20 ವರ್ಷಗಳ ನಂತರ ಪತ್ತೆಯಾದ ಡಾರ್ವಿನ್‌ ಹಸ್ತಪ್ರತಿಗಳು

  • 2001ರಲ್ಲಿ ಕಾಣೆಯಾಗಿದ್ದ ಡಾರ್ವಿನ್‌ ಅವರ ಹಸ್ತಪ್ರತಿಗಳು
  • ಕದ್ದವರು ಯಾರು ಎಂಬುದು ನಿಗೂಢವಾಗಿಯೇ ಉಳಿದಿದೆ

ಕೇಂಬ್ರಿಡ್ಜ್‌ ವಿಶ್ವವಿದ್ಯಾಲಯದ ಗ್ರಂಥಾಲಯದಿಂದ ಕಣ್ಮರೆಯಾಗಿದ್ದ ಜೀವವಿಜ್ಞಾನಿ ಚಾರ್ಲ್ಸ್‌ ಡಾರ್ವಿನ್‌ರ ಎರಡು ಹಸ್ತಪ್ರತಿ ಪುಸ್ತಕಗಳು 20 ವರ್ಷಗಳ ನಂತರ ಪತ್ತೆಯಾಗಿವೆ. ಜೀವ ವಿಕಾಸಕ್ಕೆ ಸಂಬಂಧಿಸಿದ 1837ರ ʻಟ್ರೀ ಆಫ್‌ ಲೈಫ್‌ʼ ಚಿತ್ರವನ್ನು  ಹಸ್ತಪ್ರತಿ ಒಳಗೊಂಡಿತ್ತು.

ಗ್ರಂಥಪಾಲಕರಿಗೆ ಈಸ್ಟರ್‌ ಶುಭಾಶಯ ಪತ್ರವಿರುವ ಉಡುಗೊರೆ ಸಂಚಿಯೊಂದು (ಚೀಲ) ಗ್ರಂಥಾಲಯದಲ್ಲಿ ಸಿಕ್ಕಿದ್ದು, ಅದರಲ್ಲಿ ಹಸ್ತಪ್ರತಿಗಳು ಕಂಡುಬಂದದ್ದಾಗಿ ವಿಶ್ವವಿದ್ಯಾಲಯ ಮಂಗಳವಾರ ತಿಳಿಸಿದೆ.

ವಿಶ್ವವಿದ್ಯಾಲಯದ ನಾಲ್ಕನೇ ಮಹಡಿಯಲ್ಲಿರುವ ಗ್ರಂಥಪಾಲಕರ ಕಚೇರಿಯ ಹೊರಗೆ, ಸಿಸಿಟಿವಿ ಕಣ್ಗಾವಲಿಲ್ಲದ ಸಾರ್ವಜನಿಕ ಸ್ಥಳದಲ್ಲಿ ಈ ಸಂಚಿಯನ್ನು ಬಿಟ್ಟುಹೋಗಿದ್ದಾರೆ. ಇದನ್ನು ಬಿಟ್ಟುಹೋದವರು ಯಾರು? ಅವರು ಎಲ್ಲಿದ್ದರು? ಎಂಬುದು ಈವರೆಗೂ ನಿಗೂಢವಾಗಿಯೇ ಉಳಿದಿದೆ. 

ʻಎಚ್‌ಎಂಎಸ್‌ ಬೀಗಲ್‌ʼ ಹಡಗಿನಲ್ಲಿ ಸಮುದ್ರಯಾನ ನಡೆಸಿ ಹಿಂದಿರುಗಿದ್ದ ಡಾರ್ವಿನ್, ಪ್ರಬೇಧಗಳ ಹುಟ್ಟಿನ ಕುರಿತು ಟಿಪ್ಪಣಿಗಳನ್ನು ಈ ಹಸ್ತಪ್ರತಿಯಲ್ಲಿ ಬರೆದಿದ್ದರು.

ಛಾಯಾಚಿತ್ರೀಕರಣಕ್ಕಾಗಿ ಡಾರ್ವಿನ್‌ರ ಹಸ್ತಪ್ರತಿಗಳನ್ನು 2001ರಲ್ಲಿ ಗ್ರಂಥಾಲಯದಿಂದ ಹೊರತೆಗೆಯಲಾಗಿತ್ತು. ಆ ಸಮಯದಲ್ಲಿ ಹಸ್ತಪ್ರತಿಗಳು ಕಾಣೆಯಾಗಿದ್ದವು.  ಅವುಗಳನ್ನು ಹುಡುಕಿ ತೆಗೆಯಲು ಕಡೆಗೂ ವಿಫಲರಾದ ಸಿಬ್ಬಂದಿ, 2020ರಲ್ಲಿ ಪೊಲೀಸರಿಗೆ ದೂರು ನೀಡಿದ್ದರು.

Image

ಪ್ರಸ್ತುತ ಕೇಂಬ್ರಿಡ್ಜ್‌ ವಿಶ್ವವಿದ್ಯಾಲಯವನ್ನು ಸೇರಿರುವ ಈ ಹಸ್ತಪ್ರತಿಗಳು, ಜುಲೈನಲ್ಲಿ ನಡೆಯಲಿರುವ ಡಾರ್ವಿನ್‌ರ ಪುಸ್ತಕಗಳ ಪ್ರದರ್ಶನದಲ್ಲಿ ಸಾರ್ವಜನಿಕರಿಗೆ ಕಾಣಸಿಗಲಿವೆ.

ಲಕ್ಷಾಂತರ ಡಾಲರ್‌ ಮೌಲ್ಯದ ಹಸ್ತಪ್ರತಿಗಳನ್ನು ಹುಡುಕಿಕೊಡುವಂತೆ ಸ್ಥಳೀಯ ತನಿಖಾ ಪಡೆಗಳು ಜಾಗತಿಕ ಪೊಲೀಸ್‌ ಸಂಸ್ಥೆ ಇಂಟರ್‌ಪೋಲ್‌ಗೆ ಮನವಿ ಮಾಡಿತ್ತು. ಪ್ರಸ್ತುತ ಹಸ್ತಪ್ರತಿಗಳ ಕಳ್ಳತನದ ಬಗ್ಗೆ ಕೇಂಬ್ರಿಡ್ಜ್‌ಶೈರ್‌ ಪೊಲೀಸರು ತನಿಖೆ ಮುಂದುವರೆಸಿರುವುದಾಗಿ ತಿಳಿಸಿದ್ದಾರೆ.

ನಿಮಗೆ ಏನು ಅನ್ನಿಸ್ತು?
0 ವೋಟ್