ದೇಶದ ಮೊದಲ ಮಾನವ ಸಹಿತ ಗಗನಯಾನಕ್ಕೆ ಚಾಲನೆ ನೀಡಲು ಸಜ್ಜಾದ ಇಸ್ರೋ

Aerospace Image
  • ಗಗನಯಾನ ಪ್ರಯೋಗದ ಮೊದಲ ಹಂತಕ್ಕೆ ಸಿದ್ಧತೆ
  • ಮತ್ಸ 6000 ಮೂಲಕ ಸಾಗರ ಅನ್ವೇಷಣೆಗೆ ಉತ್ತೇಜನೆ

ಮಾನವ ಸಹಿತ ಬಾಹ್ಯಾಕಾಶ ಯೋಜನೆ 'ಗಗನಯಾನ್‌' ಮತ್ತು ಮಾನವಸಹಿತ ಸಮುದ್ರ ಕಾರ್ಯಚರಣೆಯನ್ನು 2023ರಲ್ಲಿ ಏಕಕಾಲಕ್ಕೆ ಪ್ರಾರಂಭಿಸಲು ಭಾರತ ಸರ್ಕಾರ ಬದ್ಧವಾಗಿದೆ ಮತ್ತು ಇದೊಂದು ವಿಶಿಷ್ಟ ಪ್ರಯೋಗವಾಗಲಿದೆ ಎಂದು ಬಾಹ್ಯಾಕಾಶ ಮತ್ತು ಭೂ ವಿಜ್ಞಾನ ಸಚಿವರಾದ ಜಿತೇಂದ್ರ ಸಿಂಗ್ ಬುಧವಾರ ತಿಳಿಸಿದ್ದಾರೆ.

"ಗಗನಯಾನ್ ಮತ್ತು ಸಾಗರಯಾನ ಎರಡೂ ಯೋಜನೆಗಳಿಗೆ ಪ್ರಯೋಗಾರ್ಥ ಕಾರ್ಯಾಚರಣೆಗಳು ನಡೆಯುತ್ತಿವೆ ಹಾಗೂ ಮುಂದಿನ ಹಂತಕ್ಕೆ ತಲುಪಿವೆ. 2023ರಲ್ಲಿ ಯೋಜನೆಗಳ ಎರಡನೇ ಹಂತಕ್ಕೆ ತಲುಪಲಿದ್ದೇವೆ ಎಂದು ಅವರು ದೆಹಲಿಯಲ್ಲಿ ನಡೆದ ವಿಶ್ವ ಸಮುದ್ರ ದಿನಾಚರಣೆಯಲ್ಲಿ ಹೇಳಿದ್ದಾರೆ.

"ಸಮುದ್ರದಲ್ಲಿ ನಡೆಯುವ ಮಾನವ ಸಹಿತ ಕಾರ್ಯಾಚರಣೆಯ ಮೊದಲ ಹಂತದ ಪ್ರಯೋಗವನ್ನು 500 ಮೀಟರ್ ಸಮುದ್ರದ ಆಳದಲ್ಲಿ ನಡೆಸಲು ನಿರೀಕ್ಷಿಸಲಾಗಿದೆ. 2024ರ ಎರಡನೇ ತ್ರೈಮಾಸಿಕದ ವೇಳೆಗೆ ʼಮತ್ಸ್ಯ 6000ʼ ಪ್ರಯೋಗಕ್ಕೆ ಸಿದ್ಧವಾಗಲಿದ್ದೇವೆ" ಎಂದು ಜಿತೇಂದ್ರ ಸಿಂಗ್ ಹೇಳಿದ್ದಾರೆ.

ಗಗನಯಾನ ಯೋಜನೆಗೆ ಟೆಸ್ಟ್ ವೆಹಿಕಲ್ ಫ್ಲೈಟ್‌ನಲ್ಲಿ ಸಿಬ್ಬಂದಿ ಪಾರಾಗುವ ವ್ಯವಸ್ಥೆಯ ಸಾಮರ್ಥ್ಯ ಪರೀಕ್ಷೆಯನ್ನು 2022ರ ದ್ವಿತೀಯಾರ್ಧದಲ್ಲಿ ನಡೆಸಲಾಗುತ್ತಿದೆ. ಇಸ್ರೋ ಅಭಿವೃದ್ಧಿಪಡಿಸಿದ ಮಾನವರಹಿತ 'ವ್ಯೋಮಿತ್ರಿ' ಎಂಬ ಬಾಹ್ಯಾಕಾಶಯಾನ ಮಾನವ ರೋಬೋಟ್‌ ಅನ್ನು 2023ರಲ್ಲಿ ಉಡಾಯಿಸಲಾಗುವ ಬಗ್ಗೆ ಇಸ್ರೋ ನೀಡಿರುವ ವರದಿಯ ಮಾಹಿತಿ ನೀಡಿದರು.

ಕೇಂದ್ರ ಸರ್ಕಾರವು ಶೀಘ್ರದಲ್ಲೇ 'ನೀಲಿ ಆರ್ಥಿಕ ನೀತಿ' ಅನಾವರಣಗೊಳಿಸಲಿದೆ ಮತ್ತು 2030ರ ವೇಳೆಗೆ ಸಾಗರ ಆಧಾರಿತ ಕೈಗಾರಿಕೆಗಳಲ್ಲಿ ಅಂದಾಜು 40 ಲಕ್ಷ ನೌಕರರು ಉದ್ಯೋಗ ಗಳಿಸಲಿದ್ದಾರೆ ಎಂದು ಸಚಿವಾಲಯ ಹೇಳಿದೆ.

ಈ ಸುದ್ದಿ ಓದಿದ್ದೀರಾ? ಐಟಿ ಹೊಸ ನಿಯಮ | ಸಾಮಾಜಿಕ ಮಾಧ್ಯಮಗಳ ನಿಯಂತ್ರಣದ ಉದ್ದೇಶವೇನು?

ಕಳೆದ ವರ್ಷ ಜೂನ್‌ನಲ್ಲಿ ಸುಮಾರು ನಾಲ್ಕು ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ ಆಳ ಸಮುದ್ರದ ಯೋಜನೆಯನ್ನು ಐದು ವರ್ಷಗಳ ಅವಧಿಯಲ್ಲಿ ಕಾರ್ಯರೂಪಕ್ಕೆ ತರಲು ಭೂ ವಿಜ್ಞಾನ ಸಚಿವಾಲಯ ಒಪ್ಪಿಗೆ ನೀಡಿತ್ತು. ಆಳ ಸಮುದ್ರದ ಅನ್ವೇಷಣೆಗೆ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸಲು ಮತ್ತು ಕೈಗಾರಿಕೆಗಳೊಂದಿಗೆ ಸಹಕರಿಸಲು ಈ ಬಜೆಟ್ ಬಳಸಲು ಸೂಚಿಸಲಾಗಿತ್ತು. ಸಮುದ್ರದ 1,000 ಮತ್ತು 5,500 ಮೀಟರ್‌ಗಳಷ್ಟು ಆಳದಲ್ಲಿ ನೆಲೆಸಿರುವ ಪಾಲಿಮೆಟಾಲಿಕ್ ಮ್ಯಾಂಗನೀಸ್‌ ನೊಡ್ಯೂಲ್‌ಗಳು, ಗ್ಯಾಸ್ ಹೈಡ್ರೇಟ್‌ಗಳು, ಹೈಡ್ರೋ- ಥರ್ಮಲ್ ಸಲ್ಫೈಡ್‌ಗಳು ಮತ್ತು ಕೋಬಾಲ್ಟ್ ಕ್ರಸ್ಟ್‌ಗಳಂತಹ ನಿರ್ಜೀವ ಸಂಪನ್ಮೂಲಗಳ ಅನ್ವೇಷಣೆಯ ಕಾರ್ಯವನ್ನು ಈ ಯೋಜನೆಯಲ್ಲಿ ನಡೆಸಲಾಗುತ್ತಿದೆ.

ಸಾಗರದಲ್ಲಿ ಮೀನುಗಾರಿಕೆ, ಜೈವಿಕ ತಂತ್ರಜ್ಞಾನ, ನವೀಕರಿಸಬಹುದಾದ ಖನಿಜಗಳು, ಜೀವಂತ ಮತ್ತು ನಿರ್ಜೀವ ಸಂಪನ್ಮೂಲಗಳನ್ನು ಪಡೆದುಕೊಳ್ಳುವಲ್ಲಿನ ದೇಶದ ಸಾಮರ್ಥ್ಯ ಹೆಚ್ಚಿಸಿಕೊಳ್ಳಲು ಈ ಆಳ ಸಮುದ್ರದ ಅನ್ವೇಷಣೆ ಸಹಕಾರಿ ಎಂದು ಭೂ ವಿಜ್ಞಾನ ಸಚಿವರು ಹೇಳಿದ್ದಾರೆ.

ನಿಮಗೆ ಏನು ಅನ್ನಿಸ್ತು?
1 ವೋಟ್