ನೌಕರರು ಇನ್ಮುಂದೆ ಗೂಗಲ್ ಡ್ರೈವ್, ಡ್ರಾಪ್‌ಬಾಕ್ಸ್‌, ವಿಪಿಎನ್‌ ಬಳಸುವಂತಿಲ್ಲ ಎಂದು ಆದೇಶಿಸಿದ ಕೇಂದ್ರ ಸರ್ಕಾರ

Cyber Security Image
  • ನೌಕರರು ಮೊಬೈಲ್‌ನಲ್ಲಿ ಪಾಸ್‌ವರ್ಡ್‌ಗಳನ್ನು 45 ದಿನಗಳಿಗೊಮ್ಮೆ ನವೀಕರಿಸಬೇಕು
  • ಎನಿಡೆಸ್ಕ್‌ನಂತಹ ಅಪ್ಲಿಕೇಶನ್‌ಗಳನ್ನು ಬಳಸದ ಹಾಗೆ ಕಂಪನಿಗಳು ಎಚ್ಚರವಹಿಸಬೇಕು

ಯಾವುದೇ ಮಧ್ಯವರ್ತಿ ಅಪ್ಲಿಕೇಶನ್‌ಗಳಾದ ಗೂಗಲ್ ಡ್ರೈವ್, ಡ್ರಾಪ್‌ಬಾಕ್ಸ್‌, ವಿಪಿಎನ್‌ಗಳನ್ನು ಬಳಸುವಂತಿಲ್ಲ ಹಾಗೂ (ವರ್ಚುವಲ್ ಪ್ರೈವೇಟ್ ನೆಟ್‌ವರ್ಕ್‌) ಸೇವೆಗಳನ್ನು ನೀಡುವ ನಾರ್ಡ್‌ವಿಪಿಎನ್‌ ಮತ್ತು ಎಕ್ಸ್‌ಪ್ರೆಸ್‌ವಿಪಿಎನ್‌ನಂತಹ ನೆಟ್‌ವರ್ಕ್‌ ಸೇವಾ ಅಪ್ಲಿಕೇಶನ್‌ಗಳನ್ನೂ ಬಳಸಬಾರದು ಎಂದು ಕೇಂದ್ರ ಸರ್ಕಾರ ತನ್ನ ನೌಕರರಿಗೆ ಆದೇಶಿಸಿದೆ.

ಸರ್ಕಾರಿ ನೌಕರರಿಗಾಗಿ ಬಿಡುಗಡೆ ಮಾಡಿರುವ ಅಧಿಕೃತ ದಾಖಲೆಯಲ್ಲಿ ಉಲ್ಲೇಖಿಸಿರುವ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ತಿಳಿಸಿದೆ.

ಈ ಆದೇಶ ಸರ್ಕಾರಿ ಕೆಲಸಗಳ ಗುತ್ತಿಗೆ ಪಡೆಯುವ ಎಲ್ಲ ಖಾಸಗಿ ಕಂಪನಿಗಳಿಗೆ ಮತ್ತು ನೌಕರರಿಗೆ ಅನ್ವಯಿಸುತ್ತದೆ. ವಿಪಿಎನ್ ಸೇವಾ ಕಂಪನಿಗಳು ಯಾವುದೇ ಗೌಪ್ಯತೆ ಮಾಹಿತಿ ಹೊಂದಿದಲ್ಲಿ ಅವುಗಳನ್ನು ಪ್ರತಿ ಐದು ವರ್ಷಕ್ಕೆ ಒಮ್ಮೆ ಅಳಿಸಬೇಕು ಎಂದು ಕೇಂದ್ರ ಮಾಹಿತಿ ಸಚಿವಾಲಯ ಸೂಚಿಸಿದೆ. 

ಸರ್ಕಾರದ ವಿವರಗಳ ಕುರಿತು ಭದ್ರತೆ ಬಲಪಡಿಸುವ ನಿಟ್ಟಿನಲ್ಲಿ ಈ ನಿಯಮಗಳನ್ನು ಜಾರಿಗೆ ತರಲಾಗಿದೆ ಎಂದು ವರದಿ ತಿಳಿಸಿದೆ. ಭಯೋತ್ಪಾದಕ ಸಂಘಟನೆಗಳು ಈ ಸೇವೆ ಉಪಯೋಗಿಸುವುದರಿಂದ ಅವರಿಗೆ ಸರ್ಕಾರದ ಗೌಪ್ಯ ವಿವರಗಳು ಸಿಗುವ ಸಾಧ್ಯತೆ ಹೆಚ್ಚಿದೆ. ಇದರಿಂದ ಭಾರತಕ್ಕೆ ಸಂಕಷ್ಟ ಕೂಡ ಎದುರಾಗಬಹುದು. ಹೀಗಾಗಿ ಕ್ಯಾಮ್ ಸ್ಕಾನರ್ ಸೇರಿದಂತೆ ಹಲವು ಸ್ಕ್ಯಾನಿಂಗ್ ಅಪ್ಲಿಕೇಶನ್ ಉಪಯೋಗಿಸಿ ಕೇಂದ್ರ ಸರ್ಕಾರದ ದಾಖಲೆಗಳನ್ನು ಸ್ಕಾನ್ ಮಾಡಿ ಕದಿಯಬಹುದು. ಮುನ್ನೆಚ್ಚರಿಕೆ ವಹಿಸಲು ಈ ಮಾರ್ಗಸೂಚಿ ನೀಡಲಾಗಿದೆ ಎಂದು ಮಾಹಿತಿ ಸಚಿವಾಲಯ ಹೇಳಿದೆ.

ಉದ್ಯೋಗಿಗಳಿಗೆ ಸೈಬರ್ ಭದ್ರತಾ ಮಾರ್ಗಸೂಚಿಯಡಿ ತಯಾರಾದ ನಿಯಮಗಳನ್ನು ನೌಕರರು ಸೇರಿದಂತೆ ಉಳಿದ ಖಾಸಗಿ ಅಪ್ಲಿಕೇಶನ್ ಕಂಪನಿಗಳು ಇದಕ್ಕೆ ಒಪ್ಪಿ ನಿಯಮಗಳನ್ನು ಪಾಲಿಸಬೇಕು. ಇಲ್ಲವಾದಲ್ಲಿ ಕಂಪನಿಗಳು ಭಾರತ ಬಿಟ್ಟು ಹೋಗಬಹುದೆಂದು ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ತಿಳಿಸಿದ್ದಾರೆ.

ಅಷ್ಟೇ ಅಲ್ಲದೆ, ಎಲ್ಲ ಕಂಪನಿಗಳು ಅವರ ಉದ್ಯೋಗಿಗಳಿಗೆ ಈ ಮಾರ್ಗಸೂಚಿಗಳನ್ನು ಅಳವಡಿಸಬೇಕು ಹಾಗೂ ವಿಪಿಎನ್ ಸೇರಿದಂತೆ ಹಲವು ನೆಟ್‌ವರ್ಕ್‌ ಸೇವಾ ಅಪ್ಲಿಕೇಶನ್ ಮತ್ತು ಟೀಮ್‌ವ್ಯೂವರ್‌, ಎನಿಡೆಸ್ಕ್ ಹಾಗೂ ಅಡ್ಮಿನ್‌ನಂತಹ ಅಪ್ಲಿಕೇಶನ್‌ಗಳನ್ನು ಬಳಸದ ಹಾಗೆ ಕಂಪನಿಗಳು ಕ್ರಮಕೈಗೊಳ್ಳಬೇಕು ಎಂದು ಕೇಂದ್ರ ಮಾಹಿತಿ ಸಚಿವಾಲಯ ಸೂಚಿಸಿದೆ.

ಈಗಾಗಲೇ ಚೀನಾ ಆಧಾರಿತ ಅಪ್ಲಿಕೇಶನ್‌ಗಳನ್ನು 2020ರಲ್ಲಿ ಭಾರತ ಸರ್ಕಾರವು ನಿರ್ಬಂಧಿಸಿದೆ ಹಾಗೂ ಗೌಪ್ಯತೆ ನಿಟ್ಟಿನಲ್ಲಿ ಕ್ಯಾಮ್ ಸ್ಕಾನರ್‌ ಅನ್ನು ನಿಷೇಧಿಸಿದೆ. ಆದಾಗ್ಯೂ, ಕೆಲವು ಸರ್ಕಾರಿ ಅಧಿಕಾರಿಗಳು ತಮ್ಮ ಅಧಿಕೃತ ದಾಖಲೆಗಳ ಭೌತಿಕ ಪ್ರತಿಗಳನ್ನು ಸ್ಕ್ಯಾನ್ ಮಾಡಲು ಈ ಅಪ್ಲಿಕೇಶನ್ ಅನ್ನು ಬಳಸುತ್ತಿರುವುದು ಕಂಡುಬಂದಿದೆ. ಕೆಲವು ಅಪ್ಲಿಕೇಶನ್‌ಗಳ ಬಳಕೆ ನಿರ್ಬಂಧಿಸುವುದರ ಜೊತೆಗೆ, ಉದ್ಯೋಗಿಗಳಿಗೆ ತಮ್ಮ ಮೊಬೈಲ್‌ನಲ್ಲಿ 'ಜೈಲ್ ಬ್ರೇಕ್' ಅಥವಾ 'ರೂಟ್' ಎಂದರೆ (ಮೊಬೈಲ್‌ನಲ್ಲಿ ಮಾಲೀಕರಿಗೆ ಆಪರೇಟಿಂಗ್ ಸಿಸ್ಟಂನ ಮೂಲಕ ಪೂರ್ಣ ಪ್ರವೇಶ ಪಡೆಯಲು ಮತ್ತು ಎಲ್ಲಾ ವೈಶಿಷ್ಟ್ಯಗಳನ್ನು ಪ್ರವೇಶಿಸಲು ಅನುಮತಿಸುವುದು) ಮಾಡದಂತೆ ನಿರ್ದೇಶಿಸಿದೆ.

ಈ ಸುದ್ದಿ ಓದಿದ್ದೀರಾ? ಐಟಿ ಹೊಸ ನಿಯಮ | ಸಾಮಾಜಿಕ ಮಾಧ್ಯಮಗಳ ನಿಯಂತ್ರಣದ ಉದ್ದೇಶವೇನು?

ಸೈಬರ್ ಭದ್ರತಾ ಮಾರ್ಗಸೂಚಿಗಳು ಯಾವುವು?

  • ನೌಕರರು ಅವರ ಮೊಬೈಲ್‌ನಲ್ಲಿ ಗೂಗಲ್ ಪಾಸ್‌ವರ್ಡ್‌ ಸೇರಿದಂತೆ ಎಲ್ಲ ಅಪ್ಲಿಕೇಶನ್ ಪಾಸ್‌ವರ್ಡ್‌ಗಳನ್ನು 45 ದಿನಗಳಿಗೊಮ್ಮೆ ನವೀಕರಿಸುವುದು.
  •  ಆಪರೇಟಿಂಗ್ ಸಿಸ್ಟಮ್ ಮತ್ತು ಬಯೋಸ್ ಫರ್ಮ್‌ವೇರ್‌ಗಳನ್ನು ಇತ್ತೀಚಿನ ಆವೃತಿಗೆ ನವೀಕರಿಸಬೇಕು.
  •  ಸರ್ಕಾರ ಮತ್ತು ಖಾಸಗಿ ಕಂಪನಿಗಳ ಗೌಪ್ಯ ಮಾಹಿತಿಯನ್ನು ಭದ್ರತೆ ಮಾಡಲು ಉದ್ಯೋಗಿಗಳು ಈ ಎಲ್ಲ ನಿಯಮಗಳನ್ನು ಪಾಲಿಸಲು ಕಂಪನಿಯ ಅಧಿಕಾರಿಗಳು ಕಟ್ಟುನಿಟ್ಟಾಗಿ ಪಾಲಿಸುವ ಹಾಗೆ ಕ್ರಮಕೈಗೊಳಬೇಕು.

ಶೀಘ್ರದಲ್ಲಿ ವಿಪಿಎನ್, ಡ್ರಾಪ್‌ಬಾಕ್ಸ್‌, ಎಕ್ಸ್‌ಪ್ರೆಸ್‌ವಿಪಿಎನ್ ಅಪ್ಲಿಕೇಶನ್‌ಗಳು ಸರ್ಕಾರದ ನಿಯಮ ಪಾಲಿಸದೆ ಉಲ್ಲಂಘಿಸಿರುವ ಹಿನ್ನೆಲೆಯಲ್ಲಿ ಅವುಗಳನ್ನು ಭಾರತದಲ್ಲಿ ನಿಷೇಧಿಸಲಾಗುವುದು. ಈ ಎಲ್ಲ ಮಾರ್ಗಸೂಚಿಗಳ ಕರಡುಪ್ರತಿಗೆ ಕೆಲವು ಪರಿಷ್ಕರಣೆಗಳನ್ನು ಮಾಡಲಾಗಿದ್ದು, ಬಳಿಕ ಕಾರ್ಯರೂಪಕ್ಕೆ ತರಲಾಗಿದೆ. ಜೂನ್ 10ರಂದು ಈ ನಿಯಮಗಳು ಬಿಡುಗಡೆಯಾಗಿವೆ. ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಈ ಮಾರ್ಗಸೂಚಿಯನ್ನು ಅನುಮೋದಿಸಿದೆ.

ನಿಮಗೆ ಏನು ಅನ್ನಿಸ್ತು?
1 ವೋಟ್