ಬೆಂಗಳೂರಿನ ಮಹಿಳೆಯರ ಭದ್ರತೆಗಾಗಿ ಸುರಕ್ಷಾ ಆ್ಯಪ್

suraksha app
  • ಬೆಂಗಳೂರಿನ ಮಹಿಳೆಯರ ಭದ್ರತೆಗೆ ಆ್ಯಪ್
  • ಹೆಣ್ಣು ಮಕ್ಕಳ ರಕ್ಷಣೆಗೆ ವಿಶೇಷ ಸುರಕ್ಷಾ ಸಾಧನ

ರಾತ್ರಿ ಸಮಯದಲ್ಲಿ ಕೆಲಸ ಅಥವಾ ಅನಿವಾರ್ಯ ಕಾರಣಗಳ ನಿಮಿತ್ತ ನಗರದಲ್ಲಿ ಸಂಚರಿಸುವ ಮಹಿಳೆಯರ ಭದ್ರತೆಗಾಗಿ ಬೆಂಗಳೂರು ಪೊಲೀಸರು ಹೊಸ ಅಪ್ಲಿಕೇಶನ್‌ ಪರಿಚಯಿಸಿದ್ದಾರೆ. ಮಹಾನಗರದಲ್ಲಿ ಮಹಿಳೆಯರಿಗೆ ಭದ್ರತೆ ಒದಗಿಸುವ ಪ್ರಮುಖ ಗುರಿಯಲ್ಲಿ ಪೊಲೀಸ್‌ ಇಲಾಖೆ ವಿಶೇಷವಾಗಿ ʼಸುರಕ್ಷಾʼ ಅಪ್ಲಿಕೇಶನ್‌ ಅಭಿವೃದ್ಧಿಪಡಿಸಿದೆ.

ಏನಿದು ಸುರಕ್ಷಾ ಅಪ್ಲಿಕೇಶನ್? 

ವಿಶೇಷ ತಂತ್ರಜ್ಞಾನ ಬಳಸಿ ಸಿದ್ಧಪಡಿಸಿರುವ ಸುರಕ್ಷಾ ಅಪ್ಲಿಕೇಶನ್‌ನ ಮೂಲ ಉದ್ದೇಶ ಮಹಿಳೆಯರ ಭದ್ರತೆ. ಮಹಿಳೆಯರು ಯಾವುದೇ ರೀತಿಯ ದಾಳಿ ಅಥವಾ ಸಂಕಷ್ಟಕ್ಕೆ ಒಳಗಾದಾಗ ಸ್ಥಳೀಯ ಪೊಲೀಸರು ಮತ್ತು ಆತ್ಮೀಯರಿಂದ ತುರ್ತು ಸಹಾಯ ಪಡೆಯಲು ಈ ಅಪ್ಲಿಕೇಶನ್ ಸಹಕಾರಿ.  

ಅಪ್ಲಿಕೇಶನ್‌ ಬಳಸುವ ವಿಧಾನ

ಆ್ಯಂಡ್ರಾಯ್ಡ್ ಮತ್ತು ಐಒಎಸ್ ಮೊಬೈಲ್‌ಗಳಲ್ಲಿ ಸುರಕ್ಷಾ ಅಪ್ಲಿಕೇಶನ್ ಉಚಿತವಾಗಿ ಲಭ್ಯವಿದೆ. ಗೂಗಲ್‌ ಪ್ಲೇ ಸ್ಟೋರ್ ಅಥವಾ ಆ್ಯಪಲ್‌ ಸ್ಟೋರ್‌ನಿಂದ ಈ ಅಪ್ಲಿಕೇಶನ್ ಡೌನ್‌ಲೋಡ್‌ ಮಾಡಿಕೊಳ್ಳಬಹುದು. ನಿಮ್ಮ ಇ- ಮೇಲ್‌ ಮೂಲಕ ಅಪ್ಲಿಕೇಶನ್‌ಗೆ ಲಾಗ್‌ ಇನ್‌ ಆಗಿ, ಅಪ್ಲಿಕೇಶನ್‌ ಒಳಹೊಕ್ಕ ಬಳಿಕ ಕೇಳಲಾಗುವ ಎಲ್ಲಾ ಮಾಹಿತಿಗಳನ್ನು ಒದಗಿಸಿ. ನಂತರ  ಜಿಪಿಎಸ್ ಲೊಕೇಶನ್‌ ಆನ್‌ ಮಾಡಿ ನೀವಿರುವ ಸ್ಥಳದ ಮಾಹಿತಿ ನೀಡಿ. ತುರ್ತು ಸಮಯದಲ್ಲಿ ಮಾತ್ರ ಈ ಅಪ್ಲಿಕೇಶನ್‌ ಬಳಸಿ.

ಸುರಕ್ಷಾ ಅಪ್ಲಿಕೇಶನ್‌ ಬಳಕೆ ಹೇಗೆ?

ತುರ್ತು ಸಂದರ್ಭದಲ್ಲಿ ನಿಮ್ಮ ಮೊಬೈಲ್‌ನಲ್ಲಿರುವ ಸುರಕ್ಷಾ ಅಪ್ಲಿಕೇಶನ್‌ ತೆರೆದು ಪವರ್‌ ಬಟನ್‌ ಒತ್ತಿ ಹಿಡಿದರೆ ಸಾಕು. ಕೇವಲ ಮೂರು ನಿಮಿಷದಲ್ಲಿ ನೀವಿರುವ ಸ್ಥಳಕ್ಕೆ ಹತ್ತಿರದ ಪೊಲೀಸ್‌ ಠಾಣೆಯ ಸಹಾಯವಾಣಿಗೆ ಕರೆ ಹೋಗುತ್ತದೆ. ಅಷ್ಟೇ ಅಲ್ಲ, ಸಂಕಷ್ಟದಲ್ಲಿರುವ ಬಳಕೆದಾರರ ಸ್ಥಳದ ಗುರುತು, ಆಡಿಯೋ ಮತ್ತು ವೀಡಿಯೋ ಕೂಡ ರವಾನೆಯಾಗುತ್ತದೆ. ಸುರಕ್ಷಾ ಅಪ್ಲಿಕೇಶನ್‌ ಮೂಲಕ ಲಭ್ಯವಾಗುವ  ಈ ಮಾಹಿತಿಗಳನ್ನು ಆಧರಿಸಿ ಸ್ಥಳೀಯ ಪೊಲೀಸರು ಅಥವಾ ಕುಟುಂಬಸ್ಥರು ಕಷ್ಟದಲ್ಲಿ ಸಿಲುಕಿರುವ ಮಹಿಳೆಯರಿಗೆ ನೆರವು ನೀಡುವುದು ಸುಲಭವಾಗುತ್ತದೆ.

ನಿಮಗೆ ಏನು ಅನ್ನಿಸ್ತು?
1 ವೋಟ್