ಬೆಂಗಳೂರಿನ ಪ್ರಯಾಣಿಕರಿಗೆ ಡಿಜಿಟಲ್ ಪಾಸ್ ಬಳಸಲು ಬಿಎಂಟಿಸಿ ಸಲಹೆ

BMTC Image
  • ಭದ್ರತಾ ಸೌಲಭ್ಯಗಳನ್ನು ಬಳಸಿ ಡಿಜಿಟಲ್ ಪಾಸ್ ಅಭಿವೃದ್ಧಿಪಡಿಸಲಾಗಿದೆ
  • ಐದು ಸಾವಿರಕ್ಕೂ ಅಧಿಕ ಬಳಕೆದಾರರು ಡಿಜಿಟಲ್‌ ಪಾಸ್‌ ಖರೀದಿಸಿದ್ದಾರೆ

ಪಾಸ್‌ಗಳನ್ನು ಖರೀದಿಸಲು ಟಿಕೆಟ್ ಕೌಂಟರ್‌ಗಳ ಮುಂದೆ ಉದ್ದನೆಯ ಸರತಿ ಸಾಲಿನಲ್ಲಿ ನಿಲ್ಲಬೇಕಾದ ಪ್ರಯಾಣಿಕರಿಗೆ ಸಿಹಿ ಸುದ್ದಿ. ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಮತ್ತು ಟುಮೊಕ್ ಸಂಸ್ಥೆಯ ಸಹಯೋಗದೊಂದಿಗೆ ಮೊಬೈಲ್ ಆಧಾರಿತ ಡಿಜಿಟಲ್ ಪಾಸ್ ವ್ಯವಸ್ಥೆಯನ್ನು ಪರಿಚಯಿಸಿದೆ. 

ಪ್ರಯಾಣಿಕರು ಟುಮೊಕ್ ಅಪ್ಲಿಕೇಶನ್ ಮೂಲಕ ಆನ್‌ಲೈನ್‌ನಲ್ಲಿ ಪಾಸ್‌ಗಳನ್ನು ಖರೀದಿಸಬಹುದು. ಈ ಯೋಜನೆಯನ್ನು ಸದ್ಯಕ್ಕೆ ಪ್ರಾಯೋಗಿಕವಾಗಿ ಪರಿಚಯಿಸಲಾಗಿದೆ. ಶಾಂತಿನಗರದಲ್ಲಿರುವ ಬಿಎಂಟಿಸಿ ಕೇಂದ್ರ ಕಚೇರಿಯಲ್ಲಿ ಡಿಜಿಟಲ್ ಯೋಜನೆಗೆ ಚಾಲನೆ ನೀಡಿದ್ದು, ಪಾಸ್‌ಗಳನ್ನು ಪರಿಶೀಲಿಸಲು ಕಂಡಕ್ಟರ್‌ಗಳಿಗೆ ಕ್ಯೂಆರ್ ಕೋಡ್ ಓದಬಲ್ಲ ಎಲೆಕ್ಟ್ರಾನಿಕ್ ಟಿಕೆಟಿಂಗ್ ಯಂತ್ರವನ್ನು (ಇಟಿಎಂಗಳು) ನೀಡಲಾಗಿದೆ. 

Image
Tummoc App

ಪ್ರಯಾಣಿಕರು ಮೊಬೈಲ್ ಅಪ್ಲಿಕೇಶನ್ ಮೂಲಕ ಆನ್‌ಲೈನ್‌ ಪಾಸ್‌ಗಳನ್ನು ಖರೀದಿಸಿ. ಯುಪಿಐ ಮೂಲಕ ಆನ್‌ಲೈನ್ ಪಾವತಿ ಮಾಡಬಹುದು ಮತ್ತು ಇತರ ವೈಶಿಷ್ಟ್ಯವನ್ನು ಬಳಸಲು, ಪ್ರಯಾಣಿಕರು ಗೂಗಲ್ ಪ್ಲೇ ಸ್ಟೋರ್‌ನಿಂದ ಟುಮೊಕ್ ಅಪ್ಲಿಕೇಶನ್‌ ಡೌನ್‌ಲೋಡ್ ಮಾಡಬೇಕು. ಬಳಿಕ ಕೆವೈಸಿಗೆ ಲಿಂಕ್ ಮಾಡುವ ಮೂಲಕ ಪ್ರೊಫೈಲ್‌ನ್ನು ರಚಿಸಬೇಕು. ಬಿಎಂಟಿಸಿಯ ದೈನಂದಿನ ಅಥವಾ ಮಾಸಿಕ ಪಾಸ್‌ಗಳನ್ನು ಈ ಅಪ್ಲಿಕೇಶನ್ ಮೂಲಕ ಖರೀದಿಸಬಹುದು. ವಿಭಿನ್ನ ಗುರುತಿನ ಜೊತೆಗೆ ಡೈನಾಮಿಕ್ ಕ್ಯೂಆರ್ ಕೋಡ್‌ನೊಂದಿಗೆ ಪಾಸ್‌ಗಳನ್ನು ರಚಿಸಲಾಗಿದೆ. 

ಟುಮೊಕ್ ಅಪ್ಲಿಕೇಶನ್ ಬಳಸಿ ಪ್ರಯಾಣಿಸುವುದು ಹೇಗೆ?

ಪ್ರಯಾಣಿಕರು ತಮ್ಮ ಮೊಬೈಲ್‌ನಲ್ಲಿ ಡಿಜಿಟಲ್ ಪಾಸ್‌ ತೋರಿಸಬೇಕು. ಬಳಿಕ ಕಂಡಕ್ಟರ್ ಎಲೆಕ್ಟ್ರಾನಿಕ್ ಟಿಕೆಟಿಂಗ್ ಯಂತ್ರ (ಇಟಿಎಂ) ಬಳಸಿ ಪರಿಶೀಲಿಸುತ್ತಾರೆ. ಒಂದು ವೇಳೆ ಕಂಡಕ್ಟರ್ ಬಳಿ ಕ್ಯೂಆರ್ ಕೋಡ್ ಓದಬಲ್ಲ ಎಲೆಕ್ಟ್ರಾನಿಕ್ ಟಿಕೆಟಿಂಗ್ ಯಂತ್ರ ಇಲ್ಲದಿದ್ದರೆ, ಪ್ರಯಾಣಿಕರು ಕಂಡಕ್ಟರ್ ಹೊಂದಿರುವ ಕ್ಯೂಆರ್ ಕೋಡ್ ಓದುವ ಮೂಲಕ ಪಾಸ್‌ ಪರಿಶೀಲನೆ ಮಾಡಬೇಕು. ಭದ್ರತಾ ಸೌಲಭ್ಯ ಬಳಸಿಕೊಂಡು ಡಿಜಿಟಲ್ ಪಾಸ್ ಅಭಿವೃದ್ಧಿ ಪಡಿಸಲಾಗಿದೆ. 

"ಕನಿಷ್ಠ ಜನವರಿ 2023ರ ವೇಳೆಗೆ, ಬಿಎಂಟಿಸಿಯಲ್ಲಿ ಕಂಡಕ್ಟರ್ ರಹಿತ ಬಸ್‌ಗಳನ್ನು ಪರಿಚಯಿಸುವ ನಿರೀಕ್ಷೆಯಿದೆ. ಈ ಅಪ್ಲಿಕೇಶನ್ ನಮಗೆ ಬಹಳ ಸಹಕಾರಿ ಹಾಗೂ ಬಿಡುಗಡೆಯಾದ ಮೊದಲ ತಿಂಗಳಲ್ಲಿಯೇ ಐದು ಸಾವಿರಕ್ಕೂ ಅಧಿಕ ಬಳಕೆದಾರರು ಮಾಸಿಕ ಪಾಸ್‌ ಖರೀದಿಸಿದ್ದಾರೆ” ಎಂದು ಬಿಎಂಟಿಸಿಯ ವ್ಯವಸ್ಥಾಪಕ ನಿರ್ದೇಶಕ ವಿ ಅನ್ಬು ಕುಮಾರ್ ಹೇಳಿದ್ದಾರೆ. 

ಈ ಸುದ್ದಿ ಓದಿದ್ದೀರಾ? ಒಂದು ನಿಮಿಷದ ಓದು | ಮೆಟ್ರೋ ದರಕ್ಕಿಂತ ಅತೀ ಕಡಿಮೆ ವೆಚ್ಚದಲ್ಲಿ ತಯಾರಾಗ್ತಿದೆ ಸೌರ ವಿದ್ಯುತ್ ರೈಲ್‌ಬಸ್‌

”ಲೈವ್ ಮಾಹಿತಿಯೊಂದಿಗೆ ಬಹು- ಮಾದರಿ ಸಂಪರ್ಕ ಒದಗಿಸುವ ಏಕೈಕ ಅಪ್ಲಿಕೇಶನ್ ಇದಾಗಿದೆ. ಟುಮೊಕ್‌ನೊಂದಿಗೆ ಪ್ರಯಾಣಿಕರಿಗೆ ಸುರಕ್ಷಿತ ಪ್ರಯಾಣ ನೀಡಲು ಬಯಸುತ್ತೇವೆ ಮತ್ತು ಮೆಟ್ರೋ ಅಥವಾ ಬಸ್‌ಗಾಗಿ ಕಾಯುವ ಸಮಯ ಕಡಿಮೆ ಮಾಡುವ ಮೂಲಕ ಈ ಅಪ್ಲಿಕೇಶನ್ ಸಹಾಯ ಮಾಡುತ್ತದೆ” ಎಂದು ಟುಮೊಕ್ ಸಂಸ್ಥೆಯ ಸಹ- ಸಂಸ್ಥಾಪಕ ಹಿರಣ್ಮಯ್ ಮಲ್ಲಿಕ್ ತಿಳಿಸಿದ್ದಾರೆ.

ನಿಮಗೆ ಏನು ಅನ್ನಿಸ್ತು?
0 ವೋಟ್