ಇನ್‌ಸ್ಟಾಗ್ರಾಂನಲ್ಲಿ ಡಿಜಿಟಲ್ ಎನ್‌ಎಫ್‌ಟಿ ಪ್ರಾರಂಭಿಸಲಿದ್ದೇವೆ: ಮಾರ್ಕ್ ಜುಕರ್‌ಬರ್ಗ್

Meta NFTs Image
  • ಇನ್‌ಸ್ಟಾಗ್ರಾಂನಲ್ಲಿ ಎನ್‌ಎಫ್‌ಟಿಯನ್ನು ಫೀಡ್, ಸ್ಟೋರಿಯಲ್ಲಿ ಹಂಚಿಕೊಳ್ಳಬಹುದು
  • ಮುಂದಿನ ದಿನಗಳಲ್ಲಿ ಫೇಸ್‌ಬುಕ್ ಮತ್ತು ವಾಟ್ಸಪ್‌ನಲ್ಲಿ ಕೂಡ ಎನ್‌ಎಫ್‌ಟಿ ಬರಲಿದೆ

ಇನ್‌ಸ್ಟಾಗ್ರಾಂನಲ್ಲಿ ಡಿಜಿಟಲ್ ಎನ್‌ಎಫ್‌ಟಿ (ನಾನ್ ಫಂಜಿಬಲ್ ಟೋಕನ್) ಸಂಗ್ರಹ ಮಾಡಲು ಮೆಟಾ ಸಂಸ್ಥೆ ಮುಂದಾಗಿದೆ.

“ನಮ್ಮ ಮೆಟಾವರ್ಸ್ ಡಿಜಿಟಲ್ ರಿಯಾಲಿಟಿ ಲ್ಯಾಬ್ಸ್‌ನಲ್ಲಿ  ಮಾತ್ರವಲ್ಲದೆ, ಎಲ್ಲ ಅಪ್ಲಿಕೇಶನ್‌ಗಳಲ್ಲು ಕೂಡ ತರಲು ಮುಂದಾಗಿದ್ದೇವೆ ಮತ್ತು ಡಿಜಿಟಲ್ ಸಂಗ್ರಹಣೆ ಕೂಡ ಪ್ರಾರಂಭಿಸಲಿದ್ದು ಸದ್ಯಕ್ಕೆ ಪ್ರಯೋಗದಲ್ಲಿದೆ. ಮುಂದಿನ ದಿನಗಳಲ್ಲಿ ಎನ್‌ಎಫ್‌ಟಿ ರಚನಾಕಾರರು ಮತ್ತು ಸಂಗ್ರಹಕಾರರು ತಮ್ಮ ಎನ್‌ಎಫ್‌ಟಿಗಳನ್ನು ಇನ್‌ಸ್ಟಾಗ್ರಾಂನಲ್ಲಿ ಪ್ರದರ್ಶಿಸಬಹುದು,” ಎಂದು ಮೆಟಾ ಸಂಸ್ಥೆಯ ಸಿಇಒ ಮಾರ್ಕ್ ಜುಕರ್‌ಬರ್ಗ್ ಟ್ವೀಟ್ ಮಾಡಿದ್ದಾರೆ.

ಎನ್‌ಎಫ್‌ಟಿ ಟೋಕನ್‌ಗಳು ಎಂದರೇನು? 
ಎನ್‌ಎಫ್‌ಟಿ ಅಂದರೆ ʻನಾನ್ ಫಂಜಿಬಲ್ ಟೋಕನ್ʼ ಎಂದರ್ಥ. ಇದು ಕರೆನ್ಸಿ ರೀತಿಯಲ್ಲಿ ವಿನಿಮಯ ಮಾಡಿಕೊಳ್ಳಲು ಬರುವುದಿಲ್ಲ. ಪ್ರತಿ ಟೋಕನ್ ಭಿನ್ನವಾಗಿರುತ್ತದೆ. ಜೊತೆಗೆ ಅದರದ್ದೇ ಪ್ರತ್ಯೇಕ ಮೌಲ್ಯವನ್ನು ಹೊಂದಿರುತ್ತದೆ.

ಉದಾಹರಣೆಗೆ, ನಿಮ್ಮ ಬಳಿ 100 ರೂಪಾಯಿ ಇದ್ದರೆ, ಅದನ್ನು 50 ರೂಪಾಯಿಯಂತೆ ಎರಡು ನೋಟುಗಳಾಗಿ ಬದಲಾಯಿಸಿಕೊಳ್ಳಬಹುದು. ಏಕೆಂದರೆ ಅವರೆಡು ಅಂತಿಮವಾಗಿ ಸಮಾನ ಮೌಲ್ಯ ಹೊಂದಿರುತ್ತವೆ. ಆದರೆ, ಎನ್‌ಎಫ್‌ಟಿ ಹಾಗಲ್ಲ. ಇದನ್ನು ರೂಪಾಯಿಯಂತೆ ಬದಲಾಯಿಸಲಾಗುವುದಿಲ್ಲ. ಏಕೆಂದರೆ, ಇದು ಡಿಜಿಟಲ್  ಮನೆಯಾಗಿರಬಹುದು, ಚಿತ್ರಕಲೆಯಾಗಿರಬಹುದು. ಈ ಚಿತ್ರಕಲೆಯು ಟೋಕನ್ ರೀತಿ ಕೆಲಸ ಮಾಡುತ್ತದೆ. ಇದನ್ನು ಪೋಟೋ ತೆಗೆಯಬಹುದು ಅಥವಾ ಪ್ರಿಂಟ್ ರೂಪದಲ್ಲಿ ಖರೀದಿಸಬಹುದು. ಆದರೆ, ಮೂಲ ಚಿತ್ರ ಒಂದೇಯಾಗಿರುತ್ತದೆ. ಅದಕ್ಕೆ ಸಮಾನವಾದದು ಇನ್ನೊಂದಿರುವುದಿಲ್ಲ. ಎನ್‌ಎಫ್‌ಟಿಗಳು ಡಿಜಿಟಲ್ ಜಗತ್ತಿನಲ್ಲಿ ಒಂದು ಪ್ರಕಾರದ ಸ್ವತ್ತುಗಳಾಗಿವೆ. ಇವು ಕಲಾಕೃತಿಯ ಡಿಜಿಟಲ್ ಪ್ರಮಾಣಪತ್ರವಾಗಿರುತ್ತವೆ. ಇದನ್ನು ಖರೀದಿ ಹಾಗೂ ಮಾರಾಟ ಕೂಡ ಮಾಡಬಹುದು.

ಎನ್‌ಎಫ್‌ಟಿಗಳು ಇನ್‌ಸ್ಟಾಗ್ರಾಂ ಮಾತ್ರವಲ್ಲದೆ, ಮುಂದಿನ ದಿನಗಳಲ್ಲಿ ಫೇಸ್‌ಬುಕ್, ಮೆಸೇಂಜರ್ ಮತ್ತು ವಾಟ್ಸಪ್‌ನಲ್ಲಿ ಕೂಡ ಪ್ರಾರಂಭಿಸಿಲಿದ್ದೇವೆ. ಎನ್‌ಎಫ್‌ಟಿಗಳು 3ಡಿ ರೂಪದಲ್ಲಿಯೂ ಕೂಡ ಕಾರ್ಯನಿರ್ವಹಿಸಲಿವೆ ಎಂದು ಮೆಟಾ ಸಂಸ್ಥೆ ಹೇಳಿಕೊಂಡಿದೆ.

 

ಇನ್‌ಸ್ಟಾಗ್ರಾಂನಲ್ಲಿ ಎನ್‌ಎಫ್‌ಟಿಗಳನ್ನು ನಿಮ್ಮ 'ಫೀಡ್', 'ಸ್ಟೋರಿ' ಹಾಗೂ ಸಂದೇಶಗಳಲ್ಲಿ ಅವರು ರಚಿಸಿದ ಅಥವಾ ಖರೀದಿಸಿದ ಎನ್‌ಎಫ್‌ಟಿಗಳನ್ನು ಮಾತ್ರ ಹಂಚಿಕೊಳ್ಳಲು ಸಾಧ್ಯವಾಗುತ್ತದೆ. ಅಮೆರಿಕದಲ್ಲಿ ಬಹಳ ಕಡಿಮೆ ಜನರು ಈ ವೈಶಿಷ್ಟ್ಯವನ್ನು ಹೊಂದಿದ್ದಾರೆ.

ಅಷ್ಟೇ ಅಲ್ಲ ಬಳಕೆದಾರರು ಇದನ್ನು ಬಳಸುವುದಕ್ಕೆ ಯಾವುದೇ ಹಣವನ್ನು ನೀಡುವ ಅವಶ್ಯಕತೆಯಿಲ್ಲ ಮತ್ತು ಡಿಜಿಟಲ್ ಸಮುದಾಯಗಳು ನಮ್ಮ ಗುರಿಯಾಗಿದ್ದು, ಅವರಿಂದಲೇ ಈ ವೈಶಿಷ್ಟ್ಯವನ್ನು ಶುರು ಮಾಡಲಿದ್ದೇವೆ ಎಂದು ಇನ್‌ಸ್ಟಾಗ್ರಾಂ ಮುಖ್ಯಸ್ಥ ಆಡಮ್ ಮೊಸ್ಸೆರಿ ಟ್ವೀಟ್‌ ಮಾಡಿದ್ದಾರೆ. 

“ನಿಮಗೆ ತಿಳಿದಿದೆ ಎಂದು ನಾನು ಭಾವಿಸುತ್ತೇನೆ; ಮುಂದಿನ ದಿನಗಳಲ್ಲಿ ಬರಲಿರುವ ಮೆಟಾವರ್ಸ್ ಪರಿಚಯಿಸುವ '3ಡಿ ಅವತಾರ್‌'ಗಳನ್ನು ಬಳಸಿ ಕೂಡ ನೀವು ಡಿಜಿಟಲ್ ಎನ್‌ಎಫ್‌ಟಿ ತಯಾರಿಸಿ ಮಾರಾಟ ಮಾಡಬಹುದು" ಎಂದು ಮೆಟಾ ಸಂಸ್ಥೆಯ ಸಿಇಒ ಮಾರ್ಕ್ ಜುಕರ್‌ಬರ್ಗ್ ಮಾರ್ಚ್‌ನಲ್ಲಿ ನಡೆದ ʻಸೌತ್ ಬೈ ಸೌತ್‌ವೆಸ್ಟ್‌ʼ ಚಲನ ಚಿತ್ರ ಮಹೋತ್ಸವದಲ್ಲಿ ಹೇಳಿಕೊಂಡಿದ್ದಾರೆ.

ನಿಮಗೆ ಏನು ಅನ್ನಿಸ್ತು?
2 ವೋಟ್