
- ಕಷ್ಟಗಳ ನಡುವೆ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಉತ್ತೀರ್ಣಳಾದ ವಿದ್ಯಾರ್ಥಿನಿ
- ಬಾಲಕಿ ಮಂಗಳಮುಖಿ ಎಂದು ತಿಳಿದಾಗ ಆಘಾತಕ್ಕೆ ಒಳಗಾಗಿದ್ದ ಪೋಷಕರು
ನಿವೇತಾ (18) ತಮಿಳನಾಡಿನಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆ ಬರೆದ ಏಕೈಕ ಮಂಗಳಮುಖಿ ವಿದ್ಯಾರ್ಥಿನಿ. ಶೇ. 42.4 ಅಂಕ ಗಳಿಸಿದ್ದರೂ ಆಕೆಯ ಸಾಧನೆ ಯಾವುದಕ್ಕೂ ಕಡಿಮೆಯಿಲ್ಲ.
ಚೆನ್ನೈ ಲೇಡಿ ವಿಲ್ಲಿಂಗ್ಡನ್ ಹೈಯರ್ ಶಾಲೆಯಲ್ಲಿ ಹತ್ತನೇ ತರಗತಿ ಪರೀಕ್ಷೆ ಬರೆದಿರುವ ವಿದ್ಯಾರ್ಥಿನಿ ನಿವೇತಾ ಪ್ರೌಢಾವಸ್ಥೆಯವರೆಗೆ ಬಾಲಕನಾಗಿಯೇ ಬೆಳೆದಿದ್ದರು. ಆದರೆ ಒಂಬತ್ತನೇ ತರಗತಿಯ ನಂತರ ಬದುಕು ದೊಡ್ಡ ತಿರುವನ್ನು ಪಡೆದುಕೊಂಡಿದೆ. 14ನೇ ವಯಸ್ಸಿನಲ್ಲಿ ಪೋಷಕರಿಗೆ ತಾನು ‘ಟ್ರಾನ್ಸ್ ವುಮನ್’ ಎಂದು ಹೇಳಿದಾಗ, ಅವರನ್ನು ಮನೆಯಿಂದ ಆಚೆ ಹಾಕಿದರು. ನಂತರ ಒಂಟಿಯಾಗಿ ಅನೇಕ ಸಮಸ್ಯೆಗಳನ್ನು ಎದುರಿಸಿದರು, ಜೊತೆಗೆ ಕಳಂಕವನ್ನು ಸಹ ಅನುಭವಿಸಿದರು.
ತಮ್ಮ ಸಾಧನೆಯ ಬಗ್ಗೆ ನಿವೇತಾ ಮಾತನಾಡಿ, "ನನ್ನ ತಂದೆ- ತಾಯಿಗೆ ನಾನೇ ಹಿರಿಯ ಮಗ. ನನ್ನ ಪೋಷಕರು ಬಡವರು. ನನ್ನ ಬಗ್ಗೆ ಅವರು ಬಹಳಷ್ಟು ನಿರೀಕ್ಷೆ ಹೊಂದಿದ್ದರು. ಆದರೆ, ನಾನು ‘ಟ್ರಾನ್ಸ್ ವುಮನ್’ ಎಂದು ಹೇಳಿದಾಗ ಆಘಾತಕ್ಕೊಳಗಾದರು. ನನ್ನನ್ನು ಸ್ವೀಕರಿಸಲು ಸಿದ್ಧರಾಗದೆ, ಸಾಕಷ್ಟು ಜಗಳಗಳು ನಡೆದವು. ಹಾಗಾಗಿ ಒಂದು ದಿನ ಮನೆ ಬಿಡಬೇಕಾಯಿತು, ಬದುಕು ತಲೆಕೆಳಗಾಯಿತು” ಎಂದು ಅವರು ಮಾಧ್ಯಮಗಳಿಗೆ ವಿವರಿಸಿದ್ದಾರೆ.
"ಎಸ್ಎಸ್ಎಲ್ಸಿ ಫಲಿತಾಂಶದ ಬಗ್ಗೆ ಪೋಷಕರಿಗೆ ತಿಳಿಸಿದಾಗ ತುಂಬಾ ಸಂತೋಷಪಟ್ಟರು. ವಿಜ್ಞಾನದ ವಿಷಯದಲ್ಲಿ ಮುಂದುವರೆಯಲು ಬಯಸುತ್ತೇನೆ. ವಿಜ್ಞಾನಕ್ಕೆ ಸಂಬಂಧಿಸಿದ ವೃತ್ತಿ ಮಾಡಲು ಬಯಸುತ್ತೇನೆ" ಎಂದು ನಿವೇತಾ ಕನಸು ಹಂಚಿಕೊಂಡಿದ್ದಾರೆ.
"ಬಾಲ್ಯದಿಂದಲೂ, ತಾಯಿಯ ಬಳೆಗಳನ್ನು ಧರಿಸುತ್ತಿದ್ದೆ. ಜೊತೆಗೆ ಅವರ ಸೀರೆಗಳನ್ನು ಉಡುವುದು ಇಷ್ಟವಾಗುತ್ತಿತ್ತು. ಆದರೆ, ಒಂಬತ್ತನೇ ತರಗತಿಯಲ್ಲಿದ್ದಾಗ ಹುಡುಗನಾಗಿ ಮುಂದುವರಿಯಲು ಸಾಧ್ಯವಾಗಲಿಲ್ಲ. ಆ ದಿನಗಳು ತುಂಬಾ ಕಷ್ಟಕರವಾಗಿತ್ತು. ಮನೆಯಿಂದ ಹೊರಬಂದ ಮೇಲೆ ವಿದ್ಯಾಭ್ಯಾಸ ನಿಲ್ಲಿಸಬೇಕಾಯಿತು. ನಂತರ ಸಂಭವಿ ಅಕ್ಕ (ಮತ್ತೊಬ್ಬ ಟ್ರಾನ್ಸ್ವುಮನ್) ಅವರ ಬಗ್ಗೆ ಪಕ್ಕದ ಮನೆಯವರಿಂದ ತಿಳಿದುಕೊಂಡೆ. ಈಗ ಸಂಭವಿ ಅಕ್ಕ ಜೊತೆಗೆ ನೆಲೆಸಿದ್ದೇನೆ. ನನ್ನ ಖರ್ಚುಗಳನ್ನು ಅವರೇ ನೋಡಿಕೊಳ್ಳುತ್ತಿದ್ದಾರೆ. ಲೇಡಿ ವಿಲ್ಲಿಂಗ್ಡನ್ ಶಾಲೆಯ ಶಿಕ್ಷಕರು ಮತ್ತು ಸ್ನೇಹಿತರು ನನ್ನ ಸಾಧನೆಗೆ ಸಹಕಾರ ನೀಡಿದ್ದಾರೆ. ಶಾಲೆಯಲ್ಲಿ ಯಾರೂ ನನ್ನನ್ನು ಗೇಲಿ ಮಾಡುತ್ತಿರಲಿಲ್ಲ" ಎಂದು ನಿವೇತಾ ಹೇಳಿದ್ದಾರೆ.
ದಿನಗೂಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿರುವ ನಿವೇತಾ ತಂದೆ- ತಾಯಿ ಸದ್ಯ ಇವರ ಸಾಧನೆಯಿಂದ ಖುಷಿಯಾಗಿದ್ದಾರೆ.