ಮಂಗಳನ ಮೇಲೆ ಇಟ್ಟಿಗೆ ಮಾಡುವ ಸರಳ ವಿಧಾನ ಸಿದ್ಧಪಡಿಸಿದ ಐಐಎಸ್‌ಸಿ ವಿಜ್ಞಾನಿಗಳು

ಮಂಗಳನ ಮಣ್ಣು ಭೂಮಿಯದ್ದರಂತಲ್ಲ. ಅದರಲ್ಲಿ ಸುಣ್ಣದಲ್ಲಿರುವ ಕ್ಯಾಲ್ಸಿಯಂ ವಸ್ತುಗಳು ಇಲ್ಲ. ಜೊತೆಗೆ ನೀರಿಲ್ಲದ ಕಾರಣ ಮಣ್ಣಿನ ಕಣಗಳು ಬಲು ಸಣ್ಣದಾಗಿ ಧೂಳಿನಂತೆ ಇರುವುದರಿಂದ ಅದನ್ನು ಗಟ್ಟಿಯಾಗಿ ತಟ್ಟಿ, ಸುಟ್ಟು ಇಟ್ಟಿಗೆ ಮಾಡುವುದು ಕಷ್ಟ.
Mars Brick

ಮಂಗಳನ ಅತಿ ನುಣುಪಾದ ಮಣ್ಣಿನಿಂದಲೂ ಗಟ್ಟಿಯಾದ ಇಟ್ಟಿಗೆಯನ್ನು ತಯಾರಿಸುವ ಸರಳ, ಸುಲಭ ವಿಧಾನವನ್ನು ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸಸ್‌ನ (ಐಐಎಸ್ಸಿ) ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ ವಿಜ್ಞಾನಿಗಳು ರೂಪಿಸಿದ್ದಾರೆ. ಬ್ಯಾಕ್ಟೀರಿಯಾಗಳನ್ನು ಇಟ್ಟಿಗೆ ತಯಾರಿಸುವ ವೇಳೆ ಬಳಸುವುದರಿಂದ ಇದನ್ನು ಮಾಡಬಹುದು ಎಂದು ಇಂಜಿನಿಯರ್ ಅಲೋಕ್ ಕುಮಾರ್ ಮತ್ತು ಸಂಗಡಿಗರು ವರದಿ ಮಾಡಿದ್ದಾರೆ.

ಮಂಗಳನ ಮಣ್ಣು ಭೂಮಿಯಂತಲ್ಲ. ಅದರಲ್ಲಿ ಸುಣ್ಣದಲ್ಲಿರುವ ಕ್ಯಾಲ್ಸಿಯಂ ವಸ್ತುಗಳು ಇಲ್ಲ. ಜೊತೆಗೆ ನೀರಿಲ್ಲದ ಕಾರಣ ಮಣ್ಣಿನ ಕಣಗಳು ಬಲು ಸಣ್ಣದಾಗಿ ಧೂಳಿನಂತೆ ಇರುವುದರಿಂದ ಅದನ್ನು ಗಟ್ಟಿಯಾಗಿ ತಟ್ಟಿ, ಸುಟ್ಟು ಇಟ್ಟಿಗೆ ಮಾಡುವುದು ಕಷ್ಟ. ರವೆ ಉಂಡೆಯಂತೆ ಒತ್ತಿದರೆ ಪುಡಿಯಾಗುತ್ತದಷ್ಟೆ. ಲೇಸರ್ ಕಿರಣಗಳನ್ನು ಬಳಸಿ ಸುಡುವುದು, ಅತಿ ಉಷ್ಣಾಂಶದ ಕುಲುಮೆಯಲ್ಲಿ ಸುಡುವುದು, ತ್ರೀಡಿ ತಂತ್ರಜ್ಞಾನವನ್ನು ಬಳಸಿ ಪಾಲಿಮರ್ ಗಳ ಜೊತೆಗೂಡಿಸಿ ಮುದ್ರಿಸುವುದು ಇತ್ಯಾದಿ ವಿನೂತನ ತಂತ್ರಗಳನ್ನು ಬಳಸಿ ವಿಜ್ಞಾನಿಗಳು ಇದರಿಂದ ಇಟ್ಟಿಗೆ ತಯಾರಿಸಲು ಪ್ರಯತ್ನಿಸಿದ್ದಾರೆ. ಆದರೆ ಈ ಎಲ್ಲ ತಂತ್ರಗಳೂ ದುಬಾರಿ ಹಾಗೂ ಮಂಗಳನಲ್ಲಿ ಮೊದಲು ಹೋದಂತಹ ವಲಸೆಗಾರರಿಗೆ ಅದಕ್ಕೆ ಬೇಕಾದ ಸಾಧನಗಳು ದೊರಕಲಿಕ್ಕಿಲ್ಲ. ಹೀಗಾಗಿ, ಅಲ್ಲಿರುವ ವಸ್ತುಗಳನ್ನೇ ಬಳಸಿ ಮಂಗಳನ ಮಣ್ಣಿನಿಂದ ಇಟ್ಟಿಗೆ ಮಾಡುವ ಉಪಾಯ ಹುಡುಕಬೇಕಿತ್ತು. 'ಇದು ಸಾಧ್ಯ ಎನ್ನುತ್ತದೆ' ಐಐಎಸ್ಸಿಯ ಸಂಶೋಧನೆ.

ಮಂಗಳನ ಮಣ್ಣಿನಂತಹುದೇ ಹುಡಿ ದೂಳನ್ನು ಒಂದಿಷ್ಟು ಯೂರಿಯಾ, ಸ್ಪೋರೋಸಾರ್ಸಿನಾ ಪ್ಯಾಶ್ಚುರಿ ಎನ್ನುವ ಬ್ಯಾಕ್ಟೀರಿಯಾ, ನಿಕಲ್ ಕ್ಲೋರೈಡು ಹಾಗೂ ಗೊಬ್ಬಳಿಯ ಗೋಂದನ್ನು ಬಳಸಿ ಇಟ್ಟಿಗೆ ತಯಾರಿಸಿದ್ದಾರೆ. ಸ್ಪೋರೋಸಾರ್ಸಿನಾ ಪ್ಯಾಶ್ಚುರಿ ನಿರಪಾಯಕಾರಿ.  ಇದು ಯೂರಿಯಾದಿಂದ ಕ್ಯಾಲ್ಸಿಯಂ ಕ್ಲೋರೈಡು ತಯಾರಿಸುವ ಬ್ಯಾಕ್ಟೀರಿಯಾ. ಕ್ಯಾಲ್ಸಿಯಂ ಕ್ಲೋರೈಡು ಸುಣ್ಣದ ಅಂಶ. ಇದನ್ನು ಸಾಧಿಸಬಲ್ಲ ಕಿಣ್ವವೊಂದು ಬ್ಯಾಕ್ಟೀರಿಯಾದಲ್ಲಿದೆ. ಅದಕ್ಕೆ ನಿಕಲ್ ಬೇಕೇ ಬೇಕು. ಹೀಗಾಗಿ ನಿಕಲ್ ಕ್ಲೋರೈಡು. ಇವೆಲ್ಲವನ್ನೂ ಸೇರಿಸಿ, ಕೆಸರಿನಂತೆ ಮಾಡಿ ಅಲ್ಯುಮಿನಿಯಂ ಅಚ್ಚಿನೊಳಗೆ ಸುರಿದು, ಐದು ದಿನಗಳ ಕಾಲ ಕಾದಿಟ್ಟು ಅನಂತರ ಬೆಚ್ಚಗೆ ಐವತ್ತು ಡಿಗ್ರಿ ಸೆಲ್ಸಿಯಸ್ ಉಷ್ಣತೆಯಲ್ಲಿ ಸುಟ್ಟು ಇಟ್ಟಿಗೆಯಂತಹ ಗಟ್ಟಿಗಳನ್ನು ಇವರು ತಯಾರಿಸಿದ್ದಾರೆ.

ಗೋಂದು ಇಲ್ಲದಿದ್ದರೂ ಈ ಇಟ್ಟಿಗೆಗಳು ಸಾಧಾರಣ ಇಟ್ಟಿಗೆಯಷ್ಟು ಗಟ್ಟಿ. ಅಂಗುಲ ಜಾಗದ ಮೇಲೆ ಮೂರು ಪ್ಯಾಸ್ಕಲ್ ಒತ್ತಡ ಬಿದ್ದರೂ ತಡೆದುಕೊಳ್ಳಬಲ್ಲವು. ಗೋಂದು ಬೆರೆಸಿದರೆ ಇನ್ನೂ ಗಟ್ಟಿ. ಮಂಗಳನ ಮೇಲಿರುವ ವಸ್ತುಗಳಿಂದಲೇ ಇವನ್ನು ತಯಾರಿಸುವುದು ಸುಲಭ. ಕೇವಲ ಅಚ್ಚೊಂದಿದ್ದರೆ ಸಾಕು ಎನ್ನುವುದು ಆಶಯ. ಯೂರಿಯಾ ಹೇಗೂ ನಮ್ಮ ಮೂತ್ರದಲ್ಲಿ ಧಂಡಿಯಾಗಿ ಇರುತ್ತದಲ್ಲ!

ಅಲೋಕ್ ಕುಮಾರ್ ತಂಡದ ಸಂಶೋಧನೆಯ ವಿವರಗಳನ್ನು ಪಿಎಲ್ಓಎಸ್ ಪತ್ರಿಕೆ ಇತ್ತೀಚಿನ ಸಂಚಿಕೆಯಲ್ಲಿ ಪ್ರಕಟಿಸಿದೆ.

 

ನಿಮಗೆ ಏನು ಅನ್ನಿಸ್ತು?
0 ವೋಟ್