ಒಲೆ ಮುಂದೆ ಬೆಂದವರ ಒಡಲ ಸಂಕಟ | ಬಿಸಿಯೂಟ ನೌಕರರ ನೋವು ಕೇಳುವವರಿಲ್ಲ...

ಹೆಗ್ಗಡದೇವನಕೋಟೆಯಿಂದ ಲಕ್ಷ್ಮಮ್ಮ, ಗುಂಡ್ಲುಪೇಟೆಯ ಮಹಾದೇವಮ್ಮ.. ಹೀಗೆ ಒಬ್ಬಿಬ್ಬರಲ್ಲ.. ಬರೋಬ್ಬರಿ ಆರು ಸಾವಿರ ಬಡ ಮಹಿಳೆಯರು ತಿನ್ನುವ ಅನ್ನಕ್ಕೆ ಸರ್ಕಾರ ಕಲ್ಲು ಹಾಕಿದೆ. ಸರ್ಕಾರಿ ಶಾಲೆಗಳಿಗೆ ಬರುತ್ತಿದ್ದ ಬಡವರ ಮಕ್ಕಳಿಗೆ ಹೊಟ್ಟೆ ತುಂಬ ಊಟ ಹಾಕುತ್ತಿದ್ದ ಈ ತಾಯಂದಿರೇ ಇಂದು ಉಪವಾಸ ಮಲಗುವಂತಾಗಿದೆ. ಯಾವ ಸವಲತ್ತೂ ಕೊಡದೇ ವಯಸ್ಸಿನ ಆಧಾರದ ಮೇಲೆ ದಿಢೀರನೆ ನಿವೃತ್ತಿ ಮಾಡಿ ಮನೆಗೆ ಕಳಿಸಿದ ಸರ್ಕಾರದ ವಿರುದ್ಧ ಬಿಸಿಯೂಟ ನೌಕರರು ಅನಿರ್ದಿಷ್ಟಾವಧಿ ಧರಣಿ ಮಾಡುತ್ತಿದ್ದಾರೆ.
Protest

"ನಾವು ಹೆಗ್ಗಡದೇವನಕೋಟೆಯಿಂದ 200 ಜನ ಬಂದಿವಿ. ನಾನು ಲಕ್ಷ್ಮಮ್ಮ, ಗಂಡ ಇಲ್ಲ, ಮಕ್ಕಳಿಲ್ಲ. 20 ವರ್ಷ ಕೆಲ್ಸ ಮಾಡಿನಿ. 300 ರೂಪಾಯಿತಾವಿಂದ ಕೆಲಸ ಮಾಡಿವಿ, ಈಗ ಏಕ್ದುಮ್‌ ನಮ್ಮ ತಗ್ದು ಕೂರ್ಸ್‌ ಬುಟ್ಟವ್ರೆ. ಕೂಲಿನೂ ಇಲ್ಲ, ಇಷ್ಟಗ್ಲ ಜಮೀನಿಲ್ಲ. ಅಡ್ಗೆ ಕೆಲ್ಸಾನೆ ನಂಬಿದ್ದೆ. ಈಗ ಅನ್ನಕ್ಕೆ ಗತಿಗೊಸ್ರ ಇಲ್ಲ ಕವ್ವ.."

"ನನ್ನೆಸ್ರು ಮಹಾದೇವಮ್ಮ. ಗುಂಡ್ಲುಪೇಟೆ ತಾಲೂಕಿನಿಂದ ಹೋರಾಟಕ್ಕೆ ಅಂತ 400 ಜನ ಬಂದಿದ್ದೇವೆ. 20 ವರ್ಷ ಕೆಲ್ಸ ಮಾಡಿದ್ರೂ ನಮ್ಗೆ ಕೆಲಸದ ಭದ್ರತೆಯಿಲ್ಲ. ಈಗ ಇಡೀ ರಾಜ್ಯದಲ್ಲಿ 6,000 ಜನರನ್ನು ಕೆಲಸದಿಂದ ತೆಗೆದಿದ್ದಾರೆ. ಕನಿಷ್ಠ ಒಂದು ಲಕ್ಷ ರೂಪಾಯಿ ಇಡುಗಂಟು ಕೊಡಬೇಕು ಅನ್ನೋದು ನಮ್ಮ ಪ್ರಮುಖ ಬೇಡಿಕೆ. ಸಿಎಂ ಅವ್ರು ನಮ್ಮ ಬೇಡಿಕೆಗೆ ಸ್ಪಂದಿಸುವ ತನಕ ಎಷ್ಟೇ ದಿನವಾದ್ರೂ ನಾವು ಇಲ್ಲಿಂದ ಹೋಗೋದಿಲ್ಲ".

"ಏಕ್‌ದಮ್‌ ತೆಗೆದುಬಿಟ್ಟವ್ರೆ. ನಾವ್‌ ಎಲ್ಲಿಗೆ ಹೋಗ್ಬೇಕು, ಮಕ್ಳು ಸೇರಂಗಿಲ್ಲ. ನಮ್ಮ್‌ ಪರಿಸ್ಥಿತಿ ದೇವ್ರೇ ಬಲ್ಲ. ನಮಗ್‌ ಬಾಳ್‌ ಪರಿಸ್ಥಿತಿ ಗಂಭೀರ ಇದೆ. ಮೂರ್‌ ತಿಂಗ್ಳಾತು ಕೆಲ್ಸದಿಂದ ತಗ್ದು, ಮನಿ ಇಲ್ಲ. ಕಿರ್ಯಾರ್‌ ಮನಿಗಿದಿವಿ. ಇಷ್ಟ್‌ ಅನ್ನ ತಂದು ತಿಂದ್‌ ಜೀವ್ನ ಮಾಡ್ತಿದ್ವಿ, ಈಗ ಅದೂ ಇಲ್ಲ. ಸುಳ್ಳಾಡಂಗಿಲ್ಲ. ಗುಲ್ಬರ್ಗ ಜಿಲ್ಲೆ ಸೇಡಂ ತಾಲೂಕಿಂದ ಬಂದಿವಿ, ನಮ್ಗ ಏನಾರ ಸಹಾಯ ಮಾಡ್ರಿ ಜೀವ್ನಕ".

ಇದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಅನಿರ್ದಿಷ್ಟಾವಧಿ ಧರಣಿಯಲ್ಲಿ ನಿರತರಾಗಿರುವ ರಾಜ್ಯದ ಬಿಸಿಯೂಟ ನೌಕರರ ಕರುಳಿನ ಸಂಕಟ. 

ಬರ, ಬಡತನ, ಹಸಿವು, ಅಪೌಷ್ಟಿಕತೆ, ಶಾಲೆಯಲ್ಲಿ ಗೈರು ಹಾಜರಿ, ಜೀತ, ಬಾಲ್ಯ ಕಾರ್ಮಿಕ ಪದ್ಧತಿಯಿಂದ ನರಳುತ್ತಿದ್ದ, ಶಾಲೆಯಿಂದ ಹೊರಗುಳಿದಿದ್ದ ಮಕ್ಕಳನ್ನು ಶಾಲೆಗೆ ಕರೆತಂದು ಶೈಕ್ಷಣಿಕವಾಗಿ ಪ್ರಗತಿ ಸಾಧಿಸುವಂತೆ ಮಾಡಲು ರೂಪಿಸಿದ ಯೋಜನೆಯೇ ಮಧ್ಯಾಹ್ನದ ಬಿಸಿಯೂಟ ಯೋಜನೆ ಅಥವಾ ಅಕ್ಷರ ದಾಸೋಹ ಕಾರ್ಯಕ್ರಮ. ಸರ್ಕಾರದ ಈ ಯೋಜನೆಯನ್ನು ಸಮರ್ಪಕವಾಗಿ ಜಾರಿಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾ ಬಂದಿರುವವರು ಅಡುಗೆ ಕೆಲಸದ ಮಹಿಳೆಯರು. 

Image
ಬಿಸಿಯೂಟ ನೌಕರರ ಅಹೋರಾತ್ರಿ ಹೋರಾಟ
ಅಹೋರಾತ್ರಿ ಹೋರಾಟ ನಿರತ ಬಿಸಿಯೂಟ ನೌಕರರ ದುಃಸ್ಥಿತಿ

ಬಿಸಿಯೂಟ ನೌಕರರು ಶಾಲೆಯ ಮಕ್ಕಳ ಊಟಕ್ಕೆ ಬರುವ ದಾಸ್ತಾನನ್ನು ಸ್ವಚ್ಛಗೊಳಿಸುವುದರಿಂದ ಹಿಡಿದು ನಿತ್ಯ ಇಡೀ ರಾಜ್ಯದಲ್ಲಿ ಲಕ್ಷಾಂತರ ಮಕ್ಕಳಿಗೆ ಅನ್ನ ಬೇಯಿಸಿ ಹಸಿವು ನೀಗಿಸಿದ್ದಾರೆ. ಮಾತ್ರವಲ್ಲ, ತಮ್ಮದೇ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಪುಡಿಗಾಸಿಗೆ ಸಿಕ್ಕ ದುಡಿಮೆಯ ದಾರಿಯನ್ನು ಅಕ್ಷರಶಃ ಸೇವೆಯೆಂಬಂತೆ ಭಾವಿಸಿದ್ದಾರೆ. ಆದರೆ, 19-20 ವರ್ಷಗಳ ಕಾಲ ನಿರಂತರವಾಗಿ ಸೇವೆ ಸಲ್ಲಿಸಿರುವ ಈ ಮಹಿಳೆಯರು ₹300 ರಿಂದ ಕೆಲಸ ಆರಂಭಿಸಿ ₹2500 ವರೆಗೆ ಸಣ್ಣ ಮೊತ್ತದ ಸಂಬಳಕ್ಕೆ ಕೆಲಸ ಮಾಡಿದ್ದಾರೆ. ಆದರೆ, ಈಗ ಅವರಿಗೆ 60 ವರ್ಷ ವಯಸ್ಸಾಗಿದೆ ಎಂಬ ಕುಂಟುನೆಪವೊಡ್ಡಿ ಯಾವುದೇ ಪೂರ್ವ ಮಾಹಿತಿ ನೀಡದೇ, ಪರಿಹಾರ ಧನ ಕೊಡದೆ ಅಮಾನವೀಯವಾಗಿ ಕೆಲಸದಿಂದ ಕೈಬಿಡಲಾಗಿದೆ. ಸರ್ಕಾರದ ಈ ತೀರ್ಮಾನದಿಂದ ಕಂಗೆಟ್ಟಿರುವ ಮಹಿಳೆಯರು ಈಗ ತಮ್ಮ ಬದುಕಿಗೆ ಸೂಕ್ತ ಆಧಾರ ಕಲ್ಪಿಸುವಂತೆ ಬೇಡಿಕೆ ಇಟ್ಟು ಪರಿಹಾರ ಧನಕ್ಕಾಗಿ ಮತ್ತೆ ಕೆಂಬಾವುಟ ಹಿಡಿದು ಹೋರಾಟನಿರತರಾಗಿದ್ದಾರೆ. 

ಕರ್ನಾಟಕ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘದ ಗೌರವಾಧ್ಯಕ್ಷರಾದ ಎಸ್‌ ವರಲಕ್ಷ್ಮಿ ಅವರು ಈದಿನ.ಕಾಮ್‌ಗೆ ಹೋರಾಟ ಮುಂದುವರೆಸುತ್ತಿರುವುದರ ಬಗ್ಗೆ ಮಾತನಾಡಿದರು. 

"ಬಿಸಿಯೂಟ ನೌಕರರ ಹೋರಾಟ ಇಂದು ಕೂಡ ಮುಂದುವರೆಯುತ್ತಿದೆ. ಕಾರಣ, ನಿರ್ದೇಶಕರಷ್ಟೇ ಬಂದು ಮನವಿ ಪತ್ರ ಪಡೆದುಕೊಂಡಿರುವುದು ಬಿಟ್ಟರೆ ಸರ್ಕಾರದ ಭಾಗವಾಗಿ ಉನ್ನತ ಮಟ್ಟದ ಅಧಿಕಾರಿ ವರ್ಗ ಮತ್ತು ಸಚಿವರು ಇದುವರೆಗೂ ಪ್ರತಿಭಟನಾ ಸ್ಥಳಕ್ಕೆ ಬಂದು ಬಡ ಮಹಿಳಾ ನೌಕರರ ಸಮಸ್ಯೆ ಆಲಿಸಿಲ್ಲ. ಪ್ರಿನ್ಸಿಪಲ್‌ ಸೆಕ್ರೆಟರಿ ಸಭೆ ಕರೆದಿದ್ದರು, ಅಲ್ಲಿ ನಮ್ಮ ಬೇಡಿಕೆಗಳ ಬಗ್ಗೆ ಕೂಲಂಕಷವಾಗಿ ವಿವರಿಸಿ, ಮುಖ್ಯಮಂತ್ರಿಗಳು ಮತ್ತು ಸಚಿವರ ಹಂತದಲ್ಲಿ ಸಭೆ ಕರೆದು ಚರ್ಚಿಸಿ ನಮ್ಮ ಬೇಡಿಕೆಗಳ ಬಗ್ಗೆ ತೀರ್ಮಾನಿಸಬೇಕೆಂದು ಹೇಳಿದ್ದೇವೆ. ಇದುವರೆಗೂ ಪ್ರತಿಕ್ರಿಯೆ ಬಂದಿಲ್ಲ. ಹಾಗಾಗಿ ಪ್ರತಿಭಟನೆ ಮುಂದುವರಿಯಲಿದೆ" ಎಂದರು.

ಈ ಸುದ್ದಿ ಓದಿದ್ದೀರಾ? ಬೆಂಗಳೂರು | ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಬಿಸಿಯೂಟ ನೌಕರರ ಪ್ರತಿಭಟನೆ

"ಅಕ್ಷರ ದಾಸೋಹ ನೌಕರರು ತಿಂಗಳಿಗೆ ಪಡೆಯುವ ವೇತನ ಕೇವಲ ₹2,500 ರಿಂದ ₹2,700 ಅಷ್ಟೇ. ಆದರೆ, ಈ ಹೋರಾಟಕ್ಕೆ ಬರುವ ಸಲುವಾಗಿ ಒಂದು ತಿಂಗಳ ಸಂಬಳವನ್ನು ಖರ್ಚು ಮಾಡಿಕೊಂಡು ಬರುವ ದುಃಸ್ಥಿತಿಯಿದೆ. ಇಡೀ ರಾತ್ರಿ ಪ್ರತಿಭಟನಾ ಸ್ಥಳದಲ್ಲೇ ಮಲಗಿದ್ದು, ಮತ್ತೆ ಇಂದು ಹೋರಾಟದಲ್ಲಿ ಭಾಗಿಯಾಗಿದ್ದಾರೆ. ಏಕಾಏಕಿ ಕೆಲಸದಿಂದ ತೆಗೆಯಲಾಗಿರುವ ಮಹಿಳೆಯರಿಗೆಲ್ಲ ₹1,00,000 ಪರಿಹಾರ ನೀಡಿ ಕೆಲಸದಿಂದ ನಿವೃತ್ತಿ ಮಾಡಬೇಕೆಂಬುದು ನಮ್ಮ ಪ್ರಮುಖ ಬೇಡಿಕೆಯಾಗಿದೆ. ಅದು ಈಡೇರದ ಹೊರತು ನೌಕರರು ಹೋರಾಟ ಕೈಬಿಡುವುದಿಲ್ಲ ಎಂದು ವರಲಕ್ಷ್ಮಿ ಅವರು ಸ್ಪಷ್ಟಪಡಿಸಿದರು.

"2001-02ರಲ್ಲಿ ಅಡುಗೆ ಕೆಲಸಕ್ಕೆ ನೇಮಿಸಿಕೊಳ್ಳುವಾಗ ವಿದ್ಯಾರ್ಹತೆ ಮತ್ತು ವಯಸ್ಸಿನ ಅರ್ಹತೆಯನ್ನು ಮಾತ್ರ ನಿಗದಿಪಡಿಸಿದ್ದು, ನಿವೃತ್ತಿ ವಯಸ್ಸನ್ನು ನಿಗದಿ ಮಾಡಿರಲಿಲ್ಲ. ಈ ಬಗ್ಗೆ ಅಕ್ಷರ ದಾಸೋಹ ಸಂಘ (ಸಿಐಟಿಯು) ಸರ್ಕಾರಕ್ಕೆ 2016 ರಿಂದ ಹಲವು ಬಾರಿ ವಯಸ್ಸಿನ ಆಧಾರದಲ್ಲಿ ನಿವೃತ್ತಿ ಸೌಲಭ್ಯ ಕಲ್ಪಿಸಬೇಕೆಂದು ಮನವಿ ಮಾಡಿದ್ದು, ಶಿಕ್ಷಣ ಇಲಾಖೆ, ಸರ್ಕಾರ ಈ ಬಗ್ಗೆ ಮುತುವರ್ಜಿ ವಹಿಸಿಲ್ಲ. ಆದರೆ, ಈಗ ಏಕಾಏಕಿ ನೌಕರರನ್ನು ಕೆಲಸದಿಂದ ಕೈಬಿಟ್ಟು ಶೋಷಿಸುತ್ತಿದೆ. ಇದರಿಂದ ಬಿಸಿಯೂಟ ನೌಕರರು ಆರ್ಥಿಕವಾಗಿ, ಮಾನಸಿಕವಾಗಿ ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ" ಎಂದು ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಮಾಲಿನಿ ಮೇಸ್ತಾ ಈದಿನ.ಕಾಮ್‌ಗೆ ವಿವರಿಸಿದರು. 

"ಕಳೆದ ಎರಡೂವರೆ ತಿಂಗಳಿನಿಂದ ನೌಕರರಿಗೆ ಸಂಬಳ ಹಾಕಿಲ್ಲ. ಕಳೆದ ಏಪ್ರಿಲ್‌ನಲ್ಲಿ ಜಂಟಿ ನಿರ್ದೇಶಕರ ಕಚೇರಿ ಮುಂದೆ ನಡೆದ ಹೋರಾಟದ ಸಂದರ್ಭದಲ್ಲಿ ಶಿಕ್ಷಣ ಸಚಿವರು ಸಭೆ ಕರೆದಿದ್ದರು. ಅವರ ಮುಂದೆ ಬಿಸಿಯೂಟ ನೌಕರರ ಬೇಡಿಕೆಗಳನ್ನು ಇಟ್ಟಾಗ ನಮ್ಮಲ್ಲಿ ಹಣ ಇಲ್ಲ, ಮುಖ್ಯಮಂತ್ರಿಗಳೊಂದಿಗೆ ಮಾತನಾಡುತ್ತೇವೆ ಎಂಬ ಹಾರಿಕೆಯ ಉತ್ತರ ನೀಡಿದ್ದರು. ಜವಾಬ್ದಾರಿಯುತ ಸ್ಥಾನದಲ್ಲಿರುವವರ ದಿವ್ಯ ನಿರ್ಲಕ್ಷ್ಯದಿಂದ ಬೇಸತ್ತಿರುವ ನೌಕರರು ಮತ್ತೊಮ್ಮೆ ಸಚಿವರ ದಾಕ್ಷಿಣ್ಯ, ಪೊಳ್ಳು ಭರವಸೆಗೆ ಬಗ್ಗದೆ ಆದೇಶ ಪ್ರತಿ ಕೊಡುವವರೆಗೆ ಹೋರಾಟವನ್ನು ನಿಲ್ಲಿಸುವುದಿಲ್ಲ" ಎಂದು ಮಾಲಿನಿ ಅವರು ಸರ್ಕಾರದ ವಿರುದ್ಧ  ಆಕ್ರೋಶ ವ್ಯಕ್ತಪಡಿಸಿದರು.

"ಈ ಹಿಂದೆ ಬಿಸಿಯೂಟ ನೌಕರರಿಗೆ ಎಲ್‌ಐಸಿಯ ಮುಖಾಂತರ ಪಿಂಚಣಿ ಯೋಜನೆ ರೂಪಿಸಲು ಒಪ್ಪಿಗೆ ನೀಡಿ ಸಮಿತಿ ರಚನೆ ಮಾಡಲಾಗಿತ್ತು. ಅದರ ಕ್ರಮಗಳು ಜಾರಿಯಾಗುವ ಮುನ್ನವೇ ನೌಕರರನ್ನು ಕೆಲಸದಿಂದ ನಿವೃತ್ತಿ ಮಾಡಿರುವುದು ಸರ್ಕಾರದ ಮಹಿಳಾ ವಿರೋಧಿ ನಡೆಯಾಗಿದೆ" ಎಂದು ಅಕ್ಷರ ದಾಸೋಹ ನೌಕರರ ಸಂಘದ (ಸಿಐಟಿಯು) ಖಜಾಂಚಿ ಮಹಾದೇವಮ್ಮ ಅಸಮಾಧಾನ ವ್ಯಕ್ತಪಡಿಸಿದರು.

ರಾಜ್ಯದ ಬೇರೆ ಬೇರೆ ಭಾಗಗಳಿಂದ ಬಂದು ಹಸಿದ ಹೊಟ್ಟೆಯಲ್ಲಿಯೇ ಪ್ರತಿಭಟನೆ ಮಾಡುತ್ತಿರುವ ಈ ಬಡ ತಾಯಂದಿರ ಸಂಕಟ ಆಲಿಸುವ ವ್ಯವಧಾನವೂ ನಮ್ಮನ್ನು ಆಳುವವರಿಗೆ ಇಲ್ಲವೇ?              

ನಿಮಗೆ ಏನು ಅನ್ನಿಸ್ತು?
0 ವೋಟ್