ಎಲಾನ್ ಮಸ್ಕ್ ಖರೀದಿ ನಂತರ ಲಕ್ಷಗಟ್ಟಲೆ ಬಳಕೆದಾರರು ಟ್ವಿಟರ್‌ನಿಂದ ಪಲಾಯನ  

  • ಹೈ- ಪ್ರೊಫೈಲ್ ವ್ಯಕ್ತಿಗಳ ಟ್ವಿಟರ್ ಖಾತೆಗಳಲ್ಲಿ ಭಾರಿ ಏರಿಳಿತ 
  • ದ್ವೇಷ ಭಾಷಣ ಮತ್ತು ತಪ್ಪು ಮಾಹಿತಿ ಸ್ಥಳವಾಗುವ ಭಯ

ಜನಪ್ರಿಯ ಸಾಮಾಜಿಕ ಜಾಲತಾಣ ಟ್ವಿಟರ್ ಸಂಸ್ಥೆಯನ್ನು ಟೆಸ್ಲಾದ ಸಿಇಒ ಎಲಾನ್ ಮಸ್ಕ್ ಖರೀದಿಸಿದ್ದಾರೆ ಎಂಬ ಸುದ್ದಿ ಹೊರಬಂದ ನಂತರ ಲಕ್ಷಗಟ್ಟಲೆ ಬಳಕೆದಾರರು ಟ್ವಿಟರ್‌ನಿಂದ ಪಲಾಯನ ಮಾಡುವ ಮೂಲಕ ಖಾತೆಗಳನ್ನು ನಿಷ್ಕ್ರಿಯಗೊಳಿಸುತ್ತಿದ್ದಾರೆ ಎಂದು ಎನ್‌ಬಿಸಿ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಎಲಾನ್ ಮಸ್ಕ್ ಅವರು ಟ್ವಿಟ್ಟರ್ ಅನ್ನು ಸ್ವಾಧೀನಪಡಿಸಿಕೊಂಡಿರುವುದು ಎಲ್ಲರಿಗೂ ಆಶ್ಚರ್ಯವನ್ನುಂಟು ಮಾಡಿತ್ತು. ಅವರ ನಾಯಕತ್ವದಲ್ಲಿ ಈ ವೇದಿಕೆಯು ದ್ವೇಷದ ಭಾಷಣ ಮತ್ತು ತಪ್ಪು ಮಾಹಿತಿಯ ಸ್ಥಳವಾಗಿ ಬದಲಾಗುತ್ತಿರುವ ಬಗ್ಗೆ ಹಲವರು ಚಿಂತಿತರಾಗಿರುವಾಗ, ಬಹಳಷ್ಟು ಬಳಕೆದಾರರು ಟ್ವಿಟರ್‌ನ ಭವಿಷ್ಯದ ಬಗ್ಗೆ ಯೋಚಿಸಿ ನಂತರ ವೇದಿಕೆಯನ್ನು ತೊರೆಯಲು ನಿರ್ಧರಿಸುತ್ತಿದ್ದಾರೆ ಎಂದು ವರದಿಯಾಗಿದೆ.

ಎಲಾನ್ ಮಸ್ಕ್ ಟ್ವಿಟರ್ ಅನ್ನು ಖರೀದಿಸಿದ್ದಾರೆ ಎಂಬ ಘೋಷಣೆಯ ನಂತರ ಜನಪ್ರಿಯ ಗಾಯಕಿ ಕೇಟಿ ಪೆರ್ರಿ, ಟ್ವಿಟರ್‌ನಲ್ಲಿ 200,000 ಕ್ಕೂ ಹೆಚ್ಚು ಅನುಯಾಯಿಗಳನ್ನು ಕಳೆದುಕೊಂಡರು ಹಾಗೂ  ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಅವರ ಅನುಯಾಯಿಗಳ ಸಂಖ್ಯೆಯಲ್ಲಿ ಭಾರಿ ಕುಸಿತವಾಗಿದೆ ಎಂದು ತಿಳಿದು ಬಂದಿದೆ. 

'ಹೈ-ಪ್ರೊಫೈಲ್' ಖಾತೆಗಳ ಅನುಯಾಯಿಗಳಲ್ಲಿ ದೊಡ್ಡ ಕುಸಿತವಾಗಿದೆ ಎಂದು ಟ್ವಿಟರ್ ವಕ್ತಾರರು ಮಾಧ್ಯಮಗಳಿಗೆ ಹೇಳಿದ್ದಾರೆ. ಟ್ವಿಟರ್ ಕೇವಲ ಒಂದು ದಿನದಲ್ಲಿ ಕಳೆದುಕೊಂಡಿರಬಹುದಾದ ಬಳಕೆದಾರರ ಸಂಖ್ಯೆಯನ್ನು ನಿಖರವಾಗಿ ಬಹಿರಂಗಪಡಿಸದಿದ್ದರೂ, ಪ್ಲಾಟ್‌ಫಾರ್ಮ್ "ಅನುಯಾಯಿಗಳ ಎಣಿಕೆಯಲ್ಲಿನ ಏರಿಳಿತಗಳ" ಮೇಲೆ ನಿಗಾ ಇರಿಸುತ್ತಿದೆ ಎಂದಿದೆ.

ಯಾರ ಖಾತೆಯಲ್ಲಿ ಏರಿಳಿತ?

ಮಾರ್ಜೋರಿ ಟೇಲರ್ ಗ್ರೀನ್ ಮತ್ತು ಬ್ರೆಜಿಲ್ ಅಧ್ಯಕ್ಷ ಜೈರ್ ಬೋಲ್ಸನಾರೊ ಅವರಂತಹ ಕೆಲವು ಬಲಪಂಥೀಯ ರಾಜಕಾರಣಿಗಳು ಟ್ವಿಟರ್‌ನಲ್ಲಿ ಹೊಸ ಅನುಯಾಯಿಗಳನ್ನು ಪಡೆಯುತ್ತಿದ್ದರೆ, ಜನಪ್ರಿಯ ಗಾಯಕಿ ಕೇಟಿ ಪೆರ್ರಿ, ಟ್ವಿಟರ್‌ನಲ್ಲಿ 200,000ಕ್ಕೂ ಹೆಚ್ಚು ಅನುಯಾಯಿಗಳನ್ನು ಕಳೆದುಕೊಂಡಿದ್ದಾರೆ. ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಅವರ ಅನುಯಾಯಿಗಳ ಸಂಖ್ಯೆಯಲ್ಲಿ ಭಾರಿ ಕುಸಿತವಾಗಿದೆ, ಫ್ಲೋರಿಡಾದ ಗವರ್ನರ್, ರಾನ್ ಡಿಸಾಂಟಿಸ್, ಸುಮಾರು 100,000 ಅನುಯಾಯಿಗಳ ಹೆಚ್ಚಳ ಕಂಡಿದ್ದಾರೆ ಎಂದು ವರದಿಯಾಗಿದೆ.

ಅನುಸರಿಸುವವರ ಸಂಖ್ಯೆ ಹೆಚ್ಚಿಸಲು ಸ್ವಯಂಚಾಲಿತ ಖಾತೆಗಳನ್ನು ರಚಿಸಲಾಗಿದೆಯೇ ಎಂಬ ಪ್ರಶ್ನೆಗಳನ್ನು ಈ ಬೆಳವಣಿಗೆ ಹುಟ್ಟುಹಾಕಿದೆ. ಟ್ವಿಟರ್ ಎನ್‌ಬಿಸಿ ಸುದ್ದಿಸಂಸ್ಥೆಗೆ 'ಅನುಯಾಯಿಗಳ ಸಂಖ್ಯೆಯಲ್ಲಿನ ಏರಿಳಿತಗಳು' ಸ್ವಯಂಚಾಲಿತವಾಗಿಲ್ಲ ಮತ್ತು ಸಹಜ ಬೆಳವಣಿಗೆ ಎಂದು ಹೇಳಿದೆ.  

ನಿಮಗೆ ಏನು ಅನ್ನಿಸ್ತು?
0 ವೋಟ್