ಜೂನ್‌ ತಿಂಗಳು - ಎಲ್‌ಜಿಬಿಟಿಕ್ಯೂ ಸಮುದಾಯದ ಹೆಮ್ಮೆಯ ಮಾಸ

ಜೂನ್‌ ತಿಂಗಳನ್ನು ಪ್ರಪಂಚದ್ಯಾಂತ 'ಪ್ರೈಡ್‌ ಮಂತ್‌' ಅಂದರೆ ಹೆಮ್ಮೆಯ ತಿಂಗಳು ಎಂದು ಎಲ್‌ಜಿಬಿಟಿಕ್ಯೂ ಸಮುದಾಯದವರು ಆಚರಿಸುತ್ತಾರೆ. ಆದರೆ, ಪ್ರೈಡ್‌ ಮಂತ್‌ ಅಂದರೆ ಏನು? ಯಾಕೆ ಈ ಆಚರಣೆಯನ್ನು ಜೂನ್‌ ತಿಂಗಳಿನಲ್ಲೆ ಆಚರಿಸಲಾಗುತ್ತದೆ? ಮೊದಲು ಈ ಸಂಸ್ಕೃತಿ  ಶುರುವಾಗಿದ್ದು, ಎಲ್ಲಿ? ಹೇಗೆ? ಎಂಬ ನಾನಾ ಪ್ರಶ್ನೆಗಳು ನಮ್ಮ ತಲೆಗೆ ಹೊಕ್ಕುತ್ತವೆ. ಈ ಎಲ್ಲಾ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ.

ಎಲ್‌ಜಿಬಿಟಿಕ್ಯೂ ಸಮುದಾಯದವರು ಜೂನ್‌ ತಿಂಗಳನ್ನು ಪ್ರಪಂಚದಾದ್ಯಂತ ಹೆಮ್ಮೆಯ ತಿಂಗಳು (ಪ್ರೈಡ್‌ ಮಂತ್) ಎಂದು ಆಚರಿಸುತ್ತಾರೆ. ಈ ತಿಂಗಳಿನಲ್ಲಿ ಹೆಮ್ಮೆಯ ಮೆರವಣಿಗೆಗಳು (ಪ್ರೈಡ್‌ ಮಾರ್ಚ್) ಸಹ ನಡೆಯುತ್ತವೆ. 

ಚಲನಚಿತ್ರ ನಿರ್ದೇಶಕಿ ಶೈಲಜಾ ಪಡಿಂದಾಲ (ಲಿಂಗತ್ವ ಅಲ್ಪಸಂಖ್ಯಾತರು) ಅವರು ಪ್ರೈಡ್‌ ಮಂತ್‌ ಬಗ್ಗೆ ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ಎಲ್‌ಜಿಬಿಟಿಕ್ಯೂ ಸಮುದಾಯದವರು ಆಚರಿಸುವ ಈ ಆಚರಣೆ ಪ್ರಪಂಚದಾದ್ಯಂತ ನಡೆಯುತ್ತದೆ. ಇತ್ತೀಚೆಗೆ ಭಾರತದಲ್ಲಿಯೂ ಆಚರಣೆ ಮಾಡಲಾಗುತ್ತಿದೆ. ಈ ಹೆಮ್ಮೆಯ ಮೆರವಣಿಗೆಗಳು ಕರ್ನಾಟಕದಲ್ಲಿ ಜೂನ್‌, ಮಾರ್ಚ್ ಹಾಗೂ ಡಿಸೆಂಬರ್‌ ತಿಂಗಳಿನಲ್ಲಿ ನಡೆಯುತ್ತವೆ" ಎಂದು ಹೇಳಿದ್ದಾರೆ.

Eedina App

ಭಾರತದಲ್ಲಿ ಸಲಿಂಗಕಾಮ ಅಥವಾ ಲಿಂಗತ್ವ ಅಲ್ಪಸಂಖ್ಯಾತರ ಲೈಂಗಿಕ ಚಟುವಟಿಕೆಗಳು ಅಪರಾಧ ಎಂದು ಪರಿಗಣಿಸಿದಾಗ ಅನೇಕರು ಪ್ರಾಣವನ್ನು ಕಳೆದುಕೊಂಡರು. ಬಳಿಕ, 2018ರಲ್ಲಿ ಈ ಚಟುವಟಿಗಳು 'ಸೆಕ್ಷನ್‌ 377' ಅಡಿಯಲ್ಲಿ ಅಪರಾಧವಲ್ಲ ಎಂದು ಸುಪ್ರೀಂಕೋರ್ಟ್‌ ತೀರ್ಪು ನೀಡಿತು. ಆದರೂ ಸಹ ಈ ಸಮುದಾಯದ ಕೆಲವರು ಜೀವವನ್ನು ಕಳೆದುಕೊಳ್ಳುತ್ತಿದ್ದಾರೆ. ಅವರ ಕುಟುಂಬಸ್ಥರು ಅವರನ್ನು ಕೂಡಿ ಹಾಕುತ್ತಿದ್ದಾರೆ. ಈ ಎಲ್ಲ ಕಾರಣಗಳಿಂದಾಗಿ ಭಾರತದಲ್ಲಿಯೂ ಈ ಸಮುದಾಯದವರು ‘ಪ್ರೈಡ್‌ ಮಾರ್ಚ್’ ನಡೆಸಬೇಕೆಂದು ತೀರ್ಮಾನಿಸಿತು. 2008ರಿಂದ 'ಹೆಮ್ಮೆಯ ಮೆರವಣಿಗೆ' ನಡೆಯುತ್ತಿದೆ" ಎಂದು ಅವರು ವಿವರಿಸಿದ್ದಾರೆ. 

"ಈ ಆಚರಣೆ ನಗರಗಳಲ್ಲಿ ಮಾತ್ರ ನಡೆಯುತ್ತಿದೆ. ಹಲವು ರಾಜ್ಯಗಳಲ್ಲಿ ಅಲ್ಲಿನ ಸಂಸ್ಕೃತಿ ಮತ್ತು ಸ್ಥಿತಿಗಿತಿಗೆ ತಕ್ಕಂತೆ ಆರಚಣೆಯಾಗುತ್ತದೆ. ತಮಿಳುನಾಡಿನ ಮಧುರೈ, ಆಂಧ್ರಪ್ರದೇಶದ ವೈಜಾಕ್‌ನಂತಹ ಪ್ರದೇಶಗಳಲ್ಲಿಯೂ ಸಹ ನಡೆಯುತ್ತಿದೆ. ಇತ್ತೀಚಿನ ವರ್ಷಗಳಲ್ಲಿ ಈ ಆಚರಣೆ ಇನ್ನೂ ರೊಮಾಂಚನಕಾರಿಯಾಗಿ ನಡೆಯುತ್ತಿದೆ. ಹತ್ತು ವರ್ಷಗಳ ಹಿಂದಿನ ಆಚರಣೆಗೂ ಇಂದಿನ ಆಚರಣೆಗೂ ಸಾಕಷ್ಟು ಬದಲಾವಣೆಗಳಾಗಿವೆ. ಎಲ್ಲ ಬದಲಾವಣೆ ಒಮ್ಮೆಲೆ ಆಗುವುದಿಲ್ಲ. ಸಾಂಸ್ಕೃತಿಕ ಪಲ್ಲಟದ ಜೊತೆಗೆ ಹಂತ ಹಂತವಾಗಿ ತನ್ನ ಸ್ವರೂಪವನ್ನು ಬದಲಿಸಿಕೊಳ್ಳುತ್ತಿದೆ" ಎಂದು ಶೈಲಜಾ ಪಡಿಂದಾಲ ತಿಳಿಸಿದ್ದಾರೆ.

AV Eye Hospital ad

"ಸುಪ್ರೀಂ ಕೋರ್ಟ್‌ ತೀರ್ಪು ಬಂದ ನಂತರ, ನಮ್ಮ ಸಮುದಾಯದವರನ್ನು ಬಂಧಿಸುವುದು ಕಡಿಮೆ ಆಗಿದೆ. ಸ್ವಲ್ಪ ಮಟ್ಟಿಗೆ ನಮ್ಮ ಮೇಲಿನ ನೋಟ ಬದಲಾಗಿದೆ. ಆದರೂ, ಇನ್ನೂ ಕೆಲವೆಡೆ ದೌರ್ಜನ್ಯಗಳು ನಡೆಯುತ್ತಲೇ ಇವೆ. ನಮ್ಮ ಬಗ್ಗೆ ಹೊರಗಡೆ ಹೇಳಿಕೊಳ್ಳಲು ಆಗುತ್ತಿಲ್ಲ. ಎಲ್ಲ ಬದಲಾಗಿದೆಯೆಂದು ಹೇಳಲು ಆಗುವುದಿಲ್ಲ. ಪೊಲೀಸ್‌ ಠಾಣೆಯಲ್ಲೇ ಈ ಬಗ್ಗೆ ಜಾಗೃತಿ ಇಲ್ಲ. ಇನ್ನೂ ಅಭಿವೃದ್ದಿಯಾಗಬೇಕಿರುವುದು ಸಾಕಷ್ಟಿದೆ” ಎಂದು ಅವರು ಹೇಳಿದ್ದಾರೆ. 

“ಪ್ರೈಡ್‌ ಮಾರ್ಚ್ ಕೆಲವು ಕಡೆ ಒಂದೊಂದು ತರ ಆಚರಣೆಯಾಗುತ್ತದೆ. ನನ್ನ ಪ್ರಕಾರ ಜೂನ್‌ ತಿಂಗಳಲ್ಲಿ ಮಾತ್ರ ಹೆಮ್ಮೆ ಪಡುವುದಲ್ಲ. ಪ್ರತಿ ದಿನ, ಪ್ರತಿ ತಿಂಗಳು ನಮ್ಮ ಬಗ್ಗೆ ನಮಗೆ ಹೆಮ್ಮೆ ಇರಬೇಕು. ನಮ್ಮ ಸಮುದಾಯದವರು ಮಾತ್ರವಲ್ಲದೆ, ಎಲ್ಲರೂ ಲಿಂಗತ್ವ ಅಲ್ಪಸಂಖ್ಯಾತರ ಬಗ್ಗೆ ಸಮಾನ ಭಾವವನ್ನು ಬೆಳೆಸಿಕೊಳ್ಳಬೇಕು. ಪಿತೃಪ್ರಧಾನ ವ್ಯವಸ್ಥೆ ಹೋಗಬೇಕು. ಪೆರಿಯಾರ್ ಅವರು ಹುಟ್ಟುಹಾಕಿದ ‘ಸ್ವಾಭಿಮಾನ ಚಳವಳಿ’ ಎಲ್ಲರಲ್ಲೂ ಆಗಬೇಕು” ಎಂದು ಶೈಲಜಾ ಆಶಿಸಿದ್ದಾರೆ. 

“ನನಗೆ ಹತ್ತು ವರ್ಷವಿದ್ದಾಗ, 'ನಾನು ಮಾದಕ ವಸ್ತು ಸೇವನೆ ಮಾಡಿದ್ದೀನಿ' ಎಂದು ನನ್ನ ಸ್ನೇಹಿತೆಯತಂದೆ ಸುಳ್ಳು ದೂರನ್ನು ದಾಖಲಿಸಿದ್ದರು. ಪೊಲೀಸರು ಈ ಬಗ್ಗೆ ತನಿಖೆ ಮಾಡದೆ ಬಂಧಿಸಿದ್ದರು. ಆ ಸಮಯದಲ್ಲಿ ಬೆಂಗಳೂರಿನ 'ಪರ್ಯಾಯ ಕಾನೂನು ವೇದಿಕೆ'ಯ ಮೈತ್ರಿ ಎಂಬ ವಕೀಲೆ ನನ್ನನ್ನು ಬಿಡಿಸಿದರು. ಹೀಗೆ ಕಾನೂನಿನಲ್ಲಿ ಕೆಲವು ಲೋಪಗಳಿವೆ. ಹಾಗಾಗಿ ಕಾನೂನಿನ ಲೋಪಗಳ ಬಗ್ಗೆ ನಮ್ಮ ಸಮುದಾಯ ಕೆಲಸ ಮಾಡಿದೆ” ಎಂದು ಅವರು ವಿವರಿಸಿದರು.

June pride month
ಶೈಲಜಾ ಪಡಿಂದಾಲ

“‘ನಾನು ಲೇಡಿಸ್’ ಎಂಬ ಚಿತ್ರದ ಮೂಲಕ ಜಾಗೃತಿ ಮೂಡಿಸಲು ಮುಂದಾಗಿದ್ದೇನೆ. ಹೀಗೆ ಹಲವರು ಅವರ ವೇದಿಕೆಗಳಲ್ಲಿ ಈ ಎಲ್ಲಾ ಸಮಸ್ಯೆಗಳ ಬಗ್ಗೆ ವಿವಿಧ ರೀತಿಯಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ” ಎಂದು ತಿಳಿಸಿದರು.

“ಕರ್ನಾಟಕದಲ್ಲಿ ಈ ವರ್ಷದ ಡಿಸೆಂಬರ್‍‌ನಲ್ಲಿ 'ಪ್ರೈಡ್‌ ಮಾರ್ಚ್ ನಡೆಯಬಹುದು. 'ಪ್ರೈಡ್‌ ಮಂತ್‌'ನಲ್ಲಿ ಶಾಲಾ ಕಾಲೇಜು, ಕಾರ್ಪೋರೇಟ್‌ ಸಂಸ್ಥೆಗಳು ಹಾಗೂ ಪೊಲೀಸ್‌ ಠಾಣೆಗಳಲ್ಲಿ ಲಿಂಗತ್ವದ ಬಗ್ಗೆ ಜಾಗೃತಿಯನ್ನು ಮೂಡಿಸುತ್ತೇವೆ. ಮಾಧ್ಯಮದ ಮೂಲಕ ಇನ್ನಷ್ಟು ಜಾಗೃತಿ ಮೂಡಬೇಕಾಗಿದೆ. ಮೆರವಣಿಗೆಯ ಸಂದರ್ಭದಲ್ಲಿ 'ಎಲ್‌ಜಿಬಿಟಿಕ್ಯೂ' ಸಮುದಾಯಕ್ಕೆ ಸಂಬಂಧಿಸಿದಂತೆ ಅರಿವು ಮೂಡಿಸಲು ಕೆಲವು ಚಿತ್ರ ಪ್ರದರ್ಶನಗಳು ನಡೆಯುತ್ತವೆ. ಜೊತೆಗೆ 'ಫ್ಲ್ಯಾಶ್‌ಮೊಬ್' (ರಸ್ತೆಗಳಲ್ಲಿ ಅಥವಾ ಮಾಲ್‌ಗಳಲ್ಲಿ ನೃತ್ಯ ಮಾಡುವುದು) ನಡೆಯುತ್ತವೆ” ಎಂದು 'ಪ್ರೈಡ್‌ ಮಂತ್‌' ಮತ್ತು 'ಪ್ರೈಡ್ ಮಾರ್ಚ್‌' ಬಗ್ಗೆ ಅವರು ವಿವರಿಸಿದರು.

“ಹೆಮ್ಮೆಯ ಮೆರವಣಿಗೆ ಬಗ್ಗೆ ಜನರ ಅಭಿಪ್ರಾಯ ಬದಲಾಗುತ್ತಿದೆ. ಚೆನ್ನೈನಲ್ಲಿ ಅನೇಕ ಪೋಷಕರು ಮೆರವಣಿಗೆಯಲ್ಲಿ ಭಾಗವಹಿಸುತ್ತಿದ್ದಾರೆ. ತಮ್ಮ ಮಕ್ಕಳ ಬಗ್ಗೆ ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದಾರೆ ಮತ್ತು ಶುಭಾಶಯಗಳನ್ನು ತಿಳಿಸುತ್ತಿದ್ದರು. ಆದರೆ, ಕೆಲವು ಕಡೆ ಇನ್ನೂ ಜಾಗೃತಿ ಮೂಡಬೇಕಿದೆ. ‘ನಾನು ಅವನಲ್ಲ ಅವಳು’ ಎಂಬ ಸಿನಿಮಾಗಳಿಂದ ಮತ್ತು ಮಾಧ್ಯಮಗಳಿಂದ ಜನರಲ್ಲಿ ಜಾಗೃತಿ ಮೂಡುತ್ತಿದೆ. ಈ ಮೊದಲಿಗಿಂತ ಸಾಕಷ್ಟು ಬದಲಾವಣೆ ಆಗಿದೆ. ಇನ್ನೂ ಆಗಬೇಕಿದೆ. ತಮಿಳುನಾಡು, ಕೇರಳಗಳಲ್ಲಿ ತುಂಬಾ ಬದಲಾವಣೆ ಆಗಿದೆ. ನಮ್ಮ ಕರ್ನಾಟಕ, ಆಂದ್ರಪ್ರದೇಶಗಳಲ್ಲಿ ಇನ್ನೂ ಸಾಕಷ್ಟು ಬದಲಾವಣೆ ತರುವಲ್ಲಿ ಪ್ರಯತ್ನ ನಡೆಯುತ್ತಿದೆ” ಎಂದು ಅವರು ಹೇಳಿದರು.

“ಹತ್ತು ಹದಿನೈದು ವರ್ಷಗಳ ಹಿಂದೆ ನಮ್ಮ ಸಮುದಾಯದ ಒಬ್ಬರು ಕಟ್ಟಡ ಕಾರ್ಮಿಕ ಕೆಲಸ ಮಾಡುತ್ತಿದ್ದರು. ಅವರು ಹುಡುಗಿಯಾಗಿದ್ದರು. ನಂತರ ಅವರು ಟ್ರಾನ್ಸ್‌ಮೆನ್‌ ಆಗಿ ಬದಲಾದರು. ಅಲ್ಲಿನ ಮಾಲಿಕ ಈ ವಿಷಯ ತಿಳಿದು, ಲಿಂಗವನ್ನು ತಪ್ಪಾಗಿ ಹೇಳಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿ ಹಲ್ಲೆ ಮಾಡಿಸಿದ್ದರು. ಮನನೊಂದು ಅವರು ಆತ್ಮಹತ್ಯೆ ಮಾಡಿಕೊಂಡರು. ಹೀಗೆ ಸಾಕಷ್ಟು ಹಲ್ಲೆಗಳು, ದೌರ್ಜನ್ಯಗಳು ನಡೆಯುತ್ತಲೇ ಇವೆ. ಜೊತೆಗೆ ನಾವು ನಮ್ಮ ಬಗ್ಗೆ ಹೇಳಿಕೊಂಡರೆ, ಬಲವಂತವಾಗಿ ಲಿಂಗ ಪರಿವರ್ತನೆ ಚಿಕಿತ್ಸೆಯನ್ನು ಕೊಡಿಸುತ್ತಾರೆ. ಅದರಿಂದ ಸಾಕಷ್ಟು ನೋವಾಗುತ್ತದೆ. ಈ ಕಾರಣಕ್ಕೆ ಅನೇಕರು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಆದರೆ, ಈ ಎಲ್ಲಾ ಸಮಸ್ಯೆಗಳಿಂದ ಹೊರಗೆ ಬಂದು 'ಪ್ರೈಡ್‌ ಮಾರ್ಚ್‌'ಗಳಲ್ಲಿ ಜಾಗೃತಿ ಮೂಡಿಸುತ್ತಿದ್ದೇವೆ” ಎಂದು ಶೈಲಜಾ ತಿಳಿಸಿದ್ದಾರೆ.

“ಮಾಧ್ಯಮಗಳಲ್ಲಿ , ಸಿನಿಮಾಗಳಲ್ಲಿ ಗಂಡಸನ್ನು ರೋಷದಲ್ಲಿ, ಕೋಪದಲ್ಲಿ ತೋರಿಸುತ್ತೇವೆ. ಅವರನ್ನು ಹುಲಿ ಮಾಡಿಬಿಡುತ್ತೇವೆ. ಹೆಣ್ಣನ್ನು ಅಳುವ ಅಥವಾ ಮೌನಿಯಂತೆ ಮಾತ್ರ ತೋರಿಸುತ್ತೇವೆ. ಜೊತೆಗೆ ಹೆಣ್ಣು ಸ್ವಲ್ಪ ಜೋರಾಗಿ ಮಾತಡಿದರೆ, ಜೋರಾಗಿ ನಕ್ಕರೆ, ಕೋಪ ಮಾಡಿಕೊಂಡರೆ, ಜಗಳ ಮಾಡಿದರೆ, ಆರಾಮಾಗಿ ಓಡಾಡಿಕೊಂಡಿದ್ದರೆ - ಗಂಡು ಬೀರಿ ಅಂತ ಕರೆಯುತ್ತೇವೆ. ಇದರಲ್ಲೇ ಗೊತ್ತಾಗುತ್ತೆ, ಗಂಡು ಸರ್ವಸ್ವತಂತ್ರನು, ಹೆಣ್ಣಿಗೆ ಆ ಸ್ವಾತಂತ್ರವಿಲ್ಲವೆಂದು. ಈ ಸಂಪ್ರಾದಾಯಿಕ ಮನಸ್ಥಿತಿಯು ಬದಲಾಗಬೇಕು" ಎಂದು ಅವರು ಹೇಳಿದ್ದಾರೆ. 

ಹೆಮ್ಮೆಯ ಮೆರವಣಿಗೆ ಶುರುವಾಗಿದ್ದು ಹೇಗೆ?

ಮೊದಲಿಗೆ ಎಲ್‌ಜಿಬಿಟಿಕ್ಯೂ ಎಂದರೇ ಲೈಂಗಿಕ ಮತ್ತು ಲಿಂಗತ್ವ ಅಲ್ಪಸಂಖ್ಯಾತರನ್ನು ಕ್ರೋಢೀಕರಿಸಿ ಕರೆಯಲಾದ ಪದ ಆಗಿದೆ. ಎಲ್‌ಜಿಬಿಟಿಕ್ಯೂನ ಅರ್ಥ ಲೆಸ್ಬಿಯನ್ (ಮಹಿಳಾ ಸಲಿಂಗಕಾಮಿ), ಗೇ (ಪುರುಷ ಸಲಿಂಗಕಾಮಿ), ಬೈಸೆಕ್ಸೂಅಲ್ (ದ್ವಿಲಿಂಗಿಗಳು) ಹಾಗೂ ಟ್ರಾನ್ಸ್ಜೆಂಡರ್ (ಲಿಂಗತ್ವ ಅಲ್ಪಸಂಖ್ಯಾತರು) ಕ್ವೀರ್ (ಲೈಂಗಿಕ ಅಲ್ಪಸಂಖ್ಯಾತರು ಅಥವಾ ಸಾಮಾನ್ಯ ಆಸಕ್ತಿಗಳನ್ನು ಹೊಂದಿರುವವರು) ಎಂದು ಕರೆಯಲಾಗಿದೆ.

1960ರ ದಶಕದಲ್ಲಿ ಅಮೇರಿಕಾದಲ್ಲಿ ಈ ಸಮುದಾಯದವರ ಮೇಲೆ ಪೊಲೀಸರು ಸತತವಾಗಿ ದಾಳಿ-ಹಲ್ಲೆ ನಡೆಸುತ್ತಿದ್ದರು. ನ್ಯೂಯಾರ್ಕ್‌ನಲ್ಲಿ ಜೂನ್ 28 1969ರಂದು ರಾತ್ರಿ ವೇಳೆ ಪೊಲೀಸರು 'ಸ್ಟೋನ್‌ವಾಲ್‌' ಎಂಬ ಸಲಿಂಗಿಕಾಮಿಗಳು ಇದ್ದ ಬಾರ್ ಮೇಲೆ ದಾಳಿ ಮಾಡಿದಾಗ, ಇದು ತೀವ್ರ ಸ್ವರೂಪ ಪಡೆದುಕೊಂಡಿತು. ಪೊಲೀಸರ ವಿರುದ್ಧ ಈ ಸಮುದಾಯ ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ನಡೆಸಿತು. ಘರ್ಷಣೆಯೂ ಸಂಭವಿಸಿತು. ಸಾಕಷ್ಟು ಸಾವು-ನೋವುಗಳು ಆದವು. ಇದನ್ನು ‘ಸ್ಟೋನ್ವಾಲ್ ದಂಗೆ” ಎಂದು ಕರೆಯಲಾಗಿದೆ. ನಂತರದ ದಿನಗಳಲ್ಲಿ, ಸಾಮೂಹಿಕ ಪ್ರತಿಭಟನೆಗಳು ನಡೆದವು. ಕೆಲವೇ ವಾರಗಳಲ್ಲಿ ಸಲಿಂಗಕಾಮಿಗಳು ಗುಂಪುಗಳಾಗಿ ಸಂಘಟನೆಯಾದರು. ಬಂಧನದ ಭಯವಿಲ್ಲದೆ ತಮ್ಮ ಲೈಂಗಿಕ ದೃಷ್ಟಿಕೋನದ ಬಗ್ಗೆ ಬಹಿರಂಗವಾಗಿ ಮಾತನಾಡಲು ಆರಂಭಿಸಿದರು. ಈ ಹೋರಾಟಗಳು ಪ್ರಪಂಚದಾದ್ಯಂತ ಎಲ್‌ಜಿಬಿಟಿಕ್ಯೂ ಸಮುದಾಯದವರಿಗೆ ಬೃಹತ್ ಮಾನವ ಹಕ್ಕುಗಳ ಚಳುವಳಿಯನ್ನು ಆರಂಭಿಸಲು ಪ್ರೇರೇಪಣೆಯಾದವು. ನಂತರ ಪೊಲೀಸರ ದೌರ್ಜನ್ಯವು ಕಡಿಮೆಯಾಗುತ್ತ ಬಂದಿತು.

'ಸ್ಟೋನ್‌ವಾಲ್‌' ದಂಗೆಗಳ ನಂತರ, ನ್ಯೂಯಾರ್ಕ್ ನಗರದಲ್ಲಿ ಎಲ್‌ಜಿಬಿಟಿಕ್ಯೂ ಸಮುದಾಯವನ್ನು ವರ್ಗೀಕರಿಸಿ, ಅದರ ವ್ಯತ್ಯಾಸಗಳನ್ನು ಪಟ್ಟಿಮಾಡಲಾಯಿತು. ಆರು ತಿಂಗಳೊಳಗೆ, ಎರಡು ಸಲಿಂಗಕಾಮಿ ಹಕ್ಕುಗಳ ಸಂಘಟನೆಗಳು ಹುಟ್ಟಿಕೊಂಡವು. ಸಲಿಂಗಕಾಮಿಗಳ ಹಕ್ಕುಗಳನ್ನು ಬೆಂಬಲಿಸಲು ಮೂರು ಪತ್ರಿಕೆಗಳನ್ನು ಸಹ ಸ್ಥಾಪಿಸಲಾಯಿತು. ಕೆಲವೇ ವರ್ಷಗಳಲ್ಲಿ, ಸಲಿಂಗಕಾಮಿ ಹಕ್ಕುಗಳ ಸಂಘಟನೆಗಳು ಅಮೇರಿಕಾ ಮತ್ತು ಪ್ರಪಂಚದಾದ್ಯಂತ ಸ್ಥಾಪಿಸಲ್ಪಟ್ಟವು.

ಈ ಎಲ್ಲ  ಬದಲಾವಣೆಯ ಸ್ಮರಣೆ ಮತ್ತು 'ಸ್ಟೋನ್‌ವಾಲ್‌' ದಂಗೆಯ ನೆನಪಿಗಾಗಿ 1970  ಜೂನ್ 28ರಂದು ನ್ಯೂಯಾರ್ಕ್, ಲಾಸ್ ಏಂಜಲೀಸ್, ಚಿಕಾಗೋ, ಸ್ಯಾನ್ ಫ್ರಾನ್ಸಿಸ್ಕೋ, ಅಟ್ಲಾಂಟಾ ಹಾಗೂ ಟೊರೊಂಟೊದಲ್ಲಿ ಮೊದಲ ಪ್ರೈಡ್‌ ಮಾರ್ಚ್ ನಡೆಯಿತು. ನಂತರ, ಇತರ ನಗರಗಳು ಮತ್ತು ದೇಶಗಳಲ್ಲಿ ಈ ರೀತಿಯ ಮೆರವಣಿಗೆಗಳು ನಡೆದವು. 

ಹೆಮ್ಮೆಯ ಮೆರವಣಿಗೆ (ಪ್ರೈಡ್ ಮಾರ್ಚ್) ಎಂದರೇನು?  

ಪ್ರೈಡ್‌ ಎಂದರೆ ಹೆಮ್ಮೆ ಎಂದರ್ಥ. 'ನಾನು ಸಲಿಂಗಕಾಮಿಯಾಗಲು ಅಥವಾ ಲಿಂಗತ್ವ ಅಲ್ಪಸಂಖ್ಯಾತರಾಗಿ ಇರುವುದಕ್ಕೆ ಹೆಮ್ಮೆ ಪಡುತ್ತೇನೆ' ಎಂದು ಮೆರವಣಿಗೆ ನಡೆಸುವುದೇ ಹೆಮ್ಮೆಯ ಮೆರವಣಿಗೆ. ಈ ಆಚರಣೆಯನ್ನು ಸಾರ್ವಜನಿಕ ಕಾರ್ಯಕ್ರಮಗಳಾಗಿ ನಡೆಸಲಾಗುತ್ತದೆ. ಈ ಮೆರವಣಿಗೆಯಲ್ಲಿ ಲಿಂಗ ಸಮಾನತೆ, ಮುಕ್ತ ವಿಷಯ, ಬೌದ್ಧಿಕ ಘಟನೆಗಳು, ಪ್ರದರ್ಶನಗಳು, ಚಲನಚಿತ್ರ ಪ್ರದರ್ಶನಗಳು, ಸಾರ್ವಜನಿಕ ಚರ್ಚೆಗಳು ನಡೆಯುತ್ತವೆ. 

ಭಾರತದಲ್ಲಿ ಹೆಮ್ಮೆಯ ಮೆರವಣಿಗೆ

ಭಾರತದಲ್ಲಿ ಮೊದಲ ಬಾರಿಗೆ 'ದೆಹಲಿ ಕ್ವೀರ್ ಪ್ರೈಡ್ ಪರೇಡ್' ಎಂಬ ಸಂಸ್ಥೆಯು ನವೆಂವರ್ 2008ರಲ್ಲಿ ಹೆಮ್ಮೆಯ ಮೆರವಣಿಗೆಯನ್ನು ಆರಂಭಿಸಿತು. ದೆಹಲಿಯಲ್ಲಿ ಮೊದಲ ಬಾರಿಗೆ ನಡೆದ ಈ ಮೆರವಣಿಗೆಯಲ್ಲಿ ನೂರಾರು ಮಂದಿ ಒಟ್ಟುಗೂಡಿದರು. ಈ ಮೆರವಣಿಗೆ ಮುಖ್ಯ ಉದ್ದೇಶ 'ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 377 ಅಸ್ವಾಭಾವಿಕ ಲೈಂಗಿಕತೆ ಅಪರಾಧ ಎಂದು ಹೇಳುತ್ತದೆ. ಆ ಸೆಕ್ಷನ್‌ ಅನ್ನು ರದ್ದುಗೊಳಿಸಬೇಕೆಂದು' ಒತ್ತಾಯಿಸುವುದಾಗಿತ್ತು. ಸತತ 10 ವರ್ಷಗಳ ಹೋರಾಟದ ಬಳಿಕ 2018ರಂದು ಸಲಿಂಗಕಾಮ ಅಪರಾಧವಲ್ಲ ಎಂದು ಸುಪ್ರೀಂಕೋರ್ಟ್‌ ತೀರ್ಪು ನೀಡಿತು.

ಪ್ರತಿ ಮೆರವಣಿಗೆಯಲ್ಲಿ ಸಮುದಾಯದ ಬಗ್ಗೆ ಜಾಗೃತಿ ಮೂಡಿಸುವುದರ ಜೊತೆಗೆ ತಮ್ಮ ಎಲ್‌ಜಿಬಿಟಿಕ್ಯೂ ಸಮುದಾಯ ತಮ್ಮ ಸ್ವಂತಿಕೆಯನ್ನು ಸಂಭ್ರಮಿಸುತ್ತಾರೆ.

ಕರ್ನಾಟಕದಲ್ಲಿ ಸ್ವಾಭಿಮಾನದ ಮೆರವಣಿಗೆ

ರಾಜ್ಯದಲ್ಲಿ ಜೂನ್‌ 2008ರಂದು ಮೊದಲ ಬಾರಿಗೆ ಹೆಮ್ಮೆಯ ಮೆರವಣಿಗೆ ನಡೆಯಿತು. ಲೈಂಗಿಕ ಅಲ್ಪಸಂಖ್ಯಾತರು ಮತ್ತು ಲಿಂಗತ್ವ ಅಲ್ಪಸಂಖ್ಯಾತರ ಹಕ್ಕುಗಳ ಒಕ್ಕೂಟವು ಈ ಮೆರವಣಿಗೆಯನ್ನು ಆಯೋಜನೆ ಮಾಡಿತು. ಕರ್ನಾಟಕದಲ್ಲಿ 'ಸ್ವಾಭಿಮಾನದ ಮೆರವಣಿಗೆ' ಎಂಬ ಹೆಸರಿನಲ್ಲಿ  ಮೆರವಣಿಗೆ ನಡೆಯುತ್ತದೆ.

2018ರಲ್ಲಿ ಸುಪ್ರೀಕೋರ್ಟ್ ನೀಡಿದ ತೀರ್ಪು ಕರ್ನಾಟಕದಲ್ಲೂ ಸಂಭ್ರಮಕ್ಕೆ ಸಾಕ್ಷಿಯಾಯಿತು. ವರ್ಷದಲ್ಲಿ ಮೇ, ಜೂನ್‌ ಹಾಗೂ ನವೆಂಬರ್‌ ತಿಂಗಳಲ್ಲಿ ಹಲವಾರು ವಿಷಯಗಳನ್ನು ಮುಂದಿಟ್ಟುಕೊಂಡು ಮೆರವಣಿಗೆ ನಡೆಸಲಾಗುತ್ತದೆ. ಮೆರವಣಿಗೆಯಲ್ಲಿ ಹಾಡು ನೃತ್ಯ ಸೇರಿದಂತೆ ಅವರಿಗೆ ಇಷ್ಟವಾದ ಕೆಲಸಗಳನ್ನು ಸ್ವತಂತ್ರವಾಗಿ ಆಚರಿಸುತ್ತಾರೆ.

ನಿಮಗೆ ಏನು ಅನ್ನಿಸ್ತು?
14 ವೋಟ್
eedina app