ಎಲೆಕ್ಟ್ರಿಕ್ ಸ್ಕೂಟರ್ ಸ್ಫೋಟ: ತಂದೆ, ಮಗಳ ಸಾವು

  • ದಟ್ಟವಾಗಿ ಕವಿದಿದ್ದ ಹೊಗೆಯಿಂದ ಉಸಿರುಗಟ್ಟಿ ಮರಣ
  • ಪುಣೆಯಲ್ಲಿ ಓಲಾ ಎಸ್‌1 ಪ್ರೊ ಎಲೆಕ್ಟ್ರಿಕ್‌ ಸ್ಕೂಟರ್‌ ಬೆಂಕಿಗಾಹುತಿ

ಚಾರ್ಜಿಗೆ ಹಾಕಿದ್ದ ಎಲೆಕ್ಟ್ರಿಕ್ ಸ್ಕೂಟರ್ ಸ್ಫೋಟಗೊಂಡು ತಂದೆ, ಮಗಳು ಸಾವನ್ನಪ್ಪಿರುವ ಘಟನೆ ತಮಿಳುನಾಡಿನ ವೆಲ್ಲೂರಿನಲ್ಲಿ ನಡೆದಿದೆ.

ಶುಕ್ರವಾರ ರಾತ್ರಿ 1 ಗಂಟೆ ಸುಮಾರಿಗೆ ಚಾರ್ಜಿಗೆ ಹಾಕಿದ್ದ ಸ್ಕೂಟರ್ ಬ್ಯಾಟರಿ ಸ್ಫೋಟಗೊಂಡಿದ್ದು, ಮನೆಯೆಲ್ಲಾ ಹೊಗೆ ಆವರಿಸಿದೆ. ಮನೆಯಲ್ಲಿ ಮಲಗಿದ್ದ ತಂದೆ, ಮಗಳು ಇಬ್ಬರು ಉಸಿರುಗಟ್ಟಿ ಮರಣ ಹೊಂದಿದ್ದಾರೆ. ಎಂ ದುರೈವರ್ಮ (49) ಮತ್ತು ಎಂಟನೇ ತರಗತಿ ವಿದ್ಯಾರ್ಥಿನಿ ಡಿ ಮೋಹನ ಪ್ರೀತಿ ಮೃತಪಟ್ವವರು.

ದುರೈವರ್ಮ ಅವರು ಕೆಲವು ದಿನಗಳ ಹಿಂದೆ ಸ್ಕೂಟರ್ ಖರೀದಿಸಿದ್ದರು. ವೆಲ್ಲೂರಿನ ಚಿನ್ನ ಅಲ್ಲಾಂಪುರದಲ್ಲಿರುವ ತಮ್ಮ ಮನೆಯ ಮುಂದೆ ವಾಹನವನ್ನು ನಿಲ್ಲಿಸಿದ್ದರು. ಮನೆಯ ಹೊರಗೆ ಸ್ಕೂಟರ್‌ ಬ್ಯಾಟರಿ ಚಾರ್ಜ್‌ಗೆ ಹಾಕಲು ಯಾವುದೇ ಸೌಲಭ್ಯವಿರಲಿಲ್ಲ. ಆದ್ದರಿಂದ ಮನೆಯೊಳಗಿನ ಸ್ವಿಚ್‌ಬೋರ್ಡ್ ಬಳಸಿ ಬ್ಯಾಟರಿಯನ್ನು ಚಾರ್ಜ್‌ಗೆ ಹಾಕಿದ್ದರು.

ಕಡಿಮೆ ಸಾಮರ್ಥ್ಯದ ಬ್ಯಾಟರಿ ಅಥವಾ ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಈ ಅವಗಢ ಸಂಭವಿಸಿದೆ ಎಂದು ಪೊಲೀಸರು ಶಂಕಿಸಿದ್ದಾರೆ. ಸ್ಫೋಟಗೊಂಡ ಎಲೆಕ್ಟ್ರಿಕ್‌ ಗಾಡಿ ಯಾವ ಕಂಪನಿಯದ್ದು ಎಂಬುದನ್ನು ಪೊಲೀಸರು ಬಹಿರಂಗಪಡಿಸಿಲ್ಲ.

ಫೋಟೋ ಸ್ಟುಡಿಯೋ ನಡೆಸುತ್ತಿದ್ದ ದುರೈವರ್ಮ ಅವರು ಒಂಬತ್ತು ತಿಂಗಳ ಹಿಂದೆ ಪತ್ನಿಯನ್ನು ಕಳೆದುಕೊಂಡಿದ್ದರು. ಪ್ರಸ್ತುತ ಮಗ ಮತ್ತು ಮಗಳೊಂದಿಗೆ ವಾಸಿಸುತ್ತಿದ್ದ ಅವರು ಶುಕ್ರವಾರ ರಾತ್ರಿ ಒಟ್ಟಿಗೆ ಊಟ ಮಾಡಿದ್ದಾರೆ. ನಂತರ ಮಗ ತನ್ನ ಚಿಕ್ಕಮ್ಮನ ಮನೆಗೆ ಹೋಗಿ ಮಲಗಿದ್ದಾನೆ. ಈ ಸಮಯದಲ್ಲಿ ಘಟನೆ ನಡೆದಿದೆ.

ಬೆಂಕಿಗಾಹುತಿಯಾದ ಓಲಾ ಸ್ಕೂಟರ್

ರಸ್ತೆಯ ಪಕ್ಕ ಪಾರ್ಕಿಂಗ್‌ನಲ್ಲಿ ನಿಲ್ಲಿಸಿದ್ದ ಓಲಾ ಎಸ್‌1 ಪ್ರೊ ಎಲೆಕ್ಟ್ರಿಕ್‌ ಸ್ಕೂಟರ್ ಹೊತ್ತಿ ಉರಿದ ಘಟನೆ ಶನಿವಾರ ಪುಣೆಯಲ್ಲಿ ನಡೆದಿದೆ. ಬೆಂಕಿಗಾಹುತಿಯಾದ ಗಾಡಿಯ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ  ಓಲಾ ಎಲೆಕ್ಟ್ರಿಕ್‌ ಕಂಪನಿಯು ಘಟನೆಯ ಕುರಿತು ತನಿಖೆ ನಡೆಸುತ್ತೇವೆ ಎಂದು ತಿಳಿಸಿದೆ.

ಬೆಂಗಳೂರು ಮೂಲದ ಓಲಾ ಕಂಪನಿಯು ಈ ಬಗ್ಗೆ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದ್ದು, ʻʻಪುಣೆಯಲ್ಲಿ ನಡೆದ ಘಟನೆ ನಮ್ಮ ಗಮನಕ್ಕೆ ಬಂದಿದೆ. ಸ್ಕೂಟರ್‌ನಲ್ಲಿ ಬೆಂಕಿ ಕಾಣಿಸಿಕೊಳ್ಳಲು ಕಾರಣ ಏನು ಎಂಬುದು ತಿಳಿದುಬಂದಿಲ್ಲ. ಇದರ ವಿಚಾರಣೆ ನಡೆಸಿ, ಮುಂಬರುವ ದಿನಗಳಲ್ಲಿ ತಿಳಿಯಪಡಿಸುತ್ತೇವೆ. ಗ್ರಾಹಕರ ಸುರಕ್ಷತೆ ಬಗ್ಗೆ ನಮಗೆ ಕಾಳಜಿ ಇದೆʼʼ ಎಂದಿದೆ.

ಕಳೆದ ವರ್ಷ ಹೈದರಾಬಾದ್‌ ಮೂಲದ ಕಂಪನಿಯೊಂದರ ಎಲೆಕ್ಟ್ರಿಕ್‌ ಸ್ಕೂಟರ್‌ ಎರಡು ಬೇರೆ ಬೇರೆ ಸ್ಥಳಗಳಲ್ಲಿ ಸ್ಫೋಟಗೊಂಡಿದ್ದ ವೀಡಿಯೋಗಳು ಇಂಟರ್‌ನೆಟ್‌ನಲ್ಲಿ ದೊರೆಯುತ್ತವೆ. ಅಕ್ಟೋಬರ್‌ನಲ್ಲಿ ಗುರುಗ್ರಾಮ ಮೂಲದ ಒಕಿನೋವಾ ಗಾಡಿಯೂ ಇದೇ ರೀತಿಯಲ್ಲಿ ಬೆಂಕಿಗಾಹುತಿಯಾಗಿತ್ತು.

ಎಲೆಕ್ಟ್ರಿಕ್‌ ವಾಹನಗಳ ಖರೀದಿಗೆ ಹಿಂದೇಟು

ಹೆಚ್ಚುತ್ತಿರುವ ಸ್ಫೋಟ ಪ್ರಕರಣಗಳು ಈಗ ತಾನೆ ಹೆಚ್ಚು ಪ್ರಚಲಿತವಾಗುತ್ತಿರುವ ಎಲೆಕ್ಟ್ರಿಕ್‌ ವಾಹನಗಳ ಬಳಕೆಯ ಮೇಲೆ ಅಡ್ಡ ಪರಿಣಾಮ ಬೀರುತ್ತಿವೆ. ಮಾರುಕಟ್ಟೆ ಸಂಶೋಧನೆ ಮತ್ತು ಸಲಹಾ ಸಂಸ್ಥೆ ಜೆಎಂಕೆ ರಿಸರ್ಚ್‌ ಮತ್ತು ಅನಾಲಿಟಿಕ್ಸ್‌ ವರದಿಯ ಪ್ರಕಾರ, ಮುಂದಿನ ಐದು ವರ್ಷಗಳಲ್ಲಿ ದೇಶದ ಎಲೆಕ್ಟ್ರಿಕ್‌ ದ್ವಿಚಕ್ರ ವಾಹನಗಳ ಸಂಖ್ಯೆ 30 ಲಕ್ಷ ಮುಟ್ಟಲಿವೆ.

ಪೆಟ್ರೋಲ್‌, ಡೀಸೆಲ್‌ ಬೆಲೆ ಏರಿಕೆಯಿಂದ ತತ್ತರಿಸಿರುವ ಸಾರ್ವಜನಿಕರು ಎಲೆಕ್ಟ್ರಿಕ್‌ ವಾಹನಗಳ ಖರೀದಿಯತ್ತ ಮುಖ ಮಾಡಿದ್ದಾರೆ. ಆದರೆ, ಎಲೆಕ್ಟ್ರಿಕ್‌ ಗಾಡಿ ಬೆಂಕಿಗಾಹುತಿ ಆಗುತ್ತಿರುವ ಘಟನೆಗಳು ಹೆಚ್ಚುತ್ತಿರುವುದರಿಂದ ಬಳಕೆದಾರರು ಚಿಂತೆಗೀಡಾಗಿದ್ದಾರೆ.

ನಿಮಗೆ ಏನು ಅನ್ನಿಸ್ತು?
0 ವೋಟ್