ವಿರಾಜಪೇಟೆ | ದಲಿತರ ಹತ್ಯೆ ಖಂಡಿಸಿ ದಸಂಸ ತಮಟೆ ಚಳುವಳಿ

Virajapet
  • ರಾಜಸ್ಥಾನದಲ್ಲಿ ನಡೆದ ದಲಿತರ ಹತ್ಯೆಗೆ ಖಂಡನೆ
  • ‘ಸ್ವಾತಂತ್ರ್ಯ ಸಿಕ್ಕಿರುವುದು ದೇಶಕ್ಕೆ ಮಾತ್ರ ದಲಿತರಿಗಲ್ಲ’

ರಾಜಸ್ಥಾನದಲ್ಲಿ ನಡೆದ ದಲಿತ ವಿದ್ಯಾರ್ಥಿ ಹಾಗೂ ದಲಿತ ಶಿಕ್ಷಕಿಯ ಅಮಾನುಷ ಹತ್ಯೆಯನ್ನು ಖಂಡಿಸಿ ಕೊಡಗು ಜಿಲ್ಲೆಯ ಗೋಣಿಕೊಪ್ಪಲಿನ ಎಪಿಎಂಸಿ ಮಾರುಕಟ್ಟೆಯ ಮುಂಭಾಗ ದಲಿತ ಸಂಘರ್ಷ ಸಮಿತಿ (ದಸಂಸ) ತಮಟೆ ಚಳುವಳಿ ನಡೆಸಿದೆ.

ವಿರಾಜಪೇಟೆ ಮುಖ್ಯ ರಸ್ತೆಯಿಂದ ಪಾದಯಾತ್ರೆ ಮೂಲಕ ತಮಟೆ ಬಾರಿಸುತ್ತಾ ದಲಿತರ ಮೇಲೆ ದೌರ್ಜನ್ಯ ಎಸಗಿದವರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಪರಾಧಿಗಳನ್ನು ತಕ್ಷಣ ಗಲ್ಲಿಗೇರಿಸುವಂತೆ ಆಗ್ರಹಿಸಿದ್ದಾರೆ.

ಈ ಬಗ್ಗೆ ಈದಿನ.ಕಾಮ್ ಜೊತೆ ಮಾತನಾಡಿದ ಸಂಚಾಲಕ ಹೆಚ್.ಆರ್ ಪರಶುರಾಮ್, ”ದೇಶ ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಿಸುತ್ತಿದೆ. ಇದೇ ವೇಳೆ ರಾಜಸ್ಥಾನದಲ್ಲಿ ನೀರು ಕುಡಿದ ಎಂಬ ಕ್ಲುಲ್ಲಕ ಕಾರಣಕ್ಕೆ ದಲಿತ ಬಾಲಕನನ್ನು ಮೇಲ್ವರ್ಗದ ಶಿಕ್ಷಕ ಧಳಿಸಿ ಕೊಂದಿದ್ದಾನೆ. ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದೆ, ಆದರೆ ದಲಿತರಿಗಲ್ಲ. ಕುಡಿಯುವ ನೀರು ಮುಟ್ಟಿದರೆ ನಿಷ್ಕರುಣಿಗಳಾಗಿ ಕೊಲ್ಲುವ ಹಂತಕ್ಕೆ ಹೋಗುತ್ತಾರೆ ಅಂದರೆ ಎಲ್ಲಿದೆ ಸ್ವಾತಂತ್ರ್ಯ?” ಎಂದು ವಿಷಾದ ವ್ಯಕ್ತಪಡಿಸಿದರು.

ಈ ಸುದ್ದಿ ಓದಿದ್ದೀರಾ?: ಬೆಂಗಳೂರು | ಬಿಲ್ಕಿಸ್ ಬಾನು ಅತ್ಯಾಚಾರ ಅಪರಾಧಿಗಳ ಬಿಡುಗಡೆ, ದಲಿತ ಬಾಲಕನ ಹತ್ಯೆ ಖಂಡಿಸಿ ಪ್ರತಿಭಟನೆ

ಈದಿನ.ಕಾಮ್‌ ಜೊತೆ ಮಾತನಾಡಿದ ದಸಂಸ ಹಿರಿಯ ಮುಖಂಡ ಕೃಷ್ಣಪ್ಪ, “ರಾಜಸ್ಥಾನದಲ್ಲಿ ದಲಿತ ಶಿಕ್ಷಕಿ ತಾನು ಕೊಟ್ಟ ಸಾಲವನ್ನು ವಾಪಸ್ಸು ಕೇಳಿದಕ್ಕೆ ಬೆಂಕಿ ಹಚ್ಚಿ ಹತ್ಯೆ ಮಾಡಿದ್ದಾರೆ. ಈ ಸಮಾಜಕ್ಕೆ ಏನಾಗಿದೆ ತಿಳಿಯುತ್ತಿಲ್ಲ. ದಲಿತರು ಸಾಲ ಕೊಡಬೇಕು ಆದರೆ, ಕೊಟ್ಟ ಸಾಲ ವಾಪಾಸ್ಸು ಕೇಳಬಾರದು. ಇದು ಯಾವ ನ್ಯಾಯ? ಒಂದು ವೇಳೆ ಕೇಳಿದರೆ ಪ್ರಾಣಕ್ಕೆ ಸಂಚಕಾರ ಬರುವ ಸ್ಥಿತಿ ನಿರ್ಮಾಣವಾಗಿದೆ” ಎಂದರು.

“ಇಡೀ ದೇಶದಲ್ಲಿ ದಲಿತರ ಮೇಲೆ ವಿನಾಕಾರಣ ಯಾವುದಾದರೂ ಒಂದು ವಿಚಾರ ಮುಂದಿಟ್ಟು ಶೋಷಣೆ ಅಥವಾ ಹತ್ಯೆ ಮಾಡುತ್ತಿದ್ದಾರೆ. ರಕ್ಷಣೆ ನೀಡಬೇಕಾದ ಸರ್ಕಾರ, ಕಾನೂನು, ಇಲಾಖೆಗಳು ಕೈಕಟ್ಟಿ ಕುಳಿತಿವೆ. ಹೀಗಾದರೆ ದೇಶದಲ್ಲಿ ದಲಿತರು ಬದುಕುವುದಾದರೂ ಹೇಗೆ?. ದಲಿತರನ್ನು ಹತ್ಯೆ ಮಾಡಿದ ಕಿಡಿಗೇಡಿಗಳಿಗೆ ನ್ಯಾಯಾಲಯದಲ್ಲಿ ಕಠಿಣ ಶಿಕ್ಷೆಯಾಗಬೇಕು” ಎಂದು ಹೇಳಿದ್ದಾರೆ.

Image
Virajapet
ದಸಂಸದಿಂದ ಹತ್ಯೆ ಖಂಡಿಸಿ ತಮಟೆ ಹೊಡೆದು ಪಾದಯಾತ್ರೆ

ಹಿರಿಯ ದಸಂಸ ನಾಯಕ ಗೋವಿಂದಪ್ಪ ಈದಿನ.ಕಾಮ್‌ ಜೊತೆ ಮಾತನಾಡಿ ” ದೇಶದಲ್ಲಿ ದಲಿತರನ್ನು ಎರಡನೇ ದರ್ಜೆ ಪ್ರಜೆಗಳಾಗಿ ಕಾಣಲಾಗುತ್ತಿದೆ. ದಲಿತರನ್ನು ಕೋಳಿ-ಕುರಿ ಕೊಲ್ಲುವಂತೆ ಅಮಾನವೀಯವಾಗಿ ಕೊಂದರೂ ಸರ್ಕಾರಗಳು ಕಣ್ಣು ಮುಚ್ಚಿ ಕುಳಿತಿವೆ. ಮತ ಓಲೈಕೆಗಾಗಿ ಮಾತ್ರ ನಾವು ದಲಿತರ ಪರ ಇದ್ದೇವೆ ಎನ್ನುತ್ತಾರೆ” ಎಂದು ಜನಪ್ರತಿನಿಧಿಗಳ ವಿರುದ್ದ ಕಿಡಿಕಾರಿದ್ದಾರೆ.

“ದಲಿತರ ಹತ್ಯೆಗಳು ಸಾಲು ಸಾಲಾಗಿ ನಡೆದರೂ ಸರ್ಕಾರಗಳು ಕಠಿಣ ಕಾನೂನುಗಳನ್ನು ರೂಪಿಸುತ್ತಿಲ್ಲ. ಇಂತಹ ಕ್ರೂರಿಗಳಿಗೆ ಮರಣ ದಂಡನೆ ವಿಧಿಸಬೇಕು. ಕರ್ನಾಟಕದಲ್ಲೂ ದಲಿತರ ರಕ್ಷಣೆಗೆ ವಿಶೇಷ ಕಾನೂನುಗಳನ್ನು ರೂಪಿಸಿ ದಲಿತ ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಪ್ರಯತ್ನ ಮಾಡಬೇಕು “ ಎಂದು ದಸಂಸ ನಾಯಕ ಹಾಗೂ ವಕೀಲ ಸುನೀಲ್ ಈದಿನ.ಕಾಮ್‌ಗೆ ಹೇಳಿದ್ದಾರೆ.

Image
Virajapet
ಗೋಣಿಕೊಪ್ಪಲು ವೃತ್ತ ನಿರೀಕ್ಷಕರಿಗೆ ಮನವಿ ಪತ್ರ ಸಲ್ಲಿಕೆ

“ಬಿಲ್ಕಿಸ್ ಭಾನು ಅತ್ಯಾಚಾರ ಮಾಡಿದ ಆರೋಪಿಗಳನ್ನು ಸನ್ನಡತೆಯ ಆಧಾರದ ಮೇಲೆ ಮೇಲೆ ಸರ್ಕಾರ ಜೈಲಿನಿಂದ ಬಿಡುಗಡೆ ಮಾಡಿರುವುದನ್ನು ದಸಂಸ ಒಕ್ಕೊರಲಿನಿಂದ ಖಂಡಿಸುತ್ತದೆ. ಅತ್ಯಾಚಾರಿಗಳನ್ನು ಬಿಡುಗಡೆ ಮಾಡಿರುವುದು ಮಹಿಳಾ ಕುಲಕ್ಕೆ ಮಾಡಿದ ಅಪಮಾನ. ಇಂತಹ ಘಟನೆಗಳು ನಡೆಯದಂತೆ ಸರ್ಕಾರಗಳು ಕ್ರಮವಹಿಸಬೇಕು” ಎಂದು ಸುನೀಲ್ ಹೇಳಿದ್ದಾರೆ.

ದಸಂಸ ನೀಡಿದ ಹಕ್ಕೊತ್ತಾಯ ಪತ್ರವನ್ನು ಸ್ವೀಕರಿಸಿದ ಗೋಣಿಕೊಪ್ಪಲು ವೃತ್ತ ನಿರೀಕ್ಷಕ ಗೋವಿಂದರಾಜು, “ಮನವಿ ಪತ್ರವನ್ನು ಸರ್ಕಾರಕ್ಕೆ ತಲುಪಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು” ಎಂದರು.

ಪ್ರತಿಭಟನೆಯಲ್ಲಿ ರಜನಿಕಾಂತ್, ಪೊನ್ನಂಪೇಟೆ ಗಿರೀಶ್, ಹೆಚ್ ಏನ್ ಕುಮಾರ್ ಮಹದೇವ್ ಸೇರಿದಂತೆ ನೂರಾರು ಕಾರ್ಯಕರ್ತರು ಭಾಗವಹಿಸಿದ್ದಾರೆ.

ಮಾಸ್‌ ಮೀಡಿಯಾ ಮೈಸೂರು ವಲಯ ಸಂಯೋಜಕ ಮೋಹನ್‌ ಮಾಹಿತಿ ಆಧರಿಸಿದ ವರದಿ
ನಿಮಗೆ ಏನು ಅನ್ನಿಸ್ತು?
1 ವೋಟ್