ಸುದ್ದಿ ವಿವರ | ಟ್ವಿಟರ್‌ನಲ್ಲಿ ಟ್ರೆಂಡ್ ಆದ ಗಾನಾ ಆ್ಯಪ್ ನಿಷೇಧಕ್ಕೆ ಕರೆ

  • ಜನಪ್ರಿಯ ಮ್ಯೂಸಿಕ್‌ ಆನ್‌ಲೈನ್‌ ಅಪ್ಲಿಕೇಷನ್‌ಗಳಲ್ಲಿ ಒಂದು ಗಾನಾ ಆ್ಯಪ್ 
  • ಗುಸ್ತಾಕ್ ಏ ನಬಿ ಕಿ ಏಕ್ ಹೀ ಸಜಾ, ಸರ್ ತನ್ ಸೇ ಜುಡಾ ಎನ್ನುವ ಹಾಡು

ಸಂಗೀತ ಆ್ಯಪ್‌ಗಳಲ್ಲಿ ಇರುವ ಹಾಡೊಂದನ್ನು ಧಾರ್ಮಿಕ ಭಾವನೆಗಳನ್ನು ಪ್ರಚೋದಿಸಲು ಬಳಸಿಕೊಳ್ಳಲಾಗುತ್ತಿದೆ ಎನ್ನುವ ಆರೋಪದಲ್ಲಿ ಅದನ್ನು ನಿಷೇಧಿಸಬೇಕು ಎನ್ನುವ ಒತ್ತಾಯದಲ್ಲಿ ಆ್ಯಪ್ ಅನ್ನೇ ಬಹಿಷ್ಕರಿಸಬೇಕು ಎನ್ನುವ ಕರೆ ಟ್ವಿಟರ್‌ನಲ್ಲಿ ಟ್ರೆಂಡ್ ಆಗಿದೆ. "ಈ ಹಾಡನ್ನು ಬಳಸಿ ಕೆಲವರು ಶಿರಚ್ಛೇದನವನ್ನು ಉತ್ತೇಜಿಸುವ ಮೂಲಕ ಧಾರ್ಮಿಕ  ಸಂಘರ್ಷದ ಪ್ರಚೋದನೆ ಮಾಡುತ್ತಿದ್ದು, ಅದನ್ನು ತಮ್ಮ ವೇದಿಕೆಯಲ್ಲಿ ಹೊಂದಿರುವ ಜನಪ್ರಿಯ ಮ್ಯೂಸಿಕ್‌ ಆನ್‌ಲೈನ್‌ ಅಪ್ಲಿಕೇಷನ್‌ಗಳಲ್ಲೊಂದಾದ ʻಗಾನಾʼ ಆ್ಯಪ್‌ ಅನ್ನು ಬಹಿಷ್ಕರಿಸಬೇಕು ಎಂದು ಟ್ವಿಟರ್‌ನಲ್ಲಿ ಟ್ರೆಂಡ್ ಆಗಿದೆ. #boycottgaanaapp ಎನ್ನುವ ಪ್ರಚಾರಾಭಿಯಾನವನ್ನು ನಿರ್ದಿಷ್ಟ ಸಮೂಹಗಳು ಟ್ವಿಟರ್ ಟ್ರೆಂಡ್ ಆಗುವಂತೆ ಮಾಡಿದ್ದಾರೆ. 

"ಗುಸ್ತಾಕ್ ಏ ನಬಿ ಕಿ ಏಕ್ ಹೀ ಸಜಾ, ಸರ್ ತನ್ ಸೇ ಜುಡಾ (ಪ್ರವಾದಿ ಮುಹಮ್ಮದ್ ಅವರನ್ನು ಅವಮಾನಿಸುವವರಿಗೆ ಶಿರಚ್ಛೇದನ ಮಾತ್ರ ಶಿಕ್ಷೆ) ಎಂಬ ಹಾಡನ್ನು ಹೊಂದಿರುವ ಗಾನಾ ಆ್ಯಪ್ ಅನ್ನು ಬಹಿಷ್ಕರಿಸಬೇಕು ಎನ್ನುವುದು ಈ ಪ್ರಚಾರಾಭಿಯಾನದ ಉದ್ದೇಶವಾಗಿದೆ. 

ಗಾನಾ ನಿಷೇಧಕ್ಕೆ ಒತ್ತಾಯ ಯಾಕೆ?

ಭಾರತೀಯ ಜನತಾ ಪಕ್ಷದ ನೂಪುರ್ ಶರ್ಮಾ ಹೇಳಿಕೆ ಬೆಂಬಲಿಸಿದ್ದ ಟೈಲರ್ ಕನ್ಹಯ್ಯ ಲಾಲ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಒಂದನ್ನು ಬರೆದಿದ್ದರು. ಈ ಕಾರಣಕ್ಕೆ ಕನ್ಹಯ್ಯ ಅವರನ್ನು ಇಬ್ಬರು ಮುಸ್ಲಿಂ ಅಂಧಾಭಿಮಾನಿಗಳು ಕೊಲೆ ಮಾಡಿದ ಘಟನೆ ಇತ್ತೀಚೆಗಷ್ಟೆ ಉದಯ್‌ಪುರದಲ್ಲಿ ನಡೆದಿತ್ತು. ಗಾನಾ ಸೇರಿದಂತೆ ಹಲವಾರು ಮ್ಯೂಸಿಕ್‌ ಆ್ಯಪ್‌ಗಳಲ್ಲಿರುವ ಹಾಡನ್ನು ಬಳಸಿ ಕೆಲವು ಗುಂಪುಗಳು ಆ ಧಾರ್ಮಿಕ ಮತಾಂಧತೆಯ ಹತ್ಯೆಯನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ. ಹೀಗಾಗಿ ಈ ಕೂಡಲೇ ಹಾಡನ್ನು ತೆಗೆದುಹಾಕುವಂತೆ ಪ್ರಚಾರಾಭಿಯಾನದಲ್ಲಿ ಒತ್ತಾಯಿಸಲಾಗಿದೆ.

ನೆಟ್ಟಿಗರ ಅಭಿಪ್ರಾಯವೇನು?

ʻʻಶಿರಚ್ಛೇದನ ವೈಭವೀಕರಿಸುವ, ಧಾರ್ಮಿಕ ಮತಾಂಧರ ʻಸರ್ ತನ್ ಸೇ ಜುದಾʼ ಘೋಷಣೆಗಳು ಮತ್ತು ಹಾಡುಗಳಿಗೆ ಕಡಿವಾಣ ಹಾಕಬೇಕು. ಗಾನಾದಂತಹ ಅನೇಕ ಪ್ಲಾಟ್‌ಫಾರ್ಮ್‌ಗಳಲ್ಲಿ ಈ ಹಾಡು ಲಭ್ಯವಿದೆ. ಮುಸ್ಲಿಮೇತರರಿಗೆ ಬೆದರಿಕೆಯೊಡ್ಡಲು ಈ ಹಾಡನ್ನು ಕಿರು ವೀಡಿಯೊಗಳಲ್ಲಿ ಬಳಸಲಾಗುತ್ತಿದೆʼʼ ಎಂದು ಗುರು ಸೇವಕ್ ಸೌಮ್ಯ ಎಂಬುವವರು ಟ್ವೀಟ್ ಮಾಡಿದ್ದಾರೆ.

ʻʻರಾಜಸ್ಥಾನದ ಕನ್ಹಯ್ಯ ಲಾಲ್ ಮತ್ತು ಮಹಾರಾಷ್ಟ್ರದ ಉಮೇಶ್ ಕೋಲ್ಹೆ ಅವರನ್ನು ಬರ್ಬರವಾಗಿ ಹತ್ಯೆಗೈದ ಘಟನೆಗಳು ಇಡೀ ರಾಷ್ಟ್ರವನ್ನೇ ಬೆಚ್ಚಿಬೀಳಿಸಿವೆ. ʻಸರ್ ತನ್ ಸೇ ಜುದಾʼ ಪಠಣವನ್ನು ಧಾರ್ಮಿಕ ಮತಾಂಧರು ಹಿಂಸಾಚಾರದ ಕೃತ್ಯಗಳನ್ನು ಸಮರ್ಥಿಸಲು ಬಳಸಿದ್ದಾರೆ. ಹಾಗೆಯೇ ಆಪಾದಿತ ಧರ್ಮನಿಂದನೆಯ ಮೇಲೆ ಕೊಲೆಗಳನ್ನು ಸಹ ಮಾಡಿದ್ದಾರೆʼʼ ಎಂದು ಗುರುಪ್ರಸಾದ್ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

ಈವರೆಗೂ ಸುಮಾರು 19 ಸಾವಿರಕ್ಕೂ ಹೆಚ್ಚು ಮಂದಿ #boycottgaanaapp ಪ್ರಚಾರಾಭಿಯಾನಕ್ಕೆ ಬೆಂಬಲ ಸೂಚಿಸಿ ಟ್ವೀಟ್‌ ಮಾಡಿದ್ದಾರೆ.

ʻʻಯಾವುದೇ ಧರ್ಮದ ದೇವರು/ ಧಾರ್ಮಿಕ ನಂಬಿಕೆಗಳಿಗೆ ಘಾಸಿ ಮಾಡಿ ಸಮಾಜದ ಶಾಂತಿ ಸೌಹಾರ್ದ ಹಾಳುಮಾಡುವ ಪಾಖಂಡಿಗಳಿಗೆ ಕಾನೂನುರೀತ್ಯ ಶಿಕ್ಷೆಯಾಗಬೇಕು. ಅಂಥಾ ವ್ಯಕ್ತಿಗಳ ತಲೆಕಡಿಯಲು ಪ್ರಚೋದಿಸುವವರು, ಅಂಥಾ ಹಾಡನ್ನು ಪ್ರಚುರಪಡಿಸಿದವರೂ ಶಿಕ್ಷಾರ್ಹರು. ಆದರೆ ರಾತ್ರಿ ಹಗಲು ಇಂಥದೇ ದ್ವೇಷ ಭಾಷಣ ಮಾಡುವ, ನರಮೇಧಗಳಿಗೆ ಅತ್ಯಾಚಾರಗಳಿಗೆ ಬಹಿರಂಗವಾಗಿ ಕರೆಕೊಡುವ ನರಾಧಮರು ಮತ್ತು ಅವರ ಬೆಂಬಲಿಗರು ಒಂದು ಹಾಡಿನ ವಿಷಯ ಹಿಡಿದು ಟ್ವಿಟರ್‌ ಟ್ರೆಂಡ್‌ ಮಾಡುತ್ತಿರುವುದು ಬೂಟಾಟಿಕೆʼʼ ಎಂದು ಡಿಎಂಎನ್‌ ಮೂರ್ತಿ ಟ್ವೀಟ್‌ ಮಾಡಿದ್ದಾರೆ.

ಸಂಗೀತ ಆ್ಯಪ್‌ಗಳು ಯಾವ ಕ್ರಮ ಕೈಗೊಂಡಿವೆ?

ಗಾನಾ, ಜಿಯೋ ಸಾವನ್‌, ಯೂಟ್ಯೂಬ್‌, ಯೂಟ್ಯೂಬ್‌ ಮ್ಯೂಸಿಕ್‌, ಹಂಗಾಮ ಸೇರಿದಂತೆ ಹಲವಾರು ಆನ್‌ಲೈನ್‌ ವೇದಿಕೆಗಳಲ್ಲಿ ಈ ಹಾಡು ಇರುವುದಾಗಿ ಟ್ವೀಟಿಗರು ತಿಳಿಸಿದ್ದಾರೆ. ಪ್ರಸ್ತುತ ಈ ಎಲ್ಲಾ ಆ್ಯಪ್‌ಗಳನ್ನು ಪರಿಶೀಲಿಸಿದಾಗ ಆ ಹಾಡಿದ್ದ ಪೇಜಿನ ಲಿಂಕ್‌ ಅನ್ನು ತೆಗೆದು ಹಾಕಲಾಗಿದ್ದು, ವೆಬ್‌ಪೇಜ್‌ ಲಭ್ಯವಿಲ್ಲ ಎಂದು ತೋರಿಸುತ್ತಿದೆ.

Image

ಈ ಹಿಂದೆ ಬಂದಿರುವ ನಿಷೇಧದ ಕರೆಗಳು?

ಇತ್ತೀಚೆಗಷ್ಟೆ ನೂಪುರ್‌ ಶರ್ಮಾ ಹೇಳಿಕೆಯ ಹಿನ್ನೆಲೆಯಲ್ಲಿ ಇಸ್ಲಾಮಿಕ್ ರಾಷ್ಟ್ರಗಳಲ್ಲಿ ನಿಷೇಧದ ಕರೆ ಬಂದಿದ್ದ ಕಾರಣ ಕೊಲ್ಲಿ ರಾಷ್ಟ್ರ ಖತಾರ್‌ ಏರ್‌ವೇಸ್‌ ಅನ್ನು ಬಹಿಷ್ಕರಿಸುವಂತೆ ಹಿಂದೂ ಸಂಘಟನೆಗಳು ಕರೆ ನೀಡಿದ್ದವು. ಹಾಗೆಯೇ ಮುಸ್ಲಿಂ ಸಮುದಾಯದಿಂದ ವಸ್ತುಗಳನ್ನು ಖರೀದಿಸದಂತೆ, ಮಾಂಸ ಖರೀದಿಸದಂತೆ ಆಗ್ರಹಿಸಿ ಹಲವಾರು ಪ್ರಚಾರಾಭಿಯಾನ ದೇಶಾದ್ಯಂತ ನಡೆದಿವೆ.

ನಿಮಗೆ ಏನು ಅನ್ನಿಸ್ತು?
0 ವೋಟ್