ಬಾಹ್ಯಾಕಾಶ ಸಮರ | ಚಂದ್ರನನ್ನು ವಶ ಪಡಿಸಿಕೊಳ್ಳಲು ಹೊರಟಿದೆಯೇ ಚೀನಾ? ಚರ್ಚೆಗೆ ಕಾರಣವಾದ ನಾಸಾ ಆರೋಪ

Moon Image
  • ಚಂದ್ರ ನಮ್ಮದು, ಉಳಿದವರು ದೂರವಿರಿ ಎನ್ನುತ್ತಿದೆಯೇ ಚೀನಾ?
  • ನಾಸಾ ಮುಖ್ಯಸ್ಥ ಬಿಲ್ ನೆಲ್ಸನ್ ಅವರಿಂದ ಚೀನಾ ವಿರುದ್ಧ ಆರೋಪ

ಚೀನಾದ ಮಿಲಿಟರಿ ಬಾಹ್ಯಾಕಾಶ ಕಾರ್ಯಕ್ರಮದ ಭಾಗವಾಗಿ ಚಂದ್ರನನ್ನು ವಶಪಡಿಸಿಕೊಳ್ಳಲು ಯತ್ನಿಸುತ್ತಿದೆ ಎಂದು ನಾಸಾ ಮುಖ್ಯಸ್ಥ ಬಿಲ್ ನೆಲ್ಸನ್ ನೀಡಿರುವ ಹೇಳಿಕೆ ತೀವ್ರ ಚರ್ಚೆಗೆ ಕಾರಣವಾಗಿದೆ.

ಜರ್ಮನ್‌ ಮೂಲದ ಟ್ಯಾಬಾಯ್ಡ್‌ ಪತ್ರಿಕೆ ಬಿಲ್ಡ್‌ನೊಂದಿಗೆ ಮಾತನಾಡುತ್ತಾ, ಚೀನಾ ಚಂದ್ರನನ್ನು ತನ್ನ ವಶಕ್ಕೆ ತೆಗೆದುಕೊಂಡು ಇತರೆ ದೇಶಗಳು ಯಾವುದೇ ರೀತಿಯ ಸಂಶೋಧನೆ ನಡೆಸದಂತೆ ತಡೆಯುವ ಸಂಚು ಹೂಡಿದೆ ಎಂದು ಆರೋಪಿಸಿದ್ದರು.

ಚೀನಾ ಇದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದು,  "ವಾಷಿಂಗ್ಟನ್ ಬಾಹ್ಯಾಕಾಶವನ್ನು ಯುದ್ಧದ ವೇದಿಕೆಯಾಗಿ ಪರಿವರ್ತಿಸಲು ಪ್ರಯತ್ನಿಸುತ್ತಿದೆ" ಎಂದು ಚೀನಾ ಹೇಳಿದೆ.

ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ʻಝಾವೊ ಲಿಜಿಯಾನ್ʼ ಸೋಮವಾರ ನಾಸಾದ ಆರೋಪಗಳಿಗೆ ಪ್ರತಿಕ್ರಿಯಿಸಿದ್ದು, "ಅಮೆರಿಕದ ರಾಷ್ಟ್ರೀಯ ಏರೋನಾಟಿಕ್ಸ್ ಮತ್ತು ಬಾಹ್ಯಾಕಾಶ ಆಡಳಿತದ ಮುಖ್ಯಸ್ಥರು ಸತ್ಯವನ್ನು ನಿರ್ಲಕ್ಷಿಸಿ ಚೀನಾದ ಬಗ್ಗೆ ಬೇಜವಾಬ್ದಾರಿಯ ಮಾತನಾಡುತ್ತಿರುವುದು ಇದೇನು ಹೊಸದಲ್ಲ" ಎಂದು ಹೇಳಿದ್ದಾರೆ.

"ಚೀನಾದ ಬಾಹ್ಯಾಕಾಶ ಪ್ರಯತ್ನಗಳ ವಿರುದ್ಧ ಅಮೆರಿಕ ನಿರಂತರವಾಗಿ ಆರೋಪ ಮಾಡುತ್ತಾ ಬಂದಿದೆ. ಚೀನಾ ಅಂತಹ ಬೇಜವಾಬ್ದಾರಿ ಹೇಳಿಕೆಗಳನ್ನು ದೃಢವಾಗಿ ವಿರೋಧಿಸಲಿದೆ. ಅಷ್ಟೇ ಅಲ್ಲದೆ, ಚೀನಾ ಯಾವಾಗಲೂ ಶಸ್ತ್ರಾಸ್ತ್ರಗಳ ವಿರುದ್ಧ ನಿಂತಿದೆ" ಎಂದು ಹೇಳಿದ್ದಾರೆ.

ಬಾಹ್ಯಾಕಾಶದಲ್ಲಿ ಚೀನಾ ಯಾವ ರೀತಿಯ ಮಿಲಿಟರಿ ಉದ್ದೇಶ ಹೊಂದಿದೆ ಎಂದು ಸುದ್ದಿಗೋಷ್ಠಿಯಲ್ಲಿ ನೆಲ್ಸನ್ ಅವರನ್ನು ಪ್ರಶ್ನಿಸಲಾಗಿತ್ತು. ಅದಕ್ಕೆ ಉತ್ತರಿಸಿದ ಅವರು, "ಚೀನಾದ ಗಗನಯಾತ್ರಿಗಳು ಇತರ ದೇಶಗಳ ಉಪಗ್ರಹಗಳನ್ನು ಹೇಗೆ ನಾಶಪಡಿಸಬೇಕೆಂದು ಕಲಿಯುತ್ತಿದ್ದಾರೆ ಮತ್ತು ಚಂದ್ರನ ದಕ್ಷಿಣ ಧ್ರುವದ ಸ್ಪರ್ಧೆ ತೀವ್ರವಾಗುತ್ತಿದೆ" ಎಂದಿದ್ದಾರೆ.

2035ರ ವೇಳೆಗೆ ಬೀಜಿಂಗ್ ತನ್ನದೇ ಆದ ಚಂದ್ರನ ನಿಲ್ದಾಣದ ನಿರ್ಮಾಣ ಪೂರ್ಣಗೊಳಿಸಬಹುದು. ನಂತರ ಪ್ರಯೋಗಗಳನ್ನು ಪ್ರಾರಂಭಿಸಲು ಯೋಚಿಸುತ್ತಿದೆ ಎಂದು ನೆಲ್ಸನ್ ಹೇಳಿದ್ದಾರೆ. 

ನಿಮಗೆ ಏನು ಅನ್ನಿಸ್ತು?
4 ವೋಟ್