ಒಲೆ ಮುಂದೆ ಬೆಂದವರ ಒಡಲ ಸಂಕಟ | ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಬಿಸಿಯೂಟ ನೌಕರರ ಪ್ರತಿಭಟನೆ

Midday Meals
 • ಏಕಾಏಕಿ ಕೆಲಸದಿಂದ ಕೈಬಿಟ್ಟಿರುವ ಸರ್ಕಾರದ ವಿರುದ್ಧ ಬಿಸಿಯೂಟ ನೌಕರರ ಆಕ್ರೋಶ
 • ಖುದ್ದು ಸಿಎಂ ಮಾತುಕತೆ ನಡೆಸಿ ಬೇಡಿಕೆ ಈಡೇರಿಸುವವರೆಗೂ ಪ್ರತಿಭಟನೆ ಮುಂದುವರಿಕೆ

ವಯಸ್ಸಿನ ನೆಪವೊಡ್ಡಿ 19-20 ವರ್ಷ ಸೇವೆ ಸಲ್ಲಿಸಿದ ಬಡ ಮಹಿಳೆಯರನ್ನು ನಿರ್ದಾಕ್ಷಿಣ್ಯವಾಗಿ ಕೆಲಸದಿಂದ ತೆಗೆದಿರುವುದನ್ನು ವಿರೋಧಿಸಿ ಬಿಸಿಯೂಟ ನೌಕರರು ಬೀದಿಗಿಳಿದಿದ್ದಾರೆ.

ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಕರ್ನಾಟಕ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘ (ಸಿಐಟಿಯು ಸಂಯೋಜಿತ) ನೇತೃತ್ವದಲ್ಲಿ ಪ್ರತಿಭಟನೆ ಮಾಡಲಾಗುತ್ತಿದೆ. ದೊಡ್ಡ ಸಂಖ್ಯೆಯಲ್ಲಿ ಸೇರಿರುವ ಮಹಿಳಾ ನೌಕರರು ಕೆಂಬಾವುಟ ಹಿಡಿದು ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಿದ್ದಾರೆ. ತಮ್ಮನ್ನು ನಿವೃತ್ತಿ ಹೆಸರಿನಲ್ಲಿ ಅಮಾನವೀಯವಾಗಿ ಬಿಡುಗಡೆ ಮಾಡಿರುವ ಕ್ರಮ ಖಂಡಿಸಿ ಅವರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಶಾಲಾ ಮಕ್ಕಳ ಗೈರು ಹಾಜರಿಯನ್ನು ತಡೆಗಟ್ಟಿ ಶೈಕ್ಷಣಿಕ ಉನ್ನತಿ ಸಾಧಿಸಲು ಆರಂಭವಾದ ಮಧ್ಯಾಹ್ನದ ಬಿಸಿಯೂಟ ಯೋಜನೆಯಡಿಯಲ್ಲಿ ನಿರಂತರವಾಗಿ 19-20 ವರ್ಷಗಳ ಕಾಲ ದುಡಿದಿರುವ 6,000 ಜನ ಮಹಿಳೆಯರನ್ನು ಸರ್ಕಾರ ಬೀದಿಪಾಲು ಮಾಡಿದೆ ಎಂದು ಪ್ರತಿಭಟನಾಕಾರರು ಕಣ್ನೀರು ಹಾಕಿದರು. 

ಈ ಅನಿರ್ದಿಷ್ಟಾವಧಿ ಹೋರಾಟದ ಬಗ್ಗೆ ಅಕ್ಷರ ದಾಸೋಹ ಸಂಘದ ರಾಜ್ಯಾಧ್ಯಕ್ಷರಾದ ಲಕ್ಷ್ಮಿದೇವಿ ಅವರು ಈದಿನ.ಕಾಮ್‌ಗೆ ಪ್ರತಿಕ್ರಿಯಿಸಿದರು. “ಸರಿಸುಮಾರು ಎರಡು ದಶಕಗಳಿಂದ ನಿರಂತರವಾಗಿ ಈ ಹೋರಾಟವನ್ನು ನಡೆಸಿಕೊಂಡು ಬಂದಿದ್ದು, ಇದುವರೆಗೂ ಯಾವುದೇ ಸರ್ಕಾರ ಬಿಸಿಯೂಟ ನೌಕರರ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಿಲ್ಲ” ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು. 

“ಮಹಿಳೆಯರನ್ನು ಏಕಾಏಕಿ ಕೆಲಸದಿಂದ ತೆಗೆದು ಶೋಷಣೆ ಮಾಡಿ 75ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವ ನಡೆಸುವ ಸರ್ಕಾರಕ್ಕೆ ನೈತಿಕತೆ ಇದೆಯೇ" ಎಂದು ಅವರು ಪ್ರಶ್ನಿಸಿದರು. "ಕೊರೊನಾ ಸಂಕಷ್ಟದಲ್ಲಿಯೂ ಬಿಸಿಯೂಟ ನೌಕರರು ಅಡುಗೆ ಕೆಲಸದ ಜೊತೆಗೆ ಶಾಲೆಗೆ ಸಂಬಂಧಿಸಿದ ಹಲವು ಕೆಲಸಗಳನ್ನು ನಿಷ್ಠೆಯಿಂದ ಮಾಡಿದ್ದಾರೆ. ಅವರ ಕರ್ತವ್ಯಪಾಲನೆಯನ್ನು ಗೌರವಿಸಿ ಹುದ್ದೆ ಕಾಯಂಗೊಳಿಸುವುದು, ತಿಂಗಳ ಕನಿಷ್ಠ ವೇತನ ಹೆಚ್ಚಳ, ನಿವೃತ್ತಿ ವೇತನ ನೀಡದ ಹೊರತು ಈ ಹೋರಾಟ ನಿಲ್ಲುವುದಿಲ್ಲ” ಎಂದು ಲಕ್ಷ್ಮಿದೇವಿ ಅವರು ಘೋಷಿಸಿದರು.  

ಈ ಸುದ್ದಿ ಓದಿದ್ದೀರಾ? ಧಾರವಾಡ | 4ನೇ ದಿನಕ್ಕೆ ಕಾಲಿಟ್ಟ ಕರ್ನಾಟಕ ವಿವಿ ಅತಿಥಿ ಉಪನ್ಯಾಸಕರ ಪ್ರತಿಭಟನೆ

ಕರ್ನಾಟಕ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಮಾಲಿನಿ ಮೇಸ್ತಾ ಈ ದಿನ.ಕಾಮ್‌ಗೆ ಹೋರಾಟದ ಕುರಿತು ಮಾತನಾಡಿದರು.  

Image
ಹೋರಾಟ ನಿರತ ಬಿಸಿಯೂಟ ನೌಕರರು
ಹೋರಾಟ ನಿರತ ಬಿಸಿಯೂಟ ನೌಕರರು

“ಇಡೀ ರಾಜ್ಯದಲ್ಲಿ ಬಿಸಿಯೂಟ ನೌಕರರಾಗಿ ಕಾರ್ಯನಿರ್ವಹಿಸುತ್ತಿರುವ ಬಡ ಮಹಿಳೆಯರಿಗೆ ಕನಿಷ್ಠ ವೇತನ 24,000 ರೂಗಳನ್ನು ನಿಗದಿ ಮಾಡಬೇಕು. ವಯಸ್ಸಿನ ಆಧಾರದಲ್ಲಿ ಕೆಲಸದಿಂದ ಕೈಬಿಡಲಾಗಿರುವ 6,೦೦೦ ಜನ ನೌಕರರಿಗೆ ಕಡ್ಡಾಯವಾಗಿ ಒಂದು ಲಕ್ಷ ರೂ. ನಿವೃತ್ತಿ ವೇತನ ನೀಡಿ, ಗೌರವಯುತವಾಗಿ ಬಿಡುಗಡೆ ಮಾಡಬೇಕು" ಎಂದು ಅವರು ಆಗ್ರಹಿಸಿದರು.

“ಬಿಸಿಯೂಟ ನೌಕರರ ನಿವೃತ್ತಿ ವಿಷಯಕ್ಕೆ ಸಂಬಂಧಿಸಿದಂತೆ ಶಿಕ್ಷಣ ಇಲಾಖೆಯ ಸಚಿವರು, ಇಲಾಖೆಯ ಪ್ರಧಾನ ಕಾರ್ಯದರ್ಶಿ, ಆಯುಕ್ತರು, ಎಲ್.ಐ.ಸಿಯ ಪಿಂಚಣಿ ವಿಭಾಗದ ಮುಖ್ಯಸ್ಥರು ಹಾಗೂ ನಮ್ಮ ಸಂಘಟನೆಯ ಮುಖಂಡರೊಂದಿಗೆ ಜಂಟಿಯಾಗಿ ಹಲವು ಬಾರಿ ಸಭೆಗಳಾಗಿವೆ. ಆದರೆ ಅಲ್ಲಿ ನಿರ್ಣಯವಾದ ಯಾವುದೇ ತೀರ್ಮಾನಗಳು ಇದುವರೆಗೂ ಕಾರ್ಯರೂಪಕ್ಕೆ ಬಂದಿಲ್ಲ. ಹಾಗಾಗಿ ಈ ಬಾರಿ ನೇರವಾಗಿ ಮುಖ್ಯಮಂತ್ರಿಗಳೊಂದಿಗೆ ಸಭೆ ಕರೆದು ಚರ್ಚಿಸಿ ನಮ್ಮ ಬೇಡಿಕೆಗಳನ್ನು ಈಡೇರಿಸಬೇಕು" ಎಂದು ಮಾಲಿನಿ ಅವರು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಸಿಐಟಿಯು ಸಂಯೋಜಿತ ಬಿಸಿಯೂಟ ನೌಕರರ ಸಂಘದ ಗೌರವಾಧ್ಯಕ್ಷರಾದ ಎಸ್‌ ವರಲಕ್ಷ್ಮಿ, ಖಜಾಂಚಿ ಮಹಾದೇವಮ್ಮ, ಸಂಘದ ರಾಜ್ಯ ಸಮಿತಿ ಸದಸ್ಯರಾದ ಅರವಿಂದ್‌, ಪುಷ್ಪ ಸೇರಿದಂತೆ ಹಲವು ನಾಯಕರು ಹಾಗೂ ರಾಜ್ಯದ ಎಂಟು ಜಿಲ್ಲೆಗಳಿಂದ ಬಂದಿರುವ ಬಿಸಿಯೂಟ ನೌಕರರು ಹಾಜರಿದ್ದರು.

ಬಿಸಿಯೂಟ ನೌಕರರ ಬೇಡಿಕೆಗಳು:

 1. 60 ವರ್ಷ ವಯಸ್ಸಿನ ಬಿಸಿಯೂಟ ನೌಕರರನ್ನು ಕೆಲಸದಿಂದ ಬಿಡುಗಡೆಗೊಳಿಸುವಾಗ ಒಂದು ಲಕ್ಷ ರೂ. ನಿವೃತ್ತಿ ವೇತನ ಅಥವಾ ಇಡುಗಂಟು ನೀಡಿ ಬಿಡುಗಡೆ ಮಾಡಬೇಕು.
 2. ಮಾರ್ಚ್‌ 31, 2022ಕ್ಕೆ ಬಿಸಿಯೂಟ ನೌಕರರನ್ನು ಬಿಡುಗಡೆಗೊಳಿಸಲು ಹೊರಡಿಸಿರುವ ಸುತ್ತೋಲೆಯನ್ನು ಬದಲಾಯಿಸಿ ಏಪ್ರಿಲ್ 10, 2022ಕ್ಕೆ ಮರುಆದೇಶ ನಿಡಬೇಕು.
 3. ಬಜೆಟ್‌ನಲ್ಲಿ ಬಿಸಿಯೂಟ ನೌಕರರಿಗೆ ಹೆಚ್ಚಳ ಮಾಡಿದ ರೂ. 1000 ವೇತನವನ್ನು ಜನವರಿ 2022 ರಿಂದ ಅನ್ವಯಿಸಿ ಜಾರಿ ಮಾಡಬೇಕು. 
 4. ಬಿಸಿಯೂಟ ಯೋಜನೆಯನ್ನು ಕಾಯಂ ಮಾಡಬೇಕು. ಕಾಯಂ ಮಾಡುವ ತನಕ 45 ಮತ್ತು 46ನೇ ಭಾರತೀಯ ಕಾರ್ಮಿಕ ಸಮ್ಮೇಳನದ ಶಿಫಾರಸ್ಸಿನಂತೆ ಇವರನ್ನು ಕಾರ್ಮಿಕರೆಂದು ಗುರುತಿಸಬೇಕು.
 5. ಕೇಂದ್ರೀಕೃತ ಅಡುಗೆ ಕೇಂದ್ರ ಮಾದರಿ ಬೇಡ. ಯಾವುದೇ ಖಾಸಗಿ ಸಂಸ್ಥೆಗಳಿಗೆ ಯಾವುದೇ ಸ್ವರೂಪದ ಜವಾಬ್ದಾರಿ ಕೊಡಬಾರದು.
 6. ನಮ್ಮ ರಾಜ್ಯದಲ್ಲಿ ಶಿಕ್ಷಣ ಇಲಾಖೆಯ ಶಿಫಾರಸ್ಸಿನಂತೆ 6,000 ರೂ. ಮತ್ತು 5,000 ರೂ ಹೆಚ್ಚಳ ಮಾಡಬೇಕು.
 7. ಬೇಸಿಗೆ ಮತ್ತು ದಸರಾ ರಜೆಗಳ ವೇತನವನ್ನು ಕಟ್ಟಿಕೊಡಬೇಕು.
 8. ಎಲ್ಲರಿಗೂ ಅನ್ವಯವಾಗದೇ ಇರುವ ಮಾನ್-ಧನ್ ಯೋಜನೆ ಮಾಡಿಸಲು ಇಲಾಖೆಯಿಂದ ಒತ್ತಾಯಿಸಬಾರದು.
 9. ಶಾಲಾ ಅವಧಿಯ ನಂತರ ನರೇಗಾ ಯೋಜನೆಯಡಿ ಶಾಲಾ ಕೈತೋಟದ ಕೆಲಸ ಇವರಿಗೆ ನೀಡಿ ಈ ಯೋಜನೆಯಿಂದ ವೇತನ ನೀಡಬೇಕು.
 10. ಬಿಸಿಯೂಟ ನೌಕರರನ್ನು ಕಾಯಂ ಮಾಡಿ ಶಾಸನಾತ್ಮಕ ಸವಲತ್ತುಗಳನ್ನು ಜಾರಿ ಮಾಡಬೇಕು.
 11. ಬಿಸಿಯೂಟ ನೌಕರರಿಗೆ ಪ್ರತಿ ತಿಂಗಳು 5ನೇ ತಾರೀಖಿನ ಒಳಗೆ ವೇತನ ಪಾವತಿಯಾಗಬೇಕು.
 12. ಬಿಸಿಯೂಟ ನೌಕರರನ್ನು ನೇರವಾಗಿ ಶಿಕ್ಷಣ ಇಲಾಖೆಯಡಿಯಲ್ಲಿಯೇ ಮೇಲ್ವಿಚಾರಣೆ ನಡೆಸಬೇಕು.
 13. ಪ್ರತಿಶಾಲೆಯಲ್ಲಿ ಕನಿಷ್ಠ 2 ಮಂದಿ ಅಡುಗೆಯವರು ಇರಲೇಬೇಕು.
ನಿಮಗೆ ಏನು ಅನ್ನಿಸ್ತು?
1 ವೋಟ್