ಲೇ ಆಫ್‌ ಸರಣಿ | 6,000 ಉದ್ಯೋಗ ಕಡಿತಕ್ಕೆ ಮುಂದಾದ ಎಚ್‌ಪಿ ಸಂಸ್ಥೆ

  • ಪ್ರಸ್ತುತ 61,000 ಉದ್ಯೋಗಿಗಳನ್ನು ಹೊಂದಿರುವ ಎಚ್‌ಪಿ ಕಂಪನಿ
  • ಮಾರುಕಟ್ಟೆ ಕುಸಿತದ ಹಿನ್ನೆಲೆಯಲ್ಲಿ ಶೇ.10ರಷ್ಟು ಉದ್ಯೋಗ ಕಡಿತ

ಟ್ವಿಟರ್, ಗೂಗಲ್‌ನ ಉದ್ಯೋಗ ಕಡಿತದ ಬೆನ್ನಲ್ಲೇ ಈಗ ‘ಪರ್ಸನಲ್ ಕಂಪ್ಯೂಟರ್’ ಮತ್ತು 'ಲ್ಯಾಪ್‌ಟಾಪ್‌'ಗೆ ಬೇಡಿಕೆ ಕುಸಿದಿರುವ ಹಿನ್ನೆಲೆಯಲ್ಲಿ 2025ರ ಅಂತ್ಯದ ವೇಳೆಗೆ 6,000ಕ್ಕೂ ಹೆಚ್ಚು ಉದ್ಯೋಗ ಕಡಿತಗೊಳಿಸಲು 'ಹೆವ್ಲೆಟ್ ಪ್ಯಾಕರ್ಡ್' (ಎಚ್‌ಪಿ) ಕಂಪನಿ ಮುಂದಾಗಿದೆ.

ಕಡಿತಗೊಳ್ಳಲಿರುವ ಉದ್ಯೋಗ ಸಂಖ್ಯೆ ಸಂಸ್ಥೆಯ ಜಾಗತಿಕ ಉದ್ಯೋಗಿಗಳ ಪೈಕಿ ಸರಿಸುಮಾರು ಶೇ.12ರಷ್ಟಾಗುತ್ತದೆ ಎಂದು ಕಂಪ್ಯೂಟರ್ ತಯಾರಿಕಾ ಸಂಸ್ಥೆ ಮಂಗಳವಾರ (ನ. 22) ತಿಳಿಸಿದೆ.

“ಪ್ರಸ್ತುತ ಎಚ್‌ಪಿ ಕಂಪನಿಯಲ್ಲಿ ಸುಮಾರು 61,000 ಉದ್ಯೋಗಿಗಳಿದ್ದು, ಮಾರುಕಟ್ಟೆ ಕುಸಿತದ ಹಿನ್ನೆಲೆಯಲ್ಲಿ 2025ರ ಆರ್ಥಿಕ ವರ್ಷದ ಅಂತ್ಯದ ವೇಳೆಗೆ ಶೇ.10ರಷ್ಟು ಉದ್ಯೋಗ ಕಡಿತ ಮಾಡಲಾಗುವುದು” ಎಂದು ಕಂಪನಿ ತಿಳಿಸಿದೆ.

ತನ್ನ ಉತ್ಪನ್ನಗಳಿಗೆ ಉದ್ಯಮ ಮತ್ತು ಗ್ರಾಹಕರಿಂದ ಬೇಡಿಕೆ ಕಡಿಮೆಯಾಗಬಹುದು ಎಂದು ನಿರೀಕ್ಷಿಸುತ್ತಿರುವ ಎಚ್‌ಪಿ ಮೊದಲ ತ್ರೈಮಾಸಿಕದಲ್ಲಿ ಕಡಿಮೆ ಲಾಭವನ್ನು ಅಂದಾಜಿಸಿದೆ. 

“2022ನೇ ಆರ್ಥಿಕ ವರ್ಷದಲ್ಲಿ ನಾವು ಎದುರಿಸಿದ ಅನೇಕ ಸವಾಲುಗಳು 2023ರಲ್ಲೂ ಮುಂದುವರಿಯಲಿವೆ” ಎಂದು ಕಂಪನಿಯ ಮುಖ್ಯ ಹಣಕಾಸು ಅಧಿಕಾರಿ ಮೇರಿ ಮೈಯರ್ಸ್ ಹೇಳಿದ್ದಾರೆ.

“ಉದ್ಯೋಗ ಕಡಿತದ ಜೊತೆಗೆ ತಂತ್ರಜ್ಞಾನ ವೆಚ್ಚವನ್ನು ಕೂಡ ಕಡಿತಗೊಳಿಸಲಾಗುವುದು. ವೆಚ್ಚ ಕಡಿತದ ಹಿನ್ನೆಲೆಯಲ್ಲಿ ಈ ಕ್ರಮಕ್ಕೆ ಮುಂದಾಗಿದ್ದೇವೆ” ಎಂದು ಎಚ್‌ಪಿ ಸಿಇಒ ಎನ್ರಿಕ್ ಲೋರೆಸ್ ಹೇಳಿದ್ದಾರೆ.

ಕಂಪನಿಯು ಸುಮಾರು 1 ಬಿಲಿಯನ್ ಡಾಲರ್ ಕಾರ್ಮಿಕ ವೆಚ್ಚ ಉಳಿಸಲು ಮುಂದಾಗಿದ್ದು, ಇದರಲ್ಲಿ ಕಾರ್ಮಿಕೇತರ ಮತ್ತು ಪುನರ್‍‌ರಚನೆ ಮತ್ತು ಇತರ ವೆಚ್ಚಗಳು ಕೂಡ ಸೇರಿವೆ. 2023ರಲ್ಲಿ 600 ಮಿಲಿಯನ್ ಡಾಲರ್‍‌ ಹಾಗೂ ಉಳಿದಿದ್ದನ್ನು ಮುಂದಿನ ವರ್ಷಗಳಲ್ಲಿ ಉಳಿಸುವ ನಿರೀಕ್ಷೆಯಿದೆ.

ಇಂಟೆಲ್‌ನಲ್ಲೂ ಉದ್ಯೋಗ ಕಡಿತ?

ಪರ್ಸನಲ್ ಕಂಪ್ಯೂಟರ್‍‌ಗೆ ಬೇಡಿಕೆ ಕುಸಿದಿರುವುದು 'ಇಂಟೆಲ್ ಕಾರ್ಪ್' ಮೇಲೆ ಕೂಡ ಪರಿಣಾಮ ಬೀರಿದೆ. ಇಂಟೆಲ್ ಕೂಡ ಮುಂದಿನ ದಿನಗಳಲ್ಲಿ ಉದ್ಯೋಗ ಕಡಿತಗೊಳಿಸಲು ಯೋಜಿಸುತ್ತಿದೆ. ಇಂಟೆಲ್ ಈ ವರ್ಷದ ಜುಲೈ ವೇಳೆಗೆ 1,13,700 ಉದ್ಯೋಗಿಗಳನ್ನು ಹೊಂದಿದ್ದು, ಸಾವಿರಾರು ನೌಕರರನ್ನು ಮನೆಗೆ ಕಳುಹಿಸಲು ಕಂಪನಿ ಯೋಜಿಸಿದೆ.

ಕಂಪನಿಯು ಮಾರಾಟ ಮತ್ತು ಮಾರುಕಟ್ಟೆ ಸೇರಿದಂತೆ ಕೆಲವು ವಿಭಾಗಗಳಲ್ಲಿ ಸುಮಾರು ಶೇ. 20ರಷ್ಟು ಸಿಬ್ಬಂದಿಯನ್ನು ಕೆಲಸದಿಂದ ತೆಗೆದುಹಾಕಬಹುದು. ಕಂಪನಿಯ ‘ಪಿಸಿ ಪ್ರೊಸೆಸರ್’ಗಳ ಬೇಡಿಕೆಯು ದೊಡ್ಡ ಪ್ರಮಾಣದಲ್ಲಿ ಕುಸಿತ ಕಂಡಿದೆ. ಇದು ಇಂಟೆಲ್‌ನ ಮುಖ್ಯ ವ್ಯವಹಾರವಾಗಿದ್ದು, ಈ ವಲಯದ ಬೇಡಿಕೆ ಕುಸಿತ ಕಂಪನಿಗೆ ದೊಡ್ಡ ಸವಾಲಾಗಿದೆ.

‘ಅಡ್ವಾನ್ಸ್ಡ್ ಮೈಕ್ರೋ ಡಿವೈಸಸ್ ಇಂಕ್‌'ನಂತಹ ಪ್ರತಿಸ್ಪರ್ಧಿಗಳಿಗೆ ತನ್ನ ಮಾರುಕಟ್ಟೆ ಪಾಲನ್ನು ಬಿಟ್ಟುಕೊಟ್ಟಿರುವ ಇಂಟೆಲ್ ಇದೀಗ ಇದನ್ನು ಗಳಿಸಲು ಶತ ಪ್ರಯತ್ನ ನಡೆಸುತ್ತಿದೆ. ಜುಲೈನಲ್ಲಿ ಇಂಟೆಲ್, 2022ರಲ್ಲಿನ ತನ್ನ ಮಾರಾಟವು ನಿರೀಕ್ಷಿಸಿದ್ದಕ್ಕಿಂತ ಸರಿಸುಮಾರು 11 ಬಿಲಿಯನ್ ಡಾಲರ್ ಕಡಿಮೆಯಾಗಲಿದೆ ಎಂದು ಎಚ್ಚರಿಸಿತ್ತು.

ಈ ಸುದ್ದಿ ಓದಿದ್ದೀರಾ? ಟ್ವಿಟರ್‌- ಮೆಟಾ ನಂತರ ಗೂಗಲ್‌ ಸರದಿ; 10 ಸಾವಿರ ಮಂದಿ ವಜಾಗೆ ಸಿದ್ಧತೆ

ಕಳೆದ ಒಂದು ತಿಂಗಳಲ್ಲೇ ಟ್ವಿಟರ್, ಅಮೆಜಾನ್, ಸಿಸ್ಕೊ ಸೇರಿದಂತೆ ಅನೇಕ ಕಂಪನಿಗಳು ಸಾವಿರಾರು ಉದ್ಯೋಗಿಗಳನ್ನು ವಜಾಗೊಳಿಸಿದೆ.

ಉದ್ಯೋಗಿಗಳನ್ನು ಬಲವಂತವಾಗಿ ಕೆಲಸದಿಂದ ವಜಾಗೊಳಿಸಿದ ಆರೋಪದ ಮೇರೆಗೆ ಅಮೆಜಾನ್ ಇಂಡಿಯಾಗೆ ಕಾರ್ಮಿಕ ಆಯುಕ್ತರು ಸಮನ್ಸ್ ಜಾರಿಗೊಳಿಸಿದ್ದಾರೆ. ಅಧಿಕಾರಿಗಳು ಬುಧವಾರ ಬೆಂಗಳೂರಿನ ಉಪ ಮುಖ್ಯ ಕಾರ್ಮಿಕ ಆಯುಕ್ತರ ಎದುರು ಹಾಜರಿರಬೇಕು ಎಂದು ಸಮನ್ಸ್‌ನಲ್ಲಿ ಸೂಚಿಸಲಾಗಿದೆ.

ನಿಮಗೆ ಏನು ಅನ್ನಿಸ್ತು?
0 ವೋಟ್
Image
av 930X180