ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂ ರೀಲ್ಸ್ ಈಗ 90 ಸೆಕೆಂಡ್‌ಗೆ ವಿಸ್ತರಣೆ

Instagram Reels Image
  • ಇನ್‌ಸ್ಟಾಗ್ರಾಂ ರೀಲ್ಸ್ 90 ಸೆಕೆಂಡ್‌ಗೆ ವಿಸ್ತರಿಸಿದೆ
  • ʻಆ್ಯಂಬರ್ʼ ಎನ್ನುವ ಹೊಸ ವೈಶಿಷ್ಟ್ಯ ಪರಿಚಯ

ಇತ್ತೀಚಿನ ದಿನಗಳಲ್ಲಿ ನೂತನ ವೈಶಿಷ್ಟ್ಯಗಳೊಂದಿಗೆ ಹೊರಬರುತ್ತಿರುವ ಇನ್‌ಸ್ಟಾಗ್ರಾಂ, ಇದೀಗ ಟಿಕ್‌ಟಾಕ್‌ಗೆ ಪೈಪೊಟಿ ನೀಡಲು ರೀಲ್ಸ್‌ಗಳನ್ನು 90 ಸೆಕೆಂಡ್‌ಗೆ ವಿಸ್ತರಿಸಿದೆ.

ಭಾರತದಲ್ಲಿ ಟಿಕ್‌ಟಾಕ್‌ ನಿರ್ಬಂಧಿಸಿದ ಬಳಿಕ ಇನ್‌ಸ್ಟಾಗ್ರಾಂ ತನ್ನ ಹೊಸ ಪ್ರಯೋಗದೊಂದಿಗೆ ರೀಲ್ಸ್ ಎಂಬ ನೂತನ ವೈಶಿಷ್ಟ್ಯ ಪರಿಚಯಿಸಿದ್ದು, ನೆಟ್ಟಿಗರ ಗಮನಸೆಳೆದಿದೆ. ಅಂದಿನಿಂದ ಪ್ರತಿ ಬಾರಿ ಹೊಸ ವೈಶಿಷ್ಟ್ಯಗಳನ್ನು ನವೀಕರಿಸುತ್ತ ಬಂದಿದೆ.

ಮೊದಲ ಬಾರಿಗೆ ರೀಲ್ಸ್ ಆರಂಭವಾದಾಗ ಅದರ ಕಾಲಾವಧಿ 30 ಸೆಕೆಂಡ್ ಆಗಿತ್ತು. ರೀಲ್ಸ್ ಎಲ್ಲರಿಗೂ ಚಿರಪರಿಚಿತವಾದ ನಂತರ, ಬದಲಾವಣೆಗಳೊಂದಿಗೆ ರೀಲ್ಸ್ ಸಮಯವನ್ನು 60 ಸೆಕೆಂಡ್‌ಗೆ ವಿಸ್ತರಿಸಿತು. ಅಷ್ಟಕ್ಕೆ ಸುಮ್ಮನಿರದ ಇನ್‌ಸ್ಟಾಗ್ರಾಂ ಇದೀಗ ರೀಲ್ಸ್‌ಗಳನ್ನು 90 ಸೆಕೆಂಡ್‌ಗಳಿಗೆ ವಿಸ್ತರಿಸುವ ಮೂಲಕ ಟಿಕ್‌ಟಾಕ್‌ಗೆ ಪೈಪೋಟಿ ನೀಡುತ್ತಿದೆ ಹಾಗೂ ನೆಟ್ಟಿಗರ ಗಮನ ಸೆಳೆಯುತ್ತಿದೆ.

“ನಾವು 90 ಸೆಕೆಂಡುಗಳವರೆಗೆ ವಿಸ್ತರಿಸುವ ಮೂಲಕ ಬಳಕೆದಾರರು ರೀಲ್ಸ್‌ನಲ್ಲಿ ಹೆಚ್ಚು ಸಮಯ ಕಳೆಯಲು ಅವಕಾಶ ನೀಡುತ್ತಿದ್ದೇವೆ. ನೆಚ್ಚಿನ ರೀಲ್ಸ್‌ಗಳನ್ನು ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಳ್ಳಲು ಬಳಕೆದಾರರು ಹೆಚ್ಚು ಸಮಯ ಹೊಂದಿರುತ್ತಾರೆ. ಚಲನಚಿತ್ರದ ಹೆಚ್ಚುವರಿ ದೃಶ್ಯಗಳು ಮತ್ತು ನಿಮ್ಮ ನೆಚ್ಚಿನ ವಿಷಯಗಳ ಬಗ್ಗೆ ಈಗ ಇನ್ನು ಹೆಚ್ಚು ತಿಳಿಯಿರಿ. ಅಷ್ಟೇ ಅಲ್ಲದೆ ರೀಲ್ಸ್‌ಗಳೊಂದಿಗೆ ʻಸೌಂಡ್ ಸಿಂಕ್ʼ ಮಾಡುವ ನೂತನ ವೈಶಿಷ್ಟ್ಯ ಕೂಡ ನವೀಕರಿಸಲಾಗಿದೆ” ಎಂದು ಇನ್‌ಸ್ಟಾಗ್ರಾಂ ಟ್ವೀಟ್ ಮಾಡಿದೆ.

“ರೀಲ್ಸ್ ಸಮಯದ ವಿಸ್ತರಣೆಯ ಜೊತೆಗೆ ಬಳಕೆದಾರರು ಇನ್‌ಸ್ಟಾಗ್ರಾಂನಲ್ಲಿ ತಮ್ಮದೇ ಆದ ಆಡಿಯೊ ಪಡೆದುಕೊಳ್ಳಬಹುದು. ಮುಂದಿನ ದಿನಗಳಲ್ಲಿ ತಮಗೆ ಇಷ್ಟವಾದ ರೀತಿಯಲ್ಲಿ ಪೋಲ್, ಕ್ವಿಜ್ ಮತ್ತು ಎಮೋಜಿಗಳನ್ನು ಕೂಡ ರೀಲ್ಸ್‌ನಲ್ಲಿ ಬಳಸುವ ವೈಶಿಷ್ಟ್ಯಗಳನ್ನು ಪರಿಚಯಿಸಲಾಗುವುದು” ಎಂದು ಇನ್‌ಸ್ಟಾಗ್ರಾಂ ವರದಿ ತಿಳಿಸಿದೆ.

ಈ ಸುದ್ದಿ ಓದಿದ್ದೀರಾ? ಜಿಯೋ ಸಾವನ್ ಸ್ಥಗಿತ; ಟ್ವಿಟರ್‌ನಲ್ಲಿ ಬಳಕೆದಾರರ ಆಕ್ರೋಶ

ಇನ್‌ಸ್ಟಾಗ್ರಾಂ ʻಆ್ಯಂಬರ್ʼ ಎನ್ನುವ ವೈಶಿಷ್ಟ್ಯವನ್ನು ಪರಿಚಯಿಸಿದ್ದು, ಇದು ಕಾಣೆಯಾದ ಮಕ್ಕಳನ್ನು ಪತ್ತೆಹಚ್ಚಲು ಅಧಿಕಾರಿಗಳಿಗೆ ಸಹಾಯ ಮಾಡುತ್ತದೆ. ಮಗುವಿನ ಕುರಿತಾದ ಛಾಯಚಿತ್ರ, ಸಂಪೂರ್ಣ ಮಾಹಿತಿ, ಅಪಹರಣದ ಸ್ಥಳ ಮತ್ತು ಮಗುವಿಗೆ ಸಂಬಂಧಿಸಿದ ಯಾವುದೇ ಮಾಹಿತಿಯನ್ನು ನೀವು ಇನ್‌ಸ್ಟಾಗ್ರಾಂ ಫೀಡ್‌ನಲ್ಲಿ ಅಪ್ಲೋಡ್ ಮಾಡಿದರೆ, ಅದನ್ನು ನಿಮ್ಮ ಸ್ನೇಹಿತರು ಇನ್‌ಸ್ಟಾಗ್ರಾಂನಲ್ಲಿ ಹರಡಲು ಸಹಾಯ ಮಾಡುತ್ತಾರೆ, ಹೀಗೆ ʼಆ್ಯಂಬರ್ʼ ಬಳಕೆದಾರರಿಗೆ ಸಹಾಯ ಮಾಡುತ್ತದೆ.

Instagram Amber Image

“ಟಿಕ್‌ಟಾಕ್‌ ಮತ್ತು ಯುಟ್ಯೂಬ್‌ನಿಂದ ಪ್ರೇರಿತವಾಗಿದ್ದೇವೆ. ಈ ಹಿಂದೆ ಯುಟ್ಯೂಬ್ ರೀಲ್ಸ್ ಮೂರು ನಿಮಿಷಗಳನ್ನು ಹೊಂದಿತ್ತು. ಆದರೆ, ಈಗ 10 ನಿಮಿಷಕ್ಕೆ ವಿಸ್ತರಿಸಲಾಗಿದೆ. ಅದೇ ರೀತಿ ಇನ್‌ಸ್ಟಾಗ್ರಾಂ ಕೂಡ ಹಲವು ವೈಶಿಷ್ಟ್ಯಗಳನ್ನು ಪರಿಚಯಿಸಿದೆ. ಅದರಲ್ಲಿ ʻಸೌಂಡ್ ಸಿಂಕ್ʼ ಕೂಡ ಒಂದು. ಈ ವೈಶಿಷ್ಟ್ಯದಲ್ಲಿ ಬಳಕೆದಾರರು ತಮ್ಮ ರೀಲ್ಸ್‌ನಲ್ಲಿ ಅವರದ್ದೇ ಧ್ವನಿ ಬಳಸಬಹುದು. ಹೀಗೆ ಮುಂದಿನ ದಿನಗಳಲ್ಲಿ ಮೆಟಾ ಸಹಾಯದಿಂದ ಇನ್‌ಸ್ಟಾಗ್ರಾಂನಲ್ಲಿ ಹಣಗಳಿಸುವ ಸೃಜನಾತ್ಮಕ ಸಾಧನವನ್ನು ಶೀಘ್ರದಲ್ಲೇ ಹೊರತರುತ್ತೇವೆ” ಎಂದು ಮೆಟಾ ಸಂಸ್ಥೆ ಹೇಳಿದೆ.

ಪ್ರಸ್ತುತ, ಇನ್‌ಸ್ಟಾಗ್ರಾಂ 25ಕ್ಕೂ ಅಧಿಕ ದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿದೆ. ಮುಂದಿನ ದಿನಗಳಲ್ಲಿ ಮೆಟಾ ಸಂಸ್ಥೆ ಇನ್ನು ಹೆಚ್ಚು ದೇಶಗಳಿಗೆ ವಿಸ್ತರಿಸುವ ಚಿಂತನೆ ಮಾಡಿದೆ.

ನಿಮಗೆ ಏನು ಅನ್ನಿಸ್ತು?
0 ವೋಟ್
eedina app