ಚೆನ್ನೈ ಕಾರ್ಪೊರೇಷನ್ ಶಾಲೆಯ ಅನಾಥ ವಿದ್ಯಾರ್ಥಿನಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತೀರ್ಣ

  • ಓದಿನ ಜೊತೆಗೆ ಇಬ್ಬರು ತಮ್ಮಂದಿರ ಜವಾಬ್ದಾರಿ ಹೊತ್ತ ವಿದ್ಯಾರ್ಥಿನಿ
  • ಚಿಕ್ಕ ವಯಸ್ಸಿನಲ್ಲೆ ತಂದೆ- ತಾಯಿಯನ್ನು ಕಳೆದುಕೊಂಡ ಬಾಲಕಿ

ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವ ಅನಾಥ ವಿದ್ಯಾರ್ಥಿನಿ ಎಸ್‌ ಎನ್ ರೇಷ್ಮಾ, ಚೆನ್ನೈನ ಹಳೇ ವಾಷರಮನ್‌ಪೇಟೆಯ ಸಿಬಿ ರಸ್ತೆಯಲ್ಲಿರುವ ಕಾರ್ಪೊರೇಷನ್ ಪ್ರೌಢಶಾಲೆಯ ವಿದ್ಯಾರ್ಥಿನಿ. ಹತ್ತನೇ ತರಗತಿಯಲ್ಲಿ 234 ಅಂಕ ಗಳಿಸಿದ್ದರೂ ಇವರ ಸಾಧನೆ ಗಮನಾರ್ಹ.

ರೇಷ್ಮಾ ತನ್ನ ಇಬ್ಬರು ಸಹೋದರರ ಆರೈಕೆಯ ಜೊತೆಗೆ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ರೇಷ್ಮಾ ಐದು ವರ್ಷದವರಿದ್ದಾಗ ತನ್ನ ತಂದೆ ಜಿ ನೇಸರ್ ಅವರನ್ನು ಕಳೆದುಕೊಂಡರು. ಈ ಆಘಾತದ ನಡುವೆಯೇ ಒಂದು ವರ್ಷದ ನಂತರ ರೇಷ್ಮಾ ಅವರ ತಾಯಿ ಸಹ ಇಬ್ಬರು ತಮ್ಮಂದಿರ ಜೊತೆಗೆ ಇವರನ್ನು ಬಿಟ್ಟು ಹೋದರು. 

“ರೇಷ್ಮಾ ಬಹಳ ಬುದ್ಧಿವಂತ ವಿದ್ಯಾರ್ಥಿನಿ. ಶಾಲೆಯಲ್ಲಿ ಹೆಚ್ಚಿನ ಅಂಕ ಗಳಿಸುತ್ತಿದ್ದರು. ಕಷ್ಟದ ನಡುವೆಯೂ ಹೆಚ್ಚಿನ ಅಂಕಗಳನ್ನು ಪಡೆಯಲು ಪ್ರಯತ್ನ ಪಡುತ್ತಿದ್ದರು. ಈ ಪರಿಸ್ಥಿತಿಯ ನಡುವೆ ಆಕೆಯ ಸಾಧನೆಯಿಂದ ನಮಗೆ ಸಂತೋಷವಾಗಿದೆ” ಎಂದು ಸಿಬಿ ರೋಡ್ ಕಾರ್ಪೊರೇಷನ್ ಶಾಲೆಯಲ್ಲಿನ ತಮಿಳು ಶಿಕ್ಷಕ ಜಸ್ಟಿನ್ ಅವರು ಹೇಳಿದರು.

ರೇಷ್ಮಾ ತಮ್ಮ ಸಾಧನೆ ಬಗ್ಗೆ ಮಾತನಾಡಿ, "ನನ್ನ ಚಿಕ್ಕಮ್ಮನಿಗೆ ಇಬ್ಬರು ಮಕ್ಕಳಿದ್ದಾರೆ. ಹಾಗಾಗಿ ನಾವು ಸಹ ಅವರಿಗೆ ಆರ್ಥಿಕವಾಗಿ ಹೊರೆಯಾಗಿದ್ದೇವೆ. ನಾನು, ನನ್ನ ತಮ್ಮಂದಿರನ್ನು ನೋಡಿಕೊಳ್ಳುತ್ತೇನೆ. ಅವರ ಬಟ್ಟೆ ಒಗೆಯುವುದು, ಅವರ ಕೆಲಸ ಮಾಡುವುದು. ಸಂಜೆ ಅವರಿಗೆ ಪಾಠ ಕಲಿಸುವುದರ ಜೊತೆಗೆ ಮನೆಕೆಲಸ ಮಾಡುತ್ತೇನೆ. ಈ ನಡುವೆ ಮುಂದೆ ಏನಾಗಬೇಕೆಂದು ಇನ್ನೂ ನಿರ್ಧರಿಸಿಲ್ಲ. ಮುಂದೆ ಓದಬಹುದೇ ಎನ್ನುವುದೂ ಸಂಶಯವಿದೆ. ಪಿಯುಸಿಗೆ ಪ್ರವೇಶ ಪಡೆಯಲು ಕೈಲಾದಷ್ಟು ಪ್ರಯತ್ನ ಪಡುತ್ತೇನೆ” ಎಂದು ತಿಳಿಸಿದರು.

ಸದ್ಯ ಆಕೆಯ ಸಹೋದರರು ಸಹ ಕಾರ್ಪೊರೇಷನ್ ಶಾಲೆಯಲ್ಲಿ ಓದುತ್ತಿದ್ದಾರೆ. ಕೆಲವು ದಿನಗಳ ಹಿಂದೆ ಮೂವರು ವಿದ್ಯಾರ್ಥಿಗಳು ಊಟ ಮಾಡದೆ ಶಾಲೆಗೆ ಬಂದ ವಿಷಯ ತಿಳಿದ ಅವರ ಶಿಕ್ಷಕರು, ಈ ಮಕ್ಕಳಿಗೆ ಬಟ್ಟೆ ಮತ್ತು ಇತರ ಅಗತ್ಯ ವಸ್ತುಗಳನ್ನು ತೆಗೆದುಕೊಳ್ಳಲು ಶಾಲೆಯಲ್ಲಿ ಹಣ ಸಂಗ್ರಹಿಸಿದ್ದರು.  

ರೇ‍ಷ್ಮಾ ಮತ್ತು ಆಕೆಯ ಸಹೋದರರಿಗೆ, ಚಿಕ್ಕಮ್ಮ ಅವರ ಮನೆಯಲ್ಲಿ ಇರಲು ಅವಕಾಶ ಮಾಡಿಕೊಟ್ಟಿದ್ದಾರೆ. ಆದರೆ, ಇನ್ನೂ ಎಷ್ಟು ದಿನ ಅವರ ಮನೆಯಲ್ಲಿ ಉಳಿಯಲು ಸಾಧ್ಯ ಎಂದು ರೇಷ್ಮಾ ಅವರಿಗೆ ತಿಳಿದಿಲ್ಲ. 

ನಿಮಗೆ ಏನು ಅನ್ನಿಸ್ತು?
0 ವೋಟ್