ಲೈಂಗಿಕ ದೌರ್ಜನ್ಯ ಪ್ರಕರಣ| ಕುಸ್ತಿ ಒಕ್ಕೂಟದ ಮುಖ್ಯಸ್ಥರ ವಿರುದ್ಧ ತನಿಖೆಗೆ ಪ್ರಿಯಾಂಕಾ ಗಾಂಧಿ ಒತ್ತಾಯ

  • ಭಾರತದ ಇಬ್ಬರು ಒಲಿಂಪಿಕ್ ಪದಕ ವಿಜೇತರಿಗೂ ಒಕ್ಕೂಟದ ಮುಖ್ಯಸ್ಥರಿಂದ ಲೈಂಗಿಕ ಕಿರುಕುಳ
  • ಮಹಿಳೆಯರ ಮೇಲೆ ದೌರ್ಜನ್ಯ ಎಸಗುತ್ತಿರುವ ಬಿಜೆಪಿ ನಾಯಕರ ಪಟ್ಟಿಗೆ ಕೊನೆಯೇ ಇಲ್ಲ ಎಂದ ಕಾಂಗ್ರೆಸ್

ಭಾರತದ ಕುಸ್ತಿ ಒಕ್ಕೂಟದ ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧದ ಲೈಂಗಿಕ ಮತ್ತು ಮಾನಸಿಕ ಕಿರುಕುಳದ ಗಂಭೀರ ಆರೋಪಗಳ ಕುರಿತು ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಒತ್ತಾಯಿಸಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಅವರು, “ನಮ್ಮ ಆಟಗಾರರು ದೇಶದ ಹೆಮ್ಮೆ. ವಿಶ್ವ ಮಟ್ಟದಲ್ಲಿ ತಮ್ಮ ಸಾಧನೆಯಿಂದ ದೇಶಕ್ಕೆ ಕೀರ್ತಿ ತಂದಿದ್ದಾರೆ. ಕುಸ್ತಿ ಒಕ್ಕೂಟ ಮತ್ತು ಅದರ ಅಧ್ಯಕ್ಷರ ವಿರುದ್ಧ ಆಟಗಾರರು ಲೈಂಗಿಕ ಕಿರುಕುಳದ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಸರ್ಕಾರ ಕೂಡಲೇ ಆಟಗಾರರ ಸಮಸ್ಯೆಯನ್ನು ಕೇಳಬೇಕು. ಆರೋಪಗಳ ಬಗ್ಗೆ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕು” ಎಂದು ಒತ್ತಾಯಿಸಿದ್ದಾರೆ.

ಲೈಂಗಿಕ ಕಿರುಕುಳಕ್ಕೆ ಒಳಗಾದವರಲ್ಲಿ ಭಾರತದ ಅಗ್ರ ಕುಸ್ತಿಪಟುಗಳು ಹಾಗೂ ಇಬ್ಬರು ಒಲಿಂಪಿಕ್ ಪದಕ ವಿಜೇತರಾದ ಟೋಕಿಯೊ ಒಲಿಂಪಿಕ್ಸ್ ಕಂಚಿನ ಪದಕ ವಿಜೇತ ಬಜರಂಗ್ ಪುನಿಯಾ, ರಿಯೊ ಒಲಿಂಪಿಕ್ಸ್ ಕಂಚಿನ ಪದಕ ವಿಜೇತೆ ಸಾಕ್ಷಿ ಮಲಿಕ್ ಕೂಡ ಸೇರಿದ್ದಾರೆ. ಎರಡು ಬಾರಿಯ ವಿಶ್ವ ಚಾಂಪಿಯನ್‌ಷಿಪ್‌ ಪದಕ ವಿಜೇತರಾದ ವಿನೇಶ್ ಫೋಗಟ್ ನೇತೃತ್ವದಲ್ಲಿ ಸುಮಾರು 30 ಕುಸ್ತಿಪಟುಗಳು ನವದೆಹಲಿಯ ಜಂತರ್ ಮಂತರ್‌ನಲ್ಲಿ ಒಕ್ಕೂಟದ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರನ್ನು ಪದಚ್ಯುತಗೊಳಿಸುವಂತೆ ಕಳೆದ ಎರಡು ದಿನಗಳಿಂದ ಧರಣಿ ನಡೆಸುತ್ತಿದ್ದಾರೆ.

ಈ ಸುದ್ದಿ ಓದಿದ್ದೀರಾ? ಬೆಂಗಳೂರು ಅಪಘಾತವನ್ನು ಪ್ರಶ್ನಿಸಿದ ಚಾಲಕನನ್ನು ಸ್ಕೂಟರ್ ಹಿಂದೆ ಒಂದು ಕಿಮೀ ಎಳೆದೊಯ್ದ ಸವಾರ

“ಮಹಿಳೆಯರ ಮೇಲೆ ದೌರ್ಜನ್ಯ ಎಸಗುತ್ತಿರುವ ಬಿಜೆಪಿ ನಾಯಕರ ಪಟ್ಟಿಗೆ ಕೊನೆಯಿಲ್ಲ; ಬ್ರಿಜ್‌ ಭೂಷಣ್‌ ಆ ಪಟ್ಟಿಗೆ ಹೊಸ ಸೇರ್ಪಡೆ. 'ಬೇಟಿ ಬಚಾವೋ' ಎನ್ನುವ ಬಿಜೆಪಿ ನಾಯಕರು ಹೆಣ್ಣು ಮಕ್ಕಳನ್ನು ರಕ್ಷಿಸುವ ರೀತಿಯೇ ಇದು? ಉತ್ತರಕ್ಕಾಗಿ ಭಾರತ ಕಾಯುತ್ತಿದೆ...’’ ಎಂದು ಕಾಂಗ್ರೆಸ್ ಮುಖಂಡ ಜೈರಾಮ್ ರಮೇಶ್ ಪ್ರಶ್ನಿಸಿದ್ದಾರೆ.

ಪ್ರಧಾನಮಂತ್ರಿಗಳೇ, ಕಳೆದ 8 ವರ್ಷಗಳಲ್ಲಿ ಕ್ರೀಡೆಗೆ ಉತ್ತಮ ವಾತಾವರಣವನ್ನು ನಿರ್ಮಿಸಲಾಗಿದೆ ಎಂದು ನಿನ್ನೆ ನೀವು ಹೇಳಿದ್ದೀರಿ. ದೇಶಕ್ಕೆ ಕೀರ್ತಿ ತರುವ ನಮ್ಮ ಹೆಣ್ಣುಮಕ್ಕಳೂ ಅಸುರಕ್ಷಿತವಾಗಿರುವ ‘ಉತ್ತಮ ಪರಿಸರ’ ಇದೇನಾ? ಎಂದು ಬುಧವಾರ ಕ್ರೀಡಾಕೂಟವೊಂದರಲ್ಲಿ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರ ಹೇಳಿಕೆಯನ್ನು ಉಲ್ಲೇಖಿಸಿ ರಮೇಶ್ ಪ್ರಶ್ನಿಸಿದ್ದಾರೆ.

ಆಡಳಿತಾರೂಢ ಭಾರತೀಯ ಜನತಾ ಪಾರ್ಟಿ ಸದಸ್ಯರೂ ಆಗಿರುವ ಸಿಂಗ್, ಪ್ರತಿಭಟನಾಕಾರರ ಆರೋಪಗಳನ್ನು ನಿರಾಕರಿಸಿದ್ದು, ತಮ್ಮನ್ನು ಪದಚ್ಯುತಗೊಳಿಸುವ ಪಿತೂರಿಯ ಸಂಚು ಇದೆಂದು ಹೇಳಿದ್ದಾರೆ.

ಕೇಂದ್ರ ಕ್ರೀಡಾ ಸಚಿವಾಲಯವು ಭಾರತದ ಕುಸ್ತಿ ಒಕ್ಕೂಟದಿಂದ ವಿವರಣೆಯನ್ನು ಕೇಳಿದೆ ಮತ್ತು ಆರೋಪಗಳ ಕುರಿತು 72 ಗಂಟೆಗಳ ಒಳಗೆ ಉತ್ತರ ನೀಡುವಂತೆ ನೋಟಿಸ್‌ ನೀಡಿದೆ.

ನಿಮಗೆ ಏನು ಅನ್ನಿಸ್ತು?
0 ವೋಟ್
eedina app