ಅಕ್ರಮ ಹಣ ವರ್ಗಾವಣೆ | ಖಾತೆ ರದ್ದತಿ ಬಗ್ಗೆ ವಿವೊ ಮನವಿ, ಇಡಿ ಪ್ರತಿಕ್ರಿಯೆ ಕೇಳಿದ ದೆಹಲಿ ಹೈಕೋರ್ಟ್

Vivo
  • ತನ್ನ ಹೊಣೆಗಾರಿಕೆ ನಿರ್ವಹಿಸಲು ಸ್ಥಗಿತ ಖಾತೆ ನಿರ್ವಹಿಸಲು ವಿವೊಗೆ ಅನುಮತಿ
  • ಸುಮಾರು ₹1200 ಅಕ್ರಮ ಹಣ ವರ್ಗಾವಣೆ ನಡೆದಿರುವುದಾಗಿ ಇಡಿ ಹೇಳಿಕೆ

ಅಕ್ರಮ ಹಣ ವರ್ಗಾವಣೆ ಪ್ರಕರಣ ಸಂಬಂಧ ವಿವಿಧ ಬ್ಯಾಂಕ್‌ ಖಾತೆಗಳನ್ನು ಸ್ಥಗಿತಗೊಳಿಸುವ ಇಡಿ ಆದೇಶವನ್ನು ರದ್ದುಗೊಳಿಸುವಂತೆ ಕೋರಿ ಚೀನಿ ಸ್ಮಾರ್ಟ್‌ಫೋನ್‌ ತಯಾರಕ ಕಂಪನಿ ವಿವೊ ಸಲ್ಲಿಸಿರುವ ಮನವಿಯನ್ನು ದೆಹಲಿ ಹೈಕೋರ್ಟ್‌ ಪುರಸ್ಕರಿಸಿದೆ. 

ಮನವಿಗೆ ಪ್ರತಿಕ್ರಿಯೆ ನೀಡುವಂತೆ ಜಾರಿ ನಿರ್ದೇಶನಾಲಯಕ್ಕೆ (ಇಡಿ) ನ್ಯಾಯಮೂರ್ತಿ ಯಶವಂತ್‌ ವರ್ಮಾ ಅವರ ಪೀಠ ಬುಧವಾರ ನಿರ್ದೇಶನ ನೀಡಿದೆ. 

ಇಡಿ ಬಳಿ ₹950 ಕೋಟಿ ಖಾತರಿ ಮೊತ್ತವನ್ನು ಇರಿಸಿ ತನ್ನ ವಿವಿಧ ಬ್ಯಾಂಕ್‌ ಖಾತೆಗಳು ಕಾರ್ಯ ನಿರ್ವಹಿಸಲು ನ್ಯಾಯಾಲಯ ವಿವೊಗೆ ಅನುಮತಿ ನೀಡಿದೆ. ವಿವೊ ತನ್ನ ಬ್ಯಾಂಕ್‌ ಖಾತೆಯಲ್ಲಿ ₹251 ಕೋಟಿ ಮೊತ್ತ ಕಾಯ್ದುಕೊಳ್ಳುವಂತೆಯೂ ಹೇಳಿದೆ. 

ವಿವೊ ವಕೀಲರಾದ ಸಿದ್ಧಾರ್ಥ್ ಲುಥ್ರಾ ಮತ್ತು ಸಿದ್ಧಾರ್ಥ್ ಅಗರ್ವಾಲ್ ವಾದ ಮಂಡಿಸಿ, "ಕಂಪನಿಯು ತೆರಿಗೆಗಳು, ಟಿಡಿಎಸ್ ಮತ್ತು ಅಬಕಾರಿ ಸುಂಕಗಳಂತಹ ಹೊಣೆಗಾರಿಕೆ ಹೊಂದಿವೆ. ಅಲ್ಲದೆ, ಇದರಲ್ಲಿ ಸಾವಿರಾರು ಉದ್ಯೋಗಿಗಳಿದ್ದಾರೆ. ಆದ್ದರಿಂದ ಹಣದ ಅವಶ್ಯಕತೆ ಇರುವುದರಿಂದ ಖಾತೆಗಳ ನಿರ್ವಹಣೆಗೆ ಅನುಮತಿ ನೀಡಬೇಕು” ಎಂದು ಕೋರಿದರು.

ಏತನ್ಮಧ್ಯೆ, ಬ್ಯಾಂಕ್ ಖಾತೆಗಳನ್ನು ರದ್ದುಗೊಳಿಸುವ ವಿವೊದ ಮನವಿಯನ್ನು ಇಡಿಯ ವಕೀಲ ಜೋಹೆಬ್‌ ಹುಸೇನ್‌  ವಿರೋಧಿಸಿದರು.   

"ಮನವಿಯಲ್ಲಿ ವಿವೊ ಉಲ್ಲೇಖಿಸಲಾದ ಹಣಕಾಸಿನ ಪರಿಸ್ಥಿತಿ ಗಮನದಲ್ಲಿಟ್ಟು ಹಣಕಾಸಿನ ಬೇಡಿಕೆ ಪರಿಗಣಿಸಲು ನ್ಯಾಯಾಲಯವು ಇಡಿಗೆ ನಿರ್ದೇಶಿಸುತ್ತದೆ. ಅಕ್ರಮ ಹಣ ತಡೆ ಕಾಯ್ದೆಯ ಸೆಕ್ಷನ್‌ 17 (1)ರ ಅಡಿ ಸ್ಥಗಿತಗೊಂಡಿರುವ ಖಾತೆಗಳೊಂದಿಗೆ ವ್ಯವಹರಿಸಲು ವಿವೊಗೆ ಅನುಮತಿ ನೀಡಲು ನಿರ್ಧರಿಸಲಾಗಿದೆ” ಎಂದು ನ್ಯಾಯಮೂರ್ತಿ ಯಶವಂತ್ ವರ್ಮಾ ತಮ್ಮ ಆದೇಶದಲ್ಲಿ ಹೇಳಿದರು.

ಈ ಸುದ್ದಿ ಓದಿದ್ದೀರಾ? ಸಲ್ಮಾನ್ ಖಾನ್ ಹತ್ಯೆಗೆ ಸಂಚು ರೂಪಿಸಿದ್ದ ಮೂಸೆವಾಲಾ ಹಂತಕ ಬಿಷ್ಣೋಯ್

ಅರ್ಜಿಗೆ ಪ್ರತಿಕ್ರಿಯೆ ನೀಡುವಂತೆ ದೆಹಲಿ ಹೈಕೋರ್ಟ್‌ ಇಡಿಗೆ ಒಂದು ವಾರ ಕಾಲಾವಕಾಶ ನೀಡಿ ವಿಚಾರಣೆಯನ್ನು ಜುಲೈ 28ಕ್ಕೆ ಮುಂದೂಡಿದೆ. 
 
ಕೆಲವು ಪಾವತಿಯ ಹೊಣೆಗಾರಿಕೆ ಇರುವುದರಿಂದ ಸ್ಥಗಿತಗೊಳಿಸಿರುವ ತನ್ನ ಬ್ಯಾಂಕ್‌ ಖಾತೆಗಳೊಂದಿಗೆ ವ್ಯವಹರಿಸಲು ಅನುಮತಿ ನೀಡುವಂತೆ ವಿವೊ ಕೇಳಿದೆ. 

ವಿವೊ ಮತ್ತು ಇತರ ಸಂಸ್ಥೆಗಳ ಅಕ್ರಮ ಹಣ ವರ್ಗಾವಣೆ ಪ್ರಕರಣ ಸಂಬಂಧ ಇಡಿ ಜುಲೈ 5ರಂದು ದೆಹಲಿ, ಉತ್ತರ ಪ್ರದೇಶ, ಮೇಘಾಲಯ ಮತ್ತು ಮಹಾರಾಷ್ಟ್ರಗಳಲ್ಲಿ ದಾಳಿ ನಡೆಸಿತ್ತು. 

ಸ್ಮಾರ್ಟ್‌ಫೋನ್‌ ತಯಾರಕರಿಗೆ ಭಾರತ ಮತ್ತು ಚೀನಾದ ಹೊರಗೆ ತಮ್ಮ ವಹಿವಾಟಿನ ಶೇ. 50ರಷ್ಟು ಹಣವನ್ನು ವರ್ಗಾವಣೆ ಮಾಡಲು ಅಕ್ರಮದಲ್ಲಿ ತೊಡಗಿರುವ 18 ಕಂಪನಿಗಳು ಸಹಾಯ ಮಾಡಿವೆ. ಈ ಪ್ರಕರಣವನ್ನು ಇಡಿ ತನಿಖೆ ನಡೆಸುತ್ತಿದೆ. ಈ ವಹಿವಾಟಿನ ಮೊತ್ತ ₹1200 ಕೋಟಿ ಆಗಿದೆ ಎನ್ನಲಾಗಿದೆ. 

ನಿಮಗೆ ಏನು ಅನ್ನಿಸ್ತು?
0 ವೋಟ್