44 ಬಿಲಿಯನ್‌ ಡಾಲರ್‌ಗೆ ಟ್ವಿಟರ್‌ ಖರೀದಿಸಿದ ಎಲಾನ್‌ ಮಸ್ಕ್‌

  • 44 ಬಿಲಿಯನ್‌ ಡಾಲರ್‌ಗೆ ಟ್ವಿಟರ್ ಖರೀದಿಸಿದ ವಿಶ್ವದ ಆಗರ್ಭ ಶ್ರೀಮಂತ
  • ಪ್ರಜಾಪ್ರಭುತ್ವದಲ್ಲಿ ವಾಕ್‌ ಸ್ವಾತಂತ್ರ್ಯ ಅಗತ್ಯ ಎಂದಿದ್ದ ಎಲಾನ್ ಮಸ್ಕ್

ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ ಟೆಸ್ಲಾ ಸಿಇಓ ಎಲಾನ್‌ ಮಸ್ಕ್ 44 ಬಿಲಿಯನ್‌ ಡಾಲರ್‌ಗೆ ಜನಪ್ರಿಯ ಸಾಮಾಜಿಕ ಮಾಧ್ಯಮಗಳಲ್ಲಿ ಒಂದಾದ ಟ್ವಿಟರ್‌ ಅನ್ನು ಸೋಮವಾರ ಖರೀದಿಸಿದ್ದಾರೆ.

ಖರೀದಿ ಪ್ರಸ್ತಾಪಕ್ಕೆ ಟ್ವಿಟರ್ ಮಂಡಳಿ ಸಮ್ಮತಿ ಸೂಚಿಸುವುದರ ಮೂಲಕ ಕಂಪನಿ ಸಂಪೂರ್ಣವಾಗಿ ಎಲಾನ್ ಪಾಲಾಗಿದೆ.

ಸಾರ್ವಜನಿಕ ಸಂಸ್ಥೆಯಾಗಿದ್ದ ಟ್ವಿಟರ್‌ ಇನ್ನು ಮುಂದೆ ಖಾಸಗಿ ಕಂಪನಿಯಾಗಿ ಕಾರ್ಯನಿರ್ವಹಿಸಲಿದೆ. ಸೋಮವಾರ ನಡೆದ ಈ ಒಪ್ಪಂದದಲ್ಲಿ ಎಲಾನ್‌ ಅವರು, ಪ್ರತಿ ಷೇರಿಗೆ 54.20 ಡಾಲರ್‌ನಂತೆ ಖರೀದಿಸಲು ಮಾತುಕತೆ ನಡೆಸಿದರು ಎಂದು ಟ್ವಿಟರ್ ಹೇಳಿದೆ.

ಮಾರ್ಚ್‌ ಆರಂಭದಲ್ಲಿ ಟ್ವಿಟರ್‌ನ ಶೇ. 9.2ರಷ್ಟು ಷೇರನ್ನು ಖರೀದಿಸಿದ್ದ ಎಲಾನ್‌, ಏಪ್ರಿಲ್ 14ರಂದು ಟ್ವಿಟರ್ ಖರೀದಿಯ ಪ್ರಸ್ತಾಪ ಮಾಡಿದ್ದರು. ಪ್ರಸ್ತುತ ಟ್ವಿಟರ್‌ನ ಎಲ್ಲ ಷೇರುಗಳನ್ನು ಖರೀದಿಸಿ ಕಂಪನಿಯನ್ನೇ ತನ್ನದಾಗಿಸಿಕೊಂಡಿದ್ದಾರೆ.

ಟ್ವಿಟರ್‌ ಬಾಟ್‌ಗಳನ್ನು (ಒಂದೇ ಸಂದೇಶವನ್ನು ಹಲವು ಬಾರಿ ಟ್ವೀಟ್ ಮಾಡುವ ಯಂತ್ರ) ನಿಯಂತ್ರಿಸಲು ಎಲಾನ್‌ ಯೋಜನೆಯೊಂದನ್ನು ರೂಪಿಸಿದ್ದಾರೆ. "ನಮ್ಮ ಟ್ವಿಟರ್‌ ಬಿಡ್‌ ಯಶಸ್ವಿಯಾದರೆ, ನಾವು ಅಕ್ರಮ ಬಾಟ್‌ಗಳನ್ನು ನಿಯಂತ್ರಿಸುತ್ತೇವೆ ಅಥವಾ ಅವುಗಳನ್ನು ನಾಶಪಡಿಸುತ್ತೇವೆ. ಜನರು ಮಾಡುವ ಟ್ವೀಟ್‌ಗಳು ಮಾತ್ರ ಟ್ವಿಟರ್‌ನಲ್ಲಿ ಕಾಣಸಿಗುವಂತೆ ಮಾಡುತ್ತೇವೆ" ಎಂದು ಎಲಾನ್‌ ಮಸ್ಕ್‌ ಅವರು ಏಪ್ರಿಲ್‌ 22ರಂದು ತಮ್ಮ ಟ್ವಿಟರ್‌ ಖಾತೆಯಲ್ಲಿ ಬರೆದುಕೊಂಡಿದ್ದರು.

ಕಳೆದ ತಿಂಗಳು, ಟ್ವಿಟರ್‌ನಲ್ಲಿ ಮುಕ್ತ ಅಭಿವ್ಯಕ್ತಿಯ ಬಗ್ಗೆ ಮಾತನಾಡಿದ್ದ ಅವರು, ಮಾರ್ಚ್‌ 25ರಂದು ʻʻಪ್ರಜಾಪ್ರಭುತ್ವ ಸರಿಯಾಗಿ ಕಾರ್ಯನಿರ್ವಹಿಸಲು ವಾಕ್‌ ಸ್ವಾತಂತ್ರ್ಯ ಅತ್ಯಗತ್ಯ. ಟ್ವಿಟರ್‌ ಈ ತತ್ವಕ್ಕೆ ಬದ್ಧವಾಗಿದೆ ಎಂಬುದನ್ನು ನೀವು ನಂಬುತ್ತೀರಾ? ಈ ಸಮೀಕ್ಷೆಯ ಪರಿಣಾಮಗಳು ಮುಖ್ಯವಾಗುತ್ತವೆ. ಎಚ್ಚರಿಕೆಯಿಂದ ಮತ ನೀಡಿʼʼ ಎಂದು ಟ್ವಿಟರ್‌ನಲ್ಲಿ ಅಭಿಪ್ರಾಯ ಸಂಗ್ರಹಿಸಿದ್ದರು.

ಎಲಾನ್‌ ಮಸ್ಕ್ ಇತ್ತೀಚೆಗೆ ಬರೆಯುತ್ತಿರುವ ಬಹುತೇಕ ಟ್ವೀಟ್‌ಗಳು ಟ್ವಿಟರ್‌ನ ಮುಂದಿನ ನಡೆಯನ್ನು ಸೂಚಿಸುವ ರೀತಿಯಲ್ಲಿವೆ.

ಸುಮಾರು 80 ಮಿಲಿಯನ್‌ಗಿಂತಲೂ ಹೆಚ್ಚು ಟ್ವಿಟರ್‌ ಫಾಲೋವರ್‌ಗಳನ್ನು ಹೊಂದಿರುವ ಎಲಾನ್, ವಾಕ್‌ ಸ್ವಾತಂತ್ರ್ಯದ ಬಗ್ಗೆ, ʻʻಹೊಸ ಸಾಮಾಜಿಕ ಮಾಧ್ಯಮದ ಅಗತ್ಯವಿದೆಯೇ?ʼʼ ಎಂದೂ ಟ್ವೀಟ್‌ ಮಾಡಿದ್ದರು.

ಟ್ವಿಟರ್‌ ಅನ್ನು ನಿಯಮಿತವಾಗಿ ಬಳಸುತ್ತಿದ್ದ ಎಲಾನ್, ಸ್ಪೇಸ್‌ಎಕ್ಸ್‌ ಮತ್ತು ನ್ಯೂರಾಲಿಂಕ್‌ ಸೇರಿದಂತೆ ತಮ್ಮ ಕಂಪನಿಗಳ ಬಗ್ಗೆ ನಿರಂತರವಾಗಿ ಮಾಹಿತಿ ಹಂಚಿಕೊಳ್ಳುತ್ತಿದ್ದರು. ಅವರು ಹಂಚಿಕೊಳ್ಳುತ್ತಿದ್ದ ಮೀಮ್‌ಗಳು ಅತಿ ಹೆಚ್ಚು ಜನಪ್ರಿಯವಾಗಿದ್ದವು.

ಟ್ರಂಪ್‌ನಂತೆ ಎಲಾನ್‌ ಮಸ್ಕ್‌ ಅವರೂ ಹೊಸ ಸಾಮಾಜಿಕ ಜಾಲತಾಣವೊಂದನ್ನು ಆರಂಭಿಸಲಿದ್ದಾರೆ ಎಂದು ಹರಡಿದ ವದಂತಿಗೆ ಈ ಮೂಲಕ ತೆರೆಬಿದ್ದಂತಾಗಿದೆ.

ನಿಮಗೆ ಏನು ಅನ್ನಿಸ್ತು?
0 ವೋಟ್