ಒಲೆ ಮುಂದೆ ಬೆಂದವರ ಒಡಲ ಸಂಕಟ | ಬಿಸಿಯೂಟ ನೌಕರರ ಹೋರಾಟಕ್ಕೆ ಮಣಿದ ಸರ್ಕಾರ

midday meal workers protest
  • ಸಿಎಂ ಭರವಸೆ ಮೇರೆಗೆ ಅಕ್ಷರ ದಾಸೋಹ ನೌಕರರ ಹೋರಾಟಕ್ಕೆ ವಿರಾಮ
  • ಬಿಸಿಯೂಟ ನೌಕರರ ಹೋರಾಟಕ್ಕೆ ಮಣಿದ ಮುಖ್ಯಮಂತ್ರಿ ಬೊಮ್ಮಾಯಿ 

ಬಿಸಿಯೂಟ ನೌಕರರ 48 ಗಂಟೆಗಳ ನಿರಂತರ ಪ್ರತಿಭಟನೆಯನ್ನು ಕಂಡು ಕಾಣದಂತೆ ಮೌನ ವಹಿಸಿದ್ದ ರಾಜ್ಯ ಸರ್ಕಾರ ಅಂತಿಮವಾಗಿ ಮಹಿಳೆಯರ ಒಗ್ಗಟ್ಟಿನ ಹೋರಾಟಕ್ಕೆ ಮಂಡಿಯೂರಿದೆ. 

ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಕರ್ನಾಟಕ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘ (ಸಿಐಟಿಯು ಸಂಯೋಜಿತ) ನೇತೃತ್ವದಲ್ಲಿ ಬಿಸಿಯೂಟ ನೌಕರರು ನಾನಾ ಬೇಡಿಕೆಗಳ ಈಡೇರಿಕೆಗಾಗಿ ಅನಿರ್ದಿಷ್ಟಾವಧಿ ಧರಣಿ ನಡೆಸುತ್ತಿದ್ದರು. ವಯಸ್ಸಿನ ಕಾರಣ ನೀಡಿ ರಾಜ್ಯದ 6000 ಜನ ಬಿಸಿಯೂಟ ನೌಕರರನ್ನು ಶಿಕ್ಷಣ ಇಲಾಖೆ ನಿರ್ದಾಕ್ಷಿಣ್ಯವಾಗಿ ಕೆಲಸದಿಂದ ಬಿಡುಗಡೆಗೊಳಿಸಿತ್ತು. ಉದ್ಯೋಗ ಕಳೆದುಕೊಂಡ ಮಹಿಳೆಯರು ದೂರದೂರುಗಳಿಂದ ಬಂದು ಪರಿಹಾರಕ್ಕಾಗಿ ಹೋರಾಟ ನಿರತರಾಗಿದ್ದರು. ಮುಖ್ಯಮಂತ್ರಿಗಳ ಭರವಸೆಯ ಮೇರೆಗೆ ಹೋರಾಟವನ್ನು ತಾತ್ಕಾಲಿಕವಾಗಿ ಹಿಂಪಡೆದಿದ್ದಾರೆ.

ಈ ಬಗ್ಗೆ ಕರ್ನಾಟಕ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಮಾಲಿನಿ ಮೇಸ್ತಾ ಅವರು ಈ ದಿನ.ಕಾಮ್‌ನೊಂದಿಗೆ ಮಾತನಾಡಿ ಮಾಹಿತಿ ನೀಡಿದ್ದಾರೆ. "ಇಂದು ಸಂಜೆ  ಮುಖ್ಯಮಂತ್ರಿಗಳು ಹೋರಾಟಗಾರರನ್ನು ಮತ್ತು ಸಂಘಟನೆಯ ಮುಖಂಡರನ್ನು ಸಭೆ ಕರೆದು ಚರ್ಚೆ ನಡೆಸಿ ಹಣಕಾಸು ಇಲಾಖೆಯೊಂದಿಗೆ ಮಾತನಾಡುವುದಾಗಿ ತಿಳಿಸಿದ್ದಾರೆ. ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್‌ ಅವರು ಕೂಡ ಚರ್ಚೆ ಮಾಡಿ 15 ದಿನಗಳ ಕಾಲ ಸಮಯ ಕೇಳಿದ್ದಾರೆ. ನಾವು ಪರಿಹಾರ ಹಣ ₹1,00,000 ಕೇಳಿದ್ದೇವೆ. ಈಗಾಗಲೇ ಶಿಫಾರಸ್ಸು ಕಳುಹಿಸಿದ್ದಾರೆ. ಆದರೆ ಎಷ್ಟು ಜಾರಿ ಮಾಡುತ್ತಾರೆ ಎಂಬುದು ಗೊತ್ತಿಲ್ಲ. ಗಡುವು ಮುಗಿಯುವವರೆಗೂ ನೋಡಿ, ನಂತರ ನಮ್ಮ ಬೇಡಿಕೆಗಳು ಈಡೇರಿಸದಿದ್ದರೆ ಮುಂದಿನ ಹೋರಾಟದ ಬಗ್ಗೆ ತೀರ್ಮಾನ ಮಾಡುತ್ತೇವೆ" ಎಂದು ತಿಳಿಸಿದರು.

ಈ ಸುದ್ದಿ ಓದಿದ್ದೀರಾ? ಒಲೆ ಮುಂದೆ ಬೆಂದವರ ಒಡಲ ಸಂಕಟ | ಬಿಸಿಯೂಟ ನೌಕರರ ನೋವು ಕೇಳುವವರಿಲ್ಲ...

ರಾಜ್ಯದ ಬಹುತೇಕ ಎಲ್ಲ ಜಿಲ್ಲೆಗಳ ಅಕ್ಷರ ದಾಸೋಹ ನೌಕರರು ಸಿಐಟಿಯು ಸಂಘಟನೆಯ ನೇತೃತ್ವದಲ್ಲಿ ಪ್ರತಿಭಟನೆ ನಡೆಸುತ್ತಿದ್ದರು. ಆಗಸ್ಟ್‌ 16 ರಿಂದ ಆರಂಭಗೊಂಡಿದ್ದ ಈ ಹೋರಾಟದಲ್ಲಿ ಸುಮಾರು 5000ಕ್ಕೂ ಹೆಚ್ಚು ಮಹಿಳೆಯರು ಕೆಂಬಾವುಟ ಹಿಡಿದು ಸರ್ಕಾರದ ವಿರುದ್ಧ ಘೋಷಣೆ ಕೂಗಿ ತಮ್ಮ ಅಸಹಾಯಕತೆ ಹಾಗೂ ಆಕ್ರೋಶವನ್ನು ಹೊರಹಾಕಿದ್ದರು. ವಯಸ್ಸಿನ ನೆಪವೊಡ್ಡಿ ಏಕಾಏಕಿ 6,000 ಜನರನ್ನು ಕೆಲಸದಿಂದ ಕೈಬಿಟ್ಟ ಸರ್ಕಾರದ ನಿಲುವಿನಿಂದ ದಿಕ್ಕು ತೋಚದಂತಾದ ಬಡ ಮಹಿಳೆಯರು ತುತ್ತಿನ ಚೀಲದ ನಿರ್ವಹಣೆಗೆ ದಾರಿ ಕಾಣದೆ ಅಕ್ಷರಶಃ ಮಮ್ಮಲ ಮರುಗಿದ್ದರು. ಸಾಲ ಮಾಡಿಕೊಂಡೇ ಹೋರಾಟಕ್ಕೆ ಬಂದಿದ್ದ ಅವರು ನಿವೃತ್ತಿಯಾದವರಿಗೆ ಉಳಿಕೆ ವೇತನ ಮತ್ತು ಇಡುಗಂಟಿನ ಸೌಲಭ್ಯ ಒದಗಿಸುವಂತೆ ಪಟ್ಟು ಹಿಡಿದಿದ್ದರು.

ನಿಮಗೆ ಏನು ಅನ್ನಿಸ್ತು?
0 ವೋಟ್