
- ಜೂನ್ 28ರಂದು ರಾಜಸ್ಥಾನದ ಉದಯಪುರದಲ್ಲಿ ಹತ್ಯೆಯಾಗಿದ್ದ ಕನ್ಹಯ್ಯ ಲಾಲ್
- ಫೇಸ್ಬುಕ್ನಲ್ಲಿ ಹಂಚಿಕೊಂಡವರ ಮೇಲೆ ಕ್ರಮ ಕೈಗೊಳ್ಳಲಿರುವ ಪೊಲೀಸರು
ಕಳೆದ ವಾರ ಉದಯಪುರದಲ್ಲಿ ನಡೆದ ಭೀಕರ ಹತ್ಯೆಗೆ ಸಂಬಂಧಿಸಿದ ವಿಡಿಯೋವೊಂದನ್ನು ತೆಗೆದುಹಾಕುವಂತೆ ಪೊಲೀಸರು ಫೇಸ್ಬುಕ್ಗೆ ಮನವಿ ಮಾಡಿದ್ದಾರೆ.
ಕೋಮು ಸೌಹಾರ್ದಕ್ಕೆ ಧಕ್ಕೆಯಾಗುವ ಸಾಧ್ಯತೆಯಿರುವ ಹಿನ್ನೆಲೆಯಲ್ಲಿ ಫೇಸ್ಬುಕ್ಗೆ ಪತ್ರ ಬರೆದಿರುವ ಪೊಲೀಸರು ಉದಯಪುರ ಹತ್ಯೆಗೆ ಸಂಬಂಧಿತ ವಿಡಿಯೋಗಳನ್ನು ತೆಗೆದುಹಾಕುವಂತೆ ಮನವಿ ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯಸಿದ ಫೇಸ್ಬುಕ್ ಸಂಸ್ಥೆ ತಕ್ಷಣವೇ ವಿಡಿಯೋವನ್ನು ತೆಗೆದುಹಾಕಿದೆ. ಫೇಸ್ಬುಕ್ನಲ್ಲಿ ವಿಡಿಯೋ ಹಂಚಿಕೊಂಡಿರುವ ವ್ಯಕ್ತಿಯ ಮೇಲೆ ಕಠಿನ ಕ್ರಮ ಕೈಗೊಳ್ಳಲಾಗುವುದು ಎಂದು ಉದಯಪುರದ ಪೊಲೀಸ್ ವರಿಷ್ಠಾಧಿಕಾರಿ ವಿಕಾಸ್ ಶರ್ಮಾ ತಿಳಿಸಿದ್ದಾರೆ.
ಅಮಾನತುಗೊಂಡಿರುವ ಬಿಜೆಪಿ ವಕ್ತಾರೆ ನೂಪುರ್ ಶರ್ಮಾ ಅವರ ವಿವಾದಾತ್ಮಕ ಹೇಳಿಕೆಯನ್ನು ಬೆಂಬಲಿಸಿ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾದ ಪೋಸ್ಟ್ಗೆ ಸಂಬಂಧಿಸಿ ಟೈಲರ್ ಕೆಲಸ ಮಾಡುತ್ತಿದ್ದ 46 ವರ್ಷದ ಕನ್ಹಯ್ಯ ಲಾಲ್ರನ್ನು ಜೂನ್ 28ರಂದು ಅವರ ಟೈಲರಿಂಗ್ ಅಂಗಡಿಯಲ್ಲಿ ಹತ್ಯೆ ಮಾಡಲಾಗಿತ್ತು. ಆರೋಪಿ ವಿರುದ್ಧ ಪ್ರಕರಣ ದಾಖಲಾಗಿದೆ ಮತ್ತು ವೈರಲ್ ಆಗಿರುವ ವಿಡಿಯೋ ತೆಗೆದುಹಾಕುವಂತೆ ಮನವಿ ಮಾಡಲಾಗಿದೆ ಎಂದು ಪೊಲೀಸರು ಮಾಧ್ಯಮಗಳಿಗೆ ತಿಳಿಸಿರುವುದಾಗಿ ವರದಿಯಾಗಿದೆ.
ಲಾಲ್ ಹತ್ಯೆಗೆ ಸಂಬಂಧಿಸಿ ಅಖ್ತರಿ ಮತ್ತು ಮೊಹಮ್ಮದ್ ಸೇರಿದಂತೆ ಐವರನ್ನು ಈಗಾಗಲೇ ಬಂಧಿಸಲಾಗಿದೆ ಎಂದು ಮಾಧ್ಯಮಕ್ಕೆ ತಿಳಿಸಿದ್ದಾರೆ. ಭಿಲ್ವಾರಾ ಜಿಲ್ಲೆಯಲ್ಲಿ ಬಂಧಿಸಲಾದ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ಐ) ಸದಸ್ಯನ ಮೊಬೈಲ್ ಫೋನ್ನಿಂದ ಕೆಲವು ಶಂಕಿತ ಪಾಕಿಸ್ತಾನಿ ಫೋನ್ ಸಂಖ್ಯೆಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಈ ಸುದ್ದಿ ಓದಿದ್ದೀರಾ ? ಮಾಧ್ಯಮ, ಅಂಬೇಡ್ಕರ್ ಪೋಸ್ಟ್ಗಳ ಮೇಲೆ ನಿರ್ಬಂಧ; ಫೇಸ್ಬುಕ್ ನಡೆಗೆ ವ್ಯಾಪಕ ಖಂಡನೆ
ಹಿರಿಯ ಕಾಂಗ್ರೆಸ್ ನಾಯಕ ಸಚಿನ್ ಪೈಲಟ್ ಅವರು ಶುಕ್ರವಾರ ಕನ್ಹಯ್ಯ ಲಾಲ್ ಕುಟುಂಬವನ್ನು ಭೇಟಿಯಾಗಿ ಸಾಂತ್ವಾನ ಹೇಳಿದ್ದಾರೆ. ಜೊತೆಗೆ ಅಪರಾಧಿಗಳಿಗೆ ಮರಣದಂಡನೆ ಶಿಕ್ಷೆ ವಿಧಿಸಬೇಕು ಮತ್ತು ಲಾಲ್ ಅವರ ಕುಟುಂಬಕ್ಕೆ ಸೂಕ್ತ ಭದ್ರತಾ ವ್ಯವಸ್ಥೆ ಮಾಡಲಾಗಿದೆ. ಅವರಿಗೆ ಎಲ್ಲ ರೀತಿಯ ಸಹಾಯ ಒದಗಿಸಲಾಗುವುದು ಎಂದು ಪೈಲಟ್ ಹೇಳಿದ್ದಾರೆ.