಸ್ಟಡಿ ಟೈಮ್, ಲೇಟೆಸ್ಟ್ ಅಪ್‌ಡೇಟ್, ಎಂಆರ್‌ಎಫ್ ಟಿವಿ ಲೈವ್ ಮತ್ತು ತಹಫೂಜ್-ಇ-ದೀನ್ ಇಂಡಿಯಾ ಎಂಬ ಚಾನೆಲ್‌ಗಳನ್ನು ನಿರ್ಬಂಧಿಸಲಾಗಿದೆ.  ಇವೆಲ್ಲವೂ ಭಾರತದಲ್ಲಿಯೇ ನೆಲೆಗೊಂಡಿದ್ದವು.

ಉಳಿದಂತೆ, ಪಾಕಿಸ್ತಾನದಿಂದ ಕಾರ್ಯನಿರ್ವಹಿಸುತ್ತಿದ್ದ ಆಜ್‌ತಕ್‌ ಪಾಕಿಸ್ತಾನ್, ಡಿಸ್ಕವರ್ ಪಾಯಿಂಟ್, ರಿಯಾಲಿಟಿ ಚೆಕ್ಸ್, ಕೈಸರ್ ಖಾನ್, ದಿ ವಾಯ್ಸ್ ಆಫ್ ಏಷ್ಯಾ, ಮತ್ತು ಬೋಲ್ ಮೀಡಿಯಾ ಬೋಲ್ ಅನ್ನು ನಿರ್ಬಂಧಿಸಲಾಗಿದೆ. 

ನಿಷೇಧಿತ ಫೇಸ್‌ಬುಕ್ ಪುಟವನ್ನು ತಹಫೂಜ್ ಇ ದೀನ್ ಮೀಡಿಯಾ ಸರ್ವಿಸ್ ಇಂಡಿಯಾ ಎಂದು ಗುರುತಿಸಿದೆ.

ನಿಮಗೆ ಏನು ಅನ್ನಿಸ್ತು?
4 ವೋಟ್