ದೆಹಲಿ | ಮಹಿಳಾ ಆಯೋಗದ ಅಧ್ಯಕ್ಷೆಯನ್ನೇ ಎಳೆದೊಯ್ದ ಕಾರು ಚಾಲಕ!

Delhi women commission
  • ದೆಹಲಿಯ ಏಮ್ಸ್ ಬಳಿ 10ರಿಂದ 50 ಮೀಟರ್ ಎಳೆದೊಯ್ದ ಕುಡುಕ ಚಾಲಕ
  • ಅಶ್ಲೀಲವಾಗಿ ನಿಂದಿಸಿದಾಗ ಚಾಲಕನನ್ನು ಹಿಡಿಯಲು ಹೋದಾಗ ನಡೆದ ಘಟನೆ

ಬೆಂಗಳೂರಿನಲ್ಲಿ ವೃದ್ಧನನ್ನು ಎಳೆದೊಯ್ದ ಪ್ರಕರಣದ ರೀತಿಯಲ್ಲಿಯೇ ದೆಹಲಿಯ ಏಮ್ಸ್ ಬಳಿ ಆಘಾತಕಾರಿ ಪ್ರಕರಣವೊಂದು ಬೆಳಕಿಗೆ ಬಂದಿದೆ.

ದೆಹಲಿ ಮಹಿಳಾ ಆಯೋಗದ ಆಧ್ಯಕ್ಷೆ ಸ್ವಾತಿ ಮಲಿವಾಲ್ ಅವರನ್ನು ಕುಡುಕ ಕಾರು ಚಾಲಕನೊಬ್ಬ 10 ರಿಂದ 50 ಮೀಟರ್‌ವರೆಗೂ ಎಳೆದೊಯ್ದು ಭೀತಿ ಹುಟ್ಟಿಸಿದ್ದಾನೆ.

ಈ ಬಗ್ಗೆ ಟ್ವೀಟ್ ಮಾಡಿರುವ ಸ್ವಾತಿ ಮಲಿವಾಲ್ ಅವರು, “ಇಂದು ತಡರಾತ್ರಿ (ಜನವರಿ 19) ನಾನು ದೆಹಲಿಯಲ್ಲಿ ಮಹಿಳಾ ಭದ್ರತೆಯ ಪರಿಸ್ಥಿತಿಯನ್ನು ಪರಿಶೀಲಿಸುತ್ತಿದ್ದಾಗ ಕಾರಿನ ಚಾಲಕನೊಬ್ಬ ಕುಡಿದ ಅಮಲಿನಲ್ಲಿ ನನಗೆ ಕಿರುಕುಳ ನೀಡಿದ್ದಾನೆ. ದೇವರೇ ನನ್ನ ಜೀವ ಉಳಿಸಿದ. ಮಹಿಳಾ ಆಯೋಗದ ಅಧ್ಯಕ್ಷರಿಗೆ ದೆಹಲಿ ಸುರಕ್ಷಿತವಾಗಿಲ್ಲವೆಂದರೆ, ಪರಿಸ್ಥಿತಿ ಹೇಗಿರುತ್ತದೆ ಎಂದು ಊಹಿಸಿಕೊಳ್ಳಿ” ಎಂದು ತಮಗಾದ ಅನುಭವವನ್ನು ವಿವರಿಸಿದ್ದಾರೆ.

ಸುದ್ದಿ ಮಾಧ್ಯಮವೊಂದಕ್ಕೆ ವಿವರಿಸಿದ ಅವರು, ಬುಧವಾರ ಮಧ್ಯರಾತ್ರಿ ನವದೆಹಲಿಯ ಏಮ್ಸ್ ಬಳಿ ಮದ್ಯಪಾನ ಮಾಡಿದ್ದ ಬಲೆನೊ ಕಾರು ಚಾಲಕ ನನಗೆ ಅಶ್ಲೀಲವಾಗಿ ನಿಂದಿಸಿದ. ಅವನನ್ನು ಪ್ರಶ್ನಿಸಲು ಕಾರಿನ ಕಿಟಕಿಯ ಒಳಗೆ ಕೈ ಹಾಕಿದಾಗ ಕಿಟಕಿಯನ್ನು ಲಾಕ್ ಮಾಡಿಕೊಂಡ. ನನ್ನ ಕೈ ಕಿಟಕಿಯ ಮಧ್ಯೆ ಸಿಲುಕಿಕೊಂಡಿತು. ಕೆಲವು ಮೀಟರ್‌ವರೆಗೂ ನನ್ನನ್ನು ಹಾಗೆ ಎಳೆದುಕೊಂಡು ಹೋದ. ನಾನು ನಿಜವಾಗಿಯು ಆತಂಕಕ್ಕೊಳಗಾಗಿದ್ದೆ. ಈ ಸಂದರ್ಭದಲ್ಲಿ ಪೊಲೀಸರು ಕೂಡ ಗಸ್ತಿನಲ್ಲಿ ಇರಲಿಲ್ಲ” ಎಂದು ತಿಳಿಸಿದ್ದಾರೆ.

ಈ ಸುದ್ದಿ ಓದಿದ್ದೀರಾ? ಬೆಂಗಳೂರು ಅಪಘಾತವನ್ನು ಪ್ರಶ್ನಿಸಿದ ಚಾಲಕನನ್ನು ಸ್ಕೂಟರ್ ಹಿಂದೆ ಒಂದು ಕಿಮೀ ಎಳೆದೊಯ್ದ ಸವಾರ 

ಘಟನೆಯ ಬಗ್ಗೆ ವಿಷಾದ ವ್ಯಕ್ತಪಡಿಸಿರುವ ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ ರೇಖಾ ಶರ್ಮಾ, ”ದೆಹಲಿ ಪೊಲೀಸ್ ಆಯುಕ್ತರಿಗೆ ಪತ್ರ ಬರೆದಿದ್ದು, ಮಲಿವಾಲ್ ಅವರೊಂದಿಗೂ ಮಾತನಾಡಲಿದ್ದೇನೆ. ಮಹಿಳೆಯರಿಗೆ ಸುರಕ್ಷತೆಯ ಕಾರಣ ನಾನು ಇದನ್ನು ತುಂಬಾ ಗಂಭೀರವಾಗಿ ಪರಿಗಣಿಸುತ್ತಿದ್ದೇನೆ ”ಎಂದು ತಿಳಿಸಿದ್ದಾರೆ.

ಘಟನೆ ಬಗ್ಗೆ ಪೊಲೀಸರು ದೂರು ದಾಖಲಿಸಲಾಗಿದೆ. ಆರೋಪಿ ಚಾಲಕನನ್ನು ಹರೀಶ್ ಚಂದ್ರ ಎಂದು ಗುರುತಿಸಲಾಗಿದ್ದು, ಚಾಲಕ ಹಾಗೂ ದೂರುದಾರರನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಐವರು ಕುಡುಕರು ಕಾರಿನಡಿಯಲ್ಲಿ 20 ವರ್ಷದ ಯುವತಿಯನ್ನು 13 ಕಿಮೀ ಎಳೆದೊಯ್ದ ಹದಿನೈದು ದಿನಗಳ ನಂತರ ಈ ಘಟನೆ ನಡೆದಿದೆ. ಇದೇ ರೀತಿಯ ಘಟನೆ ಬೆಂಗಳೂರಿನಲ್ಲಿ ಎರಡು ದಿನಗಳ ಹಿಂದೆ ನಡೆದಿದ್ದು, ಯುವಕನೊಬ್ಬ ಅರ್ಧ ಕಿ.ಮೀವರೆಗೂ ವೃದ್ಧರೊಬ್ಬರನ್ನು ಎಳೆದೊಯ್ದಿದ್ದ.

ನಿಮಗೆ ಏನು ಅನ್ನಿಸ್ತು?
0 ವೋಟ್
eedina app