ರೈತ ಸಂಘಟನೆ, ವಿಪಕ್ಷ ನಾಯಕರ ಖಾತೆ ನಿರ್ಬಂಧಕ್ಕೆ ಟ್ವಿಟರ್‌ಗೆ ಕೇಂದ್ರದ ಮನವಿ

Twitter Image
  • ಭಾರತದಲ್ಲಿ ಸುಮಾರು ಹನ್ನೆರಡು ಟ್ವಿಟರ್ ಖಾತೆಗಳನ್ನು ಸ್ಥಗಿತಗೊಳಿಸಲಾಗಿದೆ
  • ಪ್ರೆಸ್ ಟ್ರಸ್ಟ್ ಆಫ್ ಇಂಡಿಯಾ ಕಳುಹಿಸಿದ ಇ-ಮೇಲ್ ಪ್ರಶ್ನೆಗೆ ಯಾವುದೇ ಉತ್ತರ ಇಲ್ಲ

ಕೇಂದ್ರ ಸರ್ಕಾರ, ಖಾತೆಗಳನ್ನು ನಿರ್ಬಂಧಿಸುವಂತೆ ಸೂಚಿಸಿ ಟ್ವಿಟರ್ ಸಂಸ್ಥೆಗೆ ಕಳುಹಿಸಿರುವ ಪಟ್ಟಿಯಲ್ಲಿ ಕಾಂಗ್ರೇಸ್‌ ಶಾಸಕರು ಮತ್ತು ಸಂಸದರು ಹಾಗೂ ಆಮ್ ಆದ್ಮಿ ಪಕ್ಷದ ಶಾಸಕ ಜರ್ನೈಲ್ ಸಿಂಗ್ ಸೇರಿದಂತೆ ಹಲವು ಪತ್ರಕರ್ತರ ಹೆಸರುಗಳಿವೆ ಎಂದು ವರದಿಯಾಗಿದೆ. 

ಕೇಂದ್ರ ಸರ್ಕಾರ ಜಾರಿಗೆ ತಂದಿದ್ದ ವಿವಾದಾತ್ಮಕ ಮೂರು ಕೃಷಿ ಕಾಯ್ದೆಗಳ ವಿರುದ್ಧದ ಹೋರಾಟದಲ್ಲಿ ಪರಿಣಾಮಕಾರಿ ಪಾತ್ರ ವಹಿಸಿದ್ದ 'ಕಿಸಾನ್ ಏಕ್ತಾ ಮೋರ್ಚಾ'ದ ಟ್ವಿಟರ್ ಖಾತೆಯನ್ನು ಕೂಡ ನಿರ್ಬಂಧಿಸುವಂತೆ ಕೇಂದ್ರವು ಟ್ವಿಟರ್‌ಅನ್ನು ಒತ್ತಾಯಿಸಿದೆ. 

ಇತ್ತಿಚಿಗೆ ಲುಮೆನ್ ಡೇಟಾಬೇಸ್‌ನಲ್ಲಿ ಸಲ್ಲಿಸಿದ ದಾಖಲೆಯ ಪ್ರಕಾರ, ಈ ಕೋರಿಕೆಯು ಜನವರಿ 5, 2021 ಮತ್ತು ಡಿಸೆಂಬರ್ 29, 2021ರ ನಡುವೆ ವರದಿಯಾಗಿದೆ ಎಂದು ಪ್ರೆಸ್ ಟ್ರಸ್ಟ್ ಆಫ್ ಇಂಡಿಯಾ ತಿಳಿಸಿದೆ. 

ಗೂಗಲ್, ಫೇಸ್‌ಬುಕ್‌ ಮತ್ತು ಟ್ವಿಟರ್ ನಂತಹ ದೊಡ್ಡ ಕಂಪನಿಗಳು ನಿರ್ಬಂಧಿಸಲು ಕೇಳಲಾದ ಎಲ್ಲ ದಾಖಲೆಯ ಮಾಹಿತಿಯನ್ನು ಅದಕ್ಕೆ ಅನ್ವಯವಾಗುವ ಕಾನೂನುಗಳ ಅಡಿಯಲ್ಲಿ ಲುಮೆನ್ ಡೇಟಾಬೇಸ್‌ ಹಂಚಿಕೊಂಡಿದೆ.

"ಕೇಂದ್ರ ಸರ್ಕಾರವೂ ಹಲವು ರಾಜಕಾರಣಿಗಳು, ಪತ್ರಕರ್ತರು ಮತ್ತು ಮಾನವ ಹಕ್ಕುಗಳ ಹೋರಾಟಗಾರರು ಹಾಗೂ ಅವರ ಪರವಾಗಿ ವಕಾಲತ್ತು ನಡೆಸುವ ಅಂತರರಾಷ್ಟ್ರೀಯ ವಕೀಲರ ಗುಂಪಿನ ಫ್ರೀಡಂ ಹೌಸ್‌ನ ಟ್ವೀಟ್‌ಗಳು ಮತ್ತು ಅವರ ಟ್ವಿಟರ್ ಖಾತೆಯನ್ನು ನಿರ್ಬಂಧಿಸುವಂತೆ ಕೋರಿದೆ. ಸರ್ಕಾರದ ಈ ನಡೆಯು ವಾಕ್ ಸ್ವಾತಂತ್ರ್ಯದ ವಿರುದ್ಧ ಕೆಲಸವಾಗಿದೆ" ಎಂದು ಟ್ವಿಟರ್ ಸಂಸ್ಥೆ ನೀಡಿರುವ ವರದಿಯಲ್ಲಿ ಉಲ್ಲೇಖಿಸಲಾಗಿದೆ. 

ಇದಕ್ಕೆ ಸಂಬಂಧಿಸಿದಂತೆ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯಕ್ಕೆ ಪ್ರೆಸ್ ಟ್ರಸ್ಟ್ ಆಫ್ ಇಂಡಿಯಾ ಕಳುಹಿಸಿದ ಇ-ಮೇಲ್ ಪ್ರಶ್ನೆಗೆ ಯಾವುದೇ ಉತ್ತರ ಕೂಡ ಬಂದಿಲ್ಲ ಎಂದು ವರದಿಯಾಗಿದೆ. 

ಈ ಸುದ್ದಿ ಓದಿದ್ದೀರಾ? ದೃಶ್ಯರೂಪದ ವಸ್ತುಗಳನ್ನು ಕಣ್ಮುಂದೆ ತರುವ ಮೆಟಾವರ್ಸ್ ತಂತ್ರಜ್ಞಾನ; ಎಐ ತಂತ್ರಜ್ಞರಿಗೆ ವಿಫುಲ ಉದ್ಯೋಗವಕಾಶ ಸಾಧ್ಯತೆ

"ಪತ್ರಕರ್ತೆ ರಾಣಾ ಅಯೂಬ್ ಅವರ ಟ್ವೀಟರ್‌ ಖಾತೆಯನ್ನು ತಡೆಹಿಡಿಯಲು ಮತ್ತು ಭಾರತದಲ್ಲಿ ಅಂಕಣಕಾರರಾದ ಸಿಜೆ ವೆರ್ಲೆಮನ್ ಖಾತೆಯನ್ನು ನಿರ್ಬಂಧಿಸಲು ಭಾರತ ಸರ್ಕಾರದ ನಿರ್ದೇಶನವನ್ನು ಟ್ವಿಟರ್ ಅನುಸರಿಸುವುದು ಸಾಮಾಜಿಕ ಮಾಧ್ಯಮದಲ್ಲಿ ಹೊಸ ಪ್ರವೃತ್ತಿಯ ಭಾಗವಾಗಿದೆ. ಇದು ನಿಲ್ಲಬೇಕು! ಪತ್ರಕರ್ತರ ಧ್ವನಿಗಳು ಪ್ರಜಾಪ್ರಭುತ್ವಕ್ಕೆ ಅತ್ಯಗತ್ಯ," ಎಂದು ಸಿಪಿಜೆ ಏಶಿಯಾ ಸಂಸ್ಥೆ ಟ್ವೀಟ್ ಮಾಡಿದೆ. 

ರೈತ ಚಳುವಳಿಯ ನೇತೃತ್ವ ವಹಿಸಿದ್ದ ಸಂಯುಕ್ತ ಕಿಸಾನ್‌ ಮೋರ್ಚಾದ (ಎಸ್‌ಕೆಎಂ) ಟ್ವಿಟರ್‌ ಖಾತೆಯನ್ನೂ ನಿರ್ಬಂಧಿಸಲು ಕೇಂದ್ರ ಸರ್ಕಾರ ಕೋರಿದೆ. ಇದನ್ನು ಖಂಡಿಸಿರುವ ಎಸ್‌ಕೆಎಂ, "ಟ್ವಿಟರ್ ಯಾವುದೇ ಮಾಹಿತಿಯಿಲ್ಲದೆ ರೈತರ ಚಳುವಳಿಯನ್ನು ಮುನ್ನಡೆಸಿರುವ ಒಕ್ಕೂಟದ ಟ್ವಿಟರ್‌ ಖಾತೆ ಸೇರಿದಂತೆ ಭಾರತದಲ್ಲಿ ಸುಮಾರು ಹನ್ನೆರಡು ಟ್ವಿಟರ್ ಖಾತೆಗಳನ್ನು ತಡೆಹಿಡಿದಿದೆ. ಈ ನಡೆಯು ಉದ್ದೇಶಪೂರ್ಕವಾಗಿ ಮಾಡಿದ ಕೃತ್ಯವಾಗಿದೆ. ನಮ್ಮ ಬೆಂಬಲಕ್ಕೆ ನಿಂತಿರುವವರ ಟ್ವಿಟರ್‌ಗಳನ್ನು ನಿರ್ಬಂಧಿಸುವದನ್ನು ನಾವು ಖಂಡಿಸುತ್ತೇವೆ" ಎಂದು ಹೇಳಿದೆ. 

ನಿಮಗೆ ಏನು ಅನ್ನಿಸ್ತು?
1 ವೋಟ್