ಮುಸ್ಲಿಂ ಯುವತಿಯ ಮದುವೆಗಾಗಿ ಸಹಾಯ ಮಾಡಿದ ನೆರೆಹೊರೆಯ ಹಿಂದೂ ಸ್ನೇಹಿತರು

  • ಸೌಹಾರ್ದತೆಗೆ ಸಾಕ್ಷಿಯಾದ ಮುಸ್ಲಿಂ ಯುವತಿಯ ಮದುವೆ
  • ಮುಸ್ಲಿಂ ಗೆಳತಿಯ ಮದುವೆಗೆ ನೆರವಾದ ಹಿಂದೂ ಸ್ನೇಹಿತರು

ಬಿಜೆಪಿ ನಾಯಕರ ದ್ವೇಷ ಭಾಷಣದಿಂದಾಗಿ ಹಿಂಸಾತ್ಮಕ ಪ್ರತಿಭಟನೆಗಳಿಗೆ ಕಾರಣವಾಗಿದ್ದ ಪಶ್ಚಿಮ ಬಂಗಾಳದ ಹೌರಾ ನಗರ ಪ್ರಸ್ತುತ ಸೌಹಾರ್ದತೆಗೆ ಸಾಕ್ಷಿಯಾಗಿದೆ. ನಿಷೇಧಾಜ್ಞೆ, ಗಲಾಟೆಗಳಿಂದ ಬೇಸತ್ತಿದ್ದ ಜನರು ಮಂದಹಾಸ ಬೀರುವಂತಹ ಘಟನೆಯೊಂದು ನಡೆದಿದೆ. ನಿಷೇಧಾಜ್ಞೆ ನಡುವೆಯೇ ಹಿಂದೂ ಸ್ನೇಹಿತರೆಲ್ಲಾ ಸೇರಿ ನೆರೆಮನೆಯ ಮುಸ್ಲಿಂ ಯುವತಿಯ ಮದುವೆಯಲ್ಲಿ ಏನೂ ಸಮಸ್ಯೆಯಾಗದಂತೆ ನೋಡಿಕೊಂಡಿದ್ದಾರೆ. 

ಇದ್ದೆನೆಸಾ ಮುಲ್ಲಿಕ್ ಮೂವರು ಹೆಣ್ಣು ಮಕ್ಕಳು ಮತ್ತು ಒಬ್ಬ ಮಗನೊಂದಿಗೆ ರಾಷ್ಟ್ರೀಯ ಹೆದ್ದಾರಿಯ ಹತ್ತಿರದಲ್ಲಿ ಉಲುಬೆರಿಯಾ ಗ್ರಾಮದಲ್ಲಿ ಪುಟ್ಟ ಮನೆಯಲ್ಲಿ ವಾಸಿಸುತ್ತಿದ್ದಾರೆ. ಇವರ ಮಗಳ ಮದುವೆ ಜೂನ್ 12ರಂದು (ಭಾನುವಾರ) ನಿಗದಿಯಾಗಿತ್ತು. ಇತ್ತೀಚೆಗಷ್ಟೆ ಆ ಸ್ಥಳದಲ್ಲಿ ಪ್ರತಿಭಟನಾಕಾರರು ರಸ್ತೆತಡೆ ನಡೆಸಿದ್ದರು. ನಗರದಲ್ಲಿ ನಡೆಯುತ್ತಿದ್ದ ಪ್ರತಿಭಟನೆಯಿಂದ ಭಯಗೊಂಡಿದ್ದ ಮಹಿಳೆಯು ಮಗಳ ಮದುವೆ ಮುಂದೂಡುವ ಯೋಚನೆಯಲ್ಲಿದ್ದರು. ಈ ವಿಷಯ ಅರಿತ ಹಿಂದೂ ನೆರೆಹೊರೆಯವರು ಮದುವೆಗೆ ಬಂದ ಅತಿಥಿಗಳನ್ನು ಸ್ವಾಗತಿಸುವುದರಿಂದ ಆರಂಭಿಸಿ, ಪಕೀಝಾ ಮದುವೆಯಾಗಿ ಗಂಡನ ಮನೆ ಸುರಕ್ಷಿತವಾಗಿ ತಲುಪಿದಳು ಎಂಬುದನ್ನು ಖಚಿತಪಡಿಸಿಕೊಳ್ಳುವವರೆಗೆ ಎಲ್ಲವನ್ನೂ ನೆರವೇರಿಸಿಕೊಟ್ಟಿದ್ದಾರೆ.

ಇದ್ದನೆಸಾ ಮನೆಯ ನೆರೆಹೊರೆಯವರಾದ ತಪಸ್‌ ಕೊಡಲಿ, ಲಖೀಕಾಂತ ಕಯಲ್‌ ಮತ್ತು ಉತ್ತಮ್‌ ಡೋಲಿ ಮೊದಲಾದವರು ಪಕೀಝಾಳ ಮದುವೆಯ ಜವಾಬ್ದಾರಿ ವಹಿಸಿಕೊಂಡವರು.

ಈ ಸುದ್ದಿ ಓದಿದ್ದೀರಾ?: ಮುಳ್ಳುಹಾದಿಗೆ ಮಣ್ಣು ಹೊತ್ತವರು | ಘನತೆ ಇಲ್ಲದ ವೃತ್ತಿ ಬೇಡವೆಂದ ಹೋಮೈ ವ್ಯಾರಾವಾಲಾ

ʻʻನಾವಿರುವ ಪ್ರದೇಶದಲ್ಲಿ ಕೆಲ ದಿನಗಳಿಂದ ಭಾರಿ ಪ್ರತಿಭಟನೆಗಳು ನಡೆಯುತ್ತಿವೆ. ಸರ್ಕಾರವು 144 ಸೆಕ್ಷನ್‌ ಜಾರಿಗೊಳಿಸಿತ್ತು. ಇವೆಲ್ಲದರಿಂದ ನಾನು ತುಂಬಾ ಚಿಂತೆಗೀಡಾಗಿದ್ದೆ. ಭಾನುವಾರ ನಿಗದಿಯಾಗಿದ್ದ ಮಗಳ ಮದುವೆಯನ್ನು ಮುಂದೂಡದೇ ಬೇರೆ ದಾರಿಯೇ ಇರಲಿಲ್ಲ. ಆದರೆ ನನ್ನ ಹಿಂದೂ ನೆರೆಹೊರೆಯವರು ಮುಂದೆ ಬಂದು ಎಲ್ಲವನ್ನು ನೋಡಿಕೊಳ್ಳುತ್ತೇವೆ ಎಂದು ಭರವಸೆ ನೀಡಿದರು. ಮದುವೆಗೆ ಬಂದ ಅತಿಥಿಗಳ ಆತಿಥ್ಯವನ್ನು ಅವರೇ ಮಾಡಿದರು. ಪಕೀಝಾಳ ಮದುವೆ ಮುಗಿದು ಅತ್ತೆಯ ಮನೆಗೆ ಸುರಕ್ಷಿತವಾಗಿ ಹೋಗಲು ಅನುಕೂಲವಾಗಿ ಕಾರನ್ನು ಬಾಡಿಗೆಗೆ ನೀಡಲು ಸಹಾಯ ಮಾಡಿದರು. ಅವರ ಈ ಸಹಾಯ ಎಂದಿಗೂ ಮರೆಯುವುದಿಲ್ಲ. ಜೀವನಪೂರ್ತಿ ಅವರು ಮಾಡಿದ ಸಹಕಾರಕ್ಕೆ ಕೃತಜ್ಞಳಾಗಿರುತ್ತೇನೆʼʼ ಎಂದು ಇದ್ದೆನೆಸಾ ಮಾಧ್ಯಮಗಳ ಮುಂದೆ ಸಂತೋಷ ಹಂಚಿಕೊಂಡಿದ್ದಾರೆ.

ʻʻನಾವು ಎಲ್ಲರೂ ಒಟ್ಟಿಗೆ ಒಂದೇ ಹಳ್ಳಿಯಲ್ಲಿ ಬೆಳೆದಿದ್ದೇವೆ. ಮೊದಲಿನಿಂದಲೂ ಹಲವಾರು ವಿಷಯಗಳಿಗೆ ಪರಸ್ಪರ ಜತೆಯಾಗಿ ಕೆಲಸ ಮಾಡಿದ್ದೇವೆ. ಪಕೀಝಾಳ ತಾಯಿ ಚಿಂತಿತರಾಗಿದ್ದರು. ಆದ್ದರಿಂದ ಅವರಿಗೆ  ಸಹಾಯ ಮಾಡಲು ನಿರ್ಧರಿಸಿದೆವು" ಎಂದು ತಪಸ್ ಕೊಡಲಿ ಹೇಳಿದ್ದಾರೆ.

"ಎಂಟು ವರ್ಷಗಳ ಹಿಂದೆ ಪತಿಯನ್ನು ಕಳೆದುಕೊಂಡಿದ್ದ ಇದ್ದೆನೆಸಾ, ಒಬ್ಬರೇ ಇಡೀ ಸಂಸಾರ ನಡೆಸುತ್ತಿದ್ದರು. ಸ್ಥಳೀಯ ಕ್ಲಬ್ ಆಯೋಜಿಸುವ ಎಲ್ಲಾ ಕಾರ್ಯಕ್ರಮಗಳಲ್ಲಿ ತಾಯಿ ಮತ್ತು ಅವರ ಮಕ್ಕಳು ಭಾಗವಹಿಸುತ್ತಿದ್ದರು. ಅವರು ಕಷ್ಟದಲ್ಲಿರುವ ನೆರೆಹೊರೆಯವರಾಗಿ ನಾವು ಜೊತೆಗೆ ಇರಬೇಕಾದದ್ದು ನಮ್ಮ ಕರ್ತವ್ಯವಾಗಿತ್ತು’’ ಎಂದು ಕಯಲ್ ಅಭಿಪ್ರಾಯಪಟ್ಟಿದ್ದಾರೆ.

"ಹಿಂದೂ ನೆರೆಹೊರೆಯವರು ತಮ್ಮನ್ನು ಆತ್ಮೀಯವಾಗಿ ಸ್ವಾಗತಿಸಿದ್ದು ಆಶ್ಚರ್ಯ ತಂದಿದೆ. ಅವರಿಂದಲೇ ಇಡೀ ಸಮಾರಂಭ ಇಷ್ಟು ಸುಸೂತ್ರವಾಗಿ ನಡೆಯಿತು. ಅವರ ಪ್ರೀತಿಗೆ ನಾನು ಆಭಾರಿʼʼ ಎಂದು ನವವಿವಾಹಿತ ವರ ಶೇಖ್ ಮೊಕ್ಕಬೀರ್ ತಿಳಿಸಿದ್ದಾರೆ.

ನಿಮಗೆ ಏನು ಅನ್ನಿಸ್ತು?
2 ವೋಟ್