ಕ್ರೆಡಿಟ್ ಕಾರ್ಡ್‌ಗಳಿಗೆ ಯುಪಿಐ ಲಿಂಕ್ ಮಾಡುವುದರಿಂದ ಆಗುವ ಪ್ರಯೋಜನವೇನು?

UPI Credit Card Image
  • ಕ್ರೆಡಿಟ್ ಕಾರ್ಡ್‌ನ್ನು ಯುಪಿಐನಲ್ಲಿ ಬಳಸುವುದರಿಂದ ಬ್ಯಾಂಕ್‌ ಸಾಲ ನೀಡುವ ಸಾಧ್ಯತೆ
  • ಈ ಕ್ರಿಯೆ ಕಾರ್ಯರೂಪಕ್ಕೆ ಬರಲು ಒಂದು ವರ್ಷವಾಗಬಹುದು ಎಂದು ಅಂದಾಜು

ಭಾರತದಲ್ಲಿ ಶೀಘ್ರದಲ್ಲೇ ಬಳಕೆದಾರರಿಗೆ ಯುಪಿಐ ಜೊತೆಗೆ ಕ್ರೆಡಿಟ್ ಕಾರ್ಡ್ ಲಿಂಕ್ ಮಾಡುವ ಅನುಮತಿ ನೀಡಲಿದ್ದು ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ ಜೊತೆಗೆ ರೂಪೇ ಕ್ರೆಡಿಟ್ ಕಾರ್ಡ್ ನೊಂದಿಗೆ ʻಈಗ ಖರೀದಿಸಿ ನಂತರ ಪಾವತಿಸಿʻ ಎಂಬ ಯೋಜನೆಯನ್ನು ಆರ್‌ಬಿಐ ಆರಂಭಿಸಲಿದೆ.

"ಕ್ರೆಡಿಟ್ ಕಾರ್ಡ್ ಯುಪಿಐ ಜೊತೆಗೆ ಲಿಂಕ್ ಮಾಡುವುದರಿಂದ ಯುಪಿಐ ಬಳಕೆದಾರರಿಗೆ ಮತ್ತು ಗ್ರಾಹಕರಿಗೆ ತುಂಬ ಅನುಕೂಲವಾಗಲಿದೆ ಹಾಗೂ ಇದರಿಂದ ಜನರು ಯುಪಿಐ ಕಡೆಗೆ ಬರುವ ಸಾಧ್ಯತೆ ಹೆಚ್ಚಾಗಲಿದೆ ಎಂಬ ನಿರೀಕ್ಷೆ ಹೊಂದಿದ್ದೇವೆ” ಎಂದು ಆರ್‌ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ತಿಳಿಸಿದ್ದಾರೆ.‌

ಕ್ರೆಡಿಟ್ ಕಾರ್ಡ್ ಲಿಂಕ್ ಮಾಡುವುದರಿಂದ ಆಗುವ ಪ್ರಯೋಜನಗಳೇನು?
1. ಹೊಸ ವೈಶಿಷ್ಟ್ಯ

ಇಷ್ಟು ದಿನ ಬಳಕೆದಾರರು ತಮ್ಮ ಬ್ಯಾಂಕ್ ಉಳಿತಾಯ ಖಾತೆ ಮತ್ತು ಡೆಬಿಟ್ ಕಾರ್ಡ್‌ನೊಂದಿಗೆ ಮಾತ್ರ ಲಿಂಕ್ ಮಾಡಲು ಆರ್‌ಬಿಐ ಅನುವು ಮಾಡಿತ್ತು. ಆದರೆ ಈಗ ಯುಪಿಐಗೆ ಕ್ರೆಡಿಟ್ ಕಾರ್ಡ್ ಲಿಂಕ್ ಮಾಡುವ ಹೊಸ ವೈಶಿಷ್ಟ್ಯವನ್ನು ಆರ್‌ಬಿಐ ಆರಂಭಿಸಲಿದೆ. ಮೊದಲಿಗೆ ಗ್ರಾಹಕರು ತಮ್ಮ ಕ್ರೆಡಿಟ್ ಕಾರ್ಡ್‌ನ್ನು ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ ಜೊತೆಗೆ ರೂಪೇ ಕ್ರೆಡಿಟ್ ಕಾರ್ಡ್ ನೊಂದಿಗೆ ನೋಂದಣಿ ಮಾಡಿ ನಂತರ ಪೋನ್ ಪೇ ಮತ್ತು ಗೂಗಲ್ ಪೇನೊಂದಿಗೆ ಲಿಂಕ್ ಮಾಡಬೇಕು. ಹೀಗೆ ಮಾಡುವುದರಿಂದ ಗ್ರಾಹಕರು ಯಾವುದೇ ಅಂಗಡಿ ಅಥವಾ ಮಾಲ್‌ಗಳಿಗೆ ಹೊದಲ್ಲಿ ಅವರು ನೀಡುವ ಯುಪಿಐ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಸರಕು ಹಾಗೂ ಸೇವೆಗಳನ್ನು ಪಡೆಯಬಹುದು.

2. ಕ್ರೆಡಿಟ್ ಕಾರ್ಡ್ ಸೇರ್ಪಡೆಯೊಂದಿಗೆ ಯುಪಿಐ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ ?
ಈ ವ್ಯವಸ್ಥೆಯನ್ನು ಯುಪಿಐನಲ್ಲಿ ಬಳಸಲು ಬಹಳ ಹಿಂದೆಯೇ ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ ನಿರ್ಧರಿಸಿತ್ತು. ಆದರೆ ಈ ಯೋಜನೆ ಈಗ ಕಾರ್ಯರೂಪಕ್ಕೆ ಬರಲಿದೆ. ಕ್ರೆಡಿಟ್ ಕಾರ್ಡ್‌ನ್ನು ಯುಪಿಐನಲ್ಲಿ ಬಳಸುವುದರಿಂದ ಅನೇಕ ಬ್ಯಾಂಕ್‌ಗಳು ಸಾಲಕೊಡಲು ಮುಂದಾಗಬಹುದು. ಜೊತೆಗೆ ಭಾರತದ ಆರ್ಥಿಕ ವ್ಯವಸ್ಥೆಯಲ್ಲಿಯೂ ಕೆಲವು ಅಭಿವೃದ್ದಿ ಕಾಣಬಹುದು. ಇದರಿಂದ ರೂಪೇಯಂತಹ ಕ್ರೆಡಿಟ್ ಕಾರ್ಡ್ ಬಳಸುವ ಗ್ರಾಹಕರು ಕೂಡ ಹೆಚ್ಚಾಗುತ್ತಿದ್ದಾರೆ ಎಂದು ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ ಸಂಸ್ಥೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

3. ಹಾಗಾದರೆ ಇದರ ಫಲಾನುಭವಿಗಳು ಯಾರು?
ಈ ಮೊದಲು ಫಿನ್‌ಟೆಕ್‌ ಕಂಪನಿಗಳು ಇದರ ಫಲಾನುಭವಿಗಳು ಆಗಿದ್ದರು. ಆದರೆ ಈಗ ಅವರ ಬಲವನ್ನು ರಾಷ್ಟ್ರೀಯ ಬ್ಯಾಂಕ್‌ಗಳು ಮತ್ತು ವ್ಯಾಪಾರಿಗಳು ಹಿಂಪಡೆದಿವೆ. ಯಾಕೆಂದರೆ ಫಿನ್‌ಟೆಕ್‌ನಂತಹ ಕಂಪನಿಗಳು ಕಡಿಮೆ ಸಾಲ ನೀಡುತ್ತಿದ್ದವು. ಆದರೇ ಅವರ ಜವಾಬ್ದಾರಿಯನ್ನು ಹೊತ್ತ ಬ್ಯಾಂಕ್‌ಗಳು ಈಗ ಹೆಚ್ಚು ಸಾಲ ಕೊಡಲು ಮುಂದಾಗಲಿವೆ. ಅಷ್ಟೇ ಅಲ್ಲದೆ ಇದರಿಂದ ವ್ಯಾಪಾರಿಗಳಿಗೂ ಲಾಭವಿದೆ ಎಂದು ಸೇತು ಸಂಸ್ಥೆಯ ಸಹ ಸಂಸ್ಥಾಪಕ ನಿಖಿಲ್ ಕುಮಾರ್ ಹೇಳಿದ್ದಾರೆ.

ಈ ಸುದ್ದಿ ಓದಿದ್ದೀರಾ? ದೇಶದ ಮೊದಲ ಮಾನವ ಸಹಿತ ಗಗನಯಾನಕ್ಕೆ ಚಾಲನೆ ನೀಡಲು ಸಜ್ಜಾದ ಇಸ್ರೋ

4. ಯುಪಿಐನಲ್ಲಿ ಕ್ರೆಡಿಟ್ ಕಾರ್ಡ್ ಲಿಂಕ್ ಮಾಡುವುದರಿಂದ ಎದುರಿಸುವ ಸವಾಲುಗಳೇನು?
ಪ್ರಸ್ತುತ ವ್ಯಾಪಾರಿಗಳಿಗೆ ಯುಪಿಐ ಬಳಕೆಯು ಉಚಿತವಾಗಿದೆ. ಆದರೆ ವ್ಯಾಪಾರಿಗಳು ಅದರ ವಿನಿಮಯ ಶುಲ್ಕವನ್ನು ಪಾವತಿಸಲು ಸಿದ್ಧವಾಗಿಲ್ಲ. ಅದೇ ರೀತಿ ಗ್ರಾಹಕರು ತಮ್ಮ  ಕ್ರೆಡಿಟ್ ಕಾರ್ಡ್ ಶುಲ್ಕವನ್ನು ನೀಡಲು ಮುಂದಾಗುವುದಿಲ್ಲ. ಯಾಕೆಂದರೆ ರೂಪೇಯಲ್ಲಿ ವಿನಿಮಯ ಪಾವತಿ ದರ ಶೇಕಡ 2ರಷ್ಟು ಇದೆ. ಹೀಗಾಗಿ ವ್ಯಾಪಾರಿಗಳಿಗೆ ಗ್ರಾಹಕರು ಯಾವ ರೀತಿ ಹಣ ಪಾವತಿ ಮಾಡುತ್ತಿದಾರೆ ಎಂಬ ಗೊಂದಲ ಸೃಷ್ಟಿಯಾಗಲಿದೆ. ಅದರ ಜೊತೆಗೆ ಈಗಾಗಲೇ ಡೆಬಿಟ್ ಕಾರ್ಡ್ ಯುಪಿಐನಲ್ಲಿ ಲಿಂಕ್ ಮಾಡಿ ಭಾರೀ ಸವಾಲುಗಳು ಎದುರಿಸುತ್ತಿರುವಾಗ ಕ್ರೆಡಿಟ್ ಕಾರ್ಡ್ ಯುಪಿಐಗೆ ಲಿಂಕ್ ಮಾಡಿದ ಬಳಿಕ ಅದರದ್ದೇ ಆದ ಸಮಸ್ಯೆಗಳು ಶುರುವಾಗಬಹುದು. 

5. ಕ್ರೆಡಿಟ್ ಕಾರ್ಡ್‌ನಲ್ಲಿ ಯುಪಿಐ ಲಿಂಕ್ ಮಾಡುವುದು ಯಾವಾಗಿನಿಂದ ಶುರು?
ಈಗಾಗಲೇ ಕ್ರೆಡಿಟ್ ಕಾರ್ಡ್‌ನಲ್ಲಿ ಕೆಲವು ಗೊಂದಲಗಳು ಸೃಷ್ಟಿಯಾಗಿದೆ. ಸದ್ಯಕ್ಕೆ ಈ ಯೋಜನೆ ಕಾರ್ಯರೂಪಕ್ಕೆ ಬರುವುದಿಲ್ಲ. ಯಾಕೆಂದರೆ, ಪಾವತಿ ಮಾಡುವ ಕಂಪನಿಗಳು ಇವುಗಳನ್ನು ವಿನಿಮಯಗೊಳಿಸಲು ಮುಂದಾಗುತ್ತಿಲ್ಲ ಮತ್ತು ಕೆಲವು ಕಂಪನಿಗಳಂತು ಪಾವತಿ ಮಾಡಿದ ಬಳಿಕ ನಿರ್ಬಂಧಿಸುತ್ತಿವೆ. ಆದ್ದರಿಂದ ಕಂಪನಿಗಳಿಗೆ ಪಾವತಿ ಮಾಡಿದರೆ ಸ್ವೀಕರಿಸುತ್ತಾರ ಎಂಬ ನಿರ್ದಿಷ್ಟ ಮಾಹಿತಿ ಕೂಡ ಗ್ರಾಹಕರಿಗಿಲ್ಲ. ಇಷ್ಟೆಲ್ಲ ಅನಾನುಕೂಲ ಇರುವುದರಿಂದ ಆರ್‌ಬಿಐ ಇದನ್ನು ಗಮನಿಸಿ ಒಂದು ನಿರ್ಧಾರ ತೆಗೆದುಕೊಳ್ಳಲಿದೆ. ಬಳಿಕ ಅದನ್ನು ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ ಸಂಸ್ಥೆಗೆ ಮುಂದಿನ ಕಾರ್ಯಾಚರಣೆಗಾಗಿ ರವಾನೆ ಮಾಡಲಾಗುತ್ತದೆ. ನಂತರ ಈ ನಿರ್ಧಾರ ಸರಿ ಇದೆಯಾ ಎಂದು ತಂತ್ರಜ್ಞರು ಪರಿಶೀಲಿಸಿ ಕೊನೆಗೆ ಎಲ್ಲ ಸರಿ ಇದ್ದಲ್ಲಿ ಆರ್‌ಬಿಐ ಸಾರ್ವಜನಿಕವಾಗಿ ಪ್ರಕಟಿಸಲಿದೆ. ಈ ಎಲ್ಲ ಪ್ರಕ್ರಿಯೆ ನಡೆಸಲು ಸುಮಾರು ಒಂದು ವರ್ಷವಾಗಬಹುದು ಎಂದು ಅಂದಾಜಿಸಲಾಗಿದೆ.

6. ಈ ಯೋಜನೆಗೆ ಎಷ್ಟು ಬ್ಯಾಂಕ್‌ಗಳು ಸಿದ್ಧವಾಗಿವೆ?
ರೂಪೇ ಕ್ರೆಡಿಟ್ ಕಾರ್ಡ್‌ಗಳನ್ನು ಹೊಂದಲು ಗ್ರಾಹಕರಿಗೆ ಅವಕಾಶ ನೀಡುವ ಕೆಲವು ಬ್ಯಾಂಕ್‌ಗಳೆಂದರೆ ಪಂಜಾಬ್ ನ್ಯಾಷನಲ್ ಬ್ಯಾಂಕ್, ಐಡಿಬಿಐ ಬ್ಯಾಂಕ್, ಯೂನಿಯನ್ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಬ್ಯಾಂಕ್ ಆಫ್ ಬರೋಡಾ, ಫೆಡರಲ್ ಬ್ಯಾಂಕ್ ಮತ್ತು ಸಾರಸ್ವತ್ ಸಹಕಾರಿ ಬ್ಯಾಂಕ್ ಹಾಗೂ ರೂಪೇ ಸಹಾಯದೊಂದಿಗೆ ಎಚ್‌ಡಿಎಫ್‌ಸಿ ಬ್ಯಾಂಕ್, ಎಸ್‌ಬಿಐ ಮತ್ತು ಯೂನಿಯನ್ ಬ್ಯಾಂಕ್‌ ಒಳಗೊಂಡಂತೆ ಕೆಲವು ಬ್ಯಾಂಕ್‌ ಕಾರ್ಡ್‌ಗಳನ್ನು ಒದಗಿಸುತ್ತವೆ.

ನಿಮಗೆ ಏನು ಅನ್ನಿಸ್ತು?
0 ವೋಟ್