ಒಡಿಶಾ | ವೈದ್ಯಕೀಯ ಪರೀಕ್ಷೆಗೆ 12 ಗಂಟೆ ಕಾದ ಸಂತ್ರಸ್ತೆ

  • ಮೂವರು ದುಷ್ಕರ್ಮಿಗಳಿಂದ ಯುವತಿಯ ಮೇಲೆ ದುಷ್ಕೃತ್ಯ
  • ಘಟನೆ ನಡೆದ ನಾಲ್ಕು ದಿನದ ಬಳಿಕವೂ ಆರೋಪಿಗಳ ಬಂಧನವಿಲ್ಲ

ಸಾಮೂಹಿಕ ಅತ್ಯಾಚಾರದ ಸಂತ್ರಸ್ತೆಯೊಬ್ಬರು ವೈದ್ಯಕೀಯ ಪರೀಕ್ಷೆಗಾಗಿ 12 ಗಂಟೆಗಳ ಕಾಲ ಪೊಲೀಸ್ ವ್ಯಾನಿನಲ್ಲಿ ಕುಳಿತು ಕಾಯಬೇಕಾಗಿ ಬಂದ ನಾಚಿಕೆಗೇಡಿನ ಘಟನೆ ಒಡಿಶಾದ ಕಿಯೋಂಜಾರ್ ಜಿಲ್ಲೆಯಲ್ಲಿ ನಡೆದಿದೆ.

"ಗುರುವಾರ ಬೆಳಿಗ್ಗೆ ಸಾಮೂಹಿಕ ಅತ್ಯಾಚಾರದ ಸಂತ್ರಸ್ತೆಯನ್ನು ಪೊಲೀಸ್ ವ್ಯಾನ್‌ನಲ್ಲಿ ಉಪವಿಭಾಗೀಯ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅಪರಾಧ ಸಂಭವಿಸಿದ ಸ್ಥಳವು ಸಮುದಾಯ ಆರೋಗ್ಯ ಕೇಂದ್ರದ (ಸಿಎಚ್‌ಸಿ) ವ್ಯಾಪ್ತಿಗೆ ಒಳಪಟ್ಟಿದ್ದರಿಂದ ಉಪವಿಭಾಗೀಯ ಆಸ್ಪತ್ರೆಯ ವೈದ್ಯರು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲು ನಿರಾಕರಿಸಿದ್ದಾರೆ" ಎಂದು ಪೊಲೀಸರು ಹೇಳಿದ್ದಾರೆ.

ವೈದ್ಯರು ನಿರಾಕರಿಸಿದ ಬಳಿಕ ಪೊಲೀಸ್‌ ಸಿಬ್ಬಂದಿ ಮಹಿಳೆಯನ್ನು ಸಿಎಚ್‌ಸಿಗೆ ಕರೆದೊಯ್ದಿದ್ದಾರೆ. ವೈದ್ಯಕೀಯ ಪರೀಕ್ಷೆ ನಡೆಸಲು ಸಿಎಚ್‌ಸಿಯಲ್ಲಿ ಮಹಿಳಾ ವೈದ್ಯರು ಇಲ್ಲದ ಕಾರಣ ಸಂತ್ರಸ್ತೆಯನ್ನು ಗಂಟೆಗಟ್ಟಲೆ ಪೊಲೀಸ್ ವ್ಯಾನ್‌ನಲ್ಲಿ ಕೂರಿಸಲಾಗಿದೆ.

ಸಿಎಚ್‌ಸಿಗೆ ವೈದ್ಯರು ಬರದ ಕಾರಣ ಪೊಲೀಸರು ಸಂತ್ರಸ್ತೆಯನ್ನು ಮತ್ತೆ ಉಪವಿಭಾಗೀಯ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆ ಆಸ್ಪತ್ರೆಯಲ್ಲಿ ಗುರುವಾರ ರಾತ್ರಿ 9.30ರ ಸುಮಾರಿಗೆ ಪ್ರಾಥಮಿಕ ಪರೀಕ್ಷೆಗೆ ಒಳಪಡಿಸಲಾಗಿದೆ. ಮರುದಿನ ಸಂಪೂರ್ಣ ವೈದ್ಯಕೀಯ ಪರೀಕ್ಷೆ ಮಾಡಿಸಲಾಗಿದೆ.

ಈ ಸುದ್ದಿ ಓದಿದ್ದೀರಾ? ಲೈಂಗಿಕ ದೌರ್ಜನ್ಯ ಪ್ರಕರಣ| ಕುಸ್ತಿ ಒಕ್ಕೂಟದ ಮುಖ್ಯಸ್ಥರ ವಿರುದ್ಧ ತನಿಖೆಗೆ ಪ್ರಿಯಾಂಕಾ ಗಾಂಧಿ ಒತ್ತಾಯ

ವೈದ್ಯಕೀಯ ಪರೀಕ್ಷೆಯ ವಿಳಂಬದ ಕುರಿತು ಮಾತನಾಡಿರುವ ಮುಖ್ಯ ಜಿಲ್ಲಾ ವೈದ್ಯಾಧಿಕಾರಿ (ಸಿಡಿಎಂಒ) ಕಿಶೋರ್ ಚಂದ್ರ ಪ್ರಸ್ಟಿ, "ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯಿದೆ, 2012ರ ಅಡಿ ಪ್ರಕರಣ ದಾಖಲಿಸಿದ ಬಳಿಕವಷ್ಟೇ ಮಹಿಳಾ ನೋಂದಾಯಿತ ವೈದ್ಯರು ಅತ್ಯಾಚಾರ ಸಂತ್ರಸ್ತೆಯ ವೈದ್ಯಕೀಯ ಪರೀಕ್ಷೆ ನಡೆಸಬೇಕಾಗುತ್ತದೆ" ಎಂದು ಹೇಳಿದ್ದಾರೆ.

"ಸಮನ್ವಯದ ಕೊರತೆಯಿಂದ ವೈದ್ಯಕೀಯ ಪರೀಕ್ಷೆಯ ಪ್ರಕ್ರಿಯೆ ವಿಳಂಬವಾಗಿದ್ದು, ಉದ್ದೇಶಪೂರ್ವಕವಾಗಿ ತಡಮಾಡಿಲ್ಲ" ಎನ್ನುವ ಮೂಲಕ ಪೊಲೀಸರು ಜಾರಿಕೊಳ್ಳುತ್ತಿದ್ದಾರೆ.

ಜನವರಿ 18ರಂದು ಯುವತಿಯು ತನ್ನ ಸೋದರ ಸಂಬಂಧಿಯೊಂದಿಗೆ ಸಂಬಂಧಿಕರ ಮನೆಯಿಂದ ಹಿಂದಿರುಗುತ್ತಿದ್ದ ವೇಳೆ ಮೂವರು ದುಷ್ಕರ್ಮಿಗಳು ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದರು.

ದುಷ್ಕರ್ಮಿಗಳು ಅತ್ಯಾಚಾರ ಎಸಗಿರುವ ಬಗ್ಗೆ ಮಹಿಳೆ ತನ್ನ ಎಫ್‌ಐಆರ್‌ನಲ್ಲಿ ತಿಳಿಸಿದ್ದಾರೆ. ಘಟನೆ ನಡೆದು ನಾಲ್ಕು ದಿನವಾದರೂ ಯಾವೊಬ್ಬ ಆರೋಪಿಯನ್ನು ಬಂಧಿಸಲಾಗಿಲ್ಲ.

ನಿಮಗೆ ಏನು ಅನ್ನಿಸ್ತು?
0 ವೋಟ್
eedina app