ಜಲಜೀವಿಗಳಿಗೆ ಸಂಚಕಾರ ಉಂಟು ಮಾಡಿರುವ ಮೈಕ್ರೋಪ್ಲಾಸ್ಟಿಕ್‌; ಐಐಎಸ್‌ಸಿ ಅಧ್ಯಯನ

ಮೈಕ್ರೋಪ್ಲಾಸ್ಟಿಕ್ನ ಅವಾಂತರಗಳ ಬಗ್ಗೆ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ಕಣ ಪುನರುತ್ಪತ್ತಿ, ಅಭಿವೃದ್ಧಿ ಮತ್ತು ತಳಿ ವಿಜ್ಞಾನ ಅಧ್ಯಯನ (MRDG) ವಿಭಾಗದ ಡಾ. ಉಪೇಂದ್ರ ನೊಂಗ್ತೊಂಬ ಪ್ರಕಟಿಸಿದ ಬರಹ ಹೆಚ್ಚು ಸುದ್ದಿಮಾಡಿದೆ.
Microplastic (Pic Courtesy: MotherJones)

ಪ್ಲಾಸ್ಟಿಕ್ ಎಂಬ ಮಾರಣಾಂತಿಕ ಪೀಡೆಯ ಬಗ್ಗೆ ದಶಕಗಳಿಂದ ಜಗತ್ತಿನ ಮೂಲೆಮೂಲೆಯಲ್ಲಿ ಕೂಗಾಟ, ಚೀರಾಟಗಳಾಗಿವೆ. ನೆಲ-ಜಲ-ಮಾಲಿನ್ಯಗಳ ಪ್ರಧಾನ ಕಾರಣಕರ್ತನೆಂದು, ಪ್ರಾಣಿ ಪಕ್ಷಿಗಳ ಕೊಲೆಗಾರನೆಂದೂ ಬಿರುದು ಬಾವಲಿಗಳನ್ನೂ ಕೊಟ್ಟಿವೆ. ಮಹಾ ಚಿರಂಜೀವಿತನದ ಪಟ್ಟವನ್ನು ಇದರಿಂದ ಈವರೆಗೂ ಯಾರೂ ಕಸಿದುಕೊಳ್ಳಲಾಗಿಲ್ಲ. ಇದರ ನಿಯಂತ್ರಣಕ್ಕಾಗಿ ಅನೇಕ ನೀತಿ ನಿಯಮಗಳೂ ಮಾಡಲ್ಪಟ್ಟಿವೆ. ಆದರೆ ಏನೂ ಆಗಿಲ್ಲ. ಉತ್ಪಾದನೆ ಮತ್ತು ಬಳಕೆ ನಿರಾತಂಕವಾಗಿ ಸಾಗಿದೆ. ಎಲ್ಲರೂ ಖುಷ್!? ಕಂಡೂ ಕಾಣದಂತೆ ಸಾಗುವುದು ಜಾಣತನ!. ಆದರೆ ಈ ಮಧ್ಯದಲ್ಲಿ ಈ ಪ್ಲಾಸ್ಟಿಕ್ಕಿನ ʻಮರಿಮಗುʼ ಮೈಕ್ರೋಪ್ಲಾಸ್ಟಿಕ್ ತುಂಬಾ ಗದ್ದಲ ಎಬ್ಬಿಸುತ್ತಿದೆ.

ಮೊನ್ನೆ ತಾನೆ ಕಾವೇರಿ ಕಣಿವೆಯಲ್ಲಿ  ಮೈಕ್ರೋಪ್ಲಾಸ್ಟಿಕ್ನ ಅವಾಂತರಗಳ ಬಗ್ಗೆ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ಕಣ ಪುನರುತ್ಪತ್ತಿ, ಅಭಿವೃದ್ಧಿ ಮತ್ತು ತಳಿ ವಿಜ್ಞಾನ ಅಧ್ಯಯನ (MRDG) ವಿಭಾಗದ ಡಾ. ಉಪೇಂದ್ರ ನೊಂಗ್ತೊಂಬ ಪ್ರಕಟಿಸಿದ ಬರಹ ಹೆಚ್ಚು ಸುದ್ದಿಮಾಡಿದೆ. ಈ ಬರಹ ಪಾರಿಸಾರಿಕ ವಿಷವಿಜ್ಞಾನ ಮತ್ತು ಪರಿಸರ ಸುರಕ್ಷೆ ಎಂಬ ನಿಯತಕಾಲಿಕದಲ್ಲಿ ಪ್ರಕಟವಾಗಿತ್ತು.

ಅವರು ಹೇಳಿದ್ದೆಂದರೆ: ಕೃಷ್ಣರಾಜ ಸಾಗರದ ಹಿನ್ನೀರಿನ ಕಡೆ ಹೋಗುವುದು ನನಗೆ ಚೇತೋಹಾರಿಯಾದ ಸಂಗತಿ. ಅಲ್ಲಿಗೆ ಹೋದಾಗ  ಕಾವೇರಿ ನದಿ ದಂಡೆಯಲ್ಲಿ ಕರಿದ ಮೀನನ್ನು ತಿನ್ನುವುದು ನನ್ನ ಅಭ್ಯಾಸ. ಅಲ್ಲಿ ಕೊಡುವ ಮೀನುಗಳನ್ನು  ಕಾಲಾನುಕ್ರಮದಲ್ಲಿ ಗಮನಿಸಿದಾಗ ಅವುಗಳಲ್ಲಿ ಏನೋ ವ್ಯತ್ಯಾಸ ಕಾಣತೊಡಗಿತು. ಮುಖ್ಯವಾಗಿ ದೈಹಿಕ ವಿರೂಪತೆ. ಇದರಿಂದ ನನ್ನಲ್ಲಿ ಕುತೂಹಲ ಹುಟ್ಟಿತು. ನಾನು ಬಹುಶಃ ಇದಕ್ಕೆ ನೀರಿನ ಗುಣಮಟ್ಟ ಕಾರಣವಿರಬಹುದು ಎಂದು ಭಾವಿಸಿದೆ ಎಂದು ಹೇಳಿದ್ದರು.

ಇದನ್ನು ಖಚಿತಪಡಿಸಿಕೊಳ್ಳಲು ಡಾ. ಉಪೇಂದ್ರ  ಮತ್ತು ತಂಡ  ಸಮಗ್ರವಾದ ಅಧ್ಯಯನವೊಂದನ್ನು ಕೈಗೊಂಡಿತು. ಇದರ ವಿಷಯ ʻʻಕೆಆರ್ಎಸ್ ನೀರಿನ ಮಾಲಿನ್ಯ ಮತ್ತು ಮೀನುಗಳ ಮೇಲೆ ಇದರ ಪರಿಣಾಮʼʼ ಎಂದಾಗಿತ್ತು. ನೀರಿನ ಹರಿವಿನ ವೇಗ ಮಾಲಿನ್ಯಕಾರಕಗಳ ಸಾಂದ್ರತೆಯ ಮೇಲೆ ಪರಿಣಾಮ ಬೀರುತ್ತದೆ ಎಂಬ ಸಾಮಾನ್ಯ ಸೂತ್ರದ ಹಿನ್ನೆಲೆಯಲ್ಲಿ ಕಾವೇರಿ ನದಿಯ ನೀರಿನ ಹರಿವನ್ನು ಮೂರು ಭಾಗಗಳಾಗಿ ವರ್ಗೀಕರಿಸಿ, ವೇಗವಾಗಿ ನೀರು ಹರಿಯುವ ತಾಣ, ನಿಧಾನವಾಗಿ ನೀರು ಹರಿಯುವ ತಾಣ ಮತ್ತು ನಿಂತ ನೀರಿನ  ತಾಣಗಳನ್ನು ಆರಿಸಿ, ಆಲ್ಲಿಂದ ನೀರಿನ ಮಾದರಿಗಳನ್ನು ಸಂಗ್ರಹಿಸಿದರು.

Image
Microplastics 1

ಆಧ್ಯಯನದ ಮೊದಲ ಹಂತದಲ್ಲಿ ಸಂಗ್ರಹಿಸಲಾದ ನೀರಿನ ಮಾದರಿಗಳಲ್ಲಿನ  ಭೌತಿಕ ಮತ್ತು ರಸಾಯನಿಕಗಳ ಪ್ರಮಾಣ ಮತ್ತು ಪರಿಣಾಮಗಳನ್ನು ಮಾನದಂಡದ ಅನುಸಾರ ಪರೀಕ್ಷಿಸಿದರು. ಮೂರು ಮಾದರಿಗಳ ಪೈಕಿ ಎರಡರಲ್ಲಿ ಕರಗಿದ ಆಮ್ಲಜನದ ತೀವ್ರ ಕೊರತೆ ಕಂಡು ಬಂದಿತು. ಅವೆಂದರೆ: ನಿಧಾನವಾಗಿ ನೀರು ಹರಿಯುವ ತಾಣ ಮತ್ತು ನಿಂತ ನೀರಿನ  ತಾಣಗಳು. ಈ ತಾಣಗಳಲ್ಲಿ ಅನೇಕ ಸೂಕ್ಷ್ಮಾಣು ಜೀವಿಗಳು ಕಂಡುಬಂದವು. ಉದಾಹರಣೆಗೆ: ಸೈಕ್ಲೊಪ್ಸ್, ಡಫ್ನಿಯಾ, ಸ್ಪೈರೊಗೈರ, ಸ್ಪೈರೊಚಿಟ ಮತ್ತು ಇ-ಕೊಲಿ ಅಂತಹವು. ಗ್ರೀಕ್ ಕಥೆಗಳ ಬ್ರಹ್ಮ ರಾಕ್ಷಸರ ಹೆಸರಿನಂತಿರುವ ಇವುಗಳ ಹೆಸರನ್ನು ಪಕ್ಕಕ್ಕಿಡಿ.  ವಾಸ್ತವದಲ್ಲಿ ಇವು ನೀರಿನ ಮಲಿನತೆಯ ಪ್ರಮಾಣವನ್ನು ಹೇಳುವ ಜೈವಿಕ ಸೂಚಕಗಳು. ಇವುಗಳ ಹಾಜರಿಯ ಪ್ರಮಾಣದ ಮೇಲೆ ನೀರಿನ ಆರೋಗ್ಯವನ್ನು ನಿರ್ಧರಿಸಲಾಗುತ್ತದೆ.

 ಆದರೆ ಇದನ್ನು ಇಷ್ಟಕ್ಕೇ ನಿಲ್ಲಿಸಲಾಗುವುದಿಲ್ಲ. ಸಂಶೋಧನೆ ಮುಂದುವರಿದು, ರಾಮನ್ ಸ್ಪೆಕ್ಟ್ರೋಸ್ಕೊಪಿ ತಂತ್ರಜ್ಞಾನದ ಮೂಲಕ ನೀರಿನ ಮಾದರಿಗಳನ್ನು ಪರೀಕ್ಷಿಸಿದಾಗ ಬರಿಗಣ್ಣಿಗೆ ಕಾಣದ ಮೈಕ್ರೋಪ್ಲಾಸ್ಟಿಕ್‌ ಅಥವಾ ಪ್ಲಾಸ್ಟಿಕ್‌ನ ಅತಿಸೂಕ್ಷ್ಮ ಕಣಗಳು ಕಂಡುಬಂದವು. ಇದರಿಂದ ಇವರು ಕಂಡುಕೊಂಡ ಪ್ರಧಾನ ಅಂಶವೆಂದರೆ, ಈ ನಿಧಾನವಾಗಿ ನೀರು ಹರಿಯುವ ಜಾಗಗಳ ಮತ್ತು ನಿಂತ ನೀರಿನಲ್ಲಿನ ಮೀನುಗಳಲ್ಲಿ ROS [reactive oxygen species : ಅಂದರೆ, ಆಮ್ಲಜನಕ ಪ್ರತಿಕ್ರಿಯಾತ್ಮಕ ಜಾತಿಗಳು: ಆಮ್ಲಜನಕವನ್ನು ಹೊಂದಿರುವ ಕೆಲವು ಅಸ್ಥಿರ ಕಣಗಳು ಅದೇ ಕೋಶದೊಳಗಿನ ಇನ್ನೊಂದು ಕಣಕ್ಕೆ ಸುಲಭವಾಗಿ ಪ್ರತಿಕ್ರಿಯಿಸುವ ಕ್ರಿಯೆ] ಎಂಬ ಅಸ್ಥಿರ ಕಣಗಳು ಕಾಣಿಸಿಕೊಂಡಿದ್ದು ಇದರಿಂದಾಗಿ ಮೀನುಗಳಲ್ಲಿ ಅಸಹಜ ಬೆಳವಣಿಗೆ ಆಗಿದೆ. ಈ ROSಗಳ ಅಸ್ತವ್ಯಸ್ತ ಬೆಳವಣಿಗೆಯಿಂದ ಜೀವಿಯ  ಡಿಎನ್‌ಎ ಹಾನಿಗೊಳಗಾಗುತ್ತದೆ. ಸಹಜವಾಗಿ ಹಾನಿಗೊಳಗಾದ ಡಿಎನ್‌ಎ ಹಾನಿಕಾರಕ ಸಂತಾನಗಳನ್ನೇ ಸೃಷ್ಟಿಸುತ್ತದೆ.

ಇನ್ನೊಂದು ಆಧ್ಯಯನವು ಹೇಳಿರುವಂತೆ ಈ ಮೈಕ್ರೋಪ್ಲಾಸ್ಟಿಕ್‌ ಮತ್ತು  ಸೈಕ್ಲೊಹೆಕ್ಸಿಲ್‌ ಬಳಗದ ರಸಾಯನಿಕಗಳು ನೀರಿನಲ್ಲಿರುವ ಕರಗಿದ ಆಮ್ಲಜನಕವನ್ನು ನಾಶಪಡಿಸಿ ಅಲ್ಲಿನ ಮೀನುಗಳಲ್ಲಿ ROS ಹೆಚ್ಚಳವನ್ನು ಪ್ರಚೋದಿಸುತ್ತವೆ.
ನೆದರ್‌ಲ್ಯಾಂಡಿನ ಇತ್ತೀಚಿನ ಸಂಶೋಧನೆಯೊಂದು ದೃಢಪಡಿಸಿರುವಂತೆ, ಈ ಮೈಕ್ರೋಪ್ಲಾಸ್ಟಿಕ್ ಮನುಷ್ಯರ ರಕ್ತದ ಹರಿವಿನೊಳಗೆ ಸಹ ಸೇರಬಲ್ಲುದು. ಈ ಹಿನ್ನೆಲೆಯಲ್ಲಿ, ಡಾ. ಉಪೇಂದ್ರ  ಮತ್ತು ತಂಡದ ಸಂಶೋಧನೆಯ ಫಲಿತಾಂಶವನ್ನು ಊಹಿಸಿ!? ಈ ಕಾವೇರಿಯ ನೀರನ್ನು ಎಷ್ಟು ಲಕ್ಷ ಜನ ಬಳಸುತ್ತಿರಬಹುದು?. ಸಧ್ಯಕ್ಕೆ ಮನುಷ್ಯರಲ್ಲಿ ಅದರ ಸಾಂದ್ರತೆ ಅಪಾಯಕಾರಿ ಮಟ್ಟದಲ್ಲಿ ಇಲ್ಲದೇ ಇರಬಹುದು! ಆದರೆ ನಾಳೆ?

ಸೈನ್ಸ್ ಆಫ್ ದಿ ಟೋಟಲ್ ಎನ್ವಿರಾನ್ಮೆಂಟ್ ಎಂಬ ನಿಯತಕಾಲಿಕದಲ್ಲಿ ಪ್ರಕಟವಾಗಿರುವ  ಡಾ. ಲ್ಯೂರ ಸಾಂಡೋಫ್ಸ್ಕಿ ಎಂಬ ವಿಜ್ಞಾನ ಪ್ರಾಧ್ಯಾಪಕನ ಅಚ್ಚರಿದಾಯಕ ಸಂಶೋಧನೆಯನ್ನು ಉಲ್ಲೇಖಿಸಿ ಅನೇಕ ವರದಿಗಳು ಹೊರಬಿದ್ದವೆ. ಈ ಸಾಂಡೋಫ್ಸ್ಕಿ ಇಂಗ್ಲೆಂಡ್ನ ಹಲ್ಯಾರ್ಕ್ ಮೆಡಿಕಲ್ ಇನ್ಸ್ಟಿಟ್ಯೂಟ್ಗೆ ಸೇರಿದವರು. ಇವರ ಸಂಶೋಧನೆಯ ಸಾರಾಂಶದ ಪ್ರಕಾರ ಮನುಷ್ಯನ ಶ್ವಾಸಕೋಶದಲ್ಲಿ ಈ ಮೈಕ್ರೋಪ್ಲಾಸ್ಟಿಕ್ ಸೇರಿಕೊಂಡಿದೆ.

ಅಲ್ಲಿ ಗುರುತಿಸಲ್ಪಟ್ಟಿರುವ ೧೨ ರೀತಿಯ ಪ್ಲಾಸ್ಟಿಕ್‌ ಕಣಗಳು ಸಾಮಾನ್ಯ ಬಳಕೆಯ ವಸ್ತುಗಳಾದ ಪ್ಲಾಸ್ಟಿಕ್‌  ಬಾಟಲಿಗಳು, ಬಟ್ಟೆ, ಅಡುಗೆ ಸಾಮಗ್ರಿ ಇತ್ಯಾದಿಗಳನ್ನು ಪ್ಯಾಕ್‌ ಮಾಡಲು ಬಳಸುವ ಪ್ಲಾಸ್ಟಿಕ್ ಹಾಳೆ, ಪ್ಲಾಸ್ಟಿಕ್‌ ದಾರ ಇನ್ನಿತರ ವಸ್ತು ಸುರಕ್ಷತೆಯ ಹೆಸರಿನಲ್ಲಿ ಬಳಸುವ ಅಥವಾ ಸಿದ್ಧ ಸರಕನ್ನು ಅಂದ ಚಂದವಾಗಿ ಶೃಂಗರಿಸಲು ಬಳಸುವ ಪ್ಲಾಸ್ಟಿಕ್ ಪರಿಕರಗಳಿಂದ ಬಂದಿವೆ.

ಸಾಮಾನ್ಯವಾಗಿ ಮಾನವ ಶ್ವಾಸಕೋಶದ ಕೆಳಭಾಗದ ನರಗಳು ಅತ್ಯಂತ ಕಿರಿದಾಗಿದ್ದು ಯಾವುದೇ ಹೊರ ವಸ್ತುಗಳ ಪ್ರವೇಶಕ್ಕೆ ಅವಕಾಶ ಕೊಡುವುದಿಲ್ಲ. ಅಂತಹ ಆತಿಕ್ರಮಿ ವಸ್ತುಗಳನ್ನು ಹೊರಭಾಗದಲ್ಲಿಯೇ ತಡೆಯುವ ಶೋಧಕದ ಕಾರ್ಯವನ್ನು ಅವು ನಿರ್ವಹಿಸುತ್ತವೆ. ಆದರೂ ನಮ್ಮ ರೋಗಿಗಳಿಂದ ವೈದ್ಯಕೀಯ ಕ್ರಮದಲ್ಲಿ ವಾಡಿಕೆಯಂತೆ ನಾವು ಸಂಗ್ರಹಿಸಿರುವ ಶ್ವಾಸಕೋಶದ ಅಂಗಾಂಶಗಳಲ್ಲಿ ಈ ಮೈಕ್ರೋಪ್ಲಾಸ್ಟಿಕ್ ಕಂಡುಬಂದಿದೆ ಎಂದು ಹೇಳಿದ್ದಾರೆ.

ನಮ್ಮ ಪ್ರತೀ ಉಸಿರಾಟದಲ್ಲಿ ಮೈಕ್ರೋಪ್ಲಾಸ್ಟಿಕ್ ಇದ್ದು, ರಕ್ತ ಮತ್ತು ವಿಸರ್ಜಿತ ಮಲದಲ್ಲಿ ಸಹ ಇದರ ಕುರುಹುಗಳು ಕಂಡುಬಂದಿವೆ ಎಂಬ ಅಪಾಯ ಸೂಚಕ ಅನುಮಾನಗಳನ್ನು ೨೦೧೮ರಲ್ಲಿ ಅಮ್ಸ್ಟರ್‌ಡ್ಯಾಮಿನ ವೃಜೆ ವಿಶ್ವವಿದ್ಯಾಲಯದ ಪರಿಸರ ವಿಷವಿಜ್ಞಾನದ ಸಂಶೋಧಕ ಡಿಕ್‌ ವೆಥಾಕ್‌ ಹೇಳಿದ್ದರು ಎಂದು ಅವರ ವರದಿಯನ್ನಾಧರಿಸಿ ಇದೇ ಏಪ್ರಿಲ್‌ ೬ರಂದು ಎಕನಾಮಿಕ್‌ ಟೈಮ್ಸ್‌ ವರದಿಮಾಡಿದೆ.

ವರ್ಷಕ್ಕೆ ಜಗತ್ತಿನಾದ್ಯಂತ ಸರಿಸುಮಾರು ೩೦೦ ಮಿಲಿಯನ್‌ ಅಥವಾ ೩೦ ಕೋಟಿ ಮೆಟ್ರಿಕ್‌ ಟನ್‌ ಪ್ಲಾಸ್ಟಿಕ್ ಉತ್ಪಾದನೆಯಾಗುತ್ತದೆ. ಇದರಲ್ಲಿ ಶೇ. ೮೦ ಭಾಗ ಭೂಭರ್ತಿಗೆ ಹೋಗುತ್ತದೆ. ಅಲ್ಲಿ ವಿಘಟನೆಗೊಳ್ಳುತ್ತಾ (ಕೊಳೆಯುವುದಿಲ್ಲ) ಅದು ಯಾವ ಯಾವ ನೈಸರ್ಗಿಕ ಮೂಲಗಳನ್ನು ಸೇರುತ್ತದೆ ಮತ್ತು ಮಲಿನಗೊಳಿಸುತ್ತದೆ ಎಂದು ಇನ್ನೂ ಖಚಿತವಾಗಿ ಅಂದಾಜು ಮಾಡಲಾಗಿಲ್ಲ. ಉಳಿದ ೨೦ ಭಾಗ ವಿಘಟನೆಗೊಂಡು ಹೀಗೆ ಮನುಷ್ಯ ಮತ್ತಿತರ ಜೀವಿಗಳ ದೇಹವನ್ನು ಪ್ರತ್ಯಕ್ಷ-ಪರೋಕ್ಷವಾಗಿ ಪ್ರವೇಶಿಸುತ್ತಿದೆ ಎಂದು ಅಂದಾಜು ಮಾಡಲಾಗಿದೆ. ಆಳ ಸಾಗರದ ಜೀವಿಗಳಲ್ಲಿ ಸಹ ಇದರ ಕುರುಹುಗಳು ಪತ್ತೆಯಾಗಿವೆ ಇದೇ ಆಧ್ಯಯನ ಹೇಳಿದೆ.

ಇದನ್ನು ಓದಿದ್ದೀರಾ? | ಉತ್ತಮ ಆರೋಗ್ಯ ಮತ್ತು ಫಿಟ್‌ನೆಸ್‌ಗಾಗಿ ಬಳಸಬಹುದಾದ ಆ್ಯಪ್

ಈಗ ನಮ್ಮ ದೇಹದಲ್ಲಿರುವ ಪ್ಲಾಸ್ಟಿಕ್‌ನ ಪ್ರಮಾಣವನ್ನು ಪರೀಕ್ಷಿಸಿಕೊಳ್ಳುವುದು ನಮ್ಮ ಆಯ್ಕೆ, ಸರಿ!. ಆದರೆ…, ನಮ್ಮ ದೇಹಕ್ಕೆ ಸೇರುತ್ತಿರುವ ಪ್ಲಾಸ್ಟಿಕ್‌ನ ಪ್ರಮಾಣವನ್ನು ನಿಯಂತ್ರಿಸುವುದು ನಮ್ಮ ನಿಯಂತ್ರಣದಲ್ಲಿಲ್ಲ ಎನ್ನುವದೇ ಅಪಾರ ಹಣ, ಅತ್ಯಾಧುನಿಕತೆ, ಅತಿ ತಾಂತ್ರಿಕ ಸಾಮರ್ಥ್ಯ, ಬೃಹತ್‌ ಅಭಿವೃದ್ಧಿ ಇತ್ಯಾದಿ ವ್ಯಾಮೋಹಗಳ ಫಲಿತ ಮತ್ತು ವಾಸ್ತವ. ದಾರಿ ಹುಡುಕಬಲ್ಲಿರಾ ನಿಯಂತ್ರಣಕ್ಕೆ?!

ಮೈಕ್ರೋ ಪ್ಲಾಸ್ಟಿಕ್ ಎಂದರೇನು?
ವಾಣಿಜ್ಯ ಕಾರಣಗಳಿಂದ  ಪ್ಲಾಸ್ಟಿಕ್ಕಿನ  ಉತ್ಪಾದಕರು ನೇರವಾಗಿ ಕಿರು ಕಣಗಳ ರೂಪದಲ್ಲಿ ಉತ್ಪಾದಿಸಲ್ಪಟ್ಟವು. ಉದಾಹರಣೆಗೆ:  ಸೌಂದರ್ಯ(ವರ್ಧಕ) ಸಾಧನಗಳಲ್ಲಿ ಬಳಸುವಂತವು, (ದೃಢೀಕರಣ ನಿಮ್ಮ ಆಯ್ಕೆ, ಚರ್ಚೆ ಬೇಡ)  ಆಥವಾ ಮಾಮೂಲು ಪ್ಲಾಸ್ಟಿಕ್ಕಿನ ವಸ್ತುಗಳು ವಿಘಟನೆಗೊಂಡು ಅಥವಾ ಸವೆದು ಕಿರು ಆಕಾರಕ್ಕೆ ಇಳಿದಂತವು. ಉದಾಹರಣೆಗೆ: ನೀರಿನ ಬಾಟೆಲ್ಗಳು, ಸ್ಟ್ರಾ (ಹೀರುಗೊಳವೆಗಳು), ೧೦ ರುಪಾಯಿಯ ಜ್ಯೂಸು, ಶಕ್ತಿವರ್ಧಕಗಳ ಚೋಟುದ್ದದ ಬಾಟಲಿಗಳು ಇತ್ಯಾದಿ…. ವೈಜ್ಞಾನಿಕ  ಸೂತ್ರೀಕರಣದ ಪ್ರಕಾರ ಬರಿಗಣ್ಣಿಗೆ ಕಾಣದ ೧೦ ನ್ಯಾನೋ ಮೀಟರ್ ಗಾತ್ರದಿಂದ ಹಿಡಿದು ಐದು ಮಿ.ಮೀ. ವ್ಯಾಸವುಳ್ಳವು.

ಪ್ಲಾಸ್ಟಿಕ್ನಿಂದ ಮೈಕ್ರೋಪ್ಲಾಸ್ಟಿಕ್: ರೂಪಾಂತರ ಪ್ರಕ್ರಿಯೆಯಲ್ಲಿ ಪಾಲುದಾರರು. ಪ್ರಕೃತಿಯ ಸಹಜ ಕ್ರಿಯೆಗಳು: ೧) ಗಾಳಿ, ಬಿರುಗಾಳಿ, ಸುಂಟರಗಾಳಿ ಇತ್ಯಾದಿ. ೨) ನೀರಿನ ಹರಿವು: ಮಳೆಬಂದಾಗ ಮನೆಯ ಮುಂದೆ ಹರಿಯುವ ನೀರಿನಿಂದ ಹಿಡಿದು ಭೋರ್ಗರೆಯುತ್ತಾ ಸಮುದ್ರ ಸೇರುವ ನದಿಗಳವರೆಗೆ. ೩) ಬಿಸಿಲು: ಎಳೆಬಿಸಿಲು, ಸುಡುಬಿಸಿಲು, ಧಗಧಗಿಸುವ ಬಿಸಿಲು, ಇತ್ಯಾದಿ.

 

ನಿಮಗೆ ಏನು ಅನ್ನಿಸ್ತು?
0 ವೋಟ್