15‌ ಸಾವಿರದ ಗಡಿ ದಾಟಿದ ಸೋಂಕಿತರು; ಲಸಿಕೆಯಿಂದ ಸಾವುಗಳ ಪ್ರಮಾಣದಲ್ಲಿ ಇಳಿಕೆ

Covid
  • ಜಾಗತಿಕವಾಗಿ ನಿರಂತರ ಏರಿಕೆ ಕಾಣುತ್ತಿರುವ ಕೋವಿಡ್‌ ಸೋಂಕು
  • ಕೇಂದ್ರ ಆರೋಗ್ಯ ಸಚಿವಾಲಯದಿಂದ ಬಿಗಿ ಕ್ರಮಗಳ ಮುನ್ಸೂಚನೆ

ಕೊರೊನಾ ಸೋಂಕಿತರ ಪ್ರಮಾಣ ಕಳೆದ ಹತ್ತು ದಿನಗಳಿಂದ ಏರುತ್ತಲೇ ಇದೆ. ಈ ಮಧ್ಯೆ, 2021ರಲ್ಲಿ ದೇಶದಲ್ಲಿ ಸಂಭವಿಸಬಹುದಾಗಿದ್ದ 42 ಲಕ್ಷ ಸಾವುಗಳನ್ನು ಕೋವಿಡ್ 19 ವ್ಯಾಕ್ಸಿನ್ ತಡೆದಿದೆ ಎಂದು ವರದಿಯೊಂದು ಹೇಳಿದೆ.

ಕಳೆದ ಹತ್ತು ದಿನಗಳಿಂದ ಭಾರತದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 13,000ದಿಂದ 17,000ವರೆಗೂ ಏರಿಕೆಯಾಗಿದೆ. ಕಳೆದ 24 ಗಂಟೆಗಳಲ್ಲಿ ದಾಖಲಾಗಿರುವ ಹೊಸ ಪ್ರಕರಣಗಳು 15,940. ಇದುವರೆಗೆ, ಕೊರೊನಾ ಸೋಂಕಿಗೆ ಒಳಗಾದವರ ಒಟ್ಟು ಸಂಖ್ಯೆ 4,33,78,234. ಸಕ್ರಿಯ ಪ್ರಕರಣಗಳ ಸಂಖ್ಯೆ 91,779ಕ್ಕೆ ಏರಿಕೆಯಾಗಿದೆ. ಇಂದು (ಜೂನ್‌ 25) ಸೋಂಕಿನಿಂದ 20 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಕೋವಿಡ್ 19 ಸೋಂಕಿನಿಂದ ಇದುವರೆಗೂ ಪ್ರಾಣ ಕಳೆದುಕೊಂಡವರ ಒಟ್ಟು ಸಂಖ್ಯೆ 5,24,974.

ದೇಶದಲ್ಲಿ ಈವರೆಗೂ 1.96 ಕೋಟಿಗೂ ಅಧಿಕ ಡೋಸ್ ಲಸಿಕೆ ಹಾಕಲಾಗಿದೆ. ಹೀಗಿದ್ದರೂ, ಪ್ರತೀ ದಿನ ಸೋಂಕಿತರ ಸಂಖ್ಯೆ ಏರುತ್ತಲೇ ಇದೆ. ಮಹಾರಾಷ್ಟ್ರ, ಕೇರಳ, ದೆಹಲಿ, ತಮಿಳುನಾಡು, ಹರಿಯಾಣ, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ ಹಾಗೂ ಗುಜರಾತ್ ಸೇರಿ ಹತ್ತು ರಾಜ್ಯಗಳಲ್ಲಿ ಪ್ರತೀ ದಿನ ಒಂದು ಸಾವಿರಕ್ಕೂ ಹೆಚ್ಚು ಸಕ್ರಿಯ ಪ್ರಕರಣಗಳು ದಾಖಲಾಗುತ್ತಿವೆ. ಪ್ರಕರಣಗಳ ಸಂಖ್ಯೆ ಏರುತ್ತಿರುವ ಪ್ರಮಾಣ ಶೇಕಡ 3.94.

ಮೊದಲನೇ ಡೋಸ್‌, ಎರಡನೇ ಡೋಸ್‌ ಹಾಗೂ ಬೂಸ್ಟರ್ ಡೋಸ್ ಸೇರಿ ಭಾರತದಲ್ಲಿ ಪ್ರತೀ ದಿನ 13 ಲಕ್ಷಕ್ಕೂ ಅಧಿಕ ಲಸಿಕೆಯನ್ನು ಹಾಕಲಾಗುತ್ತಿದೆ. ಹೀಗಿದ್ದರೂ, ಕೋವಿಡ್ 19ರ ಉಪತಳಿ ವೈರಸ್‌ಗಳು ಜನರನ್ನು ಕಾಡುತ್ತಲೇ ಇವೆ. ಸೋಂಕಿತರ ಪ್ರಮಾಣ ದಿನದಿಂದ ದಿನಕ್ಕೆ ಏರುತ್ತಿದೆ. ಹಾಗಿದ್ದರೆ ಲಸಿಕೆ ಜನರನ್ನು ರಕ್ಷಿಸುತ್ತಿಲ್ಲವೇ ಎಂಬ ಪ್ರಶ್ನೆ ಕೇಳಿಬರುತ್ತಿದೆ. ಜುಲೈ ತಿಂಗಳಷ್ಟರಲ್ಲಿ ಕೊರೊನಾದ ನಾಲ್ಕನೇ ಅಲೆ ಆರಂಭವಾಗುವ ಬಗ್ಗೆ ಆತಂಕಗಳಿದ್ದವು. ಸದ್ಯ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವುದು ನಾಲ್ಕನೆಯ ಅಲೆಯ ಮುನ್ಸೂಚನೆಯೂ ಆಗಿರಬಹುದು ಎಂಬುದು ತಜ್ಞರ ಎಚ್ಚರಿಕೆ.

 42 ಲಕ್ಷ ಜನರ ಪ್ರಾಣ ಉಳಿಸಿದ ಕೋವಿಡ್‌ 19 ಲಸಿಕೆ: ಅಧ್ಯಯನ ವರದಿ

vaccine

2021ರಲ್ಲಿ ದೇಶದಲ್ಲಿ ಸಂಭವಿಸಬಹುದಾಗಿದ್ದ 42 ಲಕ್ಷ ಸಾವುಗಳನ್ನು ಕೋವಿಡ್ ವ್ಯಾಕ್ಸಿನ್ ತಪ್ಪಿಸಿದೆ ಎಂದು ವರದಿಯೊಂದು ಹೇಳಿದೆ. 'ದಿ ಲ್ಯಾನ್ಸೆಟ್ʼ ಸಾಂಕ್ರಾಮಿಕ ರೋಗಗಳ ಜರ್ನಲ್, ಕೋವಿಡ್ 19 ಲಸಿಕೆ ನೀಡಿಕೆಯ ನಂತರ ಸಾಂಕ್ರಾಮಿಕದ ಸಮಯದಲ್ಲಿ ಆದ ಹೆಚ್ಚುವರಿ ಸಾವುಗಳನ್ನು ಆಧರಿಸಿದ ಅಧ್ಯಯನವನ್ನು ಉಲ್ಲೇಖಿಸಿ ಈ ವರದಿ ಮಾಡಿದೆ.

“ಮೊದಲ ವರ್ಷ (2021) ಸಾವಿನ ಪ್ರಮಾಣ ಹೆಚ್ಚಿದ್ದ 185 ದೇಶಗಳಲ್ಲಿ ಪ್ರಾಂತ್ಯವಾರು ಲಸಿಕಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಲಸಿಕೆಯಿಂದ 31.4 ಮಿಲಿಯನ್ ಸಂಭವನೀಯ ಸಾವುಗಳಲ್ಲಿ 19.8 ಮಿಲಿಯನ್ ಸಾವುಗಳನ್ನು ತಡೆಯಲಾಗಿತ್ತು. ವಿಶ್ವ ಆರೋಗ್ಯ ಸಂಸ್ಥೆಯ ಗುರಿಯಂತೆ, 2021ರ ಅಂತ್ಯದ ವೇಳೆಗೆ ಪ್ರತೀ ದೇಶದಲ್ಲಿ ಶೇಕಡ 40ರಷ್ಟು ಮೊದಲ ಅಥವಾ ಎರಡನೇ ಡೋಸ್ ನೀಡಿದ್ದರೆ, ಇನ್ನೂ 5,99,300 ಜೀವಗಳನ್ನು ಉಳಿಸಬಹುದಿತ್ತು,” ಎಂದಿದ್ದಾರೆ ಸಂಶೋಧಕರು.

2020ರ ಡಿಸೆಂಬರ್‌ನಿಂದ 2021ರ ಡಿಸೆಂಬರ್‌ವರೆಗೆ ನೀಡಲಾದ ವ್ಯಾಕ್ಸಿನ್‌ನಿಂದ ಭಾರತದಲ್ಲಿ 42,10,000 ಸಾವುಗಳನ್ನು ತಪ್ಪಿಸಲಾಗಿದೆ ಎನ್ನಲಾಗಿದೆ. ತಜ್ಞರು ಈ ಪ್ರಮಾಣವನ್ನು 36,65,000ದಿಂದ 43,70,000 ಎಂದು ಅಂದಾಜಿಸಿದ್ದರು.

ಇನ್ನು, ತಜ್ಞರು ಅಂದಾಜಿಸಿದ ಸಾವುಗಳ ಪ್ರಮಾಣವು ಭಾರತದಲ್ಲಿ ದಾಖಲಾದ ಸಾವಿನ ಸಂಖ್ಯೆಯ ಹತ್ತು ಪಟ್ಟು ಹೆಚ್ಚಿದೆ. ತಜ್ಞರು 51,60,000 ಸಾವುಗಳನ್ನು ಅಂದಾಜಿಸಿದ್ದರು. ಆದರೆ, ಭಾರತದಲ್ಲಿ ದಾಖಲಾದ ಸಾವುಗಳ ಸಂಖ್ಯೆ 5,24,941 (ಕೇಂದ್ರ ಸರ್ಕಾರದ ಪ್ರತಿಪಾದನೆಯ ಪ್ರಕಾರ).

ಭಾರತದಲ್ಲಿ 2021ರ ಮೇ ವೇಳೆಗೆ 2.3 ಮಿಲಿಯನ್ ಜನ ಕೋವಿಡ್‌ಗೆ ಬಲಿಯಾಗಿದ್ದಾರೆಂದು ʼದಿ ಎಕನಾಮಿಸ್ಟ್ʼ ಅಂದಾಜಿಸಿತ್ತು. ಇದು ಸಹ ಅಧಿಕೃತ ಅಂಕಿ-ಅಂಶಗಳಿಗೆ ಹೋಲಿಕೆಯಾಗುವುದಿಲ್ಲ. ವಿಶ್ವ ಆರೋಗ್ಯ ಸಂಸ್ಥೆ, ಕಳೆದ ತಿಂಗಳು ಭಾರತದಲ್ಲಿ ಕೋವಿಡ್ 19ಗೆ ಸಂಬಂಧಿಸಿದಂತೆ 4.7 ಮಿಲಿಯನ್ ಸಾವುಗಳು ಸಂಭವಿಸಿವೆ ಎಂದಿತ್ತು. ಈ ಹೇಳಿಕೆಯನ್ನು ಭಾರತ ಸರ್ಕಾರ ತಳ್ಳಿಹಾಕಿತ್ತು.

ಈ ಲೇಖನ ಓದಿದ್ದೀರಾ?: ಕೊರೊನಾ ಸಾವಿನ ರಾಜಕೀಯ; ಸಮರ್ಥನೆಗೆ ತಪ್ಪು ಅಂಕಿ-ಅಂಶ ಬಳಸಿದ ಕೇಂದ್ರ ಸರ್ಕಾರ

“ಆರ್ಥಿಕವಾಗಿ ಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲಿ 2021ರ ಮೊದಲಾರ್ಧದಲ್ಲಿ ಲಸಿಕೆಯಿಂದ ಹೆಚ್ಚಿನ ಸಂಖ್ಯೆಯ ಸಾವುಗಳನ್ನು ತಡೆಯಲಾಗಿದೆ. ಲಸಿಕೆ ಡೆಲ್ಟಾ ವೈರಸ್ ಸಾಂಕ್ರಾಮಿಕದ ಪರಿಣಾಮವನ್ನು ತಡೆಯಲು ಸಹಕಾರಿಯಾಯಿತು. 2021ರ ದ್ವಿತೀಯಾರ್ಧದಲ್ಲಿ ಶ್ರೀಮಂತ ದೇಶಗಳಲ್ಲಿ ವೈರಸ್‌ ಪ್ರಭಾವ ಹೆಚ್ಚಾಗಿತ್ತು. ಜಾಗತಿಕವಾಗಿ ಶೇಕಡ 40ರಷ್ಟು ಲಸಿಕೆ ನೀಡಬೇಕು ಎಂದಿದ್ದ ವಿಶ್ವ ಆರೋಗ್ಯ ಸಂಸ್ಥೆಯ ಗುರಿಯನ್ನು ತಲುಪುವಲ್ಲಿ ಉಂಟಾದ ಕೊರತೆ 5,99,300 ಹೆಚ್ಚುವರಿ ಕೋವಿಡ್ ಸಾವುಗಳಿಗೆ ಕಾರಣವಾಯಿತು. ಕೆಳ ಮಧ್ಯಮ ವರ್ಗದ ದೇಶಗಳಲ್ಲಿ ಸಾವುಗಳ ಪ್ರಮಾಣ ಹೆಚ್ಚಾಯಿತು,” ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

"ಈ ಅಧ್ಯಯನವನ್ನು ಗಣಿತದ ಮಾದರಿ ಬಳಸಿ ಮಾಡಿದ್ದರಿಂದ, ಹಲವು ಅಗತ್ಯ ಮಾಹಿತಿಗೆ ಅಂದಾಜನ್ನು ಅವಲಂಬಿಸಬೇಕಿತ್ತು. ಅಂದರೆ, ಯಾವ ದೇಶದಲ್ಲಿ ಯಾವ ಪ್ರಕಾರದ ಲಸಿಕೆ ನೀಡಲಾಗಿತ್ತು, ಹೇಗೆ ವಿತರಿಸಲಾಗಿತ್ತು ಮತ್ತು ಯಾವ ಅವಧಿಯಲ್ಲಿ ಯಾವ ಹೊಸ ವೈರಸ್ ರೂಪಾಂತರಗಳಿದ್ದವು ಎನ್ನುವಂತಹ ಅಂಶಗಳು ಅಂದಾಜು ಮಾತ್ರ," ಎಂದು ಸಂಶೋಧಕರು ತಮಗಿದ್ದ ಹಲವು ಮಿತಿಗಳನ್ನು ವಿವರಿಸಿದ್ದಾರೆ.

ವಿವಿಧ ಮೂಲಗಳಿಂದ
ನಿಮಗೆ ಏನು ಅನ್ನಿಸ್ತು?
0 ವೋಟ್
eedina app