ಕೇಂದ್ರದ ಆದೇಶಗಳ ಕಾನೂನು ಮಾನ್ಯತೆ ಪ್ರ‍ಶ್ನಿಸಿ ಕರ್ನಾಟಕ ಹೈಕೋರ್ಟ್‌ಗೆ ಟ್ವಿಟರ್‌ ಅರ್ಜಿ

Twitter Image
  • ಟ್ವಿಟರ್‌ - ಕೇಂದ್ರ ಸರ್ಕಾರದ ನಿಲ್ಲದ ಕಾನೂನು ಸಮರ
  • ಕೇಂದ್ರ ಹೊರಡಿಸಿರುವ ಆದೇಶ ರದ್ದುಗೊಳಿಸಲು ಮನವಿ 

ಕೇಂದ್ರ ಸರ್ಕಾರದ ಆದೇಶಗಳ ವಿರುದ್ಧ ಟ್ವಿಟರ್‌ ಸಂಘರ್ಷ ಮುಂದುವರಿದಿದೆ. ಸರ್ಕಾರದ ಆದೇಶಗಳ ಕಾನೂನು ಮಾನ್ಯತೆ ಪ್ರಶ್ನಿಸಿ ಟ್ವಿಟರ್‌ ಕರ್ನಾಟಕ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ. 

ನಿರ್ದಿಷ್ಟ ವಿಷಯಗಳನ್ನು ತೆಗೆದುಹಾಕುವುದು ಮತ್ತು ಇಂತಹ ವಿಷಯಗಳನ್ನು ನಿರ್ಬಂಧಿಸಬೇಕು ಎಂದು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಆದೇಶದ ವಿರುದ್ಧ ಟ್ವಿಟರ್ ಸಂಸ್ಥೆ ನ್ಯಾಯಾಲಯದ ಮೆಟ್ಟಿಲೇರಿದೆ.

ಕೇಂದ್ರದ ಮಾಹಿತಿ ಮತ್ತು ತಂತ್ರಜ್ಞಾನ ಸಚಿವಾಲಯವು ಟ್ವಿಟರ್‌ಗೆ ಕೆಲ ನಿಬಂಧನೆ ವಿಧಿಸಿದ್ದು, ಅವುಗಳನ್ನು ಪಾಲಿಸದಿದ್ದರೆ ಕಠಿಣ ಕ್ರಮ ತೆಗೆದುಕೊಳ್ಳುವುದಾಗಿ ಎಚ್ಚರಿಕೆ ನೀಡಿತ್ತು. ರೈತರ ಪ್ರತಿಭಟನೆ ಕುರಿತಾಗಿ ಮಾಹಿತಿ ಹರಡುವ ಪೋಸ್ಟ್‌ಗಳು, ಕೋವಿಡ್‌ ನಿರ್ವಹಣೆಯಲ್ಲಿ ಸರ್ಕಾರವನ್ನು ಟೀಕಿಸಿರುವ ಪೋಸ್ಟ್‌ಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೇಂದ್ರ ಸರ್ಕಾರವು ಟ್ವಿಟರ್‌ ಮೇಲೆ ಒತ್ತಡ ಹೇರುತ್ತಿದೆ.

ಟ್ವಿಟರ್ ಸೇರಿದಂತೆ ಸಾಮಾಜಿಕ ಮಾಧ್ಯಮ ದಿಗ್ಗಜ ಸಂಸ್ಥೆಗಳು ಪೋಸ್ಟ್‌ಗಳನ್ನು ಅಳಿಸುವ ಮನವಿಗೆ ಕಾನೂನಾತ್ಮಕವಾಗಿ ಬದ್ಧರಾಗಿದ್ದರೂ ಅದನ್ನು ಪಾಲಿಸಿಲ್ಲ ಎಂದು ಈ ಹಿಂದೆ ಸರ್ಕಾರ ಹೇಳಿತ್ತು. ಕೆಲವು ಆದೇಶಗಳನ್ನು ಸರಿಯಾಗಿ ಪಾಲಿಸದೆ ಇದ್ದರೆ ಕ್ರಮ ಜರುಗಿಸಬೇಕಾಗುತ್ತದೆ ಎಂದು ಕಳೆದ ತಿಂಗಳು ಟ್ವಿಟರ್‌ಗೆ ಮಾಹಿತಿ ಮತ್ತು ತಂತ್ರಜ್ಞಾನ ಸಚಿವಾಲಯ ಎಚ್ಚರಿಕೆ ನೀಡಿತ್ತು.

ಇದಕ್ಕೆ ಕೇಂದ್ರ ಸರ್ಕಾರದ ವಿರುದ್ಧ ಕರ್ನಾಟಕ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿರುವ ಟ್ವಿಟರ್ ಸಂಸ್ಥೆ, “ಕೆಲ ವಿಷಯಗಳನ್ನು ನಿರ್ಬಂಧಿಸುವ ಬಗ್ಗೆ ಸೆಕ್ಷನ್ 69 `ಎ' ಅಡಿ ಐಟಿ ಸಚಿವಾಲಯ ಹೊರಡಿಸಿದ ಆದೇಶ ಅನ್ವಯವಾಗುವುದಿಲ್ಲ” ಎಂದು ಟ್ವಿಟರ್ ಸರ್ಕಾರದ ಆದೇಶದ ವಿರುದ್ಧ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ. ಸೆಕ್ಷನ್ 69 `ಎ' ಅಡಿ ನಿರ್ಬಂಧಿಸುವುದಾಗಿ ಹೇಳುವ ಸರ್ಕಾರ, ಅದು ಹೇಗೆ ಅಥವಾ ಯಾವ ವಿಷಯದಲ್ಲಿ ಉಲ್ಲಂಘನೆಯಾಗಿದೆ ಎಂದು ಆದೇಶದಲ್ಲಿ ತಿಳಿಸಿಲ್ಲ ಎಂದು ಟ್ವಿಟರ್ ಆರೋಪಿಸಿದೆ.

ರಾಷ್ಟ್ರೀಯ ಭದ್ರತೆಯ ಹಿತಾಸಕ್ತಿ ಮತ್ತು ಇತರೆ ಕಾರಣಗಳಿಂದ ಕೆಲ ಅಂಶಗಳಿಗೆ ಪ್ರವೇಶ ನಿರ್ಬಂಧಿಸುವ ಹಕ್ಕನ್ನು ಸರ್ಕಾರಕ್ಕೆ ಐಟಿ ಕಾಯ್ದೆ ಒದಗಿಸಿದೆ.‌‌

ಈ ಸುದ್ದಿ ಓದಿದ್ದೀರಾ? : ಬಾಹ್ಯಾಕಾಶ ಸಮರ | ಚಂದ್ರನ ಮೇಲೆ ಸೇನೆ ಕಟ್ಟುತ್ತಿದೆಯೇ ಚೀನಾ? ಎಚ್ಚರಿಕೆ ನೀಡಿದ ನಾಸಾ

ಆದರೆ, ಕೆಲವು ರಾಜಕೀಯ ವಿಷಯಗಳು ರಾಜಕೀಯ ಪಕ್ಷಗಳ ಅಧಿಕೃತ ಖಾತೆಗಳಿಂದ ಪೋಸ್ಟ್ ಆಗಿರುತ್ತವೆ. ಇವುಗಳನ್ನು ಬ್ಲಾಕ್ ಮಾಡುವುದು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಉಲ್ಲಂಘಿಸಿದಂತೆ ಆಗುತ್ತದೆ ಎಂದು ಟ್ವಿಟರ್ ಹೇಳಿದೆ. 

ಹೊಸ ಐಟಿ ನಿಯಮ 2021 ಅನ್ನು ಅನುಸರಿಸದಿರುವ ಬಗ್ಗೆ ಕೇಂದ್ರ ಸರ್ಕಾರ ದೆಹಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು. ಜೂನ್‌ನಲ್ಲಿ ಹೊರಡಿಸಿದ್ದ ಆದೇಶವನ್ನು ಪಾಲಿಸದಿದ್ದರೆ ಕಠಿಣ ಕ್ರಮ ತೆಗೆದುಕೊಳ್ಳುವುದಾಗಿ ಮಾಹಿತಿ ತಂತ್ರಜ್ಞಾನ ಸಚಿವಾಲಯವು ಟ್ವಿಟರ್‌ಗೆ ಎಚ್ಚರಿಕೆ ನೀಡಿದೆ. 

ನಿಮಗೆ ಏನು ಅನ್ನಿಸ್ತು?
0 ವೋಟ್