ತಮಿಳುನಾಡು| ಸರ್ಕಾರಿ ಶಾಲೆಗಳಲ್ಲಿ ವರ್ಚುವಲ್ ರಿಯಾಲಿಟಿ ಲ್ಯಾಬ್‌ ಯೋಜನೆಗೆ ಚಾಲನೆ

Metaverse Technology Image
  • ರಾಜ್ಯದ ಐದು ಶಾಲೆಗಳಲ್ಲಿ ವಿಆರ್ ಲ್ಯಾಬ್‌ಗಳು ಆರಂಭ
  • ಮೆಟಾವರ್ಸ್‌ನಲ್ಲಿ 3ಡಿ ವರ್ಚುವಲ್ ಬಳಸಿ ಉದ್ಘಾಟನೆ

ಸರ್ಕಾರಿ ಶಾಲೆಗಳಲ್ಲಿ ಬದಲಾವಣೆ ತರಲು ತಮಿಳುನಾಡು ಸರ್ಕಾರ ನಿರ್ಧರಿಸಿದೆ. ಆ ಹಿನ್ನೆಲೆಯಲ್ಲಿ ಪ್ರತಿ ಶಾಲೆಯಲ್ಲಿ ಕೂಡ ವರ್ಚುವಲ್ ಲ್ಯಾಬ್‌ಗಳಿಗೆ ಚಾಲನೆ ನೀಡಿದೆ.

ಶಾಲಾ ಶಿಕ್ಷಣ ಇಲಾಖೆಯು ಚೆನ್ನೈ ಮೂಲದ ʻಮೇನಿಕಾರʼ ಎಂಬ ವರ್ಚುವಲ್ ರಿಯಾಲಿಟಿ ಮತ್ತು ವರ್ಧಿತ ರಿಯಾಲಿಟಿ ಸ್ಟಾರ್ಟ್ ಅಪ್ ಸಂಸ್ಥೆಯ ಸಹಕಾರದೊಂದಿಗೆ, ರಾಜ್ಯದ ಐದು ಶಾಲೆಗಳಲ್ಲಿ ವರ್ಚುವಲ್ ರಿಯಾಲಿಟಿ (ವಿಆರ್) ಲ್ಯಾಬ್‌ಗಳನ್ನು ಪ್ರಾರಂಭಿಸಿದೆ.

ವಿಆರ್ ಲ್ಯಾಬ್‌ಗಳಿಗೆ ʻಮೆಟಾ ಕಲ್ವಿʼ ಎಂದು ಹೆಸರಿಡಲಾಗಿದೆ. ಆರಂಭಿಕ ಹಂತದಲ್ಲಿ ರಾಜ್ಯದಲ್ಲಿ ಮೂರು ಸರ್ಕಾರಿ ಮತ್ತು ಎರಡು ಖಾಸಗಿ ಶಾಲೆಗಳಲ್ಲಿ ಈ ಯೋಜನೆ ಪ್ರಾಯೋಗಿಕವಾಗಿ ಜಾರಿ ಮಾಡಲು ಸರ್ಕಾರ ನಿರ್ಧರಿಸಿದೆ. ಕಾರ್ಯಕ್ರಮವನ್ನು ಮೆಟಾವರ್ಸ್ ಪರಿಸರದಲ್ಲಿ 3ಡಿ ವರ್ಚುವಲ್ ಬಳಸಿ ಉದ್ಘಾಟನೆ ಮಾಡಲಾಯಿತು ಮತ್ತು ಈ ಕಾರ್ಯಕ್ರಮದಲ್ಲಿ ತಮಿಳುನಾಡಿನ ಶಿಕ್ಷಣ ಸಚಿವ ಅನ್ಬಿಲ್ ಮಹೇಶ್ ಪೊಯ್ಯಮೊಳಿ, ಶಾಸಕ ಉದಯನಿಧಿ ಸ್ಟಾಲಿನ್, ಸಂಸದ ದಯಾನಿಧಿ ಮಾರನ್ ಭಾಗವಹಿಸಿದ್ದರು.

ಸರ್ಕಾರಿ ಶಾಲೆಗಳಲ್ಲಿ ಇದೊಂದು ಹೊಸ ಪ್ರಯೋಗ, ಇದರಿಂದ ಮಕ್ಕಳ ಕಲಿಕೆ ಸುಧಾರಿಸಲಿದೆ. ಇದು ಮಕ್ಕಳ ಕೌಶಲ್ಯವನ್ನು ಹೆಚ್ಚಿಸುವ ಪ್ರಯತ್ನ. ಜತೆಗೆ ಸೈದ್ಧಾಂತಿಕ ಪರಿಕಲ್ಪನೆಗಳನ್ನು ದೃಶ್ಯೀಕರಿಸಲು ಅವರಿಗೆ ಸಹಾಯ ಮಾಡುವ ಮೂಲಕ, "ಮೆಟಾ ಕಲ್ವಿ" ವಿದ್ಯಾರ್ಥಿಗಳ ಗಮನ ಮತ್ತು ಆಸಕ್ತಿಯನ್ನು ಸುಧಾರಿಸುವ ಗುರಿಯನ್ನು ಹೊಂದಿದೆ ಎಂದು ಮೇನಿಕರ ಸಂಸ್ಥೆಯ ನಿರ್ದೇಶಕ ಗಣೇಶ್ ರಾಮ್ ತಿಳಿಸಿದರು. 

“ಆರಂಭದಲ್ಲಿ ರಾಜ್ಯದ ಐದು ಶಾಲೆಗಳು ತಮ್ಮ ಆವರಣದಲ್ಲಿ ನಮಗೆ ಕೊಠಡಿಯನ್ನು ನೀಡಿವೆ. ನಾವು 12 ಸಾಧನಗಳನ್ನು ಅಳವಡಿಸುತ್ತೇವೆ ಮತ್ತು ಎಷ್ಟು ವಿದ್ಯಾರ್ಥಿಗಳು ಲ್ಯಾಬ್‌ಗೆ ಬರುತ್ತಾರೆ ಎಂಬುದನ್ನು ಆಧರಿಸಿ ವೇಳಾಪಟ್ಟಿಯನ್ನು ರೂಪಿಸಲಾಗಿದೆ” ಎಂದು ಮೇನಿಕರ ಸಂಸ್ಥಾಪಕ ಆರ್. ರಘುರಾಮನ್ ಹೇಳಿದರು. 

ಈ ಸುದ್ದಿ ಓದಿದ್ದೀರಾ? ಒಂದು ನಿಮಿಷದ ಓದು | ವಾಟ್ಸ್ಆ್ಯಪ್‌ ಗ್ರೂಪ್‌ಗೆ ಸೇರಲು ಗುಂಪಿನ ಅಡ್ಮಿನ್‌ ಅನುಮತಿ ಕಡ್ಡಾಯ

ಮುಂದಿನ ಎರಡು ತಿಂಗಳಲ್ಲಿ, ಶಿಕ್ಷಕರಿಗೆ ಸಾಧನಗಳನ್ನು ಬಳಸುವ ಬಗ್ಗೆ ತರಬೇತಿ ನೀಡಲಾಗುವುದು. ಪ್ರಸ್ತುತ, ಇಂಗ್ಲಿಷ್ ಮತ್ತು ತಮಿಳಿನಲ್ಲಿ ಗಣಿತ ಮತ್ತು ವಿಜ್ಞಾನ ಪಾಠಗಳನ್ನು ಹೊಂದಿದ್ದು, ಅದನ್ನು ವಿದ್ಯಾರ್ಥಿಗಳು ವಿಆರ್ ಮೂಲಕ ಅನುಭವಿಸಬಹುದು. ಜತೆಗೆ ಗ್ರಂಥಾಲಯವನ್ನು ಕೂಡ ನಿರ್ಮಿಸಲಾಗಿದೆ ಎಂದು ತಿಳಿಸಿದರು. 

ವಿದ್ಯಾರ್ಥಿಗಳಿಗೆ ಲಾಗಿನ್ ಐಡಿಗಳನ್ನು ನೀಡಲಾಗುತ್ತದೆ. ಹಾಗೆಯೇ ಅವರ ಕಾರ್ಯಕ್ಷಮತೆಯನ್ನು ಟ್ರ್ಯಾಕ್ ಮಾಡಲು ಲೀಡರ್‌ಬೋರ್ಡ್‌ಗಳನ್ನು ಹೊಂದಿರುತ್ತಾರೆ. ಶಿಕ್ಷಕರು ಲ್ಯಾಬ್ ಪರೀಕ್ಷೆಗಳನ್ನು ನಡೆಸಲು, ವೈಯಕ್ತಿಕ ಕಾರ್ಯಯೋಜನೆಗಳನ್ನು ನೀಡಲು ಮತ್ತು ವಿದ್ಯಾರ್ಥಿಗಳನ್ನು ಮೌಲ್ಯಮಾಪನ ಮಾಡಲು ಇದು ಸಹಾಯ ಮಾಡುತ್ತದೆ.

ನಿಮಗೆ ಏನು ಅನ್ನಿಸ್ತು?
0 ವೋಟ್