ಮಾಹಿತಿ ತಂತ್ರಜ್ಞಾನ | ಸಾಮಾಜಿಕ ಜಾಲತಾಣ ನಿಯಂತ್ರಿಸಲು ಜುಲೈನಲ್ಲಿ ಹೊಸ ಐಟಿ ನಿಯಮ ಜಾರಿ ಸಾಧ್ಯತೆ

IT Rules Image
  • ಸಾಮಾಜಿಕ ಜಾಲತಾಣದ ಮೇಲೆ ಕೇಂದ್ರದ ಕಣ್ಣು
  • ಜುಲೈನಲ್ಲಿ ಹೊಸ ಐಟಿ ನಿಯಮ ಜಾರಿ ಸಾಧ್ಯತೆ

ಸಾಮಾಜಿಕ ಮಾಧ್ಯಮ ಹೆಚ್ಚು ಜವಾಬ್ದಾರಿಯುತವಾಗಿಸಲು ಪ್ರಯತ್ನ ನಡೆಯುತ್ತಿದೆ ಎಂದು ಹೇಳಿರುವ ಕೇಂದ್ರ ಸರ್ಕಾರ, ಐಟಿ ನಿಯಮಗಳಲ್ಲಿ ಬದಲಾವಣೆಗಳನ್ನು ತರಲು ಮುಂದಾಗಿದೆ. ಮುಂದಿನ ತಿಂಗಳು ಜುಲೈ ಅಂತ್ಯದೊಳಗೆ ಈ ಹೊಸ ಐಟಿ ನಿಯಮಗಳನ್ನು ಅಂತಿಮಗೊಳಿಸಲು ಕೇಂದ್ರ ಸರ್ಕಾರ ತೀರ್ಮಾನಿಸಿದೆ.

ಕೇಂದ್ರ ಸರ್ಕಾರ ಕೊನೆಯ ಐಟಿ ಕರಡಿನ ಮೇಲೆ ಚಿಂತನೆ ಮಾಡುತ್ತಿದೆ, ಶೀಘ್ರದಲ್ಲಿ ಐಟಿ ನಿಯಮಗಳು ಬಿಡುಗಡೆಯಾಗಲಿದೆ ಎಂದು ಕೇಂದ್ರ ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ. 

ಸ್ಮಾರ್ಟ್ ಫೋನ್‌ಗಳು ಮತ್ತು ಸಾಮಾಜಿಕ ಮಾಧ್ಯಮದ ವೇದಿಕೆಗಳು ಹೆಚ್ಚು ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಬೇಕು. ಅದಕ್ಕಾಗಿ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಬದಲಾವಣೆಗಳನ್ನು ಸರ್ಕಾರ ತರಲಿದೆ. ಬಳಕೆದಾರರು ಮತ್ತು ದೊಡ್ಡ ತಂತ್ರಜ್ಞಾನ ಕಂಪನಿಗಳು ಇದನೆಲ್ಲ ಅರಿತು ಕಾರ್ಯನಿರ್ವಹಿಸಬೇಕಾಗುತ್ತದೆ ಎಂದು ಅಶ್ವಿನಿ ವೈಷ್ಣವ್ ಹೇಳಿದ್ದಾರೆ.

ಸಾಮಾಜಿಕ ಮಾಧ್ಯಮಗಳಲ್ಲಿ ನಕಲಿ ಸುದ್ದಿಗಳು ಹರಿದಾಡುತ್ತಿರುವ ಬಗ್ಗೆ ಇತ್ತೀಚೆಗೆ ಗೃಹಸಚಿವ ಅಮಿತ್‌ ಶಾ, ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಮೊದಲಾದವರು ಟೀಕಿಸಿದ್ದಾರೆ.

ಕೇಂದ್ರ ಸರ್ಕಾರದ ಸೈಬರ್ ಅಪರಾಧ ವಿಭಾಗದ ಪೋರ್ಟಲ್‌ 13 ಲಕ್ಷಕ್ಕೂ ಹೆಚ್ಚು ದೂರುಗಳನ್ನು ಸ್ವೀಕರಿಸಿದೆ. ಇದರಲ್ಲಿ ಸಾಮಾಜಿಕ ಮಾಧ್ಯಮಗಳಿಗೆ ಸಂಬಂಧಿಸಿದ ಎರಡು ಲಕ್ಷಕ್ಕೂ ಅಧಿಕ ದೂರುಗಳು ದಾಖಲಾಗಿವೆ. ಸೈಬರ್‌ ದುರ್ಬಳಕೆ ಮಾಡಿಕೊಳ್ಳುತ್ತಿರುವುದು ಹೊಸತೇನಲ್ಲ. ಮಾಲ್‌ವೇರ್‌, ಡೇಟಾ ಕಳವು, ಆನ್‌ಲೈನ್‌ ವಂಚನೆ, ಮಕ್ಕಳ ಅಶ್ಲೀಲ ಚಿತ್ರಗಳನ್ನು ಜಾಲತಾಣಗಳಿಗೆ ಅಪ್ಲೋಡ್ ಮಾಡುವುದು ಸೇರಿದಂತೆ ದುಷ್ಕೃತ್ಯಗಳು ಗಣನೀಯ ಪ್ರಮಾಣದಲ್ಲಿ ಏರಿಕೆಯಾಗುತ್ತಿವೆ- ಕೇಂದ್ರ ಗೃಹ ಸಚಿವ ಅಮಿತ್‌ ಶಾ

ಸಾಮಾಜಿಕ ಮಾಧ್ಯಮ ಕಂಪನಿಗಳನ್ನು ಹೆಚ್ಚು ಜವಾಬ್ದಾರಿಯುತವಾಗಿಸಲು ಹಲವು ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇವೆ. ಜಾಗತಿಕವಾಗಿ ಸಾಮಾಜಿಕ ಮಾಧ್ಯಮವು ನೂತನ ಟ್ರೆಂಡ್. ಅದೇ ರೀತಿ ಭಾರತದಲ್ಲಿ ಕೂಡ ಜನಪ್ರಿಯವಾಗಿದೆ. ಹಾಗಾಗಿ ಇದನ್ನು ನಿಯಂತ್ರಣ ಮಾಡಲು ಹಲವು ಕಾನೂನು ಕ್ರಮಗಳನ್ನು ತರಲು ಮಾಹಿತಿ ಸಚಿವಾಲಯ ಮುಂದಾಗಿದೆ ಮತ್ತು ಭಾರತದಲ್ಲಿ ಈ ನಿಯಮಗಳನ್ನು ಅಳವಡಿಸುವುದು ನಮ್ಮ ಜವಾಬ್ದಾರಿ ಎಂದು ವೈಷ್ಣವ್ ಹೇಳಿದ್ದಾರೆ.

ಈ ಸುದ್ದಿ ಓದಿದ್ದೀರಾ? ಐಟಿ ಹೊಸ ನಿಯಮ | ಸಾಮಾಜಿಕ ಮಾಧ್ಯಮಗಳ ನಿಯಂತ್ರಣದ ಉದ್ದೇಶವೇನು?

ಕೇಂದ್ರದ ಯೋಜನೆ ಏನು?

ಕೇಂದ್ರ ಸರ್ಕಾರ ಐಟಿ ನಿಯಮಗಳ ಕೊನೆಯ ಕರಡನ್ನು ಪರಿಶೀಲಿಸುತ್ತಿದೆ. ಮುಂದಿನ ದಿನಗಳಲ್ಲಿ ಬಳಕೆದಾರರು ಸಾಮಾಜಿಕ ಮಾಧ್ಯಮದ ಕಾಣುವ ನಿರಂಕುಶ ಮಾಹಿತಿಗಳ ವಿರುದ್ಧ ಸಂಬಂಧಿತ ಕಂಪನಿಗಳ ವಿರುದ್ಧ ಧ್ವನಿ ಎತ್ತಬೇಕು. ಇದು ಬಳಕೆದಾರರ ಜವಾಬ್ದಾರಿ. ಈ ಬಗ್ಗೆ ಕ್ರಮ ಕೈಗೊಳ್ಳುವುದು ಸಾಮಾಜಿಕ ಜಾಲತಾಣ ನಡೆಸುವ ತಂತ್ರಜ್ಞಾನ ಸಂಸ್ಥೆಗಳ ಜವಾಬ್ದಾರಿ  ಎಂದು ಮಾಹಿತಿ ಸಚಿವಾಲಯ ತಿಳಿಸಿದೆ.

ಕಳೆದ ವರ್ಷ ಕೇಂದ್ರ ಸರ್ಕಾರವು ಹೊಸ ಐಟಿ ನಿಯಮಗಳನ್ನು ಜಾರಿಗೊಳಿಸುವುದಾಗಿ ಘೋಷಿಸಿತ್ತು. ಅಲ್ಲದೆ, ಹೊಸ ಮಧ್ಯಂತರ ಐಟಿ ನಿಯಮಗಳ ಅನುಸಾರ ಸಾಮಾಜಿಕ ಜಾಲತಾಣದ ಸಂಸ್ಥೆಗಳು ದೇಶದೊಳಗೆ ನೆಲೆಸಿರುವ 'ಉಸ್ತುವಾರಿ ವ್ಯಕ್ತಿ'ಯೊಬ್ಬರನ್ನು ನೇಮಿಸುವಂತೆ ಸೂಚಿಸಿತ್ತು. ಅಶ್ಲೀಲ ದೃಶ್ಯಗಳನ್ನು ದೂರು ದೊರೆತ 24 ಗಂಟೆಗಳಲ್ಲಿ ತೆಗೆದು ಹಾಕುವಂತೆಯೂ ಆದೇಶಿಸಿತ್ತು. 50 ಲಕ್ಷಕ್ಕೂ ಹೆಚ್ಚು ಬಳಕೆದಾರರನ್ನು ಹೊಂದಿರುವ ದೊಡ್ಡ ಸಾಮಾಜಿಕ ಮಾಧ್ಯಮ ಕಂಪನಿಗಳು ಸ್ವೀಕರಿಸಿದ ದೂರುಗಳು ಹಾಗೂ ತೆಗೆದುಕೊಂಡ ಕ್ರಮಗಳ ಪಟ್ಟಿಯನ್ನು ಮಾಸಿಕ ಅನುಸರಣೆ ವರದಿಗಳನ್ನು ಪ್ರಕಟಿಸಬೇಕು ಎಂದು ಸೂಚಿಸಲಾಗಿತ್ತು.

ನಿಮಗೆ ಏನು ಅನ್ನಿಸ್ತು?
0 ವೋಟ್